ಲೋಕಾಯುಕ್ತ ಐಜಿಪಿ-ಎಚ್‌ಡಿಕೆ ಜಟಾಪಟಿ| ಮಧ್ಯಸ್ಥಗಾರರ ಮೂಲಕ ಪ್ರಕರಣ ಇತ್ಯರ್ಥ ಇಂಗಿತ; ಏನಿದು ಪ್ರಕರಣ?
x
ಐಜಿಪಿ ಎಂ.ಚಂದ್ರಶೇಖರ್‌ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

ಲೋಕಾಯುಕ್ತ ಐಜಿಪಿ-ಎಚ್‌ಡಿಕೆ ಜಟಾಪಟಿ| ಮಧ್ಯಸ್ಥಗಾರರ ಮೂಲಕ ಪ್ರಕರಣ ಇತ್ಯರ್ಥ ಇಂಗಿತ; ಏನಿದು ಪ್ರಕರಣ?

ಎಚ್.ಡಿ. ಕುಮಾರಸ್ವಾಮಿ 2007ರಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಅಕ್ರಮವಾಗಿ 550 ಎಕರೆ ವಿಸ್ತೀರ್ಣದ ಗಣಿ ಗುತ್ತಿಗೆ ನೀಡಿದ್ದಾರೆಂಬ ಆರೋಪ ಸಂಬಂಧ ಚಂದ್ರಶೇಖರ್ ನೇತೃತ್ವದ ಲೋಕಾಯುಕ್ತ ಎಸ್ಐಟಿ ನಡೆಸುತ್ತಿದೆ.


ಗಣಿ ಗುತ್ತಿಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಲೋಕಾಯುಕ್ತ ಐಜಿಪಿ ಎಂ.ಚಂದ್ರಶೇಖರ್ ನಡುವಿನ ಜಟಾಪಟಿಯನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ಹೈಕೋರ್ಟ್ ಮುಂದಾಗಿದೆ.

ಇಬ್ಬರ ನಡುವಿನ ಆರೋಪ-ಪ್ರತ್ಯಾರೋಪದ ಬಳಿಕ ದಾಖಲಾಗಿರುವ ಪ್ರಕರಣವನ್ನು ಕೋರ್ಟ್‌ ಹೊರಗೆ ಬಗೆಹರಿಸಿಕೊಳ್ಳಲು ವೃತ್ತಿಪರ ಮಧ್ಯಸ್ಥಿಕೆದಾರರನ್ನು ನೇಮಿಸುವ ಇಂಗಿತ ವ್ಯಕ್ತಪಡಿಸಿದೆ. ಲೋಕಾಯುಕ್ತ ಐಜಿಪಿ ಎಂ.ಚಂದ್ರಶೇಖರ್ ದಾಖಲಿಸಿರುವ ಬೆದರಿಕೆ ಪ್ರಕರಣ ರದ್ದು ಮಾಡುವಂತೆ ಕೋರಿ ಎಚ್.ಡಿ. ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ನೇತೃತ್ವದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮಧ್ಯಸ್ಥಗಾರರ ಹೆಸರು ಸೂಚಿಸಲು ಸಲಹೆ

ಉಭಯ ಪಕ್ಷಕಾರರು ಒಪ್ಪುವುದಾದರೆ ಪ್ರಕರಣವನ್ನು ಇತ್ಯರ್ಥಪಡಿಸಲು ವೃತ್ತಿಪರ ಮಧ್ಯಸ್ಥಿಕೆದಾರರನ್ನು ನೇಮಿಸಬಹುದು. ಮಧ್ಯಸ್ಥಿಕೆದಾರರು ಯಾರಾಗಬೇಕು ಎಂಬ ಬಗ್ಗೆ ಎರಡೂ ಕಡೆಯವರು ಚರ್ಚಿಸಿ, ತಮಗೆ ಸಮ್ಮತವಾದ ವ್ಯಕ್ತಿಗಳ ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬಹುದು ಎಂದು ನ್ಯಾಯಪೀಠ ಹೇಳಿದೆ.

ಇಬ್ಬರ ಅಹವಾಲು ಆಲಿಸಿ, ಸಾಧ್ಯತೆಗಳನ್ನು ಹುಡುಕುವ ಮೂರನೇ ವ್ಯಕ್ತಿಯಿಂದ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವುದು ಸೂಕ್ತ. ಎರಡೂ ಕಡೆಯ ಮಧ್ಯಸ್ಥಿಕೆದಾರರು ನೀಡುವ ಸಲಹೆ ಆಧಾರದ ಮೇಲೆ ಮುಂದಿನ ತೀರ್ಮಾನ ಪ್ರಕಟಿಸಬಹುದು ಎಂದು ಹೇಳಿತು.

ಕ್ಷಮೆ ಕೇಳಲು ಎಚ್‌ಡಿಕೆ ನಿರಾಕರಣೆ

ಅರ್ಜಿ ವಿಚಾರಣೆ ವೇಳೆ ಕುಮಾರಸ್ವಾಮಿ ಪರ ವಾದ ಮಂಡಿಸಿದ ಹಿರಿಯ ವಕೀಲ ಹಷ್ಮತ್ ಪಾಷಾ, "ನನ್ನ ಕಕ್ಷಿದಾರರು ಚಂದ್ರಶೇಖರ್ ಅವರಿಗೆ ಯಾವುದೇ ಬೆದರಿಕೆ ಹಾಕಿಲ್ಲ, ಅವಹೇಳನಕಾರಿ ಪದ ಬಳಿಸಿಲ್ಲ. ಬದಲಿಗೆ ಅಧಿಕಾರಿಯೇ ಸಚಿವರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಕುಮಾರಸ್ವಾಮಿ ಅವರು ಕ್ಷಮೆಯಾಚಿಸುವ ಅಥವಾ ಅಫಿಡವಿಟ್ ಸಲ್ಲಿಸುವ ಪ್ರಶ್ನೆಯೇ ಇಲ್ಲ," ಎಂದು ಸ್ಪಷ್ಟಪಡಿಸಿದರು.

ಅಧಿಕಾರಿಯ ಪರ ವಾದವೇನು?

ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ಪರ ವಕೀಲರು ವಾದಿಸಿ, "ಈ ಪ್ರಕರಣದಲ್ಲಿ ಚಂದ್ರಶೇಖರ್ ಅವರು ಸಂತ್ರಸ್ತರು. ನ್ಯಾಯಾಲಯದ ಮುಂದೆ ಅಫಿಡವಿಟ್ ಸಲ್ಲಿಸುವಂತೆ ಕೇಳುವುದರಲ್ಲಿ ತಪ್ಪೇನಿಲ್ಲ. ಮಧ್ಯಸ್ಥಿಕೆದಾರರ ನೇಮಕಾತಿ ಕುರಿತು ಕಕ್ಷಿದಾರರ ಅಭಿಪ್ರಾಯ ಪಡೆದು ಮುಂದಿನ ವಿಚಾರಣೆಯಲ್ಲಿ ತಿಳಿಸಲಾಗುವುದು," ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಆಗ ನ್ಯಾಯಮೂರ್ತಿಗಳು ಅರ್ಜಿ ವಿಚಾರಣೆಯನ್ನು ಮಾ.26ಕ್ಕೆ ಮುಂದೂಡಿದರು. ಅಲ್ಲದೇ, ಮುಂದಿನ ವಿಚಾರಣೆವರೆಗೂ ಕುಮಾರಸ್ವಾಮಿ ವಿರುದ್ಧದ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಿ ಆದೇಶಿಸಿದರು.

ಇಬ್ಬರ ನಡುವೆ ಗಲಾಟೆ ಏನು?

ಎಚ್.ಡಿ. ಕುಮಾರಸ್ವಾಮಿ ಅವರು 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಎಂಬ ಕಂಪನಿಗೆ 550 ಎಕರೆ ವಿಸ್ತೀರ್ಣದ ಗಣಿ ಗುತ್ತಿಗೆಯನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಚಂದ್ರಶೇಖರ್ ನೇತೃತ್ವದ ಲೋಕಾಯುಕ್ತ ಎಸ್ಐಟಿ ನಡೆಸುತ್ತಿದೆ.

ಕುಮಾರಸ್ವಾಮಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಎಸ್ಐಟಿ ಮುಖ್ಯಸ್ಥರು ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಿರುವ ಮಾಹಿತಿ ಸೋರಿಕೆಯಾಗಿತ್ತು. ಮಾಹಿತಿ ಸೋರಿಕೆ ಸಂಬಂಧ ರಾಜಭವನದ ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೋರಿ ಐಜಿಪಿ ಪತ್ರ ಬರೆದಿದ್ದರು. ಇದು ಕುಮಾರಸ್ವಾಮಿ ಮತ್ತು ಚಂದ್ರಶೇಖರ್ ನಡುವೆ ಜಟಾಪಟಿಗೆ ಕಾರಣವಾಗಿದೆ.

ಕೆಳಮಟ್ಟದ ಆರೋಪ-ಪ್ರತ್ಯಾರೋಪ

ಪ್ರಾಸಿಕ್ಯೂಷನ್‌ ಕೋರಿದ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ರಾಜಭವನದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ಕೋರಿ ಚಂದ್ರಶೇಖರ್ ಬರೆದಿದ್ದ ಪತ್ರ ಬಹಿರಂಗವಾದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಐಜಿಪಿ ವಿರುದ್ಧ ಭ್ರಷ್ಟಾಚಾರ ಮತ್ತು ಸುಲಿಗೆಯ ಆರೋಪ ಹೊರಿಸಿದ್ದರು.

ಕೇಂದ್ರ ಸಚಿವರು ಅಧಿಕಾರಿಗಳನ್ನು ಬೆದರಿಸಲು ಹಾಗೂ ತನಿಖೆಯ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬಂದಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಲೋಕಾಯುಕ್ತ ಐಜಿಪಿ ಎಂ.ಚಂದ್ರಶೇಖರ್ ಅವರು, ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯಗಳಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮೊದಲೇ ಸಲ್ಲಿಸಬೇಕಿತ್ತು. ದೋಷಾರೋಪ ಪಟ್ಟಿ ಸಿದ್ಧಪಡಿಸುವ ಹಂತದಲ್ಲಿ ಆರೋಪ ಮಾಡುವ ಮೂಲಕ ಕುಮಾರಸ್ವಾಮಿ ಅವರು ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸುತಿದ್ದಾರೆ ಎಂದು ದೂರಿದ್ದರು.

ಎಂ. ಚಂದ್ರಶೇಖರ್ ಅವರು ತಮಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಪ್ರಕರಣ ರದ್ದುಪಡಿಸುವಂತೆ ಕೋರಿ ಕುಮಾರಸ್ವಾಮಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ʼಬ್ಲ್ಯಾಕ್‌ಮೇಲರ್‌-ಹಂದಿಗಳ ಜತೆ ಜಗಳʼ

ಲೋಕಾಯುಕ್ತ ಎಸ್ಐಟಿ ಮುಖ್ಯಸ್ಥ ಎಂ. ಚಂದ್ರಶೇಖರ್ ಒಬ್ಬ ಬ್ಲ್ಯಾಕ್ ಮೇಲರ್, ಕ್ರಿಮಿನಲ್ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಆಗ ಎಸ್ಐಟಿ ತಂಡದ ಸಹೋದ್ಯೋಗಿಗಳಿಗೆ ಪತ್ರ ಬರೆದಿದ್ದ ಚಂದ್ರಶೇಖರ್ ಅವರು ಜಾರ್ಜ್ ಬರ್ನಾಡ್ ಶಾ ಅವರ ಪ್ರಸಿದ್ದ ಇಂಗ್ಲಿಷ್ ಸಾಲನ್ನು ಉಲ್ಲೇಖಿಸಿ, ಹಂದಿಗಳ ಜೊತೆ ಜಗಳಕ್ಕೆ ಇಳಿದರೆ ನಾವು ಕೊಳಕಾಗುತ್ತೇವೆ. ಏಕೆಂದರ ಹಂದಿಗಳು ಕೊಳಕನ್ನೇ ಇಷ್ಟಪಡುತ್ತವೆ. ಹಾಗಾಗಿ ನಾವು ಹಂದಿಗಳ ಜೊತೆ ಜಗಳ ಮಾಡಬಾರದು ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದರು.

ಕುಮಾರಸ್ವಾಮಿ ಅವರು ಪ್ರಕರಣವೊಂದರ ಆರೋಪಿ. ಅವರು ಎಷ್ಟೇ ಎತ್ತರದ ಸ್ಥಾನದಲ್ಲಿದಲ್ಲಿದ್ದರೂ ಜಾಮೀನಿನ ಮೇಲಿರುವ ಆರೋಪಿಯಷ್ಟೇ. ನನ್ನ ಮೇಲೆ ಸುಳ್ಳು ಆರೋಪ ಮಾಡಿ ನಮ್ಮನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸೋಣ. ಎಲ್ಲಾ ಬಾಹ್ಯ ಪ್ರಭಾವಗಳಿಂದ ನಿಮ್ಮನ್ನು ರಕ್ಷಿಸುತ್ತೇನೆ ಎಂದು ಎಸ್ಐಟಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಚಂದ್ರಶೇಖರ್ ಧೈರ್ಯ ತುಂಬಿದ್ದರು.

Read More
Next Story