
ದುಬೈ, ಬಹ್ರೇನ್‌ನಲ್ಲಿ ಸಿಲುಕಿದ ಕನ್ನಡಿಗರು; ಜಿಲ್ಲಾವಾರು ಪಟ್ಟಿ ಬಿಡುಗಡೆ
ಮಧ್ಯಪ್ರಾಚ್ಯ ದೇಶಗಳಲ್ಲಿ ಅನೇಕ ಕನ್ನಡಿಗರು ಸಿಲುಕಿರುವ ಹಿನ್ನೆಲೆ ರಾಜ್ಯ ಸರ್ಕಾರ ತುರ್ತು ಸಹಾಯವಾಣಿ ಆರಂಭಿಸಿದೆ. 080-22340676 ಅಥವಾ 22253707ಗೆ ಕರೆ ಮಾಡಬಹುದು.
ಇಸ್ರೇಲ್-ಅಮೆರಿಕ ಜಂಟಿ ವಾಯುದಾಳಿಯಲ್ಲಿ ಇರಾನ್ ಪರಮೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತೀಕಾರವಾಗಿ ದಾಳಿ ತೀವ್ರಗೊಳಿಸಿರುವ ಹಿನ್ನೆಲೆ ಮಧ್ಯಪ್ರಾಚ್ಯದ ದೇಶಗಳಲ್ಲಿ ಯುದ್ಧದ ಕಾರ್ಮೋಡ ಕವಿದಿದೆ.
ಇರಾನ್, ದುಬೈ, ಬಹ್ರೇನ್ ಸೇರಿ ಮಧ್ಯಪ್ರಾಚ್ಯದ ಹಲವು ದೇಶಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಸ್ಥಗಿತವಾಗಿರುವ ಕಾರಣ ಕನ್ನಡಿಗರು ಅತಂತ್ರರಾಗಿದ್ದಾರೆ.
ಕರ್ನಾಟಕ ಸರ್ಕಾರ ಈಗಾಗಲೇ ಕನ್ನಡಿಗರ ರಕ್ಷಣೆಗಾಗಿ ಮಧ್ಯಪ್ರಾಚ್ಯದ ಎಲ್ಲ ದೇಶಗಳಲ್ಲಿ ಸಹಾಯವಾಣಿ ಆರಂಭಿಸಿದೆ. ಅಲ್ಲದೇ ಕನ್ನಡಿಗರ ಸ್ಥಳಾಂತರಕ್ಕೆ ಅಧಿಕಾರಿಗಳ ತಂಡವನ್ನು ರಚಿಸಿದ್ದು, ಆಯಾ ದೇಶದ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಇಸ್ರೇಲ್, ಇರಾನ್, ಯುಎಇ ಮತ್ತು ಕತಾರ್ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಕ್ಷೇಮದ ಬಗ್ಗೆಯೂ ನಿರಂತರ ನಿಗಾ ವಹಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ದುಬೈ ಹಾಗೂ ಬಹ್ರೇನ್‌ನಲ್ಲಿ ಅತಂತ್ರರಾಗಿರುವ ಕನ್ನಡಿಗರ ಜಿಲ್ಲಾವಾರು ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ದುಬೈನಲ್ಲಿ ಸಿಲುಕಿರುವ ಕನ್ನಡಿಗರೆಷ್ಟು?
ದುಬೈನಲ್ಲಿ ಬಳ್ಳಾರಿಯ ೩೨ ಮಂದಿ ಸಿಲುಕಿದ್ದಾರೆ. ಬೆಂಗಳೂರು ೨೫, ಚಿಕ್ಕಬಳ್ಳಾಪುರ ೨, ಚಿಕ್ಕಮಗಳೂರು ೫, ಚಿತ್ರದುರ್ಗ೨, ದಕ್ಷಿಣ ಕನ್ನಡ ೩, ದಾವಣಗೆರೆ ೯, ಕಲಬುರಗಿ ೨, ಶಿವಮೊಗ್ಗ ೩, ಕೊಡಗು ೪, ತುಮಕೂರು ೧, ಉಡುಪಿ ೨, ವಿಜಯಪುರ ೪, ರಾಯಚೂರು ೩, ಜಿಲ್ಲೆಯ ಹೆಸರು ತಿಳಿಯದವರು ಮೂವರು ಸಿಲುಕಿಕೊಂಡಿದ್ದಾರೆ.
ಬಹ್ರೇನ್‌ನಲ್ಲಿ ಸಿಲುಕಿರುವ ಕನ್ನಡಿಗರೆಷ್ಟು?
ಬಹ್ರೇನ್‌ನಲ್ಲಿ ಒಟ್ಟು 9 ಮಂದಿ ಕನ್ನಡಿಗರು ಸಿಲುಕಿದ್ದಾರೆ. ಹಾಸನದ ನಾಲ್ವರು, ಕೊಡಗು ೧, ಉಡುಪಿ ೩, ಇತರೆ ಜಿಲ್ಲೆಯ ಒಬ್ಬರು ಇದ್ದಾರೆ. ದುಬೈನಲ್ಲಿ ಸಿಲುಕಿರುವ ಕನ್ನಡಿಗರಿಗೆ ಸಿಎಂ ಸಿದ್ದರಾಮಯ್ಯ ಅವರು ಧೈರ್ಯ ತುಂಬಿದ್ದಾರೆ. ದುಬೈ ಸೇರಿದಂತೆ ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ತವರಿಗೆ ವಾಪಸ್ ಕರೆ ತರುವ ಸಂಬಂಧ ವಿದೇಶಾಂಗ ಇಲಾಖೆ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
ಸಹಾಯವಾಣಿ ಆರಂಭ
ಮಧ್ಯಪ್ರಾಚ್ಯ ದೇಶಗಳಲ್ಲಿ ಅನೇಕ ಕನ್ನಡಿಗರು ಸಿಲುಕಿರುವ ಹಿನ್ನೆಲೆ ರಾಜ್ಯ ಸರ್ಕಾರ ತುರ್ತು ಸಹಾಯವಾಣಿ ಆರಂಭಿಸಿದೆ. 080-22340676 ಅಥವಾ 22253707ಗೆ ಕರೆ ಮಾಡಬಹುದು.

