x

ಪದವೀಧರ ಕ್ಷೇತ್ರಗಳಿಗೆ ಚುನಾವಣೆ: Gen Z ಮತದಾರರಿಗೆ Form 18 ಗೊಂದಲ

ಪದವೀಧರ ಕ್ಷೇತ್ರಗಳಿಂದ ಮೇಲ್ಮನೆಗೆ ಆಯ್ಕೆ; SIRನಲ್ಲಿ ಹೆಸರು ಡಿಲೀಟ್‌ ಆದರೆ, ಪದವೀಧರ ಕ್ಷೇತ್ರಕ್ಕೆ Vote ಹಾಕಬಹುದೇ? ಸಕಾಲಿಕ ವಿವರಣೆ ಇಲ್ಲಿದೆ...


Click the Play button to hear this message in audio format

ಕರ್ನಾಟಕ ವಿಧಾನ ಪರಿಷತ್ ಪದವೀಧರ ಕ್ಷೇತ್ರಗಳ ಚುನಾವಣಾ ಪ್ರಕ್ರಿಯೆ ಗರಿಗೆದರುತ್ತಿದ್ದಂತೆಯೇ, ಮತದಾರರಲ್ಲಿ ‘ಎಸ್‌ಐಆರ್’ (SIR) ಪರಿಷ್ಕರಣೆ ಕುರಿತಂತೆ ಗೊಂದಲ ಮತ್ತು ಆತಂಕ ಸೃಷ್ಟಿಯಾಗಿದೆ.

ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ತೆರಳಿ ದಾಖಲೆ ಪರಿಶೀಲನೆ ನಡೆಸುತ್ತಿರುವುದು, “ಸಾಮಾನ್ಯ ಮತದಾರರ ಪಟ್ಟಿಯ ಪರಿಷ್ಕರಣೆಯಿಂದ ನಮ್ಮ ಪದವೀಧರ ಕ್ಷೇತ್ರದ ಮತದಾನದ ಹಕ್ಕು ರದ್ದಾಗುತ್ತದೆಯೇ?” ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಆದರೆ, ಸಾರ್ವತ್ರಿಕ ಚುನಾವಣೆಗಳಿಗೆ ಬಳಸುವ ಸಾಮಾನ್ಯ ಮತದಾರರ ಪಟ್ಟಿ ಹಾಗೂ ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರದ ಪಟ್ಟಿಗಳೆರಡೂ ಸಂಪೂರ್ಣ ಭಿನ್ನವಾಗಿದ್ದು, ಮತದಾರರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಪಟ್ಟಿಗಳ ವ್ಯತ್ಯಾಸ ಹಾಗೂ ಅರ್ಜಿ ನಿಯಮಗಳು

ಸಾಮಾನ್ಯ ಮತದಾರರ ಪಟ್ಟಿಯು 18 ವರ್ಷ ತುಂಬಿದ ಭಾರತೀಯ ನಾಗರಿಕರಿಗೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮತ ಚಲಾಯಿಸಲು ಸೀಮಿತವಾಗಿರುತ್ತದೆ. ಇದಕ್ಕೆ ಹೊಸ ನೋಂದಣಿಗೆ ಅರ್ಜಿ ನಮೂನೆ 6, ಹೆಸರು ರದ್ದತಿಗೆ ನಮೂನೆ 7 ಹಾಗೂ ತಿದ್ದುಪಡಿಗೆ ನಮೂನೆ 8 ಬಳಸಲಾಗುತ್ತದೆ. ಆದರೆ, ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರಕ್ಕೆ ಪ್ರತ್ಯೇಕ ಮಾನದಂಡಗಳಿವೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ ಅಥವಾ ಸಮಾನ ವಿದ್ಯಾರ್ಹತೆ ಹೊಂದಿರುವವರು ಪ್ರತ್ಯೇಕವಾಗಿ ನಮೂನೆ 18ರ ಮೂಲಕವೇ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಸಾಮಾನ್ಯ ಮತದಾರರ ಪಟ್ಟಿಯಲ್ಲಿ ಹೆಸರಿದ್ದ ಮಾತ್ರಕ್ಕೆ ಪದವೀಧರರ ಪಟ್ಟಿಗೆ ಹೆಸರು ಸ್ವಯಂಚಾಲಿತವಾಗಿ ಸೇರ್ಪಡೆಯಾಗುವುದಿಲ್ಲ; ಹಾಗೆಯೇ ಸಾಮಾನ್ಯ ಪಟ್ಟಿಯ ಎಸ್‌ಐಆರ್ ಪರಿಶೀಲನೆಯಿಂದ ಪದವೀಧರ ಪಟ್ಟಿಯ ಹೆಸರು ರದ್ದಾಗುವುದೂ ಇಲ್ಲ. ಪಟ್ಟಿಯನ್ನು ನಿಖರ ಹಾಗೂ ಪಾರದರ್ಶಕವಾಗಿ ಇರಿಸುವುದೇ ಪರಿಶೀಲನೆಯ ಮುಖ್ಯ ಉದ್ದೇಶವಾಗಿದೆ.

ರಾಜಕೀಯ ಲೆಕ್ಕಾಚಾರ: ಕಣದಲ್ಲಿ ಯುವಶಕ್ತಿ

ಉನ್ನತ ಶಿಕ್ಷಣ, ಉದ್ಯೋಗಾವಕಾಶ ಹಾಗೂ ಯುವಜನರ ಸಮಸ್ಯೆಗಳಿಗೆ ಮೇಲ್ಮನೆಯಲ್ಲಿ ಧ್ವನಿಯಾಗಲು ಸಂವಿಧಾನ ರೂಪಿಸಿರುವ ಈ ಪ್ರತ್ಯೇಕ ಕ್ಷೇತ್ರದಲ್ಲಿ ಈ ಬಾರಿ ಜೆನ್-ಜಿ ಮತದಾರರ ಪಾತ್ರ ನಿರ್ಣಾಯಕವಾಗಿದೆ. ಸಾಂಪ್ರದಾಯಿಕವಾಗಿ ಬಿಜೆಪಿ ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳಲ್ಲಿ, ಹೆಚ್ಚುತ್ತಿರುವ ಜೀವನ ವೆಚ್ಚ ಹಾಗೂ ನಿರುದ್ಯೋಗದ ಸವಾಲುಗಳು ಹೊಸ ಲೆಕ್ಕಾಚಾರ ಹುಟ್ಟುಹಾಕಿವೆ. ಕಾಂಗ್ರೆಸ್ ಕೂಡ ಯುವನಿಧಿ ಸೇರಿದಂತೆ ಯುವಕೇಂದ್ರಿತ ಯೋಜನೆಗಳ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದ್ದು, ಎರಡೂ ಪ್ರಮುಖ ಪಕ್ಷಗಳಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ.

ಆಗ್ನೇಯ ಮತ್ತು ಪಶ್ಚಿಮ ಕ್ಷೇತ್ರಗಳ ಸಮರ

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಬಹುತೇಕ ಭಾಗಗಳನ್ನು ಒಳಗೊಂಡಿರುವ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 1,51,374 ಮತದಾರರಿದ್ದಾರೆ (85,810 ಪುರುಷರು, 65,564 ಮಹಿಳೆಯರು). ಇಲ್ಲಿ ಎನ್‌ಡಿಎ ಮೈತ್ರಿಕೂಟದ ಕೆ.ಎಂ. ಸುರೇಶ್ ಹಾಗೂ ಕಾಂಗ್ರೆಸ್‌ನ ಶಶಿ ಹುಲಿಕುಂಟೆಮಠ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.

ಮತ್ತೊಂದೆಡೆ, ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಒಟ್ಟು 90,460 ಮತದಾರರಿದ್ದಾರೆ (51,599 ಪುರುಷರು, 36,488 ಮಹಿಳೆಯರು). ಪ್ರಮುಖ ಶೈಕ್ಷಣಿಕ ಕೇಂದ್ರವಾಗಿರುವ ಧಾರವಾಡದಲ್ಲೇ ಅತಿ ಹೆಚ್ಚು ಅಂದರೆ 30,907 ಮತದಾರರಿದ್ದಾರೆ. ಇಲ್ಲಿ ಬಿಜೆಪಿಯ ಪ್ರೊ. ಎಸ್.ವಿ. ಸಂಕನೂರ ಹಾಗೂ ಕಾಂಗ್ರೆಸ್‌ನ ಮೋಹನ ಲಿಂಬಿಕಾಯಿ ಸೇರಿದಂತೆ ಕಣದಲ್ಲಿರುವ ಒಟ್ಟು ಎಂಟು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

Read More
Next Story