
ಶುದ್ಧ ಕುಡಿಯುವ ನೀರಿನ ಘಟಕ (ಸಂಗ್ರಹ ಚಿತ್ರ)
ಶುದ್ಧ ಕುಡಿಯುವ ನೀರಿಗೆ ಆದ್ಯತೆ| ಗುಣಮಟ್ಟ ಮೇಲ್ವಿಚಾರಣೆಗೆ ವಿಶೇಷ ಕಾರ್ಯಪಡೆ
ರಾಜ್ಯದಲ್ಲಿ 2024 ಹಾಗೂ 25ರಲ್ಲಿ 3.90 ಲಕ್ಷ ಹಾಗೂ 2025 ಹಾಗೂ 26ರಲ್ಲಿ 2.46 ಲಕ್ಷ ನೀರಿನ ಮಾದರಿಗಳನ್ನು ಸಂಗ್ರಹಿಸಸಲಾಗಿದ್ದು, 7,244 ಮಾದರಿಗಳಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿದ್ದವು.
ರಾಜ್ಯದಾದ್ಯಂತ ಸ್ಥಾಪಿಸಲಾಗಿರುವ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ನಿರ್ವಹಣೆ ಪ್ರಯೋಗಾಲಯಗಳ ಮೂಲಕ ನೀರಿನ ಗುಣಮಟ್ಟ ಪರೀಕ್ಷೆಗಳನ್ನು ಕೈಗೊಳ್ಳಲು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೂ 28.85 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.
ಈ ಕುರಿತು ಬುಧವಾರ (ಫೆ.25) ಮಾಹಿತಿ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, "ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆಯಡಿ ನೀರಿನ ಗುಣಮಟ್ಟ ಮೇಲ್ವಿಚಾರಣೆ ಮತ್ತು ಕಣ್ಗಾವಲು ಕಾರ್ಯಕ್ರಮಕ್ಕೆ ಶೇ. 2ರಷ್ಟು ಅನುದಾನ ಬಿಡುಗಡೆಗೊಳಿಸಬೇಕಾಗಿತ್ತು. ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷ ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆಗೊಳಿಸದೇ ಇದ್ದರೂ, ಗ್ರಾಮೀಣ ಜನರಿಗೆ ಶುದ್ಧ ನೀರು ಸರಬರಾಜು ಮಾಡಬೇಕೆಂಬ ಸಂಕಲ್ಪದಿಂದ ರಾಜ್ಯ ಸರ್ಕಾರವೇ ಈ ವೆಚ್ಚವನ್ನು ಭರಿಸಿದೆ ಎಂದು ಹೇಳಿದರು.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ನೀರು ಸರಬರಾಜು ಮಾಡಲು ಕಾಲ ಕಾಲಕ್ಕೆ ಇಲಾಖೆಯಿಂದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಿರುವುದರಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಕಲುಷಿತ ನೀರಿನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರುವ ಪ್ರಕರಣಗಳು ಕಂಡುಬಂದಿಲ್ಲ.
ನೀರಿನ ಮಾದರಿ ವಿವರದ ವರದಿ
ಎಲ್ಲಾ ಜಿಲ್ಲೆಗಳಲ್ಲಿ ಪ್ರಯೋಗಾಲಯ
ರಾಜ್ಯಾದ್ಯಂತ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಮೂಲಗಳನ್ನು ನಿಗದಿಪಡಿಸಲಾಗಿರುವ ಮಾರ್ಗಸೂಚಿಗಳ ಅನುಗುಣವಾಗಿ ಗುಣಮಟ್ಟದಂತೆ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ರಾಜ್ಯದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರಯೋಗಾಲಯಗಳು ಮತ್ತು 47 ತಾಲ್ಲೂಕು ಮಟ್ಟದ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಈ ಪ್ರಯೋಗಾಲಯಗಳಲ್ಲಿ 2023 ಹಾಗೂ 24ರಿಂದ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬ್ಯಾಕ್ಟೀರಿಯಾ ಅಂಶ ಪತ್ತೆ
ರಾಜ್ಯದಲ್ಲಿ 2024 ಹಾಗೂ 25ರಲ್ಲಿ 3.90 ಲಕ್ಷ ಹಾಗೂ 2025 ಹಾಗೂ 26ರಲ್ಲಿ 2.46 ಲಕ್ಷ ನೀರಿನ ಮಾದರಿಗಳನ್ನು ಸಂಗ್ರಹಿಸಸಲಾಗಿದ್ದು, 7,244 ಮಾದರಿಗಳಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿದ್ದವು. ಈ ಪೈಕಿ ಕಲುಷಿತ ನೀರು ಎಂದು ಕಂಡು ಬಂದ 49,309 ನೀರಿನ ಮಾದರಿಗಳಿಗೆ ಪರ್ಯಾಯ ಕ್ರಮಗಳನ್ನು ಕೈಗೊಂಡು ನೀರು ಪೂರೈಸಲಾಗಿದೆ ಎಂದರು.
ನೀರಿನ ಮಾದರಿ ವಿವರದ ವರದಿ
ರಾಯಚೂರು ವಿವಿ ಜೊತೆ ಒಪ್ಪಂದ
ಕುಡಿಯುವ ನೀರಿನ ಗುಣಮಟ್ಟದ ಪರೀಕ್ಷೆಗೆ ಒತ್ತು ನೀಡುವ ಸಲುವಾಗಿ ಹೆಚ್ಚಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲು ಎನ್‌ಎಬಿಎಲ್ (NABL) ಮಾನ್ಯತೆ ಪಡೆದಿರುವ ಮೂರನೇ ಸಂಸ್ಥೆ ಅಥವಾ ಖಾಸಗಿ ಪ್ರಯೋಗಾಲಯಗಳಲ್ಲಿ 2023 ರಿಂದ 25ನೇ ಸಾಲಿನವರೆಗೂ 66,811 ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಂಡು ಈ ವೆಚ್ಚವನ್ನು ರಾಜ್ಯ ಸರ್ಕಾರದ ಅನುದಾನದಡಿ ಭರಿಸಲಾಗಿದೆ, ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಬರುವ ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲು ರಾಯಚೂರು ಕೃಷಿ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ವಿಶ್ವವಿದ್ಯಾಲಯದ ಸೂಕ್ಷ್ಮಜೀವಾಣು ಪರೀಕ್ಷಾ ಪ್ರಯೋಗಾಲಯಗಳಲ್ಲಿ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳ ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಾಥಮಿಕವಾಗಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಗೆ ಬರುವ ಗ್ರಾಮಗಳು ಹಾಗೂ ಜನವಸತಿ ಪ್ರದೇಶಗಳಲ್ಲಿ ಬರುವ ಎಲ್ಲಾ ಕುಡಿಯುವ ನೀರಿನ ಮೂಲಗಳ ಸಂಭಾವ್ಯ ಗುಣಮಟ್ಟದ ಪರೀಕ್ಷೆಗಳನ್ನು ಕ್ಷೇತ್ರ ಪರೀಕ್ಷಾ ಸಾಧನಗಳ ಮೂಲಕ ಕೈಗೊಳ್ಳಲಾಗುತ್ತಿದೆ. ಮಳೆಗಾಲ ಆರಂಭವಾಗುವ ಮುನ್ನ ಮತ್ತು ನಂತರ ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳುವ ಸಲುವಾಗಿ ರಾಜ್ಯಾದ್ಯಂತ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವಿಶೇಷ ಕಾರ್ಯಪಡೆ ರಚನೆ
ನೀರಿನ ಗುಣಮಟ್ಟ ಮೇಲ್ವಿಚಾರಣೆ ಮತ್ತು ಕಣ್ಗಾವಲು ಕಾರ್ಯಕ್ರಮವನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಈ ಸಮಿತಿಗಳು ಬೇಸಿಗೆ ಕಾಲದಲ್ಲಿ ನೀರು ಸರಬರಾಜು ವ್ಯವಸ್ಥೆಯ ಪರಾಮರ್ಶೆ ನಡೆಸಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ಪ್ರತಿ ತಿಂಗಳು ಕಡ್ಡಾಯವಾಗಿ ಸಭೆಗಳನ್ನು ನಡೆಸಲು ನಿರ್ದೇಶಿಸಲಾಗಿದೆ. ಗ್ರಾಮೀಣ ಪ್ರದೇಶಗಳ ನೀರು ಸರಬರಾಜು ವ್ಯವಸ್ಥೆಯಲ್ಲಿ ಅಳವಡಿಸಿರುವ ಕೊಳವೆ ಮಾರ್ಗಗಳ ಸಂಪರ್ಕ ವ್ಯವಸ್ಥೆಯ ಸಮರ್ಪಕತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಸಂಬಂಧಪಟ್ಟ ಸಹಾಯ ಮತ್ತು ಕಿರಿಯ ಅಭಿಯಂತರರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಡ್ಡಾಯವಾಗಿ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಯಾವುದೇ ಸೋರಿಕೆಯಾಗದಿರುವ ಬಗ್ಗೆ ಹಾಗೂ ಹಾನಿಯಾಗದಿರುವ ಬಗ್ಗೆ ಖಚಿತಪಡಿಸಿಕೊಳ್ಳುತ್ತಿದ್ದಾರೆ. ಅಗತ್ಯವಿರುವ ಕಡೆ ದುರಸ್ಥಿಗೊಳಿಸಿ ಮೇಲಾಧಿಕಾರಿಗಳಿಗೆ ವರದಿನೀಡುತ್ತಿದ್ದಾರೆ ಎಂದರು.
ಈ ಬಾರಿಯ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಎಲ್ಲಾ ನೀರಿನ ಶೇಖರಣಾ ಘಟಕಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸಲು ಮತ್ತು ಕ್ಲೋರಿನೇಷನ್ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ ಎಂದು ಹೇಳಿದರು.

