ರಾಜ್ಯದಲ್ಲಿಲ್ಲ ಟ್ರಾಮಾ ಸೆಂಟರ್: ಹೆದ್ದಾರಿಗಳೇ ಈಗ ಸಾವಿನ ರಹದಾರಿ!
x

ರಾಜ್ಯದಲ್ಲಿಲ್ಲ ಟ್ರಾಮಾ ಸೆಂಟರ್: ಹೆದ್ದಾರಿಗಳೇ ಈಗ ಸಾವಿನ ರಹದಾರಿ!

ರಾಜ್ಯದ ಹೆದ್ದಾರಿಗಳಲ್ಲಿ ಸಕಾಲಕ್ಕೆ 'ಗೋಲ್ಡನ್ ಅವರ್' ಚಿಕಿತ್ಸೆ ಸಿಗದೆ ವರ್ಷಕ್ಕೆ ಸಾವಿರಾರು ಮಂದಿ ಬಲಿಯಾಗುತ್ತಿದ್ದು, ತುರ್ತು ಟ್ರಾಮಾ ಕೇರ್ ಸೆಂಟರ್‌ಗಳನ್ನು ತೆರೆಯಬೇಕಿದೆ.


Click the Play button to hear this message in audio format

ಜೀವ ಉಳಿಸಬೇಕಾದ ಹೆದ್ದಾರಿಗಳು ಇಂದು ಸಾವಿನ ರಹದಾರಿಗಳಾಗಿ ಬದಲಾಗುತ್ತಿವೆ. ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆ ಅಂದರೆ ಆ 'ಗೋಲ್ಡನ್ ಅವರ್'ನಲ್ಲಿ ಸಿಗಬೇಕಾದ ತುರ್ತು ಚಿಕಿತ್ಸೆ ಮರೀಚಿಕೆಯಾಗುತ್ತಿರುವುದರಿಂದ, ಪ್ರತಿವರ್ಷ ಸಾವಿರಾರು ಜೀವಗಳು ಆಂಬ್ಯುಲೆನ್ಸ್‌ನಲ್ಲೇ ಕೊನೆಯುಸಿರೆಳೆಯುತ್ತಿವೆ. ರಾಜ್ಯದ 28 ಸಾವಿರ ಕಿಲೋಮೀಟರ್‌ಗೂ ಅಧಿಕ ಉದ್ದದ ಹೆದ್ದಾರಿ ಜಾಲದಲ್ಲಿ ಕೇವಲ ಬೆರಳೆಣಿಕೆಯಷ್ಟು ಟ್ರಾಮಾ ಸೆಂಟರ್‌ಗಳಿರುವುದು ವ್ಯವಸ್ಥೆಯ ದುರಂತಕ್ಕೆ ಕಾರಣ.

ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳಿಂದಾಗಿ ವರ್ಷಕ್ಕೆ ಸರಾಸರಿ 10 ಸಾವಿರ ಮಂದಿ ಮೃತಪಡುತ್ತಿದ್ದಾರೆ. ಇದರಲ್ಲಿ ಸ್ಥಳದಲ್ಲೇ ಮೃತಪಡುವವರ ಸಂಖ್ಯೆ ಶೇ. 20ರಷ್ಟಿದ್ದರೆ, ಅಪಘಾತದಲ್ಲಿ ಗಾಯಗೊಳ್ಳುವವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಮೃತಪಡುವವರ ಸಂಖ್ಯೆ ಶೇ. 68ರಷ್ಟಿದೆ. ಅಪಘಾತಗಳಲ್ಲಿ ಗಾಯಗೊಂಡು ಚಿಕಿತ್ಸೆ ಲಭಿಸದೆ ಸಾವಿಗೀಡಾಗುವವರ ಸಂಖ್ಯೆಯನ್ನು ಗಮನಿಸಿದರೆ, ಹೆದ್ದಾರಿಗಳಲ್ಲಿ ವೈದ್ಯಕೀಯ ಸೌಲಭ್ಯಗಳೇ ಕಣ್ಮರೆಯಾಗಿವೆ ಎನ್ನುವಂತಾಗಿದೆ.

ಬಹುತೇಕ ಅಪಘಾತಗಳಲ್ಲಿ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ದೊರೆಯದೆ ಮೃತಪಟ್ಟವರ ಸಂಖ್ಯೆಯೇ ಹೆಚ್ಚು. ಆಂಬ್ಯುಲೆನ್ಸ್‌ನಲ್ಲಿ ಸಾಗಿಸುವಾಗ ಮಾರ್ಗಮಧ್ಯದಲ್ಲೇ ಮೃತಪಟ್ಟಿರುವ ಸಾಕಷ್ಟು ಉದಾಹರಣೆಗಳಿವೆ. "ಸೂಕ್ತ ಚಿಕಿತ್ಸೆ ದೊರೆತಿದ್ದರೆ ಜೀವ ಬದುಕುಳಿಯುತ್ತಿತ್ತು" ಎಂಬ ಗೊಣಗಾಟ ಪ್ರತಿ ಸಾವಿನ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿದೆ.

ರಾಜ್ಯದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ‘ಬ್ಲ್ಯಾಕ್ ಸ್ಪಾಟ್’ಗಳನ್ನು (ಅಪಘಾತ ವಲಯ) ಗುರುತಿಸಲಾಗಿದೆ. ಅತಿ ವೇಗವಾಗಿ ವಾಹನ ಚಾಲನೆ ಮಾಡುವ ಎಕ್ಸ್‌ಪ್ರೆಸ್‌ವೇಗಳಲ್ಲಿ ಸಣ್ಣ ಅಪಘಾತ ಸಂಭವಿಸಿದರೂ ಅದರ ತೀವ್ರತೆ ಹೆಚ್ಚಿರುತ್ತದೆ. ಆದರೆ, ಈ ಬ್ಲ್ಯಾಕ್ ಸ್ಪಾಟ್‌ಗಳ 50 ಕಿ.ಮೀ. ವ್ಯಾಪ್ತಿಯಲ್ಲಿ ಒಂದೂ ಸುಸಜ್ಜಿತ ಸರ್ಕಾರಿ ಟ್ರಾಮಾ ಸೆಂಟರ್‌ಗಳಿಲ್ಲ.

ಟ್ರಾಮಾ ಸೆಂಟರ್‌ಗಳೇ ಇಲ್ಲ

ಹೆದ್ದಾರಿಗಳಲ್ಲಿ ಅಪಘಾತಕ್ಕೀಡಾದವರ ಚಿಕಿತ್ಸೆಗೆ ಹೆದ್ದಾರಿ ಸಮೀಪವೇ ಟ್ರಾಮಾ ಸೆಂಟರ್‌ಗಳನ್ನು ತೆರೆಯಬೇಕಿದೆ. ಆದರೆ, ಇಡೀ ರಾಜ್ಯದ ಹೆದ್ದಾರಿಗಳಲ್ಲಿ ಕೇವಲ ಮೂರು ಟ್ರಾಮಾ ಸೆಂಟರ್‌ಗಳಷ್ಟೇ ಇವೆ. ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಮಾರ್ಗಸೂಚಿಗಳ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಜೀವ ಉಳಿಸಲು ‘ಗೋಲ್ಡನ್ ಅವರ್’ (ಅಪಘಾತವಾದ ಮೊದಲ ಒಂದು ಗಂಟೆ) ಅತ್ಯಂತ ನಿರ್ಣಾಯಕ. ಇದನ್ನೇ ಆಧಾರವಾಗಿಟ್ಟುಕೊಂಡು ಟ್ರಾಮಾ ಸೆಂಟರ್‌ಗಳ ಅಂತರವನ್ನು ನಿಗದಿಪಡಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ 50 ಕಿಲೋಮೀಟರ್‌ಗೆ ಕನಿಷ್ಠ ಒಂದು ಪ್ರಾಥಮಿಕ ಟ್ರಾಮಾ ಕೇರ್ ಸೆಂಟರ್ (Level-3) ಇರಬೇಕು. ಇಲ್ಲಿ ತುರ್ತು ಚಿಕಿತ್ಸೆ ನೀಡಿ ರೋಗಿಯನ್ನು ಸ್ಥಿರಗೊಳಿಸುವ ಸೌಲಭ್ಯವಿರುತ್ತದೆ. ಪ್ರತಿ 100 ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದು ಸುಸಜ್ಜಿತ ಟ್ರಾಮಾ ಸೆಂಟರ್ (Level-2) ಇರಬೇಕು. ಇಲ್ಲಿ ಶಸ್ತ್ರಚಿಕಿತ್ಸೆ, ಐಸಿಯು (ICU) ಮತ್ತು ರಕ್ತನಿಧಿ ಸೌಲಭ್ಯಗಳು ಲಭ್ಯವಿರಬೇಕು. ಒಂದು ದೊಡ್ಡ ಪ್ರಾದೇಶಿಕ ಕೇಂದ್ರ ಅಥವಾ ಟರ್ಷಿಯರಿ ಕೇರ್ ಸೆಂಟರ್ (Level-1) ಇರಬೇಕು (ಉದಾಹರಣೆಗೆ ನಿಮ್ಹಾನ್ಸ್ ಅಥವಾ ವಿಕ್ಟೋರಿಯಾ ಆಸ್ಪತ್ರೆ ಮಾದರಿಯದು), ಇಲ್ಲಿ ಎಲ್ಲಾ ರೀತಿಯ ಮಲ್ಟಿ-ಸ್ಪೆಷಾಲಿಟಿ ಚಿಕಿತ್ಸೆಗಳು ಲಭ್ಯವಿರಬೇಕು.

ಆದರೆ, ಪ್ರತಿ 50 ಕಿಲೋಮೀಟರ್‌ಗೊಂದು ಇರಬೇಕಿದ್ದ ಟ್ರಾಮಾ ಸೆಂಟರ್‌ಗಳೇ ರಾಜ್ಯದಲ್ಲಿಲ್ಲ. ಜಿಲ್ಲಾಸ್ಪತ್ರೆಗಳಲ್ಲಿಯೇ ಟ್ರಾಮಾ ಸೆಂಟರ್ ತೆರೆಯಲಾಗುತ್ತಿದೆ ಎನ್ನುವ ಜನಪ್ರತಿನಿಧಿಗಳು, 2 ಹಾಗೂ 3ನೇ ಹಂತದ ಟ್ರಾಮಾ ಸೆಂಟರ್‌ಗಳ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಜಿಲ್ಲಾಸ್ಪತ್ರೆಯಿಂದ ಕನಿಷ್ಠ 100 ಕಿ.ಮೀ. ದೂರದಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಗಾಯಾಳುಗಳನ್ನು ಅಷ್ಟು ದೂರ ಸಾಗಿಸುವುದರೊಳಗಾಗಿಯೇ ಅವರು ಕೊನೆಯುಸಿರೆಳೆಯುವ ಸಾಧ್ಯತೆಗಳಿವೆ. ಜೊತೆಗೆ ಬಹುತೇಕ ಜಿಲ್ಲಾಸ್ಪತ್ರೆಗಳಲ್ಲಿ ಮೊದಲನೇ ಹಂತದ ಟ್ರಾಮಾ ಸೆಂಟರ್‌ಗಳಲ್ಲಿ ಇರಬೇಕಾದ ಸೌಲಭ್ಯಗಳೇ ಇಲ್ಲ. ಹೆಸರಿಗಷ್ಟೇ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದರೂ, ಸೇವೆಗಳು ಮಾತ್ರ ಮೂರನೇ ಹಂತದ ಟ್ರಾಮಾ ಸೆಂಟರ್‌ಗಳ ಮಾದರಿಯಲ್ಲಿಯೇ ಇವೆ.


ರಾಜ್ಯದಲ್ಲಿ ಮೂರೇ ಟ್ರಾಮಾ ಸೆಂಟರ್

ರಾಜ್ಯದಲ್ಲಿ ಹೆದ್ದಾರಿಗಳ ಸಮೀಪ ಟ್ರಾಮಾ ಸೆಂಟರ್‌ಗಳೇ ಇಲ್ಲ. ಮೈಸೂರು ನಗರವನ್ನು ಬಿಟ್ಟರೆ, ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆ, ನಿಮ್ಹಾನ್ಸ್ ಹಾಗೂ ಕಲಬುರಗಿಯಲ್ಲಿ ಮಾತ್ರವೇ ಪ್ರತ್ಯೇಕ ಟ್ರಾಮಾ ಸೆಂಟರ್‌ಗಳ ಮಾದರಿಯಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಇನ್ನುಳಿದೆಡೆ ಜಿಲ್ಲಾ ಆಸ್ಪತ್ರೆ ಇಲ್ಲವೇ ಖಾಸಗಿ ಆಸ್ಪತ್ರೆಗಳೇ ದಿಕ್ಕು. ಹೆದ್ದಾರಿಗಳ ಟೋಲ್ ಸಮೀಪ ಆಂಬ್ಯುಲೆನ್ಸ್ ಮಾತ್ರ ಇರುತ್ತದೆ. ಆದರೆ, ಗಾಯಾಳುಗಳನ್ನು ಎಲ್ಲಿಗೆ ಸಾಗಿಸಬೇಕು ಎನ್ನುವುದೇ ಯಕ್ಷಪ್ರಶ್ನೆ. ಹತ್ತಿರದಲ್ಲಿ ಸುಸಜ್ಜಿತ ಟ್ರಾಮಾ ಸೆಂಟರ್ ಇಲ್ಲದ ಕಾರಣಕ್ಕೆ ದೂರದ ಜಿಲ್ಲಾಸ್ಪತ್ರೆ ಇಲ್ಲವೇ ತಾಲ್ಲೂಕು ಆಸ್ಪತ್ರೆಗಳಿಗೆ ಸಾಗಿಸಬೇಕು. ಅಷ್ಟರೊಳಗೆ ಗಾಯಾಳುಗಳು ಆಂಬ್ಯುಲೆನ್ಸ್‌ನಲ್ಲಿಯೇ ಕೊನೆಯುಸಿರೆಳೆಯುವ ಸಾಧ್ಯತೆಗಳಿವೆ.

ಎಷ್ಟಿವೆ ಹೆದ್ದಾರಿಗಳು?

ರಾಜ್ಯದಲ್ಲಿ ಒಟ್ಟು 28,311 ಕಿ.ಮೀ. ಉದ್ದದ ಹೆದ್ದಾರಿ ಇದೆ. ಇದರಲ್ಲಿ 4,491 ಕಿ.ಮೀ. ಉದ್ದದ 14 ರಾಷ್ಟ್ರೀಯ ಹೆದ್ದಾರಿಗಳು ಹಾಗೂ 115 ರಾಜ್ಯ ಹೆದ್ದಾರಿಗಳಿವೆ. ಅತಿ ಹೆಚ್ಚು ಅಪಘಾತ ಸಂಭವಿಸುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿಯೂ ಟ್ರಾಮಾ ಸೆಂಟರ್‌ಗಳಿಲ್ಲ. ಚನ್ನಪಟ್ಟಣ ಸಮೀಪದ ಚಾಮುಂಡೇಶ್ವರಿ ಆಸ್ಪತ್ರೆ, ಮಂಡ್ಯದ ಮೆಡಿಕಲ್ ಕಾಲೇಜು ಇಲ್ಲವೇ ಮೈಸೂರು-ಬೆಂಗಳೂರಿನ ಆಸ್ಪತ್ರೆಗಳಿಗೆ ಗಾಯಾಳುಗಳನ್ನು ಸಾಗಿಸುವ ಸ್ಥಿತಿ ಇದೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಸರ್ಕಾರಿ ಟ್ರಾಮಾ ಸೆಂಟರ್ ತಲೆ ಎತ್ತಿಲ್ಲ ಎನ್ನುವುದೇ ವಿಪರ್ಯಾಸ.

ಅಪಘಾತಗಳ ಸಂಖ್ಯೆ ಹೆಚ್ಚು

ರಾಜ್ಯದ ಹೆದ್ದಾರಿಗಳಲ್ಲಿ 2020ನೇ ಸಾಲಿನಲ್ಲಿ ಒಟ್ಟು 34,178 ಅಪಘಾತಗಳು ನಡೆದಿದ್ದು, ಇದರಲ್ಲಿ 3,760 ಮಂದಿ ಮೃತಪಟ್ಟಿದ್ದಾರೆ. ಇದೇ ರೀತಿ 2021ರಲ್ಲಿ ನಡೆದ 34,647 ಅಪಘಾತಗಳಲ್ಲಿ 10,038 ಮಂದಿ ಅಸುನೀಗಿದ್ದಾರೆ. 2022ರಲ್ಲಿ 39,762 ಅಪಘಾತಗಳು ನಡೆದಿದ್ದು, ಇದರಲ್ಲಿ 11,702 ಮಂದಿ ಮೃತಪಟ್ಟಿದ್ದಾರೆ. 2023ನೇ ಸಾಲಿನಲ್ಲಿ ಒಟ್ಟು 43,440 ಅಪಘಾತಗಳು ನಡೆದಿದ್ದು, 12,321 ಮಂದಿ ಕೊನೆಯುಸಿರೆಳೆದಿದ್ದಾರೆ. 2024ರಲ್ಲಿ ನಡೆದ 39,228 ಅಪಘಾತಗಳಲ್ಲಿ 10,319 ಮಂದಿ ಮೃತಪಟ್ಟಿದ್ದಾರೆ. 2025ರಲ್ಲಿ 42,000ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಸರಾಸರಿ 12,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ವಾಹನ ಸವಾರ ವಿನಯ್ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, "ರಸ್ತೆ ಅಪಘಾತಗಳಲ್ಲಿ ತಲೆ, ಬೆನ್ನು ಹಾಗೂ ಮೂಳೆಯ ಭಾಗದಲ್ಲಿ ಅತಿ ಹೆಚ್ಚು ಪೆಟ್ಟು ಬೀಳುತ್ತದೆ. ಇಂತಹ ಸಂದರ್ಭದಲ್ಲಿ ಸಕಾಲದಲ್ಲಿ ಚಿಕಿತ್ಸೆ ನೀಡುವ ಅವಶ್ಯಕತೆ ಇರುತ್ತದೆ. ಸೂಕ್ಷ್ಮ ಅಂಗಗಳಿಗೆ ಪೆಟ್ಟು ಬಿದ್ದಾಗ ಅವರನ್ನು ದೂರದ ಆಸ್ಪತ್ರೆಗಳಿಗೆ ಸಾಗಿಸುವುದು ಸಹ ಕಷ್ಟವಾಗುತ್ತದೆ. ಹೆದ್ದಾರಿ ಸಮೀಪದಲ್ಲಿಯೇ ಟ್ರಾಮಾ ಸೆಂಟರ್ ಸ್ಥಾಪಿಸಿ ಗೋಲ್ಡನ್ ಅವರ್‌ನೊಳಗೆ ಚಿಕಿತ್ಸೆ ನೀಡಿದರೆ ಸಾವಿನ ಪ್ರಮಾಣ ತಗ್ಗಿಸಬಹುದು" ಎಂದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ್ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, "300 ಹಾಸಿಗೆಗಳ ಪಾಲಿಟ್ರಾಮಾ ಸೆಂಟರ್ ಈಗ ನಿಮ್ಹಾನ್ಸ್‌ನ ಉತ್ತರ ಕ್ಯಾಂಪಸ್‌ನಲ್ಲಿ ತಲೆ ಎತ್ತಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 500 ಕೋಟಿ ರೂ. ಬಿಡುಗಡೆ ಮಾಡಿದ್ದು, ದೇಶದಲ್ಲಿಯೇ ಇದು 2ನೇ ಅತಿದೊಡ್ಡ ಪಾಲಿಟ್ರಾಮಾ ಸೆಂಟರ್ ಆಗಲಿದೆ. ಇಲ್ಲಿ ಮಲ್ಟಿಪಲ್ ಇಂಜುರಿಗಳಿಗೂ ಚಿಕಿತ್ಸೆ ದೊರೆಯಲಿದೆ. ಹೆದ್ದಾರಿಯ ಪ್ರತಿ 125 ಕಿ.ಮೀ.ಗೊಂದು ಪಾಲಿಟ್ರಾಮಾ ಕ್ಲಿನಿಕ್‌ಗಳನ್ನು ತೆರೆಯಬೇಕು ಹಾಗೂ ಹೆಲಿಕಾಪ್ಟರ್ ಆಂಬ್ಯುಲೆನ್ಸ್‌ಗಳ ಸೇವೆ ದೊರೆಯುವಂತೆ ಸಂಸತ್ತಿನಲ್ಲಿ ಮನವಿ ಮಾಡಿದ್ದೇನೆ. ಗಾಯಾಳುಗಳಿಗೆ ಗೋಲ್ಡನ್ ಅವರ್‌ನಲ್ಲಿ ಚಿಕಿತ್ಸೆ ನೀಡಲು ಹೆದ್ದಾರಿಗಳಲ್ಲಿ ಪಾಲಿಟ್ರಾಮಾ ಸೆಂಟರ್ ತೆರೆಯುವ ಅವಶ್ಯಕತೆ ಇದೆ" ಎಂದರು.

ರಾಜ್ಯದ 5 ಪ್ರಮುಖ 'ಸಾವಿನ ರಹದಾರಿಗಳು'

1. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಉದ್ಘಾಟನೆಯಾದ ಮೊದಲ ವರ್ಷವೇ ಇಲ್ಲಿ ನೂರಾರು ಸಾವುಗಳು ಸಂಭವಿಸಿವೆ. ಅತಿ ವೇಗದ ಚಾಲನೆಯೇ ಇಲ್ಲಿ ಮುಳುವಾಗುತ್ತಿದೆ. ಆದರೆ, ಈ 118 ಕಿ.ಮೀ. ವ್ಯಾಪ್ತಿಯಲ್ಲಿ ಒಂದೂ ಹೈಟೆಕ್ ಸರ್ಕಾರಿ ಟ್ರಾಮಾ ಸೆಂಟರ್ ಇಲ್ಲ.

2. ರಾಷ್ಟ್ರೀಯ ಹೆದ್ದಾರಿ 48 (ಪುಣೆ-ಬೆಂಗಳೂರು): ಬೆಳಗಾವಿಯಿಂದ ಬೆಂಗಳೂರಿನವರೆಗಿನ ಈ ಸುದೀರ್ಘ ರಸ್ತೆಯಲ್ಲಿ ಚಿತ್ರದುರ್ಗ ಮತ್ತು ತುಮಕೂರು ಭಾಗಗಳಲ್ಲಿ ಅತಿ ಹೆಚ್ಚು ಅಪಘಾತ ವಲಯಗಳಿವೆ (Black Spots).

3. ರಾಷ್ಟ್ರೀಯ ಹೆದ್ದಾರಿ 75 (ಬೆಂಗಳೂರು-ಮಂಗಳೂರು): ಶಿರಾಡಿ ಘಾಟ್ ಮತ್ತು ಹಾಸನ ವ್ಯಾಪ್ತಿಯಲ್ಲಿ ಸಂಭವಿಸುವ ಅಪಘಾತಗಳಲ್ಲಿ ಗಾಯಾಳುಗಳನ್ನು ಮಂಗಳೂರಿಗೆ ಸಾಗಿಸುವಷ್ಟರಲ್ಲಿ 'ಗೋಲ್ಡನ್ ಅವರ್' ಮೀರಿಹೋಗುತ್ತಿದೆ.

4. ರಾಷ್ಟ್ರೀಯ ಹೆದ್ದಾರಿ 66 (ಕೇರಳ-ಮಹಾರಾಷ್ಟ್ರ ಸಂಪರ್ಕ): ಉತ್ತರ ಕನ್ನಡದ ಕರಾವಳಿ ತೀರದ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಮತ್ತು ತಿರುವುಗಳು ಹೆಚ್ಚಿದ್ದು, ಸುಸಜ್ಜಿತ ವೈದ್ಯಕೀಯ ಕೇಂದ್ರಗಳ ಕೊರತೆ ಎದ್ದುಕಾಣುತ್ತಿದೆ.

5. ಹೊಸೂರು-ಬೆಂಗಳೂರು ರಸ್ತೆ: ತಮಿಳುನಾಡು ಗಡಿಯಿಂದ ಬೆಂಗಳೂರು ಪ್ರವೇಶಿಸುವವರೆಗಿನ ಈ ಹಾದಿಯಲ್ಲಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಬಲಿಯಾಗುವ ಪ್ರಮಾಣ ಅತಿ ಹೆಚ್ಚಿದೆ.

ಸರ್ಕಾರದ ಮುಂದಿರುವ ಬೇಡಿಕೆಗಳು

ಜಿಲ್ಲಾ ಮಟ್ಟದ ಕೇಂದ್ರಗಳು: ಪ್ರತಿಯೊಂದು ಜಿಲ್ಲಾಸ್ಪತ್ರೆಯಲ್ಲಿ ಕನಿಷ್ಠ 50 ಹಾಸಿಗೆಗಳ ಪ್ರತ್ಯೇಕ ಟ್ರಾಮಾ ಸೆಂಟರ್ ಸ್ಥಾಪನೆಯಾಗಬೇಕು.

ಹೆದ್ದಾರಿ ತುರ್ತು ಕೇಂದ್ರಗಳು: ಪ್ರತಿ 50-100 ಕಿ.ಮೀ. ವ್ಯಾಪ್ತಿಯಲ್ಲಿ ಹೆದ್ದಾರಿಯಲ್ಲೇ ಸುಸಜ್ಜಿತ ತುರ್ತು ಚಿಕಿತ್ಸಾ ಘಟಕಗಳಿರಬೇಕು.

ಏರ್ ಆಂಬ್ಯುಲೆನ್ಸ್ ಚಿಂತನೆ: ಸಂಚಾರ ದಟ್ಟಣೆ ಇರುವ ಕಡೆಗಳಲ್ಲಿ ರೋಗಿಗಳನ್ನು ತ್ವರಿತವಾಗಿ ಸ್ಥಳಾಂತರಿಸಲು ಏರ್ ಆಂಬ್ಯುಲೆನ್ಸ್ ಸೇವೆಗಳ ಅಗತ್ಯವಿದೆ.

Read More
Next Story