
ರೂಪಾ vs ರೋಹಿಣಿ ಸಿಂಧೂರಿ ಮಾನಹಾನಿ ಪ್ರಕರಣ: ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಎತ್ತಿಹಿಡಿದ ಹೈಕೋರ್ಟ್
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದ್ದು, ವಿಸ್ತ್ರತ ತೀರ್ಪನ್ನು ಇನ್ನಷ್ಟೇ ಪ್ರಕಟಗೊಳ್ಳಬೇಕಾಗಿದೆ.
ರಾಜ್ಯದ ಇಬ್ಬರು ಹಿರಿಯ ಅಧಿಕಾರಿಗಳ ನಡುವಿನ ಬಹುಚರ್ಚಿತ ಜಟಾಪಟಿಗೆ ಸಂಬಂಧಿಸಿದ ಮಾನಹಾನಿ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಹಿನ್ನಡೆಯಾಗಿದೆ. ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಅವರು ಹೂಡಿರುವ ಮಾನಹಾನಿ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯ (ಮ್ಯಾಜಿಸ್ಟ್ರೇಟ್ ಕೋರ್ಟ್) ಸಂಜ್ಞೇ ಪರಿಗಣಿಸಿ ಆದೇಶ ಹೊರಡಿಸಿದ್ದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಶನಿವಾರ ವಜಾಗೊಳಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದ್ದು, ಪ್ರಕರಣದ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಇಂದು ಪ್ರಕಟಿಸಿದೆ. ಇದರಿಂದಾಗಿ ಸದ್ಯಕ್ಕೆ ಐಪಿಎಸ್ ಅಧಿಕಾರಿ ರೂಪಾ ಮೇಲುಗೈ ಸಾಧಿಸಿದಂತಾಗಿದ್ದು, ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ರೋಹಿಣಿ ವಿರುದ್ಧದ ಮಾನಹಾನಿ ಪ್ರಕರಣದ ವಿಚಾರಣೆ ಮುಂದುವರೆಯಲು ಹಾದಿ ಸುಗಮವಾಗಿದೆ.
ಪ್ರಕರಣದ ಹಿನ್ನೆಲೆ: ಮಾಧ್ಯಮ ಹೇಳಿಕೆಯೇ ಮೂಲ
ಈ ಕಾನೂನು ಹೋರಾಟದ ಮೂಲ, ರೋಹಿಣಿ ಸಿಂಧೂರಿ ಅವರು ಬಿಡುಗಡೆ ಮಾಡಿದ್ದ ಮಾಧ್ಯಮ ಪ್ರಕಟಣೆಯಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಐಪಿಎಸ್ ಅಧಿಕಾರಿ ರೂಪಾ ಅವರು "ತಮ್ಮ ಮೇಲೆ ವೈಯಕ್ತಿಕ ಹಗೆ ಸಾಧಿಸಲು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವವರ ರೀತಿಯಲ್ಲಿ ವರ್ತಿಸುತ್ತಿದ್ದಾರೆ" ಎಂದು ಆ ಪ್ರಕಟಣೆಯಲ್ಲಿ ಆರೋಪಿಸಲಾಗಿತ್ತು.
ಇದೇ ಪ್ರಕಟಣೆಯಲ್ಲಿ ರೋಹಿಣಿ, "ರೂಪಾಗೆ ಇದೊಂದು ಅಭ್ಯಾಸವಾಗಿದೆ. ತಾನು ದ್ವೇಷಿಸುವ ವ್ಯಕ್ತಿಗಳ ಮೇಲೆ ವೈಯಕ್ತಿಕ ಹಗೆ ಸಾಧಿಸಲು ಮತ್ತು ಮಾಧ್ಯಮಗಳ ಗಮನ ಸೆಳೆಯಲು ಆಧಾರರಹಿತ ಆರೋಪಗಳನ್ನು ಮಾಡುವ ಕೀಳುಮಟ್ಟದ ಪ್ರವೃತ್ತಿ ಪ್ರದರ್ಶಿಸುತ್ತಿದ್ದಾರೆ. ಯಾವಾಗಲೂ ಸುದ್ದಿಯಲ್ಲಿರಬೇಕು ಎಂದು ಬಯಸುವ ಅವರು, ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಕೇಂದ್ರಬಿಂದುವಾಗಲು ಯತ್ನಿಸುತ್ತಿದ್ದಾರೆ" ಎಂದು ತೀವ್ರ ವಾಗ್ದಾಳಿ ನಡೆಸಿದ್ದರು.
ಫೋಟೋ ವಿವಾದ ಮತ್ತು ತೇಜೋವಧೆ ಆರೋಪ
ರೂಪಾ ಅವರು ಸಾಮಾಜಿಕ ಮಾಧ್ಯಮ ಮತ್ತು ವಾಟ್ಸ್ಆ್ಯಪ್ ಸ್ಟೇಟಸ್‌ನಿಂದ ಸ್ಕ್ರೀನ್‌ಶಾಟ್ ತೆಗೆದುಕೊಂಡ ಫೋಟೋಗಳನ್ನು ಬಳಸಿ ತಮ್ಮ ತೇಜೋವಧೆ ಮಾಡುತ್ತಿದ್ದಾರೆ ಎಂದು ರೋಹಿಣಿ ಆರೋಪಿಸಿದ್ದರು. "ನಾನು ಈ ಫೋಟೋಗಳನ್ನು ಕೆಲವು ಅಧಿಕಾರಿಗಳಿಗೆ ಕಳುಹಿಸಿದ್ದೇನೆ ಎಂಬುದು ಸುಳ್ಳು ಆರೋಪ. ಒಂದು ವೇಳೆ ಕಳುಹಿಸಿದ್ದರೆ ಆ ಅಧಿಕಾರಿಗಳ ಹೆಸರನ್ನು ರೂಪಾ ಬಹಿರಂಗಪಡಿಸಬೇಕು" ಎಂದು ಸವಾಲು ಹಾಕಿದ್ದರು. ಜೊತೆಗೆ ಸೇವಾ ನಡತೆ ನಿಯಮ ಉಲ್ಲಂಘನೆಗಾಗಿ ರೂಪಾ ವಿರುದ್ಧ ಶಿಸ್ತು ಕ್ರಮಕ್ಕೆ ದೂರು ನೀಡುವುದಾಗಿಯೂ ಹೇಳಿದ್ದರು.
ರೂಪಾಗೆ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಜಯ
ರೋಹಿಣಿ ಸಿಂಧೂರಿ ಅವರ ಈ ಮಾಧ್ಯಮ ಪ್ರಕಟಣೆಯನ್ನು ಆಕ್ಷೇಪಿಸಿ ಡಿ.ರೂಪಾ ಅವರು ಮಾನಹಾನಿ ಮೊಕದ್ದಮೆ ಹೂಡಿದ್ದರು. ಜೊತೆಗೆ ನ್ಯಾಯಾಲಯದ ಮುಂದೆ ತಮ್ಮ ಸ್ವಯಂ ಹೇಳಿಕೆಯನ್ನೂ ದಾಖಲಿಸಿದ್ದರು. ಇದನ್ನು ಆಧರಿಸಿ ಜನವರಿ 13ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಂಜ್ಞೇ (Cognizance) ಪರಿಗಣಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ರೋಹಿಣಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ಆದೇಶವನ್ನು ಎತ್ತಿಹಿಡಿದು ರೋಹಿಣಿ ಅವರ ಅರ್ಜಿಯನ್ನು ವಜಾಗೊಳಿಸಿದೆ.
ಹೈಕೋರ್ಟ್‌ನ ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

