Internal Reservation| ಒಳಮೀಸಲಾತಿ ಜಾರಿ ಮಾಡದಿದ್ದರೆ ಕಾಂಗ್ರೆಸ್‌ ಹಠಾವೋ; ಎಡಗೈ ಸಮುದಾಯ ಆಕ್ರೋಶ
x
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಒಳ ಮೀಸಲಾತಿಗಾಗಿ ಎಡಗೈ ಸಮುದಾಯದವರು ಹೋರಾಟ ನಡೆಸಿದರು.

Internal Reservation| ಒಳಮೀಸಲಾತಿ ಜಾರಿ ಮಾಡದಿದ್ದರೆ ಕಾಂಗ್ರೆಸ್‌ ಹಠಾವೋ; ಎಡಗೈ ಸಮುದಾಯ ಆಕ್ರೋಶ

ಒಳ ಮೀಸಲಾತಿ ಜಾರಿ ಮಾಡದಿದ್ದರೆ ಯಾವುದೇ ಕಾರಣಕ್ಕೂ ಮಾದಿಗ ಸಮುದಾಯವು ಕಾಂಗ್ರೆಸ್ ಸರ್ಕಾರವನ್ನು ನಂಬುವುದಿಲ್ಲ. ಕಾನೂನಿನ ಅಡೆತಡೆ ಇಲ್ಲದಿದ್ದರೂ ಒಳ ಮೀಸಲಾತಿಗೆ ವಿಳಂಬ ಮಾಡುತ್ತಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಸಮಿತಿಯ ವೈಜ್ಞಾನಿಕ ಅಂಕಿ-ಅಂಶಗಳಿದ್ದರೂ ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಶೀಘ್ರವೇ ಮೀಸಲಾತಿ ಸಮಸ್ಯೆ ಬಗೆಹರಿಸದಿದ್ದರೆ ಮಾದಿಗರ ಶಾಪ ಕಾಂಗ್ರೆಸ್‌ ಪಕ್ಷಕ್ಕೆ ತಟ್ಟಲಿದೆ ಎಂದು ಕರ್ನಾಟಕ‌ ಒಳ ಮೀಸಲಾತಿ ಹೋರಾಟಗಾರರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಗುರುವಾರ (ಮಾ.12) ಬೃಹತ್‌ ಪ್ರತಿಭಟನೆ ನಡೆಸಿದ ಎಡಗೈ ಸಮುದಾಯ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಮುಖಂಡರು, "ಒಳ ಮೀಸಲಾತಿಗಾಗಿ 35 ವರ್ಷದಿಂದ ಮಾದಿಗ ಸಮುದಾಯ ಹೋರಾಟ ಮಾಡುತ್ತಿದೆ. ಆದರೆ, ರಾಜ್ಯ ಸರ್ಕಾರವು ನಾಗಮೋಹನ್‌ ದಾಸ್‌ ಆಯೋಗದಿಂದ ವರದಿ ಪಡೆದರೂ, ಅದನ್ನು ಮನಬಂದಂತೆ ಪರಿಷ್ಕರಿಸಿ ಎಲ್ಲಾ ಸಮುದಾಯಗಳಲ್ಲಿ ಗೊಂದಲ ಸೃಷ್ಟಿಸಿದೆ. ಶೀಘ್ರವೇ ಒಳ ಮೀಸಲಾತಿ ಜಾರಿ ಮಾಡದಿದ್ದರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವನ್ನು ಮನೆಗೆ ಕಳಿಸುವುದು ನಿಶ್ಚಿತ ಎಂದು ಗುಡುಗಿದರು.

ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಸರ್ಕಾರ ಏನೇ ಭರವಸೆ ನೀಡಿದರೂ ಮಾದಿಗ ಸಮುದಾಯ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ನಂಬುವುದಿಲ್ಲ. ಕಾನೂನಿನ ಅಡೆತಡೆ ಇಲ್ಲದಿದ್ದರೂ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುತ್ತಿಲ್ಲ. ಒಳ ಮೀಸಲಾತಿ ಪರವಾಗಿರುವ ಸಚಿವ ಕೆ.ಎಚ್‌. ಮುನಿಯಪ್ಪ ಹಾಗೂ ಆರ್‌.ಬಿ. ತಿಮ್ಮಾಪುರ ರಾಜೀನಾಮೆ ನೀಡಿ ಹೊರಬಂದು ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಆಗ್ರಹಿಸಿದರು.

ಏನಿದು ವಿವಾದ ?

ಪರಿಶಿಷ್ಟ ಜಾತಿಯ ಉಪಪಂಗಡಗಳ ಜನಸಂಖ್ಯೆ, ಆರ್ಥಿಕ ಸ್ಥಿತಿಗತಿಗಳ ಕುರಿತು ವೈಜ್ಞಾನಿಕ ದತ್ತಾಂಶ ಸಂಗ್ರಹಿಸಿ ಒಳಮೀಸಲಾತಿ ಜಾರಿ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್‌ 2024 ಆಗಸ್ಟ್‌ನಲ್ಲಿ ಆದೇಶಿಸಿದೆ. ಅದರಂತೆ ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ನೇತೃತ್ವದಲ್ಲಿ ಆಯೋಗ ರಚಿಸಿ ದತ್ತಾಂಶವನ್ನು ಸಂಗ್ರಹಿಸಿತ್ತು. ಸಚಿವ ಸಂಪುಟ ನಿರ್ಧಾರದಂತೆ ಪರಿಶಿಷ್ಟ ಜಾತಿಯಲ್ಲಿನ ಸಮುದಾಯಗಳನ್ನು ಮೂರು ಪಂಗಡಗಳಾಗಿ ವಿಂಗಡಿಸಿ, ಶೇ. 17 ಮೀಸಲಾತಿಯಲ್ಲಿ ಗ್ರೂಪ್‌ ʼಎʼಗೆ ಶೇ.6, ಗ್ರೂಪ್‌ ʼಬಿʼಗೆ ಶೇ.6 ಹಾಗೂ ಗ್ರೂಪ್‌ ʼಸಿʼ ಗೆ ಗೆ ಶೇ.5 ಮೀಸಲಾತಿ ನೀಡಿ ಆದೇಶಿಸಿತ್ತು. ಆದರೆ, ಮೀಸಲಾತಿಯಿಂದ ವಂಚಿತರಾದ ಅಲೆಮಾರಿ ಸಮುದಾಯಗಳು ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ರಾಜ್ಯಪಾಲರ ಅಂಕಿತ

ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಒಳ ಮೀಸಲಾತಿ ಕುರಿತು ಮಸೂದೆ ಮಂಡಿಸಿ ರಾಜ್ಯಪಾಲರ ಅಂಕಿತಕ್ಕೆ ಕಳಿಸಿತ್ತು. ಕೆಲ ಸ್ಪಷ್ಟನೆ ನಂತರ ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕಿದ್ದು, ಇದೀಗ ಒಳ ಮೀಸಲಾತಿಗೆ ಕಾನೂನಿನ ರಕ್ಷಣೆ ಸಿಕ್ಕಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ತಡ ಮಾಡುತ್ತಿದೆ. ಪ್ರತಿಯೊಂದಕ್ಕೂ ನ್ಯಾಯಾಲಯದ ಕಡೆಗೆ ಬೊಟ್ಟು ಮಾಡುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ಶೇ.15ರಲ್ಲೇ ಒಳ ಮೀಸಲು ನೀಡಲು ಆಗ್ರಹ

ರಾಜ್ಯ ಸರ್ಕಾರ ಶೇ.56 ಮೀಸಲಾತಿಯಂತೆ ಪರಿಶಿಷ್ಟ ಜಾತಿಗೆ ಶೇ.17 ಮೀಸಲಾತಿಯಡಿ ಒಳ ಮೀಸಲು ನೀಡಿತ್ತು. ಆದರೆ, ಮೀಸಲಾತಿ ಹೆಚ್ಚಳಕ್ಕೆ ಹೈಕೋರ್ಟ್‌ ತಡೆ ನೀಡಿದ್ದರಿಂದ ಸರ್ಕಾರ ಕಾನೂನಾತ್ಮಕವಾಗಿ ಗೊಂದಲಕ್ಕೆ ಸಿಲುಕಿತ್ತು. ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಇತ್ತೀಚೆಗೆ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು, ಇದರಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಶೇ50 ಮೀಸಲಾತಿ ಆಧಾರದಲ್ಲೇ 56 ಸಾವಿರ ಹುದ್ದೆಗಳ ಭರ್ತಿಗೆ ನಿರ್ಧರಿಸಿತ್ತು. ಹಳೆಯ ಮೀಸಲಾತಿಯಂತೆ ಪರಿಶಿಷ್ಟ ಜಾತಿಗೆ ನಿಗದಿಯಾದ ಶೇ.15 ಮೀಸಲಾತಿಯಲ್ಲೇ ಒಳ ಮೀಸಲು ನೀಡಬೇಕು ಎಂದು ಮಾದಿಗ ಸಮುದಾಯದ ನಾಯಕರು ಆಗ್ರಹಿಸಿದ್ದರು. ಆದರೆ, ರಾಜ್ಯ ಸರ್ಕಾರ ಸೂಕ್ತ ತೀರ್ಮಾನ ಪ್ರಕಟಿಸದ ಹಿನ್ನೆಲೆಯಲ್ಲಿ ಮಾದಿಗ ಸಮುದಾಯ ಹೋರಾಟ ತೀವ್ರಗೊಳಿಸಿದೆ ಎಂದು ಮುಖಂಡರು ಹೇಳಿದ್ದಾರೆ.

Read More
Next Story