ಕೈಗಾರಿಕಾ ಸಮಸ್ಯೆಗಳಿಗೆ ಪರಿಹಾರ: ರಾಜ್ಯದಲ್ಲಿ ಜಾರಿಗೆ ಬರಲಿದೆ ಕೇರಳ ಮಾದರಿ ಸಮಿತಿ
x

ಕೈಗಾರಿಕಾ ಸಮಸ್ಯೆಗಳಿಗೆ ಪರಿಹಾರ: ರಾಜ್ಯದಲ್ಲಿ ಜಾರಿಗೆ ಬರಲಿದೆ ಕೇರಳ ಮಾದರಿ ಸಮಿತಿ

ಎಐ ಕ್ಷೇತ್ರಕ್ಕೆ ರಾಜ್ಯವು ಭಾರಿ ಹೂಡಿಕೆ ಮಾಡುತ್ತಿದೆ. ಬಜೆಟ್‌ನಲ್ಲಿ ಕ್ರಾಂತಿಕಾರಿ ಯೋಜನೆಗಳನ್ನು ಘೋಷಿಸಿದೆ. ಎಐ ಉತ್ತೇಜಿಸಲು 1,386 ಕೋಟಿ ರೂ. ವೆಚ್ಚದಲ್ಲಿ ಕೆ-ಕ್ವೆಸ್ಟ್ ಯೋಜನೆಯನ್ನು ರೂಪಿಸಲಾಗಿದೆ.


Click the Play button to hear this message in audio format

ತಂತ್ರಜ್ಞಾನ, ನಾವೀನ್ಯತೆ ಮತ್ತು ಉತ್ಪಾದನಾ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರಾಜ್ಯ ಸರ್ಕಾರವು, ಈಗ ಸುಲಲಿತ ಕೈಗಾರಿಕಾ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಉನ್ನತ ಅಧಿಕಾರಿಗಳ ಮತ್ತು ಖಾಸಗಿ ಉದ್ಯಮಿಗಳನ್ನೊಳಗೊಂಡ ಜಂಟಿ ಸಮಾಲೋಚನಾ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿದೆ. ಇದರಿಂದ ಕೈಗಾರಿಕಾ ರಂಗಕ್ಕೆ ಸಂಬಂಧಿಸಿದ ಅಗತ್ಯ ಪ್ರಕ್ರಿಯೆ ಮುಂತಾದವು ತ್ವರಿತವಾಗಿ ಪರಿಹಾರ ಕಾಣಲಿವೆ.

ಈ ಬಗ್ಗೆ ಮಾಹಿತಿ ನೀಡಿದ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ಕೇರಳದಲ್ಲಿ ಜಾರಿಯಲ್ಲಿರುವ ಮಾದರಿಯನ್ನು ಇಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಕೇರಳದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮತ್ತು ಉದ್ಯಮಿಗಳು ನೇರವಾಗಿ ಚರ್ಚಿಸಿ ಸಮಸ್ಯೆ ಬಗೆಹರಿಸುವ ವೇದಿಕೆಯಿದ್ದು, ಅದು ಯಶಸ್ವಿಯಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಅಧಿಕಾರಿಗಳು ಮತ್ತು ಉದ್ಯಮಿಗಳ ನಡುವೆ ನೇರ ಸಂವಹನ ಏರ್ಪಡಲಿದೆ. ಇದರಿಂದ ಕೈಗಾರಿಕೆಗಳಿಗೆ ಸಂಬಂಧಿಸಿದ ಪರವಾನಗಿ, ಭೂಮಿ ಹಂಚಿಕೆ ಅಥವಾ ಮೂಲಸೌಕರ್ಯದಂತಹ ಸಮಸ್ಯೆಗಳು ಕೆಂಪು ಪಟ್ಟಿಯ ಸುಳಿಗೆ ಸಿಲುಕದೆ ತ್ವರಿತವಾಗಿ ಬಗೆಹರಿಯಲಿವೆ ಎಂದು ತಿಳಿಸಿದರು.

ಕೇವಲ ವ್ಯವಹಾರವನ್ನು ಸುಲಭಗೊಳಿಸುವುದಷ್ಟೇ ಅಲ್ಲದೆ, ನಾವೀನ್ಯತೆಯ ವೇಗಕ್ಕೂ ಸರ್ಕಾರ ಆದ್ಯತೆ ನೀಡಿದೆ. ರಾಜ್ಯದಲ್ಲಿ ಈಗಾಗಲೇ ದಕ್ಷ ಕೈಗಾರಿಕಾ ನೀತಿ, ಇಂಧನ ನೀತಿ ಮತ್ತು ಏಕಗವಾಕ್ಷಿ ವ್ಯವಸ್ಥೆಗಳು ಜಾರಿಯಲ್ಲಿವೆ. ಇವುಗಳಿಗೆ ಪೂರಕವಾಗಿ ಚಾಟ್-ಬಾಟ್ ಮತ್ತು ಏಕೀಕೃತ ಸೇವೆಗಳ ಜಾಲವನ್ನು ಅಳವಡಿಸಲಾಗಿದೆ. ತಂತ್ರಜ್ಞಾನದ ಬಳಕೆಯಿಂದ ಪಾರದರ್ಶಕತೆ ಹೆಚ್ಚಿಸುವುದು ಮತ್ತು ವಿಳಂಬವನ್ನು ಕಡಿಮೆ ಮಾಡುವುದು ಸರ್ಕಾರದ ಮೂಲ ಉದ್ದೇಶವಾಗಿದೆ. ಕೈಗಾರಿಕಾ ಬೆಳವಣಿಗೆಗೆ ಪೂರಕವಾದ ಯಾವುದೇ ರಚನಾತ್ಮಕ ಕ್ರಮಗಳನ್ನು ಜಗತ್ತಿನ ಯಾವುದೇ ಮೂಲೆಯಿಂದಾದರೂ ಸರಿ, ಅವುಗಳನ್ನು ಮುಕ್ತ ಮನಸ್ಸಿನಿಂದ ಅಳವಡಿಸಿಕೊಳ್ಳಲು ಸಿದ್ಧವಿರುವುದಾಗಿ ಭರವಸೆ ನೀಡಿದ್ದಾರೆ.

ತಂತ್ರಜ್ಞಾನದ ಹೊಸ ಯುಗ

ಭವಿಷ್ಯದ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೆ ಕರ್ನಾಟಕವು ಭಾರಿ ಹೂಡಿಕೆ ಮಾಡುತ್ತಿದೆ. 2026-27ರ ಬಜೆಟ್‌ನಲ್ಲಿ ಸರ್ಕಾರವು ಹಲವಾರು ಕ್ರಾಂತಿಕಾರಿ ಯೋಜನೆಗಳನ್ನು ಘೋಷಿಸಿದೆ. ಕೃತಕ ಬುದ್ಧಿಮತ್ತೆ ಕ್ಷೇತ್ರವನ್ನು ಉತ್ತೇಜಿಸಲು 1,386 ಕೋಟಿ ರೂ. ವೆಚ್ಚದಲ್ಲಿ ಕೆ-ಕ್ವೆಸ್ಟ್ ಯೋಜನೆಯನ್ನು ರೂಪಿಸಲಾಗಿದೆ.

233 ಕೋಟಿ ರೂ. ವೆಚ್ಚದಲ್ಲಿ ಹೊಸ ವಿಜ್ಞಾನ ನಗರವನ್ನು ನಿರ್ಮಿಸಲಾಗುತ್ತಿದೆ. ಇದು ಸಂಶೋಧನೆ ಮತ್ತು ಅಭಿವೃದ್ಧಿಗೆ ಪೂರಕವಾಗಲಿದೆ. ಅನ್ವಯಿಕ ಕೃತಕ ಬುದ್ಧಿಮತ್ತೆ ತಾಂತ್ರಿಕ ಪರಿಹಾರಗಳ ಕೇಂದ್ರಕ್ಕೆ 50 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಇದರ ಜೊತೆಗೆ, ಬೆಂಗಳೂರಿನ ಕೆಐಎಡಿಬಿ ಏರೋಸ್ಪೇಸ್ ಪಾರ್ಕ್‌ನಲ್ಲಿ ‘ಏರೋಸ್ಪೇಸ್ ಕಾಮನ್ ಫೆಸಿಲಿಟಿ ಸೆಂಟರ್’ ಸ್ಥಾಪನೆಯಾಗುತ್ತಿರುವುದು ವಿಮಾನಯಾನ ಮತ್ತು ರಕ್ಷಣಾ ಉತ್ಪಾದನಾ ವಲಯಕ್ಕೆ ದೊಡ್ಡ ಬಲ ನೀಡಲಿದೆ ಎಂದು ಹೇಳಿದರು.

ರಾಜ್ಯದ ಕೈಗಾರಿಕಾ ವಿಕೇಂದ್ರೀಕರಣ ಮತ್ತು ಆಧುನಿಕ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರವು ಹೊಸ ನಗರಗಳನ್ನು ಅಭಿವೃದ್ಧಿಪಡಿಸುತ್ತಿದೆ. ಡಾಬಸಪೇಟೆ ಮತ್ತು ದೊಡ್ಡಬಳ್ಳಾಪುರ ನಡುವೆ ತಲೆಯೆತ್ತಲಿರುವ ಕ್ವಿನ್ ಸಿಟಿ ಮೊದಲ ಹಂತವು ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ವಿಶೇಷವೆಂದರೆ, ಇಲ್ಲಿ 200 ಎಕರೆ ಜಾಗದಲ್ಲಿ ಸುಸಜ್ಜಿತ ‘ಸೆಮಿಕಂಡಕ್ಟರ್ ಪಾರ್ಕ್’ ಸ್ಥಾಪನೆಯಾಗಲಿದೆ. ಇದು ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯಲ್ಲಿ ಕರ್ನಾಟಕದ ಸ್ಥಾನವನ್ನು ಗಟ್ಟಿಗೊಳಿಸಲಿದೆ ಎಂದು ಮಾಹಿತಿ ನೀಡಿದರು.

ಹೆಸರಘಟ್ಟದ ಬಳಿ ಭಾರತದ ಮೊಟ್ಟಮೊದಲ ಕ್ವಾಂಟಂ ಸಿಟಿ ಮತ್ತು ಬಿಡದಿ ಬಳಿ ಎಐ ಸಿಟಿ ಅಭಿವೃದ್ಧಿಪಡಿಸಲಾಗುವುದು. ಪ್ರಸ್ತುತ ಭಾರತವು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸುಮಾರು 200 ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ವಹಿವಾಟು ನಡೆಸುತ್ತಿದೆ. ಇದರಲ್ಲಿ ಕರ್ನಾಟಕದ ಪಾಲು ಸಿಂಹಪಾಲಾಗಿದೆ. ರಾಜ್ಯವು ಮಾಹಿತಿ ತಂತ್ರಜ್ಞಾನದಲ್ಲಿ ಸಾಧಿಸಿದ ಸಾಧನೆಯನ್ನು ಈಗ ಆಧುನಿಕ ಉತ್ಪಾದನಾ ವಲಯದಲ್ಲೂ ಸಾಧಿಸಲು ಸಜ್ಜಾಗಿದೆ. ಸರ್ಕಾರವು ಕೈಗೊಳ್ಳುತ್ತಿರುವ ಈ ಕ್ರಮಗಳು ಕೇವಲ ಹೂಡಿಕೆಯನ್ನು ಆಕರ್ಷಿಸುವುದಲ್ಲದೆ, ಸ್ಥಳೀಯವಾಗಿ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ ಎಂದರು.

Read More
Next Story