No recruitment for now | High Court postpones hearing on 56% reservation
x

ಹೈಕೋರ್ಟ್‌

ಸ್ವಂತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ ತಾಯಿ: ಸುಪರ್ದಿಗೆ ನೀಡಲು ಹೈಕೋರ್ಟ್ ನಕಾರ

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಪ್ರಕರಣದ ಕುರಿತು ಮಹತ್ವದ ಅಂಶಗಳನ್ನು ಬೊಟ್ಟು ಮಾಡಿದೆ.


Click the Play button to hear this message in audio format

ಹೆತ್ತ ಮಗಳನ್ನೇ ವೇಶ್ಯಾವಾಟಿಕೆ ಜಾಲಕ್ಕೆ ದೂಡಿದ ಗಂಭೀರ ಆರೋಪ ಎದುರಿಸುತ್ತಿರುವ ತಾಯಿಯೊಬ್ಬಳಿಗೆ, ರಕ್ಷಿಸಲ್ಪಟ್ಟ ಸಂತ್ರಸ್ತೆಯ ಸುಪರ್ದಿಯನ್ನು ನೀಡಲು ಕರ್ನಾಟಕ ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ. ಈ ಮೂಲಕ ಮಗಳನ್ನು ತನ್ನ ವಶಕ್ಕೆ ನೀಡುವಂತೆ ಕೋರಿ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯವು, ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್‌ ಒಂದರ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಅಲ್ಲಿಂದ ಸಂತ್ರಸ್ತೆಯನ್ನು ರಕ್ಷಿಸಿ ಸರ್ಕಾರದ ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ಇರಿಸಿದ್ದರು. ಈ ನಡುವೆ, ಮಳಿಗೆ ಈಗ 18 ವರ್ಷ ತುಂಬಿರುವುದರಿಂದ ಆಕೆಯನ್ನು ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ಮುಂದುವರಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬುದು ತಾಯಿಯ ವಾದವಾಗಿತ್ತು. ಹೀಗಾಗಿ ಆಕೆಯನ್ನು ತನ್ನ ಸುಪರ್ದಿಗೆ ವಹಿಸಬೇಕು ಎಂದು ಕೋರಿ ಆಕೆ ವಿಚಾರಣಾ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಆದರೆ, ತಾಯಿಯೇ ಮಗಳನ್ನು ಈ ದಂಧೆಗೆ ದೂಡಿರುವ ಆರೋಪವಿದ್ದ ಕಾರಣ ಕೆಳಹಂತದ ನ್ಯಾಯಾಲಯ ಆಕೆಯ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಕದ ತಟ್ಟಿದ್ದಳು.

ಪೊಲೀಸರ ನಡೆಗೆ ಹೈಕೋರ್ಟ್ ಅಸಮಾಧಾನ

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಪ್ರಕರಣದ ಕುರಿತು ಮಹತ್ವದ ಅಂಶಗಳನ್ನು ಬೊಟ್ಟು ಮಾಡಿದೆ. ಸಂತ್ರಸ್ತೆ ಮತ್ತು ಇತರರ ಹೇಳಿಕೆಗಳು ತಾಯಿಯೇ ಮಗಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿರುವುದನ್ನು ಮೇಲ್ನೋಟಕ್ಕೆ ಸಾಬೀತುಪಡಿಸುತ್ತವೆ. ಹೀಗಿದ್ದರೂ, ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ (ಚಾರ್ಜ್‌ಶೀಟ್) ತಾಯಿಯ ಹೆಸರನ್ನು ಕೈಬಿಟ್ಟಿರುವುದು ತೀವ್ರ ಅಚ್ಚರಿ ಮೂಡಿಸಿದೆ ಎಂದು ನ್ಯಾಯಪೀಠ ಪ್ರಶ್ನಿಸಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಮಗಳನ್ನು ಮತ್ತೆ ತಾಯಿಯ ವಶಕ್ಕೆ ಒಪ್ಪಿಸುವುದು ಸೂಕ್ತವಲ್ಲ ಹಾಗೂ ಸಂತ್ರಸ್ತೆಗೆ ಸುರಕ್ಷಿತ ಆಶ್ರಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ರಕ್ಷಿಸಲ್ಪಟ್ಟವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಹೈಕೋರ್ಟ್ ಆದೇಶದಲ್ಲಿ ಬೆಳಕು ಚೆಲ್ಲಿದೆ. ಅನೈತಿಕ ಸಾಗಣೆ (ತಡೆ) ಕಾಯಿದೆಯ ಸೆಕ್ಷನ್ 17(2) ಮತ್ತು 17ಎ ಪ್ರಕಾರ, ರಕ್ಷಿಸಲ್ಪಟ್ಟ ವ್ಯಕ್ತಿಯ ವಯಸ್ಸು, ಹಿನ್ನೆಲೆ ಮತ್ತು ಆ ವ್ಯಕ್ತಿಯ ಪಾಲನೆಗೆ ಪೋಷಕರು ಅಥವಾ ಪತಿ ಸೂಕ್ತವೇ ಎಂಬುದನ್ನು ಮ್ಯಾಜಿಸ್ಟ್ರೇಟ್ ಕಡ್ಡಾಯವಾಗಿ ವಿಚಾರಣೆ ನಡೆಸಬೇಕು. ದೆಹಲಿ ಮತ್ತು ಬಾಂಬೆ ಹೈಕೋರ್ಟ್‌ಗಳ ತೀರ್ಪುಗಳನ್ನು ಉಲ್ಲೇಖಿಸಿರುವ ಪೀಠವು, ಸಂತ್ರಸ್ತರು 18 ವರ್ಷದೊಳಗಿನವರಾಗಿದ್ದರೆ ಅವರನ್ನು ಬಾಲನ್ಯಾಯ ಮಂಡಳಿಗೆ ಅಥವಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಬೇಕು ಎಂದು ಸೂಚಿಸಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಯಾವುದೇ ಅರ್ಹತೆ ಹೊಂದಿರದ ಕಾರಣ ತಾಯಿಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

Read More
Next Story