
ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್|ಸರ್ಕಾರದ ಪಾಲಿನ 300 ಕೋಟಿ ರೂ. ನೆರವು ಬಿಡುಗಡೆ
ರೈತರು ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆ ಮಾಡಿದ ಕಬ್ಬಿನ ಪ್ರಮಾಣ ಆಧರಿಸಿ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪ್ರತಿ ಟನ್‌ಗೆ 50 ರೂ.ಗಳಂತೆ ಹಣ ಜಮಾ ಮಾಡಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ.
ರಾಜ್ಯದ ಕಬ್ಬು ಬೆಳೆಗಾರರ ಪ್ರತಿ ಟನ್ ಕಬ್ಬಿಗೆ ನಿಗದಿ ಮಾಡಿದ್ದ 50 ರೂ. ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರ ಕೊನೆಗೂ ಬಿಡುಗಡೆ ಮಾಡಿದೆ. ಬೆಳಗಾವಿ, ಬಾಗಲಕೋಟೆ, ಹಾವೇರಿ ಸೇರಿದಂತೆ ರಾಜ್ಯದ ಕಬ್ಬು ಬೆಳೆಯುವ ಜಿಲ್ಲೆಗಳ ರೈತರ 600 ಲಕ್ಷ ಮೆಟ್ರಿಕ್ ಟನ್ ಕಬ್ಬಿಗೆ 300ಕೋಟಿ ರೂ. ಪ್ರೋತ್ಸಾಹಧನ ಬಿಡುಗಡೆ ಮಾಡಿದೆ.
ಕಬ್ಬಿಗೆ ಎಫ್‌ಆರ್‌ಪಿ ದರ ಪರಿಷ್ಕರಿಸುವಂತೆಪಟ್ಟು ಹಿಡಿದು ಹೋರಾಟ ನಡೆಸಿದ್ದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಮಧ್ಯೆ ರಾಜ್ಯ ಸರ್ಕಾರ ಸಂಧಾನ ಮಾತುಕತೆ ನಡೆಸಿತ್ತು. ಬೆಳೆಗಾರರ ಹೋರಾಟಕ್ಕೆ ಮಣಿದಿದ್ದ ರಾಜ್ಯ ಸರ್ಕಾರ, ರೈತರಿಗೆ ಪ್ರತಿ ಟನ್ ಕಬ್ಬಿಗೆ 50 ರೂ. ಪ್ರೋತ್ಸಾಹಧನ ನೀಡುವುದಾಗಿ ಭರವಸೆ ನೀಡಿತ್ತು. ಅದರಂತೆ ಈಗ 300 ಕೋಟಿ ರೂ. ಪ್ರೋತ್ಸಾಹಧನ ಬಿಡುಗಡೆ ಮಾಡಿದೆ.
ಸಿಎಂ ಸಿದ್ದರಾಮಯ್ಯ ಅವರು 2025 ನ.8ರಂದು ವಿಧಾನಸೌಧದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ ದರದ ಮೇಲೆ 100 ರೂ. ಆರ್ಥಿಕ ನೆರವು ನೀಡುವ ನಿರ್ಧಾರ ಪ್ರಕಟಿಸಿದ್ದರು. ಈ ನೆರವಿನಲ್ಲಿ ರಾಜ್ಯ ಸರ್ಕಾರ 50 ರೂ. ಹಾಗೂ ಸಕ್ಕರೆ ಕಾರ್ಖಾನೆಗಳು 50 ರೂ. ನೀಡಬೇಕು ಎಂದು ತೀರ್ಮಾನಿಸಲಾಗಿತ್ತು. ಅದರಂತೆ ರಾಜ್ಯ ಸರ್ಕಾರ ತನ್ನ ಪಾಲಿನ ಆರ್ಥಿಕ ನೆರವಾದ 300 ಕೋಟಿ ರೂ. ಬಿಡುಗಡೆ ಮಾಡಿದೆ.
ರಾಜ್ಯದ ಸಕ್ಕರೆ ಕಾರ್ಖಾನೆಗಳ ಪ್ರಸ್ತಾವನೆ ಆಧರಿಸಿ ಕಬ್ಬು ಅಭಿವೃದ್ಧಿ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಲಿದ್ದಾರೆ. ರೈತರು ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆ ಮಾಡಿದ ಕಬ್ಬಿನ ಪ್ರಮಾಣ ಆಧರಿಸಿ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪ್ರತಿ ಟನ್‌ಗೆ 50 ರೂ.ಗಳಂತೆ ಜಮಾ ಮಾಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅದೇ ರೀತಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಪ್ರತಿ ಟನ್ ಕಬ್ಬಿಗೆ 50 ರೂ. ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
600 ಲಕ್ಷ ಮೆಟ್ರಿಕ್ ಟನ್ ಅಂದಾಜು
2025-26ನೇ ಸಾಲಿನ ಹಂಗಾಮಿನಲ್ಲಿ 81 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿದ್ದು, 29 ಕಾರ್ಖಾನೆಗಳಲ್ಲಿ ಕಬ್ಬು ನುರಿಸುವಿಕೆ ಮುಕ್ತಾಯವಾಗಿದೆ. ಇದುವರೆಗೆ 521 ಲಕ್ಷ ಮೆಟ್ರಿಕ್ ಕಬ್ಬು ನುರಿಸಲಾಗಿದ್ದು, ಈ ಹಂಗಾಮಿನಲ್ಲಿ ಸುಮಾರು 600 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ನಿರೀಕ್ಷೆ ಇದೆ. ಮಾರ್ಚ್ ಮೊದಲ ವಾರದ ವೇಳೆಗೆ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವಿಕೆ ಅಂತ್ಯವಾಗಲಿದ್ದು, 600 ಲಕ್ಷ ಮೆಟ್ರಿಕ್ ಟನ್ ನುರಿಸುವ ಅಂದಾಜು ಆಧರಿಸಿ 300 ಕೋಟಿ ರೂ. ಆರ್ಥಿಕ ನೆರವು ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ಎಫ್‌ಆರ್‌ಪಿ ದರ ಕಡಿಮೆಯಾಗಿದ್ದು, ಪರಿಷ್ಕರಿಸಬೇಕು ಎಂದು ಕಬ್ಬು ಬೆಳೆಗಾರರು ಹಂಗಾಮು ಆರಂಭದ ಪೂರ್ವದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಧರಣಿ ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಸಭೆ ಕರೆದಿದ್ದರು.
ರೈತರ ಅಭಿಪ್ರಾಯ ಆಲಿಸಿದ್ದ ಸಿಎಂ, ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ 100 ರೂ. ನೀಡಬೇಕು ಎಂದು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಮನವಿ ಮಾಡಿದ್ದರು. ಆದರೆ, ಕಾರ್ಖಾನೆಗಳ ಮಾಲೀಕರು, ನಷ್ಟದ ಕಾರಣ ಹೆಚ್ಚುವರಿ 100 ರೂ. ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆಗ ಮುಖ್ಯಮಂತ್ರಿಗಳು ಸರ್ಕಾರ 50 ರೂ. ಕೊಡಲಿದೆ. ಕಾರ್ಖಾನೆಗಳ ಮಾಲೀಕರು 50 ರೂ. ಕೊಡಬೇಕು ಎಂದು ನಿರ್ಧಾರ ಪ್ರಕಟಿಸಿದ್ದರು.

