ಲಕ್ಷಾಂತರ ಶಿಕ್ಷಕರಿಗೆ ವರ್ಗಾವಣೆ ಸಿಹಿ ಸುದ್ದಿ: ವಿಧೇಯಕಕ್ಕೆ ತಿದ್ದುಪಡಿ  ಒಪ್ಪಿಗೆ
x

ಲಕ್ಷಾಂತರ ಶಿಕ್ಷಕರಿಗೆ ವರ್ಗಾವಣೆ ಸಿಹಿ ಸುದ್ದಿ: ವಿಧೇಯಕಕ್ಕೆ ತಿದ್ದುಪಡಿ ಒಪ್ಪಿಗೆ

ನಿರ್ದಿಷ್ಟ ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ನೀಡಲಾಗುವುದು. ಆಯಕಟ್ಟಿನ ಹುದ್ದೆಗಳಲ್ಲಿ ಶಿಕ್ಷಕರು ಎಷ್ಟು ವರ್ಷಗಳ ಕಾಲ ಇರಬಹುದು ಎಂಬ ಸೇವಾವಧಿಯನ್ನು ಈ ವಿಧೇಯಕದಲ್ಲಿ ಸ್ಪಷ್ಟಪಡಿಸಲಾಗಿದೆ.


Click the Play button to hear this message in audio format

ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ಶಿಕ್ಷಕರ ಬಹುದಿನಗಳ ಕನಸು ಹಾಗೂ ಬೇಡಿಕೆಯಾಗಿದ್ದ ವರ್ಗಾವಣೆ ಪ್ರಕ್ರಿಯೆಯ ಸುಧಾರಣೆಗೆ ಕೊನೆಗೂ ಚಾಲನೆ ಸಿಕ್ಕಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ಮಂಡಿಸಿದ 'ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ 2026'ಕ್ಕೆ ವಿಧಾನ ಪರಿಷತ್ತಿನಲ್ಲಿ ಸರ್ವಾನುಮತದ ಅಂಗೀಕಾರ ದೊರೆತಿದೆ. ಈ ಮೂಲಕ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿನ ತಾಂತ್ರಿಕ ಅಡೆತಡೆಗಳು ನಿವಾರಣೆಯಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ.

ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ಈ ವಿಧೇಯಕವು ಮೇಲ್ಮನೆಯಲ್ಲೂ ಅಂಗೀಕಾರ ಪಡೆಯುವ ಮೂಲಕ ಕಾನೂನು ರೂಪ ಪಡೆಯಲು ಸಜ್ಜಾಗಿದೆ. ಇದು ಶಿಕ್ಷಕರ ವೃತ್ತಿಜೀವನದಲ್ಲಿ ನೆಮ್ಮದಿ ತರುವ ಜೊತೆಗೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪೂರಕವಾಗಲಿದೆ ಎಂದು ಭಾವಿಸಲಾಗಿದೆ. 2020ರ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆಯು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿತ್ತು, ಇದು ಅನೇಕ ಶಿಕ್ಷಕರಿಗೆ, ವಿಶೇಷವಾಗಿ ಕೌಟುಂಬಿಕ ಸಮಸ್ಯೆ ಎದುರಿಸುತ್ತಿರುವವರಿಗೆ ಮತ್ತು ಅನಾರೋಗ್ಯ ಪೀಡಿತರಿಗೆ ವರ್ಗಾವಣೆ ಪಡೆಯಲು ಅಡ್ಡಿಯಾಗಿತ್ತು. ಈ ಹಿನ್ನೆಲೆಯಲ್ಲಿ, ಪ್ರಸ್ತುತ ಪರಿಸ್ಥಿತಿಗೆ ತಕ್ಕಂತೆ ಮತ್ತು ಶಿಕ್ಷಕರ ಹಿತರಕ್ಷಣೆಯ ದೃಷ್ಟಿಯಿಂದ ಪ್ರಮುಖ ಬದಲಾವಣೆಗಳನ್ನು ತರಲು ಸರ್ಕಾರ ಈ ವಿಧೇಯಕವನ್ನು ತಂದಿದೆ.

ಕೌನ್ಸಿಲಿಂಗ್ ಮೂಲಕ ವರ್ಗಾವಣೆ

ಶಿಕ್ಷಣ ಇಲಾಖೆಯಲ್ಲಿನ ಯಾವ ಹುದ್ದೆಗಳು ಅತ್ಯಂತ ಪ್ರಮುಖ ಅಥವಾ ನಿರ್ಣಾಯಕ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ನಿರ್ದಿಷ್ಟ ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ಪಾರದರ್ಶಕವಾಗಿ ವರ್ಗಾವಣೆ ನೀಡಲಾಗುವುದು. ಕೆಲವು ಆಯಕಟ್ಟಿನ ಹುದ್ದೆಗಳಲ್ಲಿ ಶಿಕ್ಷಕರು ಎಷ್ಟು ವರ್ಷಗಳ ಕಾಲ ಇರಬಹುದು ಎಂಬ ಗರಿಷ್ಠ ಸೇವಾವಧಿಯನ್ನು ಈ ವಿಧೇಯಕದಲ್ಲಿ ಸ್ಪಷ್ಟಪಡಿಸಲಾಗಿದೆ. ಬೋಧಕ ಹುದ್ದೆಯಲ್ಲಿರುವವರು ಬೋಧಕೇತರ ಹುದ್ದೆಗಳಿಗೆ ಅಥವಾ ಇತರ ನಿಗಮ-ಮಂಡಳಿಗಳಿಗೆ ವರ್ಗಾವಣೆಗೊಳ್ಳುವುದನ್ನು ತಡೆಯುವ ಮೂಲಕ ಶಾಲೆಗಳಲ್ಲಿ ಶಿಕ್ಷಕರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲಾಗಿದೆ.

ಪರಸ್ಪರ ವರ್ಗಾವಣೆ ಸರಳೀಕರಣ

ವಿಧೇಯಕ ಕುರಿತು ಮಾಹಿತಿ ನೀಡಿದ ಸಚಿವ ಮಧು ಬಂಗಾರಪ್ಪ, ಈ ಹಿಂದೆ ಪರಸ್ಪರ ವರ್ಗಾವಣೆ ಪಡೆಯಲು ಕಠಿಣ ನಿಯಮಗಳಿದ್ದವು. ಹೊಸ ತಿದ್ದುಪಡಿಯ ಅನ್ವಯ, ಇಬ್ಬರು ಶಿಕ್ಷಕರು ಪರಸ್ಪರ ಒಪ್ಪಿಗೆಯೊಂದಿಗೆ ವರ್ಗಾವಣೆಗೊಳ್ಳಲು ವಿಧಿಸಲಾಗಿದ್ದ ಕನಿಷ್ಠ ಸೇವಾ ಅವಧಿಯನ್ನು ಕಡಿತಗೊಳಿಸಲಾಗಿದೆ. ಇದರಿಂದ ಯುವ ಶಿಕ್ಷಕರು ತಮ್ಮ ಸ್ವಂತ ಜಿಲ್ಲೆ ಅಥವಾ ತಮಗೆ ಬೇಕಾದ ಸ್ಥಳಗಳಿಗೆ ಶೀಘ್ರವಾಗಿ ತೆರಳಲು ಅವಕಾಶ ಸಿಗಲಿದೆ. ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರು (ಕ್ಯಾನ್ಸರ್, ಕಿಡ್ನಿ ಸಮಸ್ಯೆ ಇತ್ಯಾದಿ), ಅಂಗವಿಕಲ ಶಿಕ್ಷಕರು ಮತ್ತು ವಿಧವೆಯರಿಗೆ ವರ್ಗಾವಣೆಯಲ್ಲಿ ಪ್ರಥಮ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಇಂತಹ ವಿಶೇಷ ಪ್ರಕರಣಗಳಲ್ಲಿ ಶಿಕ್ಷಕರು ಬಯಸುವ ಸ್ಥಳಗಳಿಗೆ ವರ್ಗಾವಣೆ ನೀಡುವ ಮೂಲಕ ಅವರ ಸಾಮಾಜಿಕ ಮತ್ತು ಆರೋಗ್ಯದ ಹಿತವನ್ನು ಕಾಪಾಡಲು ವಿಧೇಯಕದಲ್ಲಿ ಅವಕಾಶವಿದೆ ಎಂದು ಹೇಳಿದರು.

ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದರೆ ಅಂತಹ ದಂಪತಿಗಳು ಒಂದೇ ಜಿಲ್ಲೆ ಅಥವಾ ಪಕ್ಕದ ತಾಲೂಕುಗಳಲ್ಲಿ ಕೆಲಸ ಮಾಡಲು ವಿಶೇಷ ರಿಯಾಯಿತಿ ನೀಡಲಾಗಿದೆ. ಇದರಿಂದ ಶಿಕ್ಷಕರ ಕೌಟುಂಬಿಕ ಒತ್ತಡ ಕಡಿಮೆಯಾಗಿ, ಬೋಧನೆಯಲ್ಲಿ ಗಮನ ಹರಿಸಲು ಸಾಧ್ಯವಾಗುತ್ತದೆ. ಈ ತಿದ್ದುಪಡಿಯ ಮೂಲಕ ನಗರ ಭಾಗದಲ್ಲಿ ಶಿಕ್ಷಕರು ಹೆಚ್ಚಿರುವ ಮತ್ತು ಗ್ರಾಮೀಣ ಭಾಗದಲ್ಲಿ ಶಿಕ್ಷಕರ ಕೊರತೆ ಇರುವ ಸಮಸ್ಯೆ ನೀಗಿಸಲು ಇಲಾಖೆಗೆ ಹೆಚ್ಚಿನ ಅಧಿಕಾರ ಸಿಗಲಿದೆ. ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಸಮರ್ಪಕವಾಗಿ ಮರುಹಂಚಿಕೆ ಮಾಡುವ ಮೂಲಕ ಶೈಕ್ಷಣಿಕ ಸಮತೋಲನ ಕಾಯ್ದುಕೊಳ್ಳುವುದು ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದರು.

ಸದನದಲ್ಲಿ ವ್ಯಕ್ತವಾದ ಬೆಂಬಲ

ವಿಧಾನ ಪರಿಷತ್ತಿನಲ್ಲಿ ವಿಧೇಯಕದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಸದಸ್ಯರಾದ ಶಶೀಲ್ ನಮೋಶಿ, ಪುಟ್ಟಣ್ಣ, ಎಸ್.ವಿ. ಸಂಕನೂರ ಮತ್ತು ಎಸ್.ಎಲ್. ಭೋಜೆಗೌಡ ಅವರಂತಹ ಶಿಕ್ಷಕರ ಪ್ರತಿನಿಧಿಗಳು ವಿಧೇಯಕವನ್ನು ಮುಕ್ತಕಂಠದಿಂದ ಸ್ವಾಗತಿಸಿದರು. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯು ಕೇವಲ ಒಂದು ಆಡಳಿತಾತ್ಮಕ ಕೆಲಸವಲ್ಲ, ಅದು ಶಿಕ್ಷಕರ ಮಾನಸಿಕ ನೆಮ್ಮದಿಯ ವಿಷಯವಾಗಿದೆ. ಹೀಗಾಗಿ ಈ ತಿದ್ದುಪಡಿಗಳು ಸಮಯೋಚಿತವಾಗಿವೆ ಎಂದು ಅಭಿಪ್ರಾಯಪಟ್ಟರು. ಐವಾನ್ ಡಿಸೋಜಾ ಮತ್ತು ಇತರ ಸದಸ್ಯರು ಕೂಡ ಶಿಕ್ಷಕರ ಹಿತರಕ್ಷಣೆಯ ಸರ್ಕಾರದ ನಡೆಯನ್ನು ಶ್ಲಾಘಿಸಿದರು.

Read More
Next Story