
ಆಲಿಕಲ್ಲು ಮಳೆಗೆ ಉತ್ತರದಲ್ಲಿ ನೆಲಕಚ್ಚಿದ ಬೆಳೆಗಳು; ಪರಿಹಾರ ಘೋಷಣೆಗೆ ಆಗ್ರಹ
ರೈತರ ಸಂಕಷ್ಟಕ್ಕೆ ಆಲಿಸುವಲ್ಲಿ ರಾಜ್ಯ ಸರ್ಕಾರ ಸೋತಿದೆ. ಕೂಡಲೇ ಜಂಟಿ ಸಮೀಕ್ಷೆ ಕೈಗೊಂಡು, ಬೆಳೆನಷ್ಟ ಅನುಭವಿಸಿದ ಪ್ರತಿ ರೈತರಿಗೂ 1ಲಕ್ಷ ರೂ. ಪರಿಹಾರ ಘೋಷಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.
ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಆಲಿಕಲ್ಲು ಮಳೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ಹಾನಿಯಾಗಿವೆ.
ಬೆಳಗಾವಿ, ವಿಜಯಪುರ, ಧಾರವಾಡ, ಶಿವಮೊಗ್ಗ, ರಾಯಚೂರು, ಗದಗ ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಮಾವು, ದ್ರಾಕ್ಷಿ, ಮುಸುಕಿನ ಜೋಳ, ಬಾಳೆ, ಹೂವ-ಹಣ್ಣು ಹಾಗೂ ತರಕಾರಿ ಬೆಳೆಗಳು ನೆಲಕಚ್ಚಿವೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆ ಆಘಾತ ನೀಡಿದೆ.
ಚಿತ್ರದುರ್ಗದಲ್ಲಿ ಅಡಿಕೆ, ಪಪ್ಪಾಯ, ಬಳ್ಳಾರಿಯಲ್ಲಿ ಭತ್ತ, ಬೆಳಗಾವಿಯಲ್ಲಿ ದ್ರಾಕ್ಷಿ, ದಾಳಿಂಬೆ ಬೆಳೆಗಳು ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿವೆ. ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಗೆ ತರಕಾರಿ ಬೆಳೆಗಳು ನಾಶವಾಗಿವೆ. ಬಾಗಲಕೋಟೆ, ಕಲಬುರ್ಗಿ ಹಾಗೂ ಬಯಲು ಸೀಮೆ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯ ಪ್ರಮಾಣ ಕಡಿಮೆಯಿದ್ದ ಕಾರಣ ಅಷ್ಟೇನೂ ಬೆಳೆಗಳು ಹಾನಿಯಾಗಿಲ್ಲ.
ಬಳ್ಳಾರಿಯಲ್ಲಿ ಭತ್ತದ ಬೆಳೆ ನಾಶ
ಬಳ್ಳಾರಿ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಗೆ 804 ರೈತರ ಒಟ್ಟು 602 ಹೆಕ್ಟೇರ್ (1,487.57 ಎಕರೆ) ಭತ್ತದ ಬೆಳೆ ನಾಶವಾಗಿದೆ.
ಕುರುಗೋಡು ತಾಲ್ಲೂಕು ಒಂದರಲ್ಲೇ 604 ರೈತರ 1,067.5 ಎಕರೆ, ಸಿರುಗುಪ್ಪ ತಾಲ್ಲೂಕಿನ 200 ರೈತರ 420.07 ಎಕರೆ ಭತ್ತದ ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, ವಾಸ್ತವವಾಗಿ 2,500 ರಿಂದ 3,000 ಎಕರೆ ಬೆಳೆ ಹಾನಿಯಾಗಿದೆ. ಕೂಡಲೇ ಜಂಟಿ ಸಮೀಕ್ಷೆ ನಡೆಸಿ, ಪರಿಹಾರ ಘೋಷಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ.
ಬಳ್ಳಾರಿ, ಬೆಳಗಾವಿ, ವಿಜಯಪುರ, ರಾಯಚೂರು, ಕೊಪ್ಪಳ ಭಾಗದಲ್ಲಿ ದ್ರಾಕ್ಷಿ ಬೆಳೆ ಹೆಚ್ಚು ಹಾನಿಗೊಳಲಾಗಿದೆ. ಫಸಲು ಕಟ್ಟುತ್ತಿದ್ದ ದಾಳಿಂಬೆ ಹಾಗೂ ಮಾವಿನ ಬೆಳೆಗಳು ಆಲಿಕಲ್ಲು ಮಳೆಯಿಂದ ನೆಲಚ್ಚಿದೆ ಎಂದು ರಾಜ್ಯ ರೈತ ಸಂಘ ಕಾರ್ಯಾಧ್ಯಕ್ಷರಾದ ಬಳ್ಳಾರಿಯ ವೀರಸಂಗಯ್ಯ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಭೇಟಿ ನೀಡಿದ ಅಧಿಕಾರಿಗಳು, ಜನಪ್ರತಿನಿಧಿಗಳು
ಜಿಲ್ಲೆಯಲ್ಲಿ ಆಲಿಕಲ್ಲು ಮಳೆಯಿಂದ ದೊಡ್ಡ ಪ್ರಮಾಣದ ಹಾನಿ ಸಂಭವಿಸಿದ್ದರೂ ಈವರೆಗೆ ಯಾವುದೇ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿಲ್ಲ. ರೈತರ ಸಂಕಷ್ಟಕ್ಕೆ ಆಲಿಸುವಲ್ಲಿ ರಾಜ್ಯ ಸರ್ಕಾರ ಸೋತಿದೆ. ಕೂಡಲೇ ಜಂಟಿ ಸಮೀಕ್ಷೆ ಕೈಗೊಂಡು, ಬೆಳೆನಷ್ಟ ಅನುಭವಿಸಿದ ಪ್ರತಿ ರೈತರಿಗೂ 1ಲಕ್ಷ ರೂ. ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಜಿಲ್ಲೆಯಲ್ಲೂ ಆಲಿಕಲ್ಲು ಮಳೆಗೆ ದ್ರಾಕ್ಷಿ, ಜೋಳ ಹಾಗೂ ತರಕಾರಿ ಬೆಳೆಗಳು ಹಾಳಾಗಿವೆ. ಅಥಣಿ ತಾಲ್ಲೂಕಿನ ಐಗಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ದ್ರಾಕ್ಷಿ ಬೆಳೆ ನೆಲಕಚ್ಚಿದೆ. ಸರ್ಕಾರ ತಕ್ಷಣವೇ ರೈತರ ನೆರವಿಗೆ ಧಾವಿಸಬೇಕು ಎಂದು ರೈತ ಮುಖಂಡ ಹಾಗೂ ಮಾಜಿ ಶಾಸಕ ಷಹಜಹಾನ್ ಡೊಂಗರಗಾಂವ ʼದ ಫೆಡರಲ್ ಕರ್ನಾಟಕʼ ಕ್ಕೆ ತಿಳಿಸಿದರು.
ಶೀಘ್ರ ಪರಿಹಾರ ವಿತರಣೆಗೆ ಆಗ್ರಹ
ರಾಜ್ಯದಲ್ಲಿ ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆಯಿಂದ ನೂರಾರು ರೈತರ ಬೆಳೆಗಳು ಹಾನಿಯಾಗಿವೆ. ರಾಜ್ಯ ಸರ್ಕಾರ ಕೂಡಲೇ ಸಮೀಕ್ಷೆ ಕೈಗೊಂಡು ಪರಿಹಾರ ಘೋಷಿಸಬೇಕು ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
ಈ ಬಗ್ಗೆ ತಮ್ಮ ʼಎಕ್ಸ್ʼ ಖಾತೆಯಲ್ಲಿ ಪ್ರಸ್ತಾಪಿಸಿರುವ ಅವರು, ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗದ 10 ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಿಂದ ಸುಮಾರು 56,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಅನ್ನದಾತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸರ್ಕಾರ ತಕ್ಷಣವೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಧಾರವಾಡ, ಹಾಸನ, ಹಾವೇರಿ, ಬೆಂಗಳೂರು, ವಿಜಯಪುರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕಳೆದೊಂದು ವಾರದ ಹಿಂದೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಮಾವು, ಬಾಳೆ ಬೆಳೆ ಹಾಳಾಗಿದೆ. ಈ ಜಿಲ್ಲೆಗಳಲ್ಲಿ ಒಟ್ಟು 450 ಎಕರೆ ಬೆಳೆ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಬಾಗಲಕೋಟೆಯಲ್ಲಿ 2400 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದ್ದರೆ, ಚಿಕ್ಕಬಳ್ಳಾಪುರದಲ್ಲಿ 2.5 ಕೋಟಿ ರೂ. ಮೌಲ್ಯದ ಬೆಳೆ ಹಾಳಾಗಿದೆ. ಬೆಳಗಾವಿಯಲ್ಲಿ 150 ಎಕರೆ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ಯಾದಗಿರಿ ಸೇರಿ ಬೇರೆ ಜಿಲ್ಲೆಗಳಲ್ಲಿ ಜೋಳ, ಭತ್ತದ ಬೆಳೆಗಳು ಅಕಾಲಿಕ ಮಳೆಯಿಂದ ಹಾನಿಗೊಳಗಾಗಿವೆ ಎಂದು ವಿವರಿಸಿದ್ದಾರೆ.

