
ಕಟ್ಟಡ ಕಲ್ಲು ಗಣಿಗಾರಿಕೆ ಅಕ್ರಮ: ದಂಡ ಪಾವತಿಗೆ 'ಒನ್ ಟೈಮ್ ಸೆಟಲ್‌ಮೆಂಟ್' ಜಾರಿ
2006-07ನೇ ಸಾಲಿನಿಂದ ಬಾಕಿ ಇರುವ ಎಲ್ಲ ಪ್ರಕರಣಗಳನ್ನುಇತ್ಯರ್ಥ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ದಂಡ ಪಾವತಿ ಮಾಡುವ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ.
ರಾಜ್ಯದಲ್ಲಿ ಕಟ್ಟಡ ಕಲ್ಲುಗಣಿ ಗುತ್ತಿಗೆ ಹಾಗೂ ಲೈಸೆನ್ಸ್ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿ ಗಣಿಗಾರಿಕೆ ನಡೆಸಿರುವ ಹಾಗೂ ರಾಜಧನ ಪಾವತಿಸದೆ ಉಪಖನಿಜ ಸಾಗಾಣಿಕೆ ಮಾಡಿರುವ ಗುತ್ತಿಗೆದಾರರಿಗೆ ರಾಜ್ಯ ಸರ್ಕಾರವು ಪರಿಹಾರ ಒದಗಿಸಿದೆ. ಅಕ್ರಮ ಗಣಿಗಾರಿಕೆ ಸಂಬಂಧ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ವಿಧಿಸಲಾಗಿರುವ ದಂಡದ ಮೊತ್ತವನ್ನು ಸುಲಭವಾಗಿ ಇತ್ಯರ್ಥಪಡಿಸಿಕೊಳ್ಳಲು ಸರ್ಕಾರವು ಇದೀಗ 'ಒನ್ ಟೈಮ್ ಸೆಟಲ್‌ಮೆಂಟ್' ಯೋಜನೆಯನ್ನು ಜಾರಿಗೊಳಿಸಿದ್ದು, ಅಧಿಕೃತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಬಾಕಿ ಪ್ರಕರಣಗಳ ಇತ್ಯರ್ಥ
2006-07ನೇ ಸಾಲಿನಿಂದ ರಾಜ್ಯದ ವಿವಿಧ ಕಲ್ಲುಗಣಿ ಗುತ್ತಿಗೆ ಪ್ರದೇಶಗಳಲ್ಲಿ ನಿಗದಿತ ಆಡಿಟ್ ಪ್ರಮಾಣಕ್ಕಿಂತ ಹೆಚ್ಚಿನ ಉಪಖನಿಜವನ್ನು ಅಕ್ರಮವಾಗಿ ಉತ್ಪಾದಿಸಿರುವ, ರಾಜಧನ ಕಟ್ಟದೆ ಹಾಗೂ ಖನಿಜ ಸಾಗಾಣಿಕೆ ಪರವಾನಗಿ ಪಡೆಯದೆ ಸಾಗಿಸಿರುವ ಹಲವು ಪ್ರಕರಣಗಳು ವರ್ಷಗಳಿಂದ ಬಾಕಿಯಿವೆ. ಇದರ ಜೊತೆಗೆ ಗುತ್ತಿಗೆ ಪ್ರದೇಶವನ್ನು ಮೀರಿ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿರುವ ಪ್ರಕರಣಗಳೂ ದೊಡ್ಡ ಸಂಖ್ಯೆಯಲ್ಲಿವೆ. ಇಂತಹ ಉಲ್ಲಂಘನೆಗಳಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ವಿಧಿಸಿರುವ ದಂಡವನ್ನು ಸಂಗ್ರಹಿಸುವ ನಿಟ್ಟಿನಲ್ಲಿ 'ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು-2026ರ ನಿಯಮ 44-ಎ' ಅಡಿ ಸರ್ಕಾರ ತಿದ್ದುಪಡಿ ತಂದಿದೆ. ಈ ನೂತನ ನಿಯಮದನ್ವಯ, ದೀರ್ಘಕಾಲದಿಂದ ಬಾಕಿ ಉಳಿದಿರುವ ಈ ದಂಡದ ಪ್ರಕರಣಗಳನ್ನು ಒಂದೇ ಬಾರಿಗೆ ಇತ್ಯರ್ಥಪಡಿಸಿಕೊಳ್ಳಲು ಒಟಿಎಸ್ ಮೂಲಕ ಗುತ್ತಿಗೆದಾರರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ.
ಡ್ರೋನ್ ಮತ್ತು ವೈಜ್ಞಾನಿಕ ಸರ್ವೆ ಮೂಲಕ ಲೆಕ್ಕಾಚಾರ
ಗುತ್ತಿಗೆ ಪ್ರದೇಶದಲ್ಲಿ ಅಕ್ರಮವಾಗಿ ತೆಗೆಯಲಾಗಿರುವ ಕಲ್ಲಿನ ಪ್ರಮಾಣ ಹಾಗೂ ಒತ್ತುವರಿಯಾಗಿರುವ ಪ್ರದೇಶದ ನಿಖರವಾದ ಲೆಕ್ಕಾಚಾರವನ್ನು ಅತ್ಯಂತ ವೈಜ್ಞಾನಿಕವಾಗಿ ನಿರ್ಧರಿಸಲು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ (KSRSAC) ವತಿಯಿಂದ ಡಿಜಿಪಿಎಸ್ (DGPS) ಹಾಗೂ ಡ್ರೋನ್ ಸರ್ವೆ ಅಥವಾ ಇತರ ವೈಜ್ಞಾನಿಕ ತಂತ್ರಾಂಶಗಳನ್ನು ಬಳಸಿ ಸರ್ವೆ ಕಾರ್ಯವನ್ನು ನಡೆಸಲಾಗುತ್ತದೆ. ಈ ಸರ್ವೆ ವರದಿಯ ಆಧಾರದ ಮೇಲೆಯೇ ಅಕ್ರಮ ಕಟ್ಟಡ ಕಲ್ಲಿನ ಪ್ರಮಾಣವನ್ನು ಪ್ರತ್ಯೇಕವಾಗಿ ಲೆಕ್ಕಹಾಕಲಾಗುತ್ತದೆ. ಒಂದು ವೇಳೆ ಈಗಾಗಲೇ ಈ ಸಂಬಂಧ ದಂಡ ವಿಧಿಸಲಾಗಿದ್ದು, ಗುತ್ತಿಗೆದಾರರು ಸಂಪೂರ್ಣವಾಗಿ ದಂಡ ಪಾವತಿಸಿದ್ದರೆ ಅಂತಹವರಿಗೆ ಒಟಿಎಸ್ ಅಡಿ ಪುನಃ ದಂಡ ವಿಧಿಸಲಾಗುವುದಿಲ್ಲ. ಭಾಗಶಃ ದಂಡ ಪಾವತಿಸಿರುವ ಗುತ್ತಿಗೆದಾರರ ಉಳಿಕೆ ಮೊತ್ತವನ್ನು ಮಾತ್ರ ಒಟಿಎಸ್ ವ್ಯಾಪ್ತಿಗೆ ತರಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ದಂಡ ಪಾವತಿಗೆ 6 ತಿಂಗಳ ಕಾಲಾವಕಾಶ, 4 ಕಂತುಗಳ ಸೌಲಭ್ಯ
ಕೆಎಸ್‌ಆರ್‌ಎಸ್‌ಎಸಿ ಸಂಸ್ಥೆಯಿಂದ ಡ್ರೋನ್ ಸರ್ವೆ ವರದಿ ಸ್ವೀಕೃತವಾದ ಬಳಿಕ 45 ದಿನಗಳ ಒಳಗೆ ಕಲ್ಲುಗಣಿ ಗುತ್ತಿಗೆದಾರರಿಗೆ ಅಂತಿಮ ಸರ್ವೆ ವರದಿಯ ಪ್ರತಿಯೊಂದಿಗೆ ಇಲಾಖೆಯಿಂದ ಅಧಿಕೃತ ನೋಟಿಸ್ ಜಾರಿ ಮಾಡಲಾಗುತ್ತದೆ. ನೋಟಿಸ್ ತಲುಪಿದ ಏಳು ದಿನಗಳ ಒಳಗೆ ಗುತ್ತಿಗೆದಾರರು ಸಕ್ಷಮ ಪ್ರಾಧಿಕಾರದೊಂದಿಗೆ ಸಮಾಲೋಚನೆ ನಡೆಸಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಬಹುದು. ವಿಶೇಷವೆಂದರೆ, ದಂಡದ ಮೊತ್ತವನ್ನು ಪಾವತಿಸಲು ನೋಟಿಸ್ ಜಾರಿಯಾದ ದಿನಾಂಕದಿಂದ ಬರೋಬ್ಬರಿ ಆರು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ. ಈ ದಂಡವನ್ನು 45 ದಿನಗಳಿಗೊಮ್ಮೆ ಒಂದು ಕಂತಿನಂತೆ ಒಟ್ಟು ನಾಲ್ಕು ಸಮಾನ ಕಂತುಗಳಲ್ಲಿ ಪಾವತಿಸುವ ಮೂಲಕ ಗುತ್ತಿಗೆದಾರರು ಆರ್ಥಿಕ ಹೊರೆಯಿಂದ ನಿರಾಳರಾಗಬಹುದಾಗಿದೆ. ನಿಗದಿತ ಅವಧಿಯೊಳಗೆ ಈ ಒಟಿಎಸ್ ಯೋಜನೆಯಡಿ ದಂಡ ಪಾವತಿಸಲು ವಿಫಲವಾದರೆ, ನಿಯಮಾನುಸಾರ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಅಧಿಸೂಚನೆಯಲ್ಲಿ ಎಚ್ಚರಿಸಿದೆ.

