ಅಧ್ಯಕ್ಷ...ಅಧ್ಯಕ್ಷ...ಅಧ್ಯಕ್ಷ... ಗ್ರಾ.ಪಂ.ಗಳಲ್ಲಿ ʻಪಕ್ಷʼಕ್ಕೊಬ್ಬ ಅಧ್ಯಕ್ಷ!
x
ಸಾಂದರ್ಭಿಕ ಚಿತ್ರ (ಎಐ ರಚಿತ)

ಅಧ್ಯಕ್ಷ...ಅಧ್ಯಕ್ಷ...ಅಧ್ಯಕ್ಷ... ಗ್ರಾ.ಪಂ.ಗಳಲ್ಲಿ ʻಪಕ್ಷʼಕ್ಕೊಬ್ಬ ಅಧ್ಯಕ್ಷ!

5,698ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಅವಧಿಯು 2026ರ ಫೆಬ್ರವರಿ ಅಥವಾ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳಲಿದೆ. ಅಧಿಕಾರದ ಕೊನೆಘಳಿಗೆಯಲ್ಲಿ ಅಧ್ಯಕ್ಷರಾದವರ ನಾಟಕೀಯ ಪ್ರಸಂಗಗಳ ವಿವರಣೆ ಇಲ್ಲಿದೆ.


ಅಧ್ಯಕ್ಷ... ಅಧ್ಯಕ್ಷ... ಅಧ್ಯಕ್ಷ.... ಹಲವೆಡೆ ಹದಿನೈದು ದಿನಗಳಿಗೆ ಒಬ್ಬ ಅಧ್ಯಕ್ಷ! ಕೆಲವೆಡೆ ತಿಂಗಳಿಗೊಬ್ಬ ಅಧ್ಯಕ್ಷ-ಉಪಾಧ್ಯಕ್ಷ!! ಇನ್ನೂ ಕೆಲವು ಕಡೆ ಮೂರು ತಿಂಗಳಿಗೊಬ್ಬ ಅಧ್ಯಕ್ಷ!

ಒಟ್ಟಿನಲ್ಲಿ ಅಧ್ಯಕ್ಷರಾಗಲೇಬೇಕು ಎಂಬ ಪಣತೊಟ್ಟಂತಿದೆ ಮರಿ ʼಪುಢಾರಿʼಗಳು! ಹೌದು.. ಈ ನಿದರ್ಶನಗಳು ಕಂಡುಬರುತ್ತಿರುವುದು ಅಧಿಕಾರ ವಿಕೇಂದ್ರೀಕರಣದ ಅಡಿಗಲ್ಲಾಗಿರುವ ಗ್ರಾಮ ಪಂಚಾಯತಿಗಳಲ್ಲಿ!

ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿಯು ಕೊನೆಗೊಳ್ಳುವ ಹಂತದಲ್ಲಿದೆ. 2020ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆದಿದ್ದ 5,698ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಅವಧಿಯು 2026ರ ಫೆಬ್ರವರಿ ಅಥವಾ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳಲಿದೆ. ಅವಧಿ ಅಂತ್ಯವಾಗುವ ವೇಳೆ ಸನ್ನಿಹಿತವಾಗುವಾಗ, ಅಧ್ಯಕ್ಷರಾರುವ ಆಸೆಯೂ ಚಿಗುರುತ್ತದೆ. ಐದು ವರ್ಷಗಳ ಅವಧಿಯಲ್ಲಿ ಅಧ್ಯಕ್ಷರಾಗಲು ಆಗದೇ ಇದ್ದವರು, ಕೊನೆ ಕೊನೆಗೆ ಹದಿನೈದು ದಿನಗಳಿಗಾದರೂ ಅಧ್ಯಕ್ಷರಾದರೆ ಸಾಕೆನ್ನುವ ತುಡಿತ ಹೊಂದಿದ್ದಾರೆ! ಅದರಲ್ಲೂ ಆದಾಯ ಹೆಚ್ಚಿರುವ ಗ್ರಾಮಪಂಚಾಯತಿಗಳಲ್ಲಿ ಬೇಡಿಕೆ ಹೆಚ್ಚು!

ಏನಿದು ಗ್ರಾಪಂ ರಾಜಕೀಯ?

ಅಧಿಕಾರವು ಕೇವಲ ದೆಹಲಿ ಇಲ್ಲವೇ ಆಯಾ ರಾಜ್ಯದ ರಾಜಧಾನಿಯಲ್ಲಿ ಕೇಂದ್ರೀಕೃತವಾಗದೆ, ಹಳ್ಳಿಯ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂಬ ಉದ್ದೇಶದಿಂದ ಗ್ರಾಮ ಪಂಚಾಯತಿಗಳನ್ನು ರಚಿಲಾಗಿತ್ತು. ಮಹಾತ್ಮ ಗಾಂಧೀಜಿ ಅವರ "ಗ್ರಾಮ ಸ್ವರಾಜ್ಯ" ಕನಸಿನಂತೆ ಹಳ್ಳಿಯ ಜನರು ತಮ್ಮ ಸಮಸ್ಯೆಗಳನ್ನು ತಾವೇ ಚರ್ಚಿಸಿ ಪರಿಹರಿಸಿಕೊಳ್ಳುವ ಅವಕಾಶ ನೀಡುವ ಕಲ್ಪನೆಯೆ ಗ್ರಾಮ ಪಂಚಾಯತಿಗಳು.

ಜನಸಂಖ್ಯೆ ಆಧಾರದ ಮೇಲೆ ಗ್ರಾಪಂ ಸದಸ್ಯರ ಸಂಖ್ಯೆ ನಿರ್ಣಯವಾಗಲಿದೆ. ಒಟ್ಟು 5 ವರ್ಷಗಳ ಸದಸ್ಯತ್ವ ಸ್ಥಾನದಲ್ಲಿ 30 ತಿಂಗಳ ಕಾಲ ಅಧ್ಯಕ್ಷ-ಉಪಾಧ್ಯಕ್ಷರು ಅಧಿಕಾರ ನಡೆಸಲಿದ್ದಾರೆ. ಇಲ್ಲಿ ಯಾವುದೇ ರಾಜಕೀಯ ಪಕ್ಷಗಳು ಹಸ್ತಕ್ಷೇಪ ನಡೆಸುವಂತಿಲ್ಲ. ಜತೆಗೆ ಚುನಾವಣೆಯು ಯಾವುದೇ ರಾಜಕೀಯ ಪಕ್ಷಗಳ ನೆರಳಿನಲ್ಲಿ ಇಲ್ಲವೆ ಚಿಹ್ನೆಯಡಿಯಲ್ಲಿಯು ನಡೆವಂತಿಲ್ಲ ಎಂಬೆಲ್ಲ ಕೆಲ ನಿಯಮಗಳಿವೆ.

ಆದರೂ...

ಆದರೆ, ಇಡೀ "ಗ್ರಾಮ ಸ್ವರಾಜ್ಯ"ದ ಕಲ್ಪನೆ ಈಗ ಕನಸಾಗಿಯೆ ಉಳಿದುಕೊಂಡಿದೆ. ಅಧಿಕಾರಾವಧಿ ಅಂತ್ಯಗೊಳ್ಳುವ ಒಂದು ವರ್ಷದ ಮೊದಲಿನಿಂದಲೇ ಗ್ರಾಪಂಗಳು ಸಂರ್ಪೂಣ ರಾಜಕೀಯ ಮನೆಯಾಗಿ ಬದಲಾಗಿವೆ. ಎಲ್ಲ ಸದಸ್ಯರುಗಳು, ಅಧ್ಯಕ್ಷರ ಖುರ್ಚಿ ಮೇಲೆ ಕೂರಲು ಹರಸಾಹಸ ನಡೆಸುತ್ತಿದ್ದಾರೆ. ಪ್ರತಿ ತಿಂಗಳಿಗೊಬ್ಬರು ಅಧ್ಯಕ್ಷರು ಬದಲಾಗಿದ್ದಾರೆ. ಅಧ್ಯಕ್ಷರ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಲು, ಇಡೀ ಸದಸ್ಯರುಗಳಿಗೆ ಪ್ರವಾಸ ಭಾಗ್ಯ ಕಲ್ಪಿಸುವ ಮೂಲಕ ತಿಂಗಳಾರುಗಟ್ಟಲೆ ಗ್ರಾಪಂ ಕಚೇರಿಗಳು ಖಾಲಿ ಹೊಡೆದಿವೆ. ಈ ಸಮಯದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಕೇಳಲು ಸದಸ್ಯರುಗಳೇ ಇರಲಿಲ್ಲ...ಇಂತಹ ಪ್ರಸಂಗಗಳು ಸರ್ವೆ ಸಾಮಾನ್ಯ ಎನ್ನಬಹುದು.

"ಕಳೆದೊಂದು ವರ್ಷದಿಂದಲೂ ಗ್ರಾಪಂಗಳಲ್ಲಿ ಯಾವುದೆ ಕೆಲಸಗಳಾಗುತ್ತಿಲ್ಲ. ಗ್ರಾಪಂ ಅಧ್ಯಕ್ಷರು ಪ್ರತಿ ಎರಡು-ಮೂರು ತಿಂಗಳಿಗೊಮ್ಮೆ ಬದಲಾಗುತ್ತಿದ್ದರೆ, ನಮ್ಮ ಕೆಲಸ ಮಾಡುವವರ್ಯಾರು? ಸದಸ್ಯರು ಸಹ ಪಟ್ಟ ಪಡೆಯಲು ಕಸರತ್ತು ನಡೆಸುವಲ್ಲೆ ಮುಳುಗಿದ್ದಾರೆ. ಇನ್ನೆನ್ನು ಆಡಳಿತಾಧಿಕಾರಿಗಳು ನೇಮಕವಾಗಲಿದ್ದಾರೆ. ಅವರುಗಳು ಕಚೇರಿಗೆ ಬರುವುದೆ ಅಪರೂಪ. ಇನ್ನು ಹೊಸ ತಂಡ ಬರುವವರೆಗೂ ನಮಗೆ ಈ ವನವಾಸ ತಪ್ಪುವುದಿಲ್ಲ ಎಂದು ಮಂಚನಾಯಕನಹಳ್ಳಿ ಗ್ರಾಪಂನಲ್ಲಿ ಇ ಖಾತೆ ಪಡೆಯಲು ಪರದಾಡುತ್ತಿರುವ ಪರಶಿವಮೂರ್ತಿ ಅವರ "ದ ಫೆಡರಲ್ ಕರ್ನಾಟಕ" ದೊಂದಿಗೆ ಅಸಮಧಾನ ವ್ಯಕ್ತ ಪಡಿಸಿದರು.

ಉದಾಹರಣೆಗಳು ನೂರಾರಿವೆ!

ಬೆಂಗಳೂರು ದಕ್ಷಿಣ ಜಿಲ್ಲೆಯ ಎಂ.ಗೋಪಹಳ್ಳಿ ಗ್ರಾಪಂನಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ಬರೊಬ್ಬರಿ 10 ಮಂದಿ ಅಧ್ಯಕ್ಷರಾಗಿದ್ದಾರೆ. ಅದರಲ್ಲೂ, ಕಳೆದ ಆರು ತಿಂಗಳ ಅವಧಿಯಲ್ಲಿ ಮೂರು ಮಂದಿ ಅಧ್ಯಕ್ಷರಾಗಿರುವುದು ವಿಶೇಷ. ಇಲ್ಲಿನ ಗ್ರಾಪಂ ಉಪಾಧ್ಯಕ್ಷರನ್ನು ಅಧ್ಯಕ್ಷರನ್ನಾಗಿ ಮಾಡುವ ಉದ್ದೇಶದಿಂದ ಗ್ರಾಪಂ ಅಧ್ಯಕ್ಷರಿಗೆ ಅನಾರೋಗ್ಯದ ರಜೆ ಹಾಕಿಸಿ, ಉಪಾಧ್ಯಕ್ಷರಿಗೆ ಅಧ್ಯಕ್ಷ ಸ್ಥಾನ ಕಲ್ಪಿಸಲಾಗಿತ್ತು. ಬನ್ನಿಕುಪ್ಪೆ, ಮಂಚನಾಯಕನಹಳ್ಳಿ, ಹರಿಸಂದ್ರ , ವಿಭೂತಿಕೆರೆ ಪಂಚಾಯತಿ...ಹೀಗೆ ನೂರಾರು ಪಂಚಾಯತಿಗಳಲ್ಲಿ 15 ದಿನಕ್ಕೊಬ್ಬರು ಅಧ್ಯಕ್ಷ-ಉಪಾಧ್ಯಕ್ಷರಾಗಿರುವ ಹೈಡ್ರಾಮಗಳು ನೂರಾರಿವೆ.

ರಾಮನಗರದ ಹರಿಸಂದ್ರ ಗ್ರಾಪಂ ಮಾಜಿ ಸದಸ್ಯರೊಬ್ಬರು " ದ ಫೆಡರಲ್ ಕರ್ನಾಟಕ" ದೊಂದಿಗೆ ಮಾತನಾಡಿ, ಗ್ರಾಮ ಪಂಚಾಯತಿಗಳು ಈಗ ಸಂಪೂರ್ಣ ರಾಜಕೀಯ ಕಚೇರಿಗಳಾಗಿ ಬದಲಾಗಿವೆ. ಚುನಾವಣೆ ಸಮಯದಲ್ಲೆ ಮೂರ್ನಾಲ್ಕು ಮಂದಿ ಅಧ್ಯಕ್ಷರಾಗಲು ಪರಸ್ಪರ ಒಪ್ಪಂದ ನಡೆದಿರುತ್ತದೆ. ಇದೆಲ್ಲ ಸರ್ವೆ ಸಾಮಾನ್ಯ. ಅದರಲ್ಲೂ ಅಧಿಕಾರಾವಧಿ ಪೂರ್ಣಗೊಳ್ಳುವ ವೇಳೆ ವಿಧಾನಸೌಧದ ರಾಜಕೀಯಕ್ಕಿಂತ ಗ್ರಾಮ ಪಂಚಾಯತಿ ಕಚೇರಿಗಳಲ್ಲೆ ರಾಜಕೀಯ ಗದ್ದಲ ಜೋರಾಗಿರುತ್ತದೆ ಎಂದು ತಿಳಿಸಿದ್ದಾರೆ.

ಅತೀ ಹೆಚ್ಚು ಆದಾಯ ಇರುವ ಗ್ರಾ.ಪಂ.ಗಳಲ್ಲಿ ಲಾಬಿ ಹೆಚ್ಚು!

ಅತೀ ಹೆಚ್ಚು ಆದಾಯ ಬರುವ ಗ್ರಾಪಂಗಳಲ್ಲಿಯೇ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಪೈಪೋಟಿ ನಡೆಯುತ್ತಿದೆ. ಕೈಗಾರಿಕಾ ಪ್ರದೇಶ, ಹೆಚ್ಚಿನ ತೆರಿಗೆ ಸಂಗ್ರಹಿಸುವ ಗ್ರಾಪಂಗಳಲ್ಲಿ ಈ ಮುಸುಕಿನ ಗುದ್ದಾಟ ಜೋರು. ಇಲ್ಲಿ, ಸಾರ್ವಜನಿಕರ ಅರ್ಜಿಗಳ ವಿಲೇವಾರಿಗಿಂತ ಅಧಿಕಾರ ಹಿಡಿಯುವ ಲಾಭಿಯಲ್ಲಿಯೇ, ಗ್ರಾಮಸ್ಥರು ಸೊರಗಿದ್ದಾರೆ.

ಅಭಿವೃದ್ಧಿ ಕಾರ್ಯಗಳಿಗೆ ಎಳ್ಳು-ನೀರು!

ರಾಜ್ಯದಲ್ಲಿನ ಗ್ರಾಮ ಪಂಚಾಯತಿಗಳ ಅಧಿಕಾರಾವಧಿ ಸಂಪೂರ್ಣ ಪ್ರಮಾಣದಲ್ಲಿಅಂತ್ಯಗೊಳ್ಳುವ ಮೊದಲೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ "ಎಳ್ಳು-ನೀರು" ಬಿಡಲಾಗಿದೆ ! ಚುನಾವಣಾ ಗುಂಗಿನಲ್ಲಿರುವ ಗ್ರಾಮ ಪಂಚಾಯತಿಗಳು ಈಗ ರಾಜಕೀಯ ಪಡಸಾಲೆಯಾಗಿ ಬದಲಾಗುತ್ತಿವೆ. ಮತ್ತೊಂದೆಡೆ ಚುನಾವಣೆವರೆಗೂ ಅಧಿಕಾರ ನಡೆಸಬೇಕಿರುವ ಆಡಳಿತಧಿಕಾರಿಗಳಿಗೂ ಬರ ಎದುರಾಗಿದೆ.

ಬಳಿಕ ಚುನಾವಣೆ ಘೋಷಣೆಗೊಂಡು ಹೊಸ ತಂಡ ಅಧಿಕಾರ ವಹಿಸಿಕೊಳ್ಳಬೇಕು. ಅಲ್ಲಿವರೆಗೂ ಆಡಳಿತಾಧಿಕಾರಿಗಳ ನೇಮಕ ನಡೆಯಲಿದೆ.

"ಎ ದರ್ಜೆ"ಯ ಅಧಿಕಾರಿಗಳನ್ನೆ ಗ್ರಾಪಂನ ಆಡಳಿತಾಧಿಕಾರಿಯನ್ನಾಗಿ ನೇಮಿಸಬೇಕಿರುವುದು ಆಯಾ ಜಿಲ್ಲಾಧಿಕಾರಿಗಳ ಕರ್ತವ್ಯ. ಇನ್ನೊಂದೆಡೆ ಕಳೆದೊಂದು ವರ್ಷದಿಂದಲೇ ಗ್ರಾಪಂ ರಾಜಕೀಯ ರಂಗು ಪಡೆದಿದ್ದು, ಅಧ್ಯಕ್ಷ-ಉಪಾಧ್ಯಕ್ಷರ ಖುರ್ಚಿಗಾಗಿ ನಡೆದ ಜಟಾಪಟಿ ನಡುವೆ ಸಾರ್ವಜನಿಕರ ಕೆಲಸ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ ಎನ್ನಲಾಗಿದೆ.

ಆಡಳಿತಾಧಿಕಾರಿಗಳಿಗೂ ಬರ

ತಿಂಗಳಿಗೊಬ್ಬರು ಅಧ್ಯಕ್ಷರಾಗಬೇಕೆಂಬುವ ತವಕದಲ್ಲಿರುವ ಸದಸ್ಯರುಗಳಿಗೆ ಸಾರ್ವಜನಿಕರ ಸಂಕಷ್ಟಗಳೇ ಕಾಣುತ್ತಿಲ್ಲ. ಇನ್ನೊಂದು ತಿಂಗಳೊಳಗೆ ಇಡೀ ಗ್ರಾಪಂಗಳಲ್ಲಿ ಸದಸ್ಯರ ಅಧಿಕಾರಾವಧಿ ಅಂತ್ಯಗೊಳ್ಳಲಿದೆ. ಬಳಿಕ "ಎ ದರ್ಜೆ"ಯ ಅಧಿಕಾರಿಗಳನ್ನೆ ಗ್ರಾಪಂಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಬೇಕು. ಹೀಗಾಗಿ, ಐದಾರು ಗ್ರಾಪಂಗಳಿಗೆ ಒಬ್ಬರು ಆಡಳಿತಾಧಿಕಾರಿಗಳ ನೇಮಕವಾಗಲು ಸಹ ಅಧಿಕಾರಿಗಳ ಕೊರತೆ ಇದೆ.

ಸಾರ್ವಜನಿಕರಿಗೆ ತಪ್ಪದ ಸಂಕಷ್ಟ

ಈಗಾಗಲೇ, ಚುನಾವಣಾ ಗುಂಗಿನಿಂದಾಗಿ ಗ್ರಾಪಂಗಳಲ್ಲಿ ಸದಸ್ಯರು ಕಂಡುಬರುತ್ತಿಲ್ಲ. ಅಧಿಕಾರಕ್ಕಾಗಿ ಪರಸ್ಪರ ಕಿತ್ತಾಟ ನಡೆಸುತ್ತಿದ್ದು, ಶಾಸಕರು, ಸಚಿವರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನನಗೆ ಅಧ್ಯಕ್ಷ ಪಟ್ಟ ನೀಡಬೇಕು ಎಂದು ಕೈಕಾಲು ಹಿಡಿಯುತ್ತಿದ್ದಾರೆ. ಅಧಿಕಾರಾವಧಿ ಕೊನೆಗೊಳ್ಳುವ ಮೊದಲೆ, ಶಾಸಕರ, ಮಂತ್ರಿಗಳ ಆರ್ಶಿವಾದಕ್ಕಾಗಿ ದುಂಬಾಲು ಬೀಳುತ್ತಿದ್ದಾರೆ.

ಖಾಲಿ ಹೊಡೆಯುತ್ತಿರುವ ಗ್ರಾಪಂಗಳಲ್ಲಿ ಆಡಳಿತಾಧಿಕಾರಿಗಳೆ ಅಧಿಕಾರ ಚಲಾಯಿಸಬೇಕು. ತಾಲೂಕು ಮಟ್ಟದ ಅಧಿಕಾರಿಗಳು ವಾರಕ್ಕೊಮ್ಮೆಯು ಗ್ರಾಪಂ ಕಡೆ ಮುಖ ಮಾಡುವುದು ಅನುಮಾನ. ಮಾತೃ ಇಲಾಖೆಯ ಕೆಲಸದ ಒತ್ತಡಗಳ ನಡುವೆ, ಗ್ರಾಪಂ ಕೆಲಸಗಳು ಬೆಟ್ಬದಷ್ಟು ಬಾಕಿ ಉಳಿದುಕೊಳ್ಳುವ ಸಾಧ್ಯತೆಗಳೆ ಹೆಚ್ಚು. ಚುನಾವಣೆ ನಡೆದು, ಹೊಸ ತಂಡ ಅಧಿಕಾರ ವಹಿಸಿಕೊಳ್ಳುವವರೆಗೂ ಸಾರ್ವಜನಿಕರ ಅಲೆದಾಟ ತಪ್ಪುವುದೆ ಇಲ್ಲ.

ಮಾಜಿ-ಹಾಲಿ ಅಧ್ಯಕ್ಷರ ದ್ವೇಷ ರಾಜಕೀಯ

ಗ್ರಾಮ ಪಂಚಾಯತಿಗಳಲ್ಲಿ ದ್ವೇಷ ರಾಜಕೀಯ ಹೆಚ್ಚಾಗುತ್ತಲೆ ಇದೆ. ಈ ಹಿಂದಿನ ಅಧ್ಯಕ್ಷರು ಸಹಿ ಹಾಕಿದ್ದ ಕೆಲಸಗಳಿಗೆ, ನೂತನ ಅಧ್ಯಕ್ಷರು ತಡೆ ಹಾಕಿರುವ ಅನೇಕ ಉದಾಹರಣೆಗಳಿವೆ. ಹಳೆಯ ನಡಾವಳಿಗಳನ್ನೆ ಧಿಕ್ಕರಿಸಿ, ಹೊಸ ನಡಾವಳಿಗಳು ಸಿದ್ದಗೊಳ್ಳುತ್ತವೆ. ಶಾಸಕರು, ಸಚಿವರ ಕೃಪಾರ್ಶಿವಾದದಿಂದಲೇ ಗ್ರಾಪಂಗಳು ಕೆಲಸ ಮಾಡುತ್ತಿವೆ ಎಂಬುದು ಗೌಪ್ಯವಾಗಿ ಉಳಿದಿಲ್ಲ. ಚುನಾವಣೆ ವೇಳೆ ಹಣದ ಹೊಳೆ ಹರಿಸುವ ಅಭ್ಯರ್ಥಿಗಳು, ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಅಧಿಕಾರ ಉಳಿಸಿಕೊಳ್ಳುವಲ್ಲಿಯೆ ಮಗ್ನರಾಗುತ್ತಾರೆ.


Read More
Next Story