
ಎಚ್‌ಎಸ್‌ಆರ್‌ಪಿ ಕುರಿತು ಸ್ಪಷ್ಟನೆ ನೀಡಿರುವ ಸಾರಿಗೆ ಇಲಾಖೆ ಆದೇಶ ಪ್ರತಿ
ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಕಡ್ಡಾಯ ನಿಯಮ ರದ್ದಾಗಿಲ್ಲ: ಸುಳ್ಳು ಸುದ್ದಿಗಳ ಬಗ್ಗೆ ಸಾರಿಗೆ ಇಲಾಖೆ ಸ್ಪಷ್ಟನೆ
ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವುದು ಕಡ್ಡಾಯವಾಗಿದೆ. ನಿಯಮ ರದ್ದಾಗಿದೆ ಎಂಬ ಸುದ್ದಿ ಕೇವಲ ವದಂತಿಯಷ್ಟೇ ಎಂದು ಇಲಾಖೆ ಹೇಳಿದೆ.
2019ರ ಏಪ್ರಿಲ್ 1ಕ್ಕೂ ಮುನ್ನ ನೋಂದಣಿಯಾದ ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ಅಳವಡಿಕೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ ಎಂಬ ವರದಿಗಳು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಆದರೆ, ಈ ನಿಯಮವನ್ನು ಹಿಂಪಡೆದಿಲ್ಲ ಮತ್ತು ಎಚ್‌ಎಸ್‌ಆರ್‌ಪಿ ಅಳವಡಿಕೆ ಕಡ್ಡಾಯ ನಿಯಮವು ಮುಂದುವರಿಯಲಿದೆ ಎಂದು ರಾಜ್ಯ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವುದು ಕಡ್ಡಾಯವಾಗಿದೆ. ನಿಯಮ ರದ್ದಾಗಿದೆ ಎಂಬ ಸುದ್ದಿ ಕೇವಲ ವದಂತಿಯಷ್ಟೇ ಎಂದು ಇಲಾಖೆ ಹೇಳಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆ ಏನು?
ಎಚ್‌ಎಸ್‌ಆರ್‌ಪಿ ಅಳವಡಿಸದ ವಾಹನ ಮಾಲೀಕರ ವಿರುದ್ಧ ಸದ್ಯಕ್ಕೆ ದಂಡ ವಿಧಿಸುವಂತಹ ಯಾವುದೇ ಬಲವಂತದ ಹಾಗೂ ದಂಡನಾತ್ಮಕ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಮಾತ್ರ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ನ್ಯಾಯಾಲಯವು ಎಚ್‌ಎಸ್‌ಆರ್‌ಪಿ ಕಡ್ಡಾಯ ನಿಯಮವನ್ನೇ ರದ್ದುಗೊಳಿಸಿಲ್ಲ ಅಥವಾ ಅಸಿಂಧುಗೊಳಿಸಿಲ್ಲ ಎಂಬುದು ಗಮನಾರ್ಹ. ಇದನ್ನು ತಪ್ಪಾಗಿ ಅರ್ಥೈಸಿಕೊಂಡು ನಿಯಮವೇ ರದ್ದಾಗಿದೆ ಎಂದು ಬಿಂಬಿಸಲಾಗಿತ್ತು.
ಈ ಕುರಿತು ಲಭ್ಯವಾಗಿರುವ ಅಧಿಕೃತ ದಾಖಲೆಯ ಪ್ರಕಾರ, ಎಚ್‌ಎಸ್‌ಆರ್‌ಪಿ ಅಳವಡಿಕೆ ಪ್ರಕ್ರಿಯೆಗೆ ಸಂಬಂಧಿಸಿದ ಕಾನೂನು ಹೋರಾಟಗಳು ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಕಾರಣ, ರಾಜ್ಯ ಸರ್ಕಾರವು ಸದ್ಯಕ್ಕೆ ಯಾವುದೇ ಆತುರದ ಅಥವಾ ಕಠಿಣ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ದಂಡದ ಪ್ರಯೋಗವಿಲ್ಲದಿದ್ದರೂ, ಸಾರ್ವಜನಿಕರು ಸ್ವಯಂಪ್ರೇರಿತವಾಗಿ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡು ನಿಯಮ ಪಾಲನೆ ಮಾಡುವಂತೆ ಸಾರಿಗೆ ಇಲಾಖೆ ಮನವಿ ಮಾಡಿದೆ.
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನಿಗದಿಪಡಿಸಿದ್ದ ಗಡುವಿನ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ನಿಯಮ ಮಾತ್ರ ರದ್ದಾಗಿಲ್ಲ ಎಂಬುದು ಸವಾರರು ಗಮನಿಸಬೇಕಾದ ಅಂಶವಾಗಿದೆ.

