
Hijab Ban| ಹಿಜಾಬ್ ಬೇಡ ಅಂದ್ರೆ ಜನಿವಾರವೂ ಬೇಡ! ವಿವಾದಿತ ಹಿಜಾಬ್ ನಿರ್ಬಂಧ ಆದೇಶ ವಾಪಸ್
ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹಿಜಾಬ್ ನಿರ್ಬಂಧ ಆದೇಶವನ್ನು ಹಿಂಪಡೆಯುವ ಚುನಾವಣಾ ಘೋಷಣೆಯನ್ನು ಸಿದ್ದರಾಮಯ್ಯ ಸರ್ಕಾರ ಬುದ್ಧಿವಂತಿಕೆಯಿಂದ ʼಜನಿವಾರ ವಿವಾದʼ ಬಳಸಿಕೊಂಡು ಜಾರಿಗೆ ತಂದಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು 2022 ಫೆ.5 ರಂದು ಅಂದಿನ ಬಿಜೆಪಿ ಸರ್ಕಾರ ಹೊರಡಿಸಿದ್ದ ನಿರ್ಬಂಧ ಆದೇಶವನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಿಂಪಡೆದಿದೆ.
ಜನಿವಾರ ವಿವಾದ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ವಸ್ತ್ರ ಸಂಹಿತೆಯನ್ನು ಪರಿಷ್ಕರಿಸಿದೆ. ಜನಿವಾರ, ರುದ್ರಾಕ್ಷಿ, ಪೇಟಾ ಸೇರಿದಂತೆ ಧಾರ್ಮಿಕ ಸಂಕೇತಗಳನ್ನು ಬಿಂಬಿಸುವ ವಸ್ತ್ರಗಳನ್ನು ಧರಿಸಬಹುದು. ಅದೇ ರೀತಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಕೂಡ ಧರಿಸಬಹುದು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಆ ಮೂಲಕ ಹಿಂದಿನಿ ಬಿಜೆಪಿ ಸರ್ಕಾರ ನಿಷೇಧಿಸಿದ್ದ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಬಳಕೆಯನ್ನು ಮರು ಜಾರಿಗೆ ತರುವ ಚುನಾವಣಾ ಘೋಷಣೆಯನ್ನು ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದೆ. ಜನಿವಾರ ವಿವಾದವನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡು ಜನಿವಾರ, ಪೇಟ ಧಾರಣೆಗೆ ಅವಕಾಶ ಇರುವಂತೆಯೇ ಹಿಜಾಬ್‌ಗೂ ಅವಕಾಶ ಇದೆ ಎನ್ನುವುದನ್ನು ಜಾರಿಗೊಳಿಸಲು ನಿರ್ಧಿರಿಸಿದೆ.
ಇತ್ತೀಚೆಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಆ ಕ್ಷೇತ್ರದ ಬಹುಸಂಖ್ಯೆಯ ಮುಸ್ಲಿಮರನ್ನು ಕಡೆಗಣಿಸಲಾಗಿದೆ ಎಂಬ ವಿವಾದ ಮತ್ತು ಗೆದ್ದರೂ, ಅಲ್ಪಸಂಖ್ಯಾತರ ಸಿಟ್ಟಿನಿಂದಾಗಿ ಗೆಲುವಿನ ಅಂತರ ಕಡಿಮೆಯಾಗಿತ್ತು.ಇದೇ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದ ಚುನಾವಣಾ ಬೇಡಿಕೆಗಳಲ್ಲಿ ಒಂದಾದ ಹಿಜಾಬ್ ಬ್ಯಾನ್ ತೆರವು ಮಾಡುವ ಮೂಲಕ ತನ್ನ ಮತ ಬ್ಯಾಂಕ್‌ಗಾದ ಗಾಯಕ್ಕೆ ಮುಲಾಮು ಹಚ್ಚುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ವಿಶ್ಲೇಷಿಸಲಾಗಿದೆ.
2023-24 ರಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಜಾಬ್ ನಿಷೇಧ ಆದೇಶ ಹಿಂಪಡೆಯುವುದಾಗಿ ಘೋಷಿಸಿದ್ದರು. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.ಇದೀಗ ಅಧಿಕೃತವಾಗಿ ರಾಜ್ಯ ಸರ್ಕಾರ ಹಿಜಾಬ್ ನಿರ್ಬಂಧ ಆದೇಶವನ್ನು ಹಿಂಪಡೆದು, ಎಲ್ಲಾ ರೀತಿಯ ಧಾರ್ಮಿಕ ಉಡುಪುಗಳನ್ನು ತೊಡಲು ಅವಕಾಶ ನೀಡಿ ಆದೇಶ ಹೊರಡಿಸಿದೆ. ಇದಲ್ಲದೇ ಸಿಇಟಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರ್ಬಂಧ ಹೇರಿದ್ದ ಪೇಟಾ, ಜನಿವಾರ, ರುದ್ರಾಕ್ಷಿ ಧಾರಣೆಗೂ ಅವಕಾಶ ನೀಡಿದೆ.
ಜನಿವಾರವು ಧಾರ್ಮಿಕ ಪರಂಪರೆಯ ಸಂಕೇತ. ಅವರವರ ಆಚರಣೆಗೆ ಆದ್ಯತೆ ನೀಡಬೇಕು. ಹಾಗಾಗಿ ಯಾವುದೇ ಧಾರ್ಮಿಕ ಆಚರಣೆಯನ್ನು ನಿಂದಿಸುವಂತಹ ಕ್ರಮಗಳಿಗೆ ಅವಕಾಶ ನೀಡಬಾರದು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶಾಸಕ ರಿಜ್ವಾನ್ ಅರ್ಹದ್ ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಕಳೆದ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರವನ್ನು ತೆಗೆಸಿದ ಘಟನೆ ಕರ್ನಾಟಕದಲ್ಲಿ ವ್ಯಾಪಕ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೃಪಾನಿಧಿ ಕಾಲೇಜು ಸೇರಿ ಕೆಲವು ಸಿಇಟಿ ಪರೀಕ್ಷಾ ಕೇಂದ್ರದ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿತ್ತು. ಇನ್ನು ರೈಲ್ವೆ ನೇಮಕಾತಿ ಮಂಡಳಿ (RRB) ಪರೀಕ್ಷೆಗಳಲ್ಲೂ ಮಂಗಳಸೂತ್ರ ಮತ್ತು ಜನಿವಾರ ಧರಿಸುವುದಕ್ಕೆ ನಿರ್ಬಂಧ ವಿಧಿಸಿ ಅಡ್ಮಿಟ್ ಕಾರ್ಡ್ಗಳಲ್ಲಿ ಸೂಚನೆ ನೀಡಲಾಗಿತ್ತು.
ಹಿಜಾಬ್ ನಿರ್ಬಂಧದ ಹಿನ್ನೆಲೆ ಏನು?
2022 ರ ಆರಂಭದಲ್ಲಿ ಉಡುಪಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬರುವುದನ್ನು ನಿರ್ಬಂಧಿಸಲಾಯಿತು. ಇದನ್ನು ವಿರೋಧಿಸಿ ಪ್ರತಿಭಟನೆಗಳು ನಡೆದವು. ಹಲವು ಹಿಂಸಾಚಾರದ ಘಟನೆಗಳೂ ನಡೆದಿದ್ದವು.
2022 ಫೆ.5 ರಂದು ಅಂದಿನ ಬಿಜೆಪಿ ಸರ್ಕಾರವು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ, ಹಿಜಾಬ್ ಅಥವಾ ಇತರ ಧಾರ್ಮಿಕ ಉಡುಪುಗಳನ್ನು ಧರಿಸದಂತೆ ಆದೇಶ ಹೊರಡಿಸಿತು.
ಈ ಆದೇಶ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, "ಹಿಜಾಬ್ ಧರಿಸುವುದು ಇಸ್ಲಾಂನಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ" ಎಂದು ಹೇಳಿ ಸರ್ಕಾರಿ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಆದೇಶವನ್ನು ಎತ್ತಿ ಹಿಡಿದಿತ್ತು.
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠವು ಅಕ್ಟೋಬರ್ 2022 ರಲ್ಲಿ ಭಿನ್ನ ತೀರ್ಪು ನೀಡಿತು. ನಂತರ ಈ ಪ್ರಕರಣವು ವಿಸ್ತೃತ ಪೀಠಕ್ಕೆ ವರ್ಗಾವಣೆ ಆಯಿತು. ಪ್ರಸ್ತುತ, ಅರ್ಜಿಯ ವಿಚಾರಣೆ ಬಾಕಿ ಇದೆ.
ಮರುಕಳುಹಿಸಿದ್ದ ಜನಿವಾರ ವಿವಾದ
ಬೆಂಗಳೂರಿನ ನಗರದ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿ ಆನಂದ್ ಸುಧೀರ್ ರಾವ್ ಸೇರಿದಂತೆ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿದ ಸಿಬ್ಬಂದಿ, ಜನಿವಾರ ತೆಗೆಯುವಂತೆ ಸೂಚಿಸಿದ್ದರು. ಒಪ್ಪದಿದ್ದಾಗ ಪರೀಕ್ಷಾ ಕೇಂದ್ರ ಬಿಡುವುದಿಲ್ಲ ಎಂದು ಹೆದರಿಸಿದ್ದರು. ಅನಿವಾರ್ಯವಾಗಿ ಐವರು ವಿದ್ಯಾರ್ಥಿಗಳ ಜನಿವಾರ ತೆಗೆದು ಪರೀಕ್ಷೆ ಬರೆದಿದ್ದರು. ಈ ಘಟನೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಜನಿವಾರ ವಿವಾದ ತೀವ್ರಗೊಂಡಾಗ ಕೆಇಎ ವತಿಯಿಂದ ತನಿಖೆಗೆ ಆದೇಶಿಸಿ ನಾಲ್ವರನ್ನು ಅಮಾನತು ಮಾಡಲಾಗಿತ್ತು. ಅಲ್ಲದೇ ಕಾಲೇಜಿನಿಂದ ಸಿಇಟಿ ಪರೀಕ್ಷಾ ಕೇಂದ್ರವನ್ನು ಹಿಂಪಡೆಯಲಾಗಿತ್ತು.
ಇದೇ ರೀತಿ 2025 ಏಪ್ರಿಲ್ ತಿಂಗಳಲ್ಲಿ ಬೀದರ್ ಹಾಗೂ ಶಿವಮೊಗ್ಗದಲ್ಲಿ ಸಿಇಟಿ ಬರೆಯಲು ಬಂದಿದ್ದ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಲಾಗಿತ್ತು. ಇದು ರಾಜಕೀಯ ತಿಕ್ಕಾಟಕ್ಕೂ ಕಾರಣವಾಗಿತ್ತು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು, ಸಿಇಟಿ ಪರೀಕ್ಷಾರ್ಥಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳಲ್ಲಿ ಜನಿವಾರ ತೆಗೆಯಬೇಕು ಎಂಬ ನಿಯಮ ಇಲ್ಲ ಎಂದು ಸ್ಪಷ್ಟಪಡಿಸಿದ್ದರೂ ವಿವಾದ ಪುನರಾವರ್ತನೆಯಾಗಿತ್ತು.

