Soujanya  Mother Files PIL Seeking  Deaths Around Dharmasthala
x

ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಮೃತ ಸೌಜನ್ಯಾ ತಾಯಿ ಕುಸುಮಾವತಿ

Dharmastala Case| ಅಸಹಜ ಸಾವುಗಳ ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಗಡುವು

ನಿಯಮದಂತೆ 2010ರವರೆಗಿನ ಹಳೆಯ ದಾಖಲೆಗಳನ್ನು ನಾಶಪಡಿಸಲಾಗಿದೆ. ಆದರೂ ಲಭ್ಯವಿರುವ ಮರಣೋತ್ತರ ಪರೀಕ್ಷೆ ಮತ್ತು ವೈದ್ಯರ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದರು.


ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿದೆ ಎನ್ನಲಾದ ಸುಮಾರು 74 ಅಸಹಜ ಸಾವುಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ಮಹತ್ವದ ನಿರ್ದೇಶನ ನೀಡಿದೆ.

2012 ರಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ.

ಅರ್ಜಿದಾರರ ಪರ ವಕೀಲರ ವಾದವೇನು?

ಅರ್ಜಿದಾರರ ಪರ ವಕೀಲ ಎಸ್. ಬಾಲನ್ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, "ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದ 74 ಅಸಹಜ ಸಾವುಗಳ ಪ್ರಕರಣಗಳಲ್ಲಿ ಕನಿಷ್ಠ ಕಾನೂನು ಪ್ರಕ್ರಿಯೆಗಳನ್ನೂ ಪಾಲಿಸಲಾಗಿಲ್ಲ. ಮರಣೋತ್ತರ ಪರೀಕ್ಷೆ ನಡೆಸದೆ, ಪಂಚನಾಮೆ ಮಾಡದೇ ಶವಗಳ ಸಂಸ್ಕಾರ ಮಾಡಲಾಗಿದೆ. ಲಾಡ್ಜ್‌ಗಳಲ್ಲಿ ಉಳಿದುಕೊಂಡಿದ್ದ ಮಹಿಳೆಯರು ನಾಪತ್ತೆಯಾಗಿ ನಂತರ ಶವವಾಗಿ ಪತ್ತೆಯಾಗಿದ್ದರೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಈ ಬಗ್ಗೆ ಎಸ್‌ಐಟಿ ತನಿಖೆ ನಡೆಯಬೇಕು," ಎಂದು ಒತ್ತಾಯಿಸಿದರು.

ಅಡ್ವೊಕೇಟ್ ಜನರಲ್ ವಾದವೇನು?

ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, "ಈ ಪ್ರಕರಣಗಳು 2002ರ ಕಾಲಘಟ್ಟದ್ದಾಗಿದ್ದು, ಈಗಾಗಲೇ ಯುಡಿಆರ್ (ಅಸಹಜ ಸಾವು ವರದಿ) ದಾಖಲಿಸಿ ತನಿಖೆ ನಡೆಸಲಾಗಿದೆ. ನಿಯಮದಂತೆ 2010ರವರೆಗಿನ ಹಳೆಯ ದಾಖಲೆಗಳನ್ನು ನಾಶಪಡಿಸಲಾಗಿದೆ. ಆದರೂ ಲಭ್ಯವಿರುವ ಮರಣೋತ್ತರ ಪರೀಕ್ಷೆ ಮತ್ತು ವೈದ್ಯರ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು," ಎಂದರು. ಅಲ್ಲದೆ, ಅರ್ಜಿದಾರರ ಸಹೋದರನ ವಿರುದ್ಧವೇ ದಾಖಲೆ ತಿರುಚಿದ ಆರೋಪವಿರುವುದನ್ನು ಪೀಠದ ಗಮನಕ್ಕೆ ತಂದರು.

ವಿಚಾರಣೆ ವೇಳೆ ಪೀಠವು ಸರ್ಕಾರದ ನಿಲುವನ್ನು ಪ್ರಶ್ನಿಸಿ, "ದಾಖಲೆಗಳೇ ಇಲ್ಲದಿದ್ದರೆ ಸರ್ಕಾರ ತನಿಖೆ ಮಾಡುವುದಾದರೂ ಹೇಗೆ? ಅಸಹಜ ಸಾವು ಸಂಭವಿಸಿದಾಗ ಸಾವಿಗೆ ನಿಖರ ಕಾರಣ ಏನೆಂಬುದು ತಿಳಿಯಬೇಕಲ್ಲವೇ?" ಎಂದು ಆಶ್ಚರ್ಯ ವ್ಯಕ್ತಪಡಿಸಿತು.

1999ರಿಂದ 2021 ರವರೆಗೆ ನಡೆದಿರುವ 74 ಅಸಹಜ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನಡೆಸಿರುವ ತನಿಖೆಯ ವಿವರವಾದ ವರದಿಯನ್ನು ಸರ್ಕಾರ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಜು.7ಕ್ಕೆ ಮುಂದೂಡಿತು.

Read More
Next Story