
ಸಿಎಂ ಸಿದ್ದರಾಮಯ್ಯ ಹಾಗೂ ಸಂಸದ ಬಸವರಾಜ ಬೊಮ್ಮಾಯಿ
ಒಳ ಮೀಸಲಾತಿ ಜಾರಿಗೆ ವಿಶೇಷ ಸಂಪುಟ ಸಭೆ ಅಗತ್ಯವಿಲ್ಲ, ಮನಸು ಮಾಡಿ; ಬೊಮ್ಮಾಯಿ ವಾಗ್ದಾಳಿ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಅನುದಾನದಲ್ಲಿ ಸುಮಾರು 60 ಸಾವಿರ ಕೋಟಿ ರೂ. ಹಣ ಬೇರೆಡೆಗೆ ಖರ್ಚು ಮಾಡಲಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಒಳ ಮೀಸಲಾತಿ ಜಾರಿ ಮಾಡಲು ವಿಶೇಷ ಸಂಪುಟ ಸಭೆಯ ಅಗತ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬದ್ಧತೆ ಇದ್ದರೆ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಆಧರಿಸಿ ಒಳಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಸಂಸದ ಬೊಮ್ಮಾಯಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಶುಕ್ರವಾರ (ಮಾ.13) ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸದಾ ಅನ್ಯಾಯ ಮಾಡುತ್ತಿದೆ. ಅವರ ವಿಚಾರ ಬಂದಾಗ ಯಾವುದೇ ಸ್ಪಷ್ಟವಾದ ನಿಲುವು ತೆಗೆದುಕೊಂಡಿಲ್ಲ. ಈ ಹಿಂದೆ ಸಿದ್ದರಾಮಯ್ಯನವರು ಐದು ವರ್ಷ ಸಿಎಂ ಆಗಿದ್ದಾಗ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗದ ಸ್ವಾಮೀಜಿಗಳು ಪಾದಯಾತ್ರೆ ಮಾಡಿದ್ದರು. ಆದರೆ, 'ಅಹಿಂದ' ನಾಯಕ ಎಂದು ಹೇಳಿಕೊಳ್ಳುವ ಸಿಎಂ, ಅಹಿಂದ ವರ್ಗಕ್ಕೆ ಯಾವುದೇ ಯೋಜನೆ ಜಾರಿ ಮಾಡಿಲ್ಲ," ಎಂದು ಆರೋಪಿಸಿದರು.
ಪರಿಶಿಷ್ಟರ ಹಣ ಬೇರೆಡೆಗೆ ಖರ್ಚು
"ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಅನುದಾನದಲ್ಲಿ ಸುಮಾರು 60 ಸಾವಿರ ಕೋಟಿ ರೂ. ಹಣವನ್ನು ಬೇರೆಡೆಗೆ ಖರ್ಚು ಮಾಡಲಾಗಿದೆ. ಬಜೆಟ್‌ನಲ್ಲಿ ಹಿಂದುಳಿದ ವರ್ಗದವರಿಗೆ ನಿಗದಿಪಡಿಸಿದ್ದ 441 ಕೋಟಿ ರೂ.ಗಳನ್ನು ಜಾತಿ ಗಣತಿಗೆ ಬಳಸಿಕೊಂಡರು. ವಾಸ್ತವವಾಗಿ ಅದನ್ನು ರಾಜ್ಯದ ಬೊಕ್ಕಸದಿಂದ ಖರ್ಚು ಮಾಡಬೇಕಿತ್ತು. ನಿಗಮ ಮಂಡಳಿಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 'ಗಂಗಾ ಕಲ್ಯಾಣ' ಯೋಜನೆಗೆ ಹಣ ನೀಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ರಾಜ್ಯ ಸರ್ಕಾರಕ್ಕೆ ಒಳ ಮೀಸಲಾತಿಯ ಬಗ್ಗೆ ಸ್ಪಷ್ಟತೆ ಇಲ್ಲ, ಈ ಜನಾಂಗದ ಬಗ್ಗೆ ಕಳಕಳಿಯೂ ಇಲ್ಲ," ಎಂದು ದೂರಿದರು.
ಒಳ ಮೀಸಲಿಗೆ ಸಂವಿಧಾನ ತಿದ್ದುಪಡಿ ಅಗತ್ಯವಿಲ್ಲ
"ನಾವು ಮೀಸಲಾತಿ ಹೆಚ್ಚಳ ಮಾಡಿದಾಗ ಕಾಂಗ್ರೆಸ್ ನಾಯಕರು ಅದನ್ನು 'ಚುನಾವಣೆ ಗಿಮಿಕ್' ಎಂದು ಕರೆದಿದ್ದರು. ನಾವು ಅಧಿಕಾರದಲ್ಲಿದ್ದಾಗ ಮೀಸಲಾತಿ ಹೆಚ್ಚಳ ಮಾಡಲು ನ್ಯಾ. ನಾಗಮೋಹನ್ ದಾಸ್ ಸಮಿತಿ ವರದಿ ನೀಡಿತ್ತು. ಆ ವರದಿಯಂತೆ ನಾವು ಸಂಪುಟದಲ್ಲಿ ಒಪ್ಪಿಗೆ ಪಡೆದು, ಕಾನೂನು ರಚಿಸಿ ಜಾರಿ ಮಾಡಿದ್ದೇವೆ. ಒಳ ಮೀಸಲಾತಿ ಹೆಚ್ಚಳವನ್ನೂ ನಾವು ಮಾಡಿದ್ದೆವು. ಅದರ ಬಗ್ಗೆ ಎರಡು ತೀರ್ಪುಗಳಿದ್ದವು. ಇವರಿಗೆ ನಿಜವಾಗಿಯೂ ಬದ್ಧತೆ ಇದ್ದಿದ್ದರೆ 2013 ರಲ್ಲೇ ಮಾಡಬಹುದಿತ್ತು. ಒಳ ಮೀಸಲಾತಿ ಜಾರಿ ಮಾಡಲು ಸಂವಿಧಾನ ತಿದ್ದುಪಡಿ ಅಗತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ನ್ಯಾ. ನಾಗಮೋಹನ್ ದಾಸ್ ಸಮಿತಿ ವರದಿ ನೀಡಿದಂತೆ ಜಾರಿ ಮಾಡದೇ, ಸಂಪುಟದಲ್ಲಿ ತಮಗೆ ಬೇಕಾದಂತೆ ಮೀಸಲು ಹಂಚಿಕೆ ಮಾಡಿದ್ದಾರೆ," ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವರ ಒತ್ತಡಕ್ಕೆ ಮಣಿದ ಸಿಎಂ
"ಒಳ ಮೀಸಲಾತಿಗೆ ರಾಜ್ಯಪಾಲರ ಒಪ್ಪಿಗೆ ಇದೆ. ಆದರೆ, ರಾಜ್ಯ ಸರ್ಕಾರ ತಾನೇ ಮಾಡಿದ ಕಾನೂನನ್ನು ಜಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ವಿಶೇಷ ಸಂಪುಟ ಸಭೆ ಏಕೆ ಬೇಕು? ಅವರ ಮಂತ್ರಿ ಮಂಡಲದಲ್ಲೇ ಎರಡು ಗುಂಪುಗಳಿದ್ದು, ಒಳ ಮೀಸಲಾತಿಯೇ ಬೇಡ ಎನ್ನುವ ಒಂದು ಗುಂಪಿದೆ. ಸಿಎಂ ಆ ಗುಂಪಿನ ಸಚಿವರ ಒತ್ತಡಕ್ಕೆ ಮಣಿದಿದ್ದಾರೆ," ಎಂದು ಆರೋಪಿಸಿದರು.
ರಾಜ್ಯಾದ್ಯಂತ ಹೋರಾಟ
"ಮೀಸಲಾತಿಯ ಬಗ್ಗೆ ಸ್ಪಷ್ಟತೆ ಇಲ್ಲದೆಯೇ ರಾಜ್ಯ ಸರ್ಕಾರ 56 ಸಾವಿರ ಹುದ್ದೆಗಳ ನೇಮಕಾತಿಗೆ ತೀರ್ಮಾನಿಸಿದೆ. ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ಶೇ. 56 ರಷ್ಟು ಮೀಸಲಾತಿ ಜಾರಿಯಲ್ಲಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನ್ಯಾ. ನಾಗಮೋಹನ್ ದಾಸ್ ಸಮಿತಿ ನೀಡಿರುವ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡಬೇಕು. ಅಲೆಮಾರಿಗಳು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ; ಅವರಿಗೆ ಮನೆ ಇಲ್ಲ, ಕಾಡಿನಲ್ಲಿದ್ದಾರೆ. ಅವರು ಸಂಘಟಿತರಾಗಿಲ್ಲ ಎಂಬ ಕಾರಣಕ್ಕೆ ಅವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ನಾವು ಈ ಬಗ್ಗೆ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ಮಾಡುತ್ತೇವೆ. ಈಗಾಗಲೇ ಒಂದು ಹೋರಾಟ ನಡೆದಿದೆ, ಇದು ರಾಜ್ಯಾದ್ಯಂತ ವಿಸ್ತರಣೆಯಾಗುತ್ತದೆ. ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು. ಸರ್ಕಾರ ವಿಳಂಬ ಮಾಡುತ್ತಿರುವುದನ್ನು ಖಂಡಿಸುತ್ತೇನೆ," ಎಂದರು.
"ಸಂವಿಧಾನದ 9ನೇ ಷೆಡ್ಯೂಲ್‌ನಲ್ಲಿ ಮೀಸಲಾತಿ ಹೆಚ್ಚಳಕ್ಕೆ ಮೊದಲಿನಂತೆ ರಕ್ಷಣೆ ಇಲ್ಲ, ಅದನ್ನು ಪ್ರಶ್ನಿಸಲು ಅವಕಾಶವಿದೆ. ತಮಿಳುನಾಡಿನ ಮೀಸಲಾತಿಯನ್ನೂ ಪ್ರಶ್ನಿಸಲಾಗಿದೆ. ಒಳ ಮೀಸಲಾತಿ ವಿಚಾರದಲ್ಲಿ ತೆಲಂಗಾಣ ಸರ್ಕಾರದಲ್ಲಿ ಗೊಂದಲ ಇಲ್ಲ. ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಇದನ್ನು ಜಾರಿ ಮಾಡಲು ಮನಸ್ಸಿಲ್ಲ," ಎಂದು ಹೇಳಿದರು.

