ಹೊಸ ಬದುಕಿನತ್ತ 31 ಕೈದಿಗಳು: ಸನ್ನಡತೆ ಆಧಾರದ ಮೇಲೆ ಜೀವಾವಧಿ ಶಿಕ್ಷಿತರ ಬಿಡುಗಡೆ
x

ಹೊಸ ಬದುಕಿನತ್ತ 31 ಕೈದಿಗಳು: ಸನ್ನಡತೆ ಆಧಾರದ ಮೇಲೆ ಜೀವಾವಧಿ ಶಿಕ್ಷಿತರ ಬಿಡುಗಡೆ

ದೀರ್ಘಕಾಲ ಜೈಲು ಶಿಕ್ಷೆ ಅನುಭವಿಸಿ, ಜೈಲಿನಲ್ಲಿ ಉತ್ತಮ ನಡವಳಿಕೆ ತೋರಿದ ಕೈದಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಈ ಕ್ರಮ ಕೈಗೊಳ್ಳಲಾಗಿದೆ. ಒಟ್ಟು 54 ಜೀವಾವಧಿ ಶಿಕ್ಷೆ ಕೈದಿಗಳ ಪ್ರಕರಣ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ.


Click the Play button to hear this message in audio format

ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿ ದೀರ್ಘಕಾಲದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 31 ಮಂದಿ ಕೈದಿಗಳನ್ನು ಅವರ 'ಸನ್ನಡತೆ'ಯ ಆಧಾರದ ಮೇಲೆ ಅವಧಿಪೂರ್ವವಾಗಿ ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಜೈಲಿನಲ್ಲಿ ಉತ್ತಮ ನಡವಳಿಕೆ ತೋರಿದ ಕೈದಿಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಅವರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ಮಾನವೀಯ ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಸಂವಿಧಾನವು ರಾಜ್ಯಪಾಲರಿಗೆ ಶಿಕ್ಷೆಗೊಳಗಾದ ಕೈದಿಗಳ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವ ಅಥವಾ ಕ್ಷಮಾದಾನ ನೀಡುವ ವಿಶೇಷ ಅಧಿಕಾರವನ್ನು ನೀಡಿದೆ. ದೀರ್ಘಕಾಲ ಜೈಲುವಾಸ ಅನುಭವಿಸಿ, ಪಶ್ಚಾತ್ತಾಪದೊಂದಿಗೆ ಉತ್ತಮ ನಡವಳಿಕೆ ರೂಢಿಸಿಕೊಂಡ ಕೈದಿಗಳನ್ನು ಸಮಾಜಕ್ಕೆ ಮರಳಿಸುವುದು ಹಾಗೂ ಅವರ ಕುಟುಂಬದ ಪುನರ್ವಸತಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಪ್ರಮುಖ ನೀತಿಗಳಲ್ಲಿ ಒಂದಾಗಿದೆ. ಈ ಆಶಯದಡಿಯೇ ಬಿಡುಗಡೆ ಪ್ರಕ್ರಿಯೆ ನಡೆದಿದೆ.

54 ಪ್ರಕರಣಗಳ ಪರಿಶೀಲನೆ: 21 ಅರ್ಜಿ ತಿರಸ್ಕೃತ

ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮಹಾನಿರ್ದೇಶಕರು ಸಲ್ಲಿಸಿದ ಪ್ರಸ್ತಾವನೆಯನ್ನು ಆಧರಿಸಿ, ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಒಟ್ಟು 54 ಜೀವಾವಧಿ ಶಿಕ್ಷೆ ಕೈದಿಗಳ ಪ್ರಕರಣಗಳನ್ನು ಕೂಲಂಕಷವಾಗಿ ಚರ್ಚಿಸಲಾಯಿತು. ಸಮಿತಿಯು ಪರಿಶೀಲಿಸಿದ 54 ಪ್ರಕರಣಗಳ ಪೈಕಿ ಬಿಡುಗಡೆಗೆ 31 ಮಂದಿಯನ್ನು ಶಿಫಾರಸ್ಸು ಮಾಡಲಾಗಿದೆ. ಇನ್ನುಳಿದಂತೆ 21 ಕೈದಿಗಳ ಬಿಡುಗಡೆ ಅರ್ಜಿಯನ್ನು ತಿರಸ್ಕರಿಸಲಾಗಿದ್ದು, 2 ಪ್ರಕರಣಗಳು ಕೇಂದ್ರ ಗೃಹ ಸಚಿವಾಲಯದ ಅನುಮೋದನೆಗಾಗಿ ಬಾಕಿ ಉಳಿದಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಯಾವ ಕಾರಾಗೃಹದಿಂದ ಎಷ್ಟು ಕೈದಿಗಳ ಬಿಡುಗಡೆ?

ರಾಜ್ಯದ ವಿವಿಧ ಜೈಲುಗಳಿಂದ ಬಿಡುಗಡೆಗೆ ಶಿಫಾರಸ್ಸಾಗಿರುವ ಕೈದಿಗಳ ವಿವರ ಈ ಕೆಳಗಿನಂತಿದೆ:

ಬೆಂಗಳೂರು ಕೇಂದ್ರ ಕಾರಾಗೃಹ: 14 ಕೈದಿಗಳು

ವಿಜಯಪುರ: 5 ಕೈದಿಗಳು

ಬಳ್ಳಾರಿ: 3 ಕೈದಿಗಳು

ಮೈಸೂರು: 2 ಕೈದಿಗಳು

ಬೆಳಗಾವಿ: 2 ಕೈದಿಗಳು

ಕಲಬುರಗಿ: 2 ಕೈದಿಗಳು

ಶಿವಮೊಗ್ಗ (ಪುರುಷ ಮತ್ತು ಮಹಿಳಾ ವಿಭಾಗ): 2 ಕೈದಿಗಳು

ಧಾರವಾಡ: 1 ಕೈದಿ

ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆ

ಈ ಬಿಡುಗಡೆ ಪ್ರಕ್ರಿಯೆಯಲ್ಲಿ ಸುಪ್ರೀಂಕೋರ್ಟ್ ನೀಡಿದ ವಿವಿಧ ತೀರ್ಪುಗಳನ್ನು ಹಾಗೂ ಕಾಲಕಾಲಕ್ಕೆ ಹೊರಡಿಸಲಾದ ಸರ್ಕಾರಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ವಿಶೇಷವಾಗಿ ವಯಸ್ಸಾದವರು, ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರು ಮತ್ತು ಮಾನಸಿಕವಾಗಿ ಸಮಾಜಕ್ಕೆ ಮರಳಲು ಸಂಪೂರ್ಣ ಸಿದ್ಧರಿರುವವರನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

Read More
Next Story