
ಸ್ವಾಮೀಜಿಗೂ ಬಡ್ತಿ ಭಾಗ್ಯ! ರಾಜ್ಯ ಸರ್ಕಾರದ ಮಹಾ ಎಡವಟ್ಟು
ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮಹಾ ಎಡವಟ್ಟು ಬಯಲಾಗಿದೆ. ಸ್ವಯಂ ನಿವೃತ್ತಿ ಪಡೆದು ಸನ್ಯಾಸಿಯಾದ ಮಾಜಿ ಕೆ.ಎ.ಎಸ್ ಅಧಿಕಾರಿ ಹೆಚ್.ಎಲ್. ನಾಗರಾಜ್ ಅವರಿಗೆ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.
ಸರ್ಕಾರಿ ಅಧಿಕಾರಿಗಳು ಕಡತಗಳನ್ನು ವಿಲೇವಾರಿ ಮಾಡುವ ಭರದಲ್ಲಿ ಎಂತಹ ಎಡವಟ್ಟುಗಳನ್ನು ಮಾಡುತ್ತಾರೆ ಎನ್ನುವುದಕ್ಕೆ ಈಗ ರಾಜ್ಯ ಸರ್ಕಾರ ಹೊರಡಿಸಿರುವ ಒಂದು ಆದೇಶವೇ ಸಾಕ್ಷಿ. ಲೌಕಿಕ ಬದುಕಿಗೆ ವಿದಾಯ ಹೇಳಿ, ಸನ್ಯಾಸತ್ವ ಸ್ವೀಕರಿಸಿ, ಮಠದ ಪೀಠಾಧಿಪತಿಯಾಗಿರುವ ಸ್ವಾಮೀಜಿಯೊಬ್ಬರಿಗೆ ರಾಜ್ಯ ಸರ್ಕಾರ ಬಡ್ತಿ ನೀಡಿ ಆದೇಶ ಹೊರಡಿಸುವ ಮೂಲಕ ಈಗ ಎಲ್ಲರ ನಗೆಪಾಟಲಿಗೆ ಈಡಾಗಿದೆ. ದಾಖಲೆಗಳನ್ನು ಕಣ್ಮುಚ್ಚಿ ಪರಿಶೀಲಿಸುವ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಈ ಘಟನೆ ಒಂದು ಕನ್ನಡಿ ಹಿಡಿದಂತಿದೆ. ಸರ್ಕಾರದ ಈ ಆದೇಶ ಈಗ ನಗೆಪಾಟಲಿಗೆ ಈಡಾಗಿದೆ.
ರಾಜ್ಯ ಸರ್ಕಾರ ಇತ್ತೀಚೆಗೆ 20 ಕೆ.ಎ.ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವ್ ಪ್ರಸಾದ್ ಅವರು ಹೊರಡಿಸಿರುವ ಈ ಪಟ್ಟಿಯಲ್ಲಿ, ಮಂಡ್ಯದ ಮಾಜಿ ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜ್ ಅವರ ಹೆಸರೂ ಸೇರಿದೆ.
ಆದರೆ ಹೆಚ್.ಎಲ್.ನಾಗರಾಜ್ ಅವರು ಈಗಾಗಲೇ ಸರ್ಕಾರಿ ಸೇವೆಗೆ ಸ್ವಯಂ ನಿವೃತ್ತಿ ಘೋಷಿಸಿ, ಸನ್ಯಾಸತ್ವ ಸ್ವೀಕರಿಸಿ ಸ್ವಾಮೀಜಿಯಾಗಿದ್ದಾರೆ. ಆದರೂ ಅಧಿಕಾರಿಗಳು ಕಣ್ಮುಚ್ಚಿ ಅವರನ್ನು ‘ಸ್ಥಳ ನಿರೀಕ್ಷಣೆಯಲ್ಲಿರುವ ಅಧಿಕಾರಿ’ ಎಂದು ನಮೂದಿಸಿ ಬಡ್ತಿ ಪಟ್ಟಿಯಲ್ಲಿ ಸೇರಿಸಿದ್ದಾರೆ.
ಅಧಿಕಾರಿಯಿಂದ ಸ್ವಾಮೀಜಿಯಾದ ನಾಗರಾಜ್
ಹೆಚ್.ಎಲ್. ನಾಗರಾಜ್ ಅವರು ಹಿಂದೆ ಮಂಡ್ಯದಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಬಡ್ತಿ ಪಟ್ಟಿಯಲ್ಲಿರುವ ಎಚ್.ಎಲ್. ನಾಗರಾಜ್ ಅವರು ಇಂದು ಅಧಿಕಾರಿಯಾಗಿ ಉಳಿದಿಲ್ಲ. ಅವರು ಈಗಾಗಲೇ ಸರ್ಕಾರಿ ಸೇವೆಗೆ ಸ್ವಯಂ ನಿವೃತ್ತಿ (VRS) ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಶ್ರೀಗಳ ಸಮ್ಮುಖದಲ್ಲಿ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಸದ್ಯ ಅವರು ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಪೀಠಾಧಿಪತಿಯಾಗಿ ‘ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ’ ಎಂಬ ಹೆಸರಿನಲ್ಲಿ ಧಾರ್ಮಿಕ ಕೈಂಕರ್ಯಗಳಲ್ಲಿ ತೊಡಗಿದ್ದಾರೆ.
ಒಬ್ಬ ಕೆ.ಎ.ಎಸ್ ಅಧಿಕಾರಿ ಸೇವೆಯಿಂದ ನಿವೃತ್ತಿ ಪಡೆದು, ಸ್ವಾಮೀಜಿಯಾಗಿ ಬದಲಾಗಿರುವುದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಕಾರಿಗಳು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ, ಸ್ವಾಮೀಜಿಯಾದವರಿಗೂ ಪ್ರಮೋಷನ್ ನೀಡಿರುವುದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಿದೆ.

