
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ
3 ವರ್ಷದಲ್ಲಿ 5,542 ಕೋಟಿ ರೂ.ವಿಮೆ ಪರಿಹಾರ ಬಿಡುಗಡೆ
ಕಳೆದ ಮೂರು ವರ್ಷಗಳಲ್ಲಿ ರಾಜ್ಯದ 43 ಲಕ್ಷ ರೈತರಿಗೆ ಒಟ್ಟು 5,542.17 ಕೋಟಿ ರೂ. ಬೆಳೆ ವಿಮೆ ಪರಿಹಾರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಇದು ಒಟ್ಟು ನೋಂದಾಯಿತ ರೈತರ ಸರಿಸುಮಾರು ಶೇ. 60 ರಷ್ಟಿದೆ.
ರಾಜ್ಯದ ರೈತರ ಹಿತರಕ್ಷಣೆಗಾಗಿ ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 5,542.17 ಕೋಟಿ ರೂ. ಬರ ಪರಿಹಾರ ವಿತರಿಸಿದೆ.
ವಿವಿಧ ಹಂಗಾಮುಗಳಲ್ಲಿ ಒಟ್ಟು 73 ಲಕ್ಷ ರೈತರು ವಿಮಾ ಕಂತು ಪಾವತಿಸಿ ನೋಂದಾಯಿಸಿಕೊಂಡಿದ್ದರು. ಈ ಪೈಕಿ ಸರಿಸುಮಾರು ಶೇ. 60 ರಷ್ಟು (43 ಲಕ್ಷ) ರೈತರಿಗೆ ಬೆಳೆ ನಷ್ಟದ ಆಧಾರದ ಮೇಲೆ ವಿಮಾ ಮೊತ್ತವನ್ನು ಸರ್ಕಾರ ತಲುಪಿಸಿದೆ.
ವಿಮೆ ವಿತರಣೆಯಲ್ಲಿ ಪಾರದರ್ಶಕತೆ ತರಲು ಸರ್ಕಾರವು ವಿಶೇಷವಾಗಿ 'ಕಪ್ ಮತ್ತು ಕ್ಯಾಪ್' ಮಾದರಿ ಅಳವಡಿಸಿಕೊಂಡಿದೆ. ಈ ಕುರಿತು ವಿಮಾ ಕಂಪನಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿರುವ ಕೃಷಿ ಸಚಿವರು, ಬೆಳೆ ಕಟಾವು ಪ್ರಯೋಗಗಳನ್ನು ಅತ್ಯಂತ ವೈಜ್ಞಾನಿಕ ಮತ್ತು ನಿಖರವಾಗಿ ನಡೆಸುವಂತೆ ತಾಕೀತು ಮಾಡಿದ್ದಾರೆ. ಇದರಿಂದ ವಿಮಾ ಯೋಜನೆಯು ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಈ ಮಾಹಿತಿ ನೀಡಿದರು.
"ಕೃಷಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ವಿಮೆ ಪಾವತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಸುಧಾರಣೆ ತರಲಾಗಿದ್ದು, ಆಯಾ ಹಂಗಾಮಿನ ವಿಮೆ ಮೊತ್ತವನ್ನು ಅದೇ ವಾರ್ಷಿಕ ಅವಧಿಯಲ್ಲಿ ರೈತರಿಗೆ ಒದಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ" ಎಂದು ಸಚಿವರು ವಿವರಿಸಿದರು.
'ಮಿಡ್ ಸೀಸನ್ ಅಡ್ವೈಸರಿ' ನೆರವು
ಬಿತ್ತನೆ ಮಾಡಿದ ಕೆಲವೇ ದಿನಗಳಲ್ಲಿ ಅತಿವೃಷ್ಟಿಯಿಂದಾಗಿ ಶೇ. 50 ಕ್ಕಿಂತ ಹೆಚ್ಚು ಬೆಳೆ ಹಾನಿಯಾದ ಸಂದರ್ಭಗಳಲ್ಲಿ ರೈತರು ಕಂಗಾಲಾಗಬಾರದೆಂದು 'ಮಿಡ್ ಸೀಸನ್ ಅಡ್ವೈಸರಿ' ನಿಯಮಾವಳಿಯಡಿ ವಿಮೆ ಪರಿಹಾರ ನೀಡುವ ಕ್ರಮವನ್ನು ಸರ್ಕಾರ ಜಾರಿಗೆ ತಂದಿದೆ. ಇದು ರೈತರಿಗೆ ಕಷ್ಟಕಾಲದಲ್ಲಿ ಆರ್ಥಿಕ ಭದ್ರತೆ ಒದಗಿಸುತ್ತಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಪ್ರಸಕ್ತ ಮುಂಗಾರು: 3.41 ಲಕ್ಷ ರೈತರ ಖಾತೆಗೆ ಹಣ ಜಮೆ
ಪ್ರಸಕ್ತ ಮುಂಗಾರು ಹಂಗಾಮಿನ ಅಂಕಿಅಂಶಗಳನ್ನು ಹಂಚಿಕೊಂಡ ಸಚಿವರು, ಈ ಬಾರಿ 21 ಲಕ್ಷ ರೈತರು ನೋಂದಾಯಿಸಿಕೊಂಡಿದ್ದು, ಪ್ರಕೃತಿ ವಿಕೋಪ ಹಾಗೂ ಬಿತ್ತನೆ ವೈಫಲ್ಯದಡಿ 7.06 ಲಕ್ಷ ರೈತರಿಗೆ ಒಟ್ಟು 571.49 ಕೋಟಿ ರೂಪಾಯಿ ಮಂಜೂರಾಗಿದೆ. ಈಗಾಗಲೇ 3.41 ಲಕ್ಷ ರೈತರಿಗೆ 218.80 ಕೋಟಿ ರೂಪಾಯಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಲಬುರಗಿ ಜಿಲ್ಲೆಗೆ ವಿಶೇಷ ಆದ್ಯತೆ
ಕಲಬುರಗಿ ಜಿಲ್ಲೆಯ ರೈತರ ಬಗ್ಗೆ ಮಾಹಿತಿ ನೀಡಿದ ಚಲುವರಾಯಸ್ವಾಮಿ ಅವರು, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಡಿ 20,563 ಪ್ರಕರಣಗಳಿಗೆ 8.21 ಕೋಟಿ ರೂಪಾಯಿ ವಿತರಿಸಲಾಗಿದೆ. ಅಲ್ಲದೆ, ಮಧ್ಯಂತರ ಬೆಳೆ ವಿಮೆ ಪರಿಹಾರದಡಿ 2.67 ಲಕ್ಷ ರೈತರಿಗೆ 234.74 ಕೋಟಿ ರೂಪಾಯಿ ವಿಮೆ ಪರಿಹಾರ ಒದಗಿಸಿ ಜಿಲ್ಲೆಯ ರೈತರ ಬೆನ್ನಿಗೆ ನಿಂತಿದ್ದೇವೆ ಎಂದು ತಿಳಿಸಿದರು.

