ವೈದ್ಯರಿಗೆ ಮಣಿದ ಸರ್ಕಾರ: 14 ಬೇಡಿಕೆಗಳಲ್ಲಿ 13ಕ್ಕೆ ಗ್ರೀನ್ ಸಿಗ್ನಲ್, ಮುಷ್ಕರ ವಾಪಸ್
x

ವೈದ್ಯರಿಗೆ ಮಣಿದ ಸರ್ಕಾರ: 14 ಬೇಡಿಕೆಗಳಲ್ಲಿ 13ಕ್ಕೆ ಗ್ರೀನ್ ಸಿಗ್ನಲ್, ಮುಷ್ಕರ ವಾಪಸ್

ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ


Click the Play button to hear this message in audio format

ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿರುವ ವೈದ್ಯರ ಬೆದರಿಕೆಗೆ ಮಣಿದಿರುವ ರಾಜ್ಯ ಸರ್ಕಾರ, ಅವರ ಬಹುತೇಕ ಬೇಡಿಕೆಗಳನ್ನು ಒಪ್ಪಿಕೊಂಡಿದೆ. ಸರ್ಕಾರದ ಭರವಸೆಯ ಬೆನ್ನಲ್ಲೇ 'ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ'ವು ತನ್ನ ಮುಷ್ಕರವನ್ನು ಹಿಂಪಡೆದಿದ್ದು, ವೈದ್ಯರು ಮತ್ತೆ ಸೇವೆಗೆ ಮರಳಿದ್ದಾರೆ.

ಮಂಗಳವಾರ (ಮಾ. 10) ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಉಪಸ್ಥಿತಿಯಲ್ಲಿ ಸರ್ಕಾರಿ ನೌಕರರ ಸಂಘ ಮತ್ತು ಆರೋಗ್ಯ ಇಲಾಖೆಯ ವಿವಿಧ ಸಂಘಗಳ ಪ್ರತಿನಿಧಿಗಳೊಂದಿಗೆ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ವೈದ್ಯರು ಮುಂದಿಟ್ಟಿದ್ದ ಒಟ್ಟು 14 ಬೇಡಿಕೆಗಳ ಪೈಕಿ 13 ಬೇಡಿಕೆಗಳಿಗೆ ಸರ್ಕಾರ 'ಗ್ರೀನ್ ಸಿಗ್ನಲ್' ನೀಡಿದ್ದು, ಮುಂದಿನ ಮೂರು ತಿಂಗಳೊಳಗೆ ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಸ್ಪಷ್ಟ ಭರವಸೆ ನೀಡಿದೆ.

ಸಭೆಯಲ್ಲಿ ನಿರ್ಣಯಿಸಲಾದ ಪ್ರಮುಖ ಬೇಡಿಕೆಗಳು ಹಾಗೂ ಸರ್ಕಾರದ ಭರವಸೆಗಳು

ಎಲ್ಲಾ ವೃಂದದ ನೇಮಕಾತಿ ನಿಯಮಗಳನ್ನು ಮುಂದಿನ 2 ತಿಂಗಳಲ್ಲಿ ಸೂಕ್ತ ರೀತಿಯಲ್ಲಿ ತಿದ್ದುಪಡಿ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಬಡ್ತಿಗೆ ಅವಕಾಶವಿರುವ ಹುದ್ದೆಗಳಿಗೆ ಆದ್ಯತೆ ನೀಡಿ ಪ್ರತ್ಯೇಕ ಆದೇಶ ಹೊರಡಿಸುವ ಭರವಸೆ ನೀಡಲಾಗಿದೆ. ಕಳೆದ 13 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಜೇಷ್ಠತಾ ಪಟ್ಟಿಯನ್ನು ಬಿಡುಗಡೆ ಮಾಡಲು ಸರ್ಕಾರ ಒಪ್ಪಿದೆ. 'ಎ' ವೃಂದದಲ್ಲಿ 20 ವರ್ಷ ಹಾಗೂ 13 ವರ್ಷ ಸೇವೆ ಸಲ್ಲಿಸಿದವರ ಪಟ್ಟಿಯನ್ನು ಕೇವಲ ಒಂದು ವಾರದೊಳಗೆ ಪ್ರಕಟಿಸಲಾಗುವುದು ಎಂದು ಸರ್ಕಾರ ಭರವಸೆ ಕೊಟ್ಟಿದೆ. 'ಎ' ವೃಂದದ ವೈದ್ಯರಿಗೆ ನಿಯಮ 32ರ ಅಡಿಯಲ್ಲಿ ಬಡ್ತಿ ನೀಡಲಾಗಿದ್ದು, ಅಂತಿಮ ಜೇಷ್ಠತಾ ಪಟ್ಟಿ ಪ್ರಕಟವಾದ ಬಳಿಕ ಉಳಿದ ವೃಂದಗಳ (ಬಿ, ಸಿ, ಡಿ) ಮುಂಬಡ್ತಿ ಪ್ರಕ್ರಿಯೆಯನ್ನು ಮುಂದಿನ 2 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದೆ.

ಆಸ್ಪತ್ರೆಗಳಲ್ಲಿನ ಔಷಧ ಕೊರತೆಯನ್ನು ನೀಗಿಸಲು 'ಕೆಎಸ್‌ಎಂಎಸ್‌ಸಿಎಲ್' ಮೂಲಕ 500ಕ್ಕೂ ಹೆಚ್ಚು ಔಷಧಿಗಳಿಗೆ ಟೆಂಡರ್ ಕರೆಯಲಾಗಿದ್ದು, ಔಷಧ ಖರೀದಿಗಾಗಿ ಈಗಾಗಲೇ 30 ಕೋಟಿ ರೂ.ಗಳನ್ನು ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ತೀರಾ ಅಗತ್ಯವಿರುವ ಖಾಲಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. ಸರ್ಕಾರಿ ಸೇವೆಯಲ್ಲಿರುವ ವೈದ್ಯರಿಗೆ ಈ ಹಿಂದಿನಂತೆಯೇ ಉನ್ನತ ವ್ಯಾಸಂಗಕ್ಕೆ ಅನುಮತಿ ಹಾಗೂ ಸೌಲಭ್ಯಗಳನ್ನು ನೀಡಲು ಸೂಚಿಸಲಾಗಿದೆ.

ತಾಯಿ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ರಚಿಸಲಾಗಿರುವ ಐಎಎಸ್ ಅಧಿಕಾರಿಗಳ ಸಮಿತಿಗೆ, ಒಬ್ಬ ನಿವೃತ್ತ ತಜ್ಞ ವೈದ್ಯರನ್ನು/ತಾಂತ್ರಿಕ ಕೌಶಲ್ಯವುಳ್ಳ ವೈದ್ಯರನ್ನು ನೇಮಿಸಲು ಸಚಿವರು ಸಲಹೆ ನೀಡಿದ್ದಾರೆ.

ಗುತ್ತಿಗೆ ವೈದ್ಯರು ಹಾಗೂ ಸಿಬ್ಬಂದಿಗೆ ರಿಲೀಫ್

ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ನೇರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಮತ್ತು ಕೃಪಾಂಕ (Weightage) ನೀಡಲು ತೀರ್ಮಾನಿಸಲಾಗಿದೆ. ಅಲ್ಲದೆ ಎನ್‌ಹೆಚ್‌ಎಂ (NHM) ನೌಕರರಿಗೆ ಪ್ರತಿ ತಿಂಗಳು ನಿಗದಿತ ಸಮಯಕ್ಕೆ ವೇತನ ನೀಡುವುದು ಹಾಗೂ ವಾರ್ಷಿಕ 5% ವೇತನ ಹೆಚ್ಚಳದ ವ್ಯವಸ್ಥೆಯನ್ನು ಮುಂದುವರಿಸಲು ಸರ್ಕಾರ ಸಮ್ಮತಿಸಿದೆ.

ಕರ್ತವ್ಯದ ಅವಧಿಯ ನಂತರ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ (In-Patients) ಚಿಕಿತ್ಸೆ ನೀಡಬಾರದು ಎಂಬ ಆದೇಶವನ್ನು ಹಿಂಪಡೆಯುವಂತೆ ಸಂಘ ಪಟ್ಟು ಹಿಡಿದಿತ್ತು. ಆದರೆ, ಸಾರ್ವಜನಿಕ ಸೇವೆಗೆ ಪ್ರಥಮ ಆದ್ಯತೆ ನೀಡುವ ದೃಷ್ಟಿಯಿಂದ ಸರ್ಕಾರಿ ವೈದ್ಯರ ಖಾಸಗಿ ವೈದ್ಯಕೀಯ ಸೇವೆಯ ಮೇಲೆ ವಿಧಿಸಿರುವ ಷರತ್ತುಬದ್ಧ ನಿರ್ಬಂಧಗಳನ್ನು ಹಿಂಪಡೆಯುವುದಿಲ್ಲ ಎಂದು ಸರ್ಕಾರ ತನ್ನ ಕಟ್ಟುನಿಟ್ಟಿನ ನಿಲುವಿಗೆ ಬದ್ಧವಾಗಿದೆ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ.

ಬಹುತೇಕ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ದೊರೆತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ವೈದ್ಯಾಧಿಕಾರಿಗಳ ಸಂಘವು ಮುಷ್ಕರವನ್ನು ಅಂತ್ಯಗೊಳಿಸಿದೆ.

Read More
Next Story