
ಕಾರು ಡ್ರಿಫ್ಟ್ ಪ್ರಕರಣ; ರಿಕ್ಕಿ ರೈ ವಿರುದ್ಧ ಆತುರದ ಕ್ರಮ ಬೇಡ; ಹೈಕೋರ್ಟ್ ಸೂಚನೆ
ರಿಕ್ಕಿ ರೈ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪ್ರಾಸಿಕ್ಯೂಷನ್ಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.
ಐಷಾರಾಮಿ ಲ್ಯಾಂಬೊರ್ಗಿನಿ ಕಾರಿಗೆ ನಕಲಿ ಫ್ಯಾನ್ಸಿ ನಂಬರ್ ಪ್ಲೇಟ್ ಅಳವಡಿಸಿ ವಾಹನ ಚಾಲನೆ ಮಾಡಿದ ಆರೋಪದ ಮೇಲೆ ಸಂಕಷ್ಟಕ್ಕೆ ಸಿಲುಕಿರುವ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ರಿಕ್ಕಿ ರೈ ವಿರುದ್ಧ ಯಾವುದೇ ಆತುರದ ಕ್ರಮ ಜರುಗಿಸದಂತೆ ಪ್ರಾಸಿಕ್ಯೂಷನ್‌ಗೆ ನ್ಯಾಯಾಲಯ ಸೂಚಿಸಿದೆ.
ತಮ್ಮ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ರಿಕ್ಕಿ ರೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಆದೇಶ ನೀಡಿದೆ. ಅರ್ಜಿದಾರರ ಪರ ಹಿರಿಯ ವಕೀಲರಾದ ಲಕ್ಷ್ಮಿ ಅಯ್ಯಂಗಾರ್ ವಾದ ಮಂಡಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು, ʼತನಿಖೆಯ ನೆಪದಲ್ಲಿ ಪೊಲೀಸರು ಅರ್ಜಿದಾರರ ವಿರುದ್ಧ ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು ಎಂದು ಹೇಳಿತ್ತಲ್ಲದೇ, ತನಿಖೆಗೆ ಪೂರ್ಣ ಸಹಕಾರ ನೀಡುವಂತೆಯೂ ರಿಕ್ಕಿ ರೈ ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ರಿಕ್ಕಿ ರೈ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪ್ರಾಸಿಕ್ಯೂಷನ್ಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.
ಏನಿದು ಪ್ರಕರಣ?
ಕಳೆದ ಮಾರ್ಚ್ 21ರ ಮಧ್ಯರಾತ್ರಿ ಬೆಂಗಳೂರಿನ ಅನಿಲ್ ಕುಂಬ್ಳೆ ವೃತ್ತದ ಬಳಿ 'KA-05 NR-0009' ನೋಂದಣಿ ಸಂಖ್ಯೆಯ ಲ್ಯಾಂಬೊರ್ಗಿನಿ ಕಾರನ್ನು ಅತೀ ವೇಗವಾಗಿ ಚಾಲನೆ ಮಾಡಲಾಗಿತ್ತು. ಈ ದೃಶ್ಯವನ್ನು ಸಾರ್ವಜನಿಕರೊಬ್ಬರು ವಿಡಿಯೋ ಮಾಡಿ, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಇದು ವೈರಲ್ ಆಗಿತ್ತು.
ವಿಡಿಯೋ ಆಧಾರದ ಮೇಲೆ ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೊಲೀಸರು ತನಿಖೆ ಕೈಗೊಂಡಾಗ ಕಾರು ರಿಕ್ಕಿ ರೈಗೆ ಸೇರಿದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಕಾರಿನಲ್ಲಿದ್ದ ನಂಬರ್ ಪ್ಲೇಟ್ ವಾಸ್ತವವಾಗಿ ಆ ಕಾರಿಗೆ ಸೇರಿದ್ದಲ್ಲ, ಬದಲಿಗೆ ನಕಲಿ ದಾಖಲೆ ಸೃಷ್ಟಿಸಿ ಫ್ಯಾನ್ಸಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವಂಚನೆ ಮತ್ತು ದಾಖಲೆಗಳ ದುರುಪಯೋಗದ ಆರೋಪದಡಿ ರಿಕ್ಕಿ ರೈ ವಿರುದ್ಧ ಪ್ರಕರಣ ದಾಖಲಾಗಿತ್ತು.

