
ಹೈಕೋರ್ಟ್
ವೈವಾಹಿಕ ವಿವಾದ: ಆರ್‌ಟಿಐ ಅಡಿ ಸಂಗಾತಿಯ ಆದಾಯ ತೆರಿಗೆ ಮಾಹಿತಿ ಪಡೆಯುವಂತಿಲ್ಲ ಎಂದ ಹೈಕೋರ್ಟ್
ವಿಚ್ಛೇದನ ಅಥವಾ ಕೌಟುಂಬಿಕ ವಿವಾದಗಳ ಸಂದರ್ಭದಲ್ಲಿ ನ್ಯಾಯಾಲಯವು ಜೀವನಾಂಶ ನಿಗದಿಪಡಿಸುವಾಗ ಕೇವಲ ಮೌಖಿಕ ಹೇಳಿಕೆಗಳನ್ನು ನೆಚ್ಚಿಕೊಳ್ಳಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವೈವಾಹಿಕ ವಿವಾದಗಳಿಗೆ ಸಂಬಂಧಿಸಿದಂತೆ ಜೀವನಾಂಶ ಮತ್ತು ನಿರ್ವಹಣಾ ವೆಚ್ಚ ಕೋರುವ ಪ್ರಕರಣಗಳಲ್ಲಿ, ಸಂಗಾತಿಯ ಆದಾಯ ತೆರಿಗೆ (ಐಟಿ) ಪಾವತಿಯ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಅಡಿಯಲ್ಲಿ ಪಡೆಯಲು ಯಾವುದೇ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಆದಾಯ ತೆರಿಗೆ ಪಾವತಿಯು ಪ್ರತಿಯೊಬ್ಬ ವ್ಯಕ್ತಿಯ ಖಾಸಗಿ ಹಾಗೂ ಗೌಪ್ಯತೆಯ ವಿಚಾರವಾಗಿದ್ದು, ಇದನ್ನು ಆರ್‌ಟಿಐ ಅಡಿ ಸಾರ್ವಜನಿಕವಾಗಿ ಬಹಿರಂಗಪಡಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪತಿಯ ಆದಾಯ ತೆರಿಗೆ ವಿವರಗಳನ್ನು ಆರ್‌ಟಿಐ ಅಡಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ.
ಜೀವನಾಂಶ ನಿರ್ಧಾರಕ್ಕೆ ಅಧಿಕೃತ ದಾಖಲೆಗಳೇ ಆಧಾರ
ವಿಚ್ಛೇದನ ಅಥವಾ ಕೌಟುಂಬಿಕ ವಿವಾದಗಳ ಸಂದರ್ಭದಲ್ಲಿ ನ್ಯಾಯಾಲಯವು ಪತ್ನಿ ಅಥವಾ ಪತಿಗೆ ಜೀವನಾಂಶ (ನಿರ್ವಹಣಾ ವೆಚ್ಚ) ನಿಗದಿಪಡಿಸುವಾಗ ಕೇವಲ ಮೌಖಿಕ ಹೇಳಿಕೆಗಳನ್ನು ನೆಚ್ಚಿಕೊಳ್ಳಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇಂತಹ ಪ್ರಕರಣಗಳಲ್ಲಿ ಪತಿಯು ತನ್ನ ನೈಜ ಆದಾಯವನ್ನು ಕಡಿಮೆ ಮಾಡಿ ತೋರಿಸುವುದು ಅಥವಾ ಪತ್ನಿಯು ಪತಿಯ ಆದಾಯವನ್ನು ಅತಿಶಯೋಕ್ತಿಯಾಗಿ ಬಿಂಬಿಸುವುದು ಸಾಮಾನ್ಯವಾಗಿದೆ. ಇದರಿಂದಾಗಿ ನ್ಯಾಯದ ಹಾದಿ ತಪ್ಪುವ ಸಾಧ್ಯತೆಗಳಿರುತ್ತವೆ. ಹೀಗಾಗಿ, ದಂಪತಿಯ ನೈಜ ಆರ್ಥಿಕ ಸ್ಥಿತಿಗತಿ ಹಾಗೂ ನ್ಯಾಯಯುತವಾದ ಜೀವನಾಂಶವನ್ನು ನಿರ್ಧರಿಸಲು ಅಧಿಕೃತ ಹಣಕಾಸು ದಾಖಲೆಗಳು ಹಾಗೂ ಆದಾಯ ತೆರಿಗೆ ಪಾವತಿಯ ವಿವರಗಳು ಅತ್ಯಗತ್ಯ ಎಂದು ನ್ಯಾಯಪೀಠವು ವಿವರಿಸಿದೆ.
ಮಾಹಿತಿ ಪಡೆಯಲು ಕಟ್ಟುನಿಟ್ಟಿನ ಮಾರ್ಗಸೂಚಿ
ಸಂಗಾತಿಯ ಆದಾಯ ತೆರಿಗೆ ಮಾಹಿತಿಯನ್ನು ಆರ್‌ಟಿಐ ಬದಲಾಗಿ ಕಾನೂನುಬದ್ಧವಾಗಿ ಹೇಗೆ ಪಡೆಯಬೇಕು ಎಂಬುದರ ಕುರಿತು ವಿಚಾರಣಾ ನ್ಯಾಯಾಲಯಗಳು ಹಾಗೂ ಆದಾಯ ತೆರಿಗೆ ಇಲಾಖೆ ಅನುಸರಿಸಬೇಕಾದ ವಿಸ್ತೃತ ಮಾರ್ಗಸೂಚಿಗಳನ್ನು ಹೈಕೋರ್ಟ್ ಪ್ರಕಟಿಸಿದೆ. ಸಂಗಾತಿಯ ಹಣಕಾಸು ಮಾಹಿತಿ ಅಗತ್ಯವಿರುವವರು ಮೊದಲು ಕೌಟುಂಬಿಕ ಅಥವಾ ವಿಚಾರಣಾ ನ್ಯಾಯಾಲಯಕ್ಕೆ ಅಧಿಕೃತವಾಗಿ ಅರ್ಜಿ ಸಲ್ಲಿಸಬೇಕು. ಈ ಮಾಹಿತಿಯು ಜೀವನಾಂಶ ನಿರ್ಧರಿಸಲು ನಿಜಕ್ಕೂ ಅಗತ್ಯವಿದೆಯೇ ಎಂಬುದನ್ನು ನ್ಯಾಯಾಲಯವು ಕೂಲಂಕಷವಾಗಿ ಪರಿಶೀಲಿಸಿದ ಬಳಿಕವಷ್ಟೇ ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕು.
ಈ ಇಡೀ ಪ್ರಕ್ರಿಯೆ ವಿಳಂಬವಾಗಬಾರದು ಎಂಬ ಸದುದ್ದೇಶದಿಂದ ನ್ಯಾಯಾಲಯವು ಕಟ್ಟುನಿಟ್ಟಿನ ಕಾಲಮಿತಿಯನ್ನು ಸಹ ವಿಧಿಸಿದೆ. ಪ್ರತಿವಾದಿಗೆ (ಪತಿ ಅಥವಾ ಪತ್ನಿಗೆ) ನೋಟಿಸ್ ಜಾರಿ ಮಾಡಿದ ಕೇವಲ ಹದಿನಾಲ್ಕು ದಿನಗಳ ಒಳಗೆ ವಿಚಾರಣೆಯನ್ನು ಪೂರ್ಣಗೊಳಿಸಬೇಕು ಹಾಗೂ ನ್ಯಾಯಾಲಯದ ಆದೇಶ ಬಂದ ಇಪ್ಪತ್ತೊಂದು ದಿನಗಳ ಒಳಗೆ ಆದಾಯ ತೆರಿಗೆ ಇಲಾಖೆಯ ನೋಡಲ್ ಅಧಿಕಾರಿಗಳು ಸಂಬಂಧಪಟ್ಟ ಮಾಹಿತಿಯನ್ನು ಒದಗಿಸಬೇಕು ಎಂದು ಸೂಚಿಸಲಾಗಿದೆ.
ಮುಚ್ಚಿದ ಲಕೋಟೆಯಲ್ಲಿ ಗೌಪ್ಯತೆ ಕಾಪಾಡುವುದು ಕಡ್ಡಾಯ
ವ್ಯಕ್ತಿಯ ಹಣಕಾಸು ವಿಚಾರವು ಅತ್ಯಂತ ಸೂಕ್ಷ್ಮವಾಗಿರುವುದರಿಂದ, ಮಾಹಿತಿಯ ಗೌಪ್ಯತೆಯನ್ನು ಕಾಪಾಡುವುದು ಕಡ್ಡಾಯವಾಗಿದೆ. ಆದಾಯ ತೆರಿಗೆ ಇಲಾಖೆಯು ಈ ವಿವರಗಳನ್ನು ಕಡ್ಡಾಯವಾಗಿ ಮುಚ್ಚಿದ ಲಕೋಟೆಯಲ್ಲಿ (ಸೀಲ್ಡ್ ಕವರ್) ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈ ಲಕೋಟೆಯನ್ನು ಕೇವಲ ನ್ಯಾಯಾಧೀಶರು ಹಾಗೂ ಸಂಬಂಧಪಟ್ಟ ಉಭಯ ಪಕ್ಷಗಾರರ ಸಮ್ಮುಖದಲ್ಲಿ ಮಾತ್ರವೇ ತೆರೆಯಬೇಕು. ನ್ಯಾಯಾಲಯವು ಈ ಎಲ್ಲ ಸೂಕ್ಷ್ಮ ದಾಖಲೆಗಳ ನಕಲು ಪ್ರತಿಯನ್ನು (ಝೆರಾಕ್ಸ್) ಕಕ್ಷಿದಾರರಿಗೆ ಒದಗಿಸುವ ಅಗತ್ಯವಿಲ್ಲ. ಬದಲಾಗಿ, ಕಕ್ಷಿದಾರರು ಆ ದಾಖಲೆಗಳನ್ನು ನ್ಯಾಯಾಲಯದಲ್ಲೇ ಪರಿಶೀಲಿಸಿ, ತಮಗೆ ಅಗತ್ಯವಿರುವ ಟಿಪ್ಪಣಿಗಳನ್ನು (ನೋಟ್ಸ್) ಮಾತ್ರ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ದುರುಪಯೋಗವಾದರೆ ಕಠಿಣ ಕ್ರಮದ ಎಚ್ಚರಿಕೆ
ಆದಾಯ ತೆರಿಗೆ ಮಾಹಿತಿಯನ್ನು ಪಡೆಯುವ ಮುನ್ನ ನ್ಯಾಯಾಲಯವು ಉಭಯ ಪಕ್ಷಗಾರರಿಂದ ಕಡ್ಡಾಯವಾಗಿ ಪ್ರಮಾಣಪತ್ರವನ್ನು (ಅಫಿಡವಿಟ್) ಪಡೆದುಕೊಳ್ಳಬೇಕು. ಈ ಮಾಹಿತಿಯನ್ನು ಕೇವಲ ಜೀವನಾಂಶ ಅಥವಾ ನಿರ್ವಹಣಾ ವೆಚ್ಚದ ಪ್ರಕರಣದ ಉದ್ದೇಶಕ್ಕಾಗಿ ಮಾತ್ರ ಬಳಸಿಕೊಳ್ಳುತ್ತೇವೆ ಮತ್ತು ಮೂರನೇ ವ್ಯಕ್ತಿಗೆ ಅಥವಾ ಬೇರೆಲ್ಲೂ ಇದನ್ನು ಬಹಿರಂಗಪಡಿಸುವುದಿಲ್ಲ ಎಂದು ಕಕ್ಷಿದಾರರು ಮುಚ್ಚಳಿಕೆ ಬರೆದುಕೊಡಬೇಕು. ಒಂದು ವೇಳೆ ನ್ಯಾಯಾಲಯದ ಈ ಷರತ್ತನ್ನು ಉಲ್ಲಂಘಿಸಿ, ಮಾಹಿತಿಯನ್ನು ಬೇರಾವುದೇ ಅನ್ಯ ಉದ್ದೇಶಗಳಿಗೆ ದುರುಪಯೋಗಪಡಿಸಿಕೊಂಡರೆ, ಅದನ್ನು ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗ ಎಂದು ಗಂಭೀರವಾಗಿ ಪರಿಗಣಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

