
Government Jobs| ಧಾರವಾಡ ಪ್ರತಿಭಟನೆ: ಸರ್ಕಾರಿ ನೇಮಕಾತಿ ಆರಂಭಕ್ಕೆ ಗಡುವು, ತಪ್ಪಿದರೆ 'ಬೆಂಗಳೂರು ಚಲೋ'
ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ, ಉಪಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಗಳು ಎದುರಾಗಲಿವೆ. ಈ ಹಂತದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ನೇಮಕಾತಿ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇರಲಿದೆ.
ನೇಮಕಾತಿ ಪ್ರಕ್ರಿಯೆ ವಿಳಂಬ ಧೋರಣೆ ಖಂಡಿಸಿ ಉದ್ಯೋಗಾಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ವಿರುದ್ಧ ಸಮರಕ್ಕೆ ಇಳಿದಿದ್ದಾರೆ.
ಮೀಸಲಾತಿ ಕಾರಣದಿಂದ ನೇಮಕಾತಿ ಪ್ರಕ್ರಿಯೆಗಳು ಸಾಕಷ್ಟು ವಿಳಂಬವಾಗಿರುವ ಕಾರಣ ಆಕ್ರೋಶಗೊಂಡಿರುವ ಆಕಾಂಕ್ಷಿಗಳು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ತ್ವರಿತವಾಗಿ ನೇಮಕ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿದ್ದರು. ಈಗ ಅಂತಿಮ ಎಚ್ಚರಿಕೆಯಾಗಿ ರಾಜ್ಯ ಸರ್ಕಾರಕ್ಕೆ ಒಂದು ವಾರಗಳ ಕಾಲ ಗಡುವು ನೀಡಿದ್ದು, ಅಷ್ಟರಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸದೇ ಹೋದರೆ ಸಾವಿರಾರು ಸಂಖ್ಯೆಯಲ್ಲಿ ಯುವ ಸಮೂಹ ಬೆಂಗಳೂರು ಚಲೋ ನಡೆಸಲು ತೀರ್ಮಾನಿಸಿದೆ.
ಈವರೆಗೆ ರಾಜ್ಯ ಸರ್ಕಾರ ಕುಂಟು ನೆಪಗಳನ್ನು ಹೇಳಿಕೊಂಡು ಕಾಲ ತಳ್ಳುತ್ತಿದೆ. ಇನ್ನು ಮುಂದೆ ಯಾವುದೇ ಆಶ್ವಾಸನೆಗೆ ಬಗ್ಗುವುದಿಲ್ಲ. ಒಂದು ವಾರದೊಳಗೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸದಿದ್ದರೆ ಧಾರವಾಡದಿಂದ ಬೆಂಗಳೂರಿಗೆ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದು ವಿದ್ಯಾರ್ಥಿ ಮುಖಂಡರಾದ ಕಾಂತರಾಜು. ಆರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಬೂಬುಗಳಿಗೆ ಆಕ್ಷೇಪ
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕಾಂತಕುಮಾರ್ ಆರ್. ಅವರು ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, "ಕಳೆದ ಸೆಪ್ಟೆಂಬರ್‌ನಲ್ಲಿ ನಾವು ಪ್ರತಿಭಟನೆ ನಡೆಸಿದಾಗ ಸರ್ಕಾರ ಎರಡು ತಿಂಗಳ ಕಾಲಾವಕಾಶ ಕೇಳಿತ್ತು. ಆದರೆ, ಈವರೆಗೂ ಯಾವುದೇ ಪ್ರಗತಿಯಾಗಿಲ್ಲ. ಈಗ ಮೀಸಲಾತಿ ಅಥವಾ ಹಿಂದಿನ ಸರ್ಕಾರದ ತಪ್ಪುಗಳೆಂದು ಸಬೂಬು ಹೇಳುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು" ಎಂದು ಆಗ್ರಹಿಸಿದ್ದಾರೆ.
“ಮೀಸಲಾತಿ ವಿಚಾರದಲ್ಲಿ ಕಾನೂನು ತೊಡಕಿದೆ ಎಂದು ಹೇಳುವುದು ಕೇವಲ ವಿಳಂಬ ತಂತ್ರ. ಸರ್ಕಾರ ಮನಸ್ಸು ಮಾಡಿದರೆ ಯಾವುದೇ ಅಡೆತಡೆಯಿಲ್ಲದೆ ನೇಮಕಾತಿ ಆದೇಶ ಹೊರಡಿಸಬಹುದು. ನಾವು ಸರ್ಕಾರಕ್ಕೆ ಕೇವಲ ಒಂದು ವಾರ ಸಮಯ ನೀಡುತ್ತೇವೆ. ಅಷ್ಟರೊಳಗೆ ಅಧಿಸೂಚನೆ ಹೊರಬರದಿದ್ದರೆ, ರಾಜ್ಯದ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸಭೆ ನಡೆಸಿ, ಸಾವಿರಾರು ವಿದ್ಯಾರ್ಥಿಗಳೊಂದಿಗೆ ಬೆಂಗಳೂರಿಗೆ ಪಾದಯಾತ್ರೆ ನಡೆಸಲಿದ್ದೇವೆ" ಎಂದು ಗುಡುಗಿದ್ದಾರೆ.
ಚುನಾವಣಾ ನೀತಿ ಸಂಹಿತೆ ಭೀತಿ
ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ, ಉಪಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಗಳು ಎದುರಾಗಲಿವೆ. ಈ ಹಂತದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ನೇಮಕಾತಿ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇರಲಿದೆ.
ಇದರಿಂದ ಉದ್ಯೋಗಾಕಾಂಕ್ಷಿಗಳು ಸರ್ಕಾರಿ ನೌಕರಿಯಲ್ಲೇ ವಯೋಮಿತಿ ದಾಟಲಿದ್ದಾರೆ. ಅದಕ್ಕಾಗಿ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರದ 'ಯುವನಿಧಿ' ಯೋಜನೆ ಟೀಕಿಸಿದ ಅವರು, "ನಮಗೆ ಪ್ರತಿ ತಿಂಗಳು ನೀಡುವ 3,000 ರೂ.ಗಳ ಭಿಕ್ಷೆ ಬೇಡ. ನಮಗೆ ಅರ್ಹತೆಗೆ ತಕ್ಕ ಕೆಲಸ ನೀಡಿ, ನಾವೇ ಸರ್ಕಾರಕ್ಕೆ ಹಣ ನೀಡುತ್ತೇವೆ. ಇಂದಿನವರೆಗೂ ಇವರು ಎಷ್ಟು ಜನರಿಗೆ ಯುವನಿಧಿ ತಲುಪಿಸಿದ್ದಾರೆ, ಈ ಹಣ ಯಾವುದಕ್ಕೂ ಸಾಲುವುದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಸುಳ್ಳು ಹೇಳಬಾರದು
ಸರ್ಕಾರ ವಿದ್ಯಾರ್ಥಿಗಳಿಗೆ ನೀಡಿದ ಭರವಸೆಯಂತೆ ನಡೆದುಕೊಳ್ಳಬೇಕು. ರಾಜ್ಯದಲ್ಲಿ 18-20 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಮೊದಲು ನೇಮಕಾತಿ ಮಾಡುತ್ತೇನೆ ಎಂದು ಹೇಳುವುದು, ನಂತರ ಇಲ್ಲಸಲ್ಲದ ಸಬೂಬು ನೀಡುವುದು ಸರಿಯಲ್ಲ. ಈ ಸರ್ಕಾರ ಬಂದ ಮೇಲೆ ಒಂದೇ ಒಂದು ಶಿಕ್ಷಕರ ನೇಮಕಾತಿ ಆಗಿಲ್ಲ. ಎಫ್‌ಡಿಎ ನೇಮಕಾತಿ ಆಗಿಲ್ಲ. ವಿದ್ಯಾರ್ಥಿಗಳ ಸಮಸ್ಯೆ ಕೇಳುತ್ತಿಲ್ಲ, ಈ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಚರ್ಚೆಯಾಗುತ್ತಿಲ್ಲ ಎಂದು ದೂರಿದ್ದಾರೆ.
ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಧಾರವಾಡದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಲು ಸಿದ್ದವಾಗಿದ್ದಾರೆ. ನಿನ್ನೆ ಪ್ರತಿಭಟನೆ ಆದ ಬಳಿಕ ಎಲ್ಲಾ ಕಡೆಯಿಂದ ಕರೆ ಬರುತ್ತಿದ್ದು, ವಿದ್ಯಾರ್ಥಿಗಳು ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ ಎಂದಿದ್ದಾರೆ.
ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಕುರಿತು ಆರ್.ಕಾಂತರಾಜು ಅವರ ಸಂದರ್ಶನದ ಪೂರ್ಣ ಪಾಠ ಈ ವಿಡಿಯೊದಲ್ಲಿದೆ.

