
ಸಾಂದರ್ಭಿಕ ಚಿತ್ರ
ಮೂತ್ರಪಿಂಡ ರೋಗಿಗಳಿಗೆ ವರವಾದ ಹೊಸ ಮಾರ್ಗಸೂಚಿ; ಇನ್ಮುಂದೆ 'ಬಹು ಜೋಡಿ ವಿನಿಮಯ ಕಸಿ'ಗೆ ಅವಕಾಶ!
ಸ್ವಂತ ಕುಟುಂಬದ ದಾನಿಯೊಂದಿಗೆ ರಕ್ತದ ಗುಂಪು ಹೊಂದಾಣಿಕೆಯಾಗುತ್ತಿಲ್ಲ ಎಂಬ ಬಗ್ಗೆ ಅಧಿಕೃತ ವೈದ್ಯಕೀಯ ಪ್ರಮಾಣಪತ್ರ ಇರಬೇಕು. ದಾನಿಗಳ ನಡುವೆ ಯಾವುದೇ ರೀತಿಯ ಹಣದ ವ್ಯವಹಾರ ಅಥವಾ ವಾಣಿಜ್ಯ ಉದ್ದೇಶ ಇರಬಾರದು ಎಂದು ಕಾಯ್ದೆಯಲ್ಲಿ ತಿಳಿಸಿದೆ.
ದಾನಿಗಳ ಕೊರತೆಯಿಂದಾಗಿ ಮೂತ್ರಪಿಂಡ (Kidney) ಕಸಿಗಾಗಿ ಕಾಯುತ್ತಿರುವ ಸಾವಿರಾರು ರೋಗಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ರಾಜ್ಯದಲ್ಲಿ ಇನ್ನು ಮುಂದೆ ಇಬ್ಬರಿಗಿಂತ ಹೆಚ್ಚು ಜೋಡಿಗಳ ನಡುವೆ ಮೂತ್ರಪಿಂಡ ವಿನಿಮಯ ಮಾಡಿಕೊಳ್ಳುವ 'ಬಹು ಜೋಡಿ ಮೂತ್ರಪಿಂಡ ವಿನಿಮಯ ಕಸಿ' ಪ್ರಕ್ರಿಯೆಗೆ ಅಧಿಕೃತ ಆಡಳಿತಾತ್ಮಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.
ಸಾಮಾನ್ಯವಾಗಿ ರೋಗಿಯ ಕುಟುಂಬದಲ್ಲಿ ದಾನಿ ಲಭ್ಯವಿದ್ದರೂ, ರಕ್ತದ ಗುಂಪು ಹೊಂದಾಣಿಕೆಯಾಗದ ಕಾರಣ ಕಸಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಇಬ್ಬರು ಬೇರೆ ಬೇರೆ ಜೋಡಿಗಳು ತಮ್ಮ ದಾನಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಈ ಹಿಂದೆ ಅವಕಾಶವಿತ್ತು. ಆದರೆ ಈಗ ಬಿಡುಗಡೆಯಾಗಿರುವ ಹೊಸ ಮಾರ್ಗಸೂಚಿಯಂತೆ, ಮೂರು ಅಥವಾ ಅದಕ್ಕಿಂತ ಹೆಚ್ಚು ಜೋಡಿಗಳು ಒಟ್ಟಾಗಿ ಮೂತ್ರಪಿಂಡಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸರ್ಕಾರದ ಷರತ್ತುಗಳೇನು ?
ಅಂಗಾಂಗ ಕಸಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಸರ್ಕಾರ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. ನೂತನ ತೋಟಾ (THOTA ಕಾಯ್ದೆಯಡಿ) ದಾನಿಯು ಕಡ್ಡಾಯವಾಗಿ ಸ್ವೀಕರಿಸುವ ರೋಗಿಯ 'ಸಮೀಪ ಸಂಬಂಧಿ' ಆಗಿರಬೇಕು. ಸ್ವಂತ ಕುಟುಂಬದ ದಾನಿಯೊಂದಿಗೆ ರಕ್ತದ ಗುಂಪು ಹೊಂದಾಣಿಕೆಯಾಗುತ್ತಿಲ್ಲ ಎಂಬ ಬಗ್ಗೆ ಅಧಿಕೃತ ವೈದ್ಯಕೀಯ ಪ್ರಮಾಣಪತ್ರ ಇರಬೇಕು. ದಾನಿಗಳ ನಡುವೆ ಯಾವುದೇ ರೀತಿಯ ಹಣದ ವ್ಯವಹಾರ ಅಥವಾ ವಾಣಿಜ್ಯ ಉದ್ದೇಶ ಇರಬಾರದು. ಒಂದು ವೇಳೆ ಮಧ್ಯವರ್ತಿಗಳ ಹಾವಳಿ ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು. ವಿನಿಮಯ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಜೋಡಿಗಳಿಗೆ ಸಾಮಾನ್ಯವಾಗಿ ಏಕಕಾಲದಲ್ಲೇ ಶಸ್ತ್ರಚಿಕಿತ್ಸೆ ನಡೆಸಬೇಕು. ಪ್ರತಿಯೊಬ್ಬ ದಾನಿ ಮತ್ತು ಸ್ವೀಕರಿಸುವವರ ಸಂದರ್ಶನವನ್ನು ವಿಡಿಯೋ ರೆಕಾರ್ಡ್ ಮಾಡುವುದು ಕಡ್ಡಾಯ ಎಂದು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.
ಅನುಮೋದನೆ ಹೇಗೆ?
ರಾಜ್ಯ ಮಟ್ಟದ ಅಧಿಕಾರ ಸಮಿತಿಯು ಈ ಎಲ್ಲಾ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಮೂರು ಅಥವಾ ಹೆಚ್ಚಿನ ಜೋಡಿಗಳ ವಿನಿಮಯಕ್ಕೆ ಈ ಸಮಿತಿಯ ಪೂರ್ವಾನುಮತಿ ಕಡ್ಡಾಯವಾಗಿದೆ. ಕಸಿ ಪ್ರಕ್ರಿಯೆ ಮುಗಿದ ನಂತರ 'ಜೀವಸಾರ್ಥಕತೆ' (SOTTO) ಸಂಸ್ಥೆಗೆ ಕಡ್ಡಾಯವಾಗಿ ವರದಿ ಸಲ್ಲಿಸಬೇಕು. ಭಾರತದ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನ ಮತ್ತು ವೈಜ್ಞಾನಿಕ ಒಮ್ಮತದ ಆಧಾರದ ಮೇಲೆ ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಇದು ಕರ್ನಾಟಕದ ನೋಂದಾಯಿತ ಎಲ್ಲಾ ಅಂಗಾಂಗ ಕಸಿ ಆಸ್ಪತ್ರೆಗಳಿಗೆ ಅನ್ವಯವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿ.ಎಸ್ ಕಾಯ್ದೆಯಲ್ಲಿ ತಿಳಿಸಿದ್ದಾರೆ.
ಫಲಾನುಭವಿಗಳಿಗೆ ಆಶಾಕಿರಣ
ರಕ್ತದ ಗುಂಪು ಹೊಂದಾಣಿಕೆಯಾಗದ ಕಾರಣ ಸಾವಿರಾರು ರೋಗಿಗಳು ಡಯಾಲಿಸಿಸ್‌ನಲ್ಲೇ ಕಾಲ ಕಳೆಯುತ್ತಿದ್ದರು. ಈಗ ಮೂವರು ದಾನಿಗಳ ನಡುವಿನ ವಿನಿಮಯಕ್ಕೆ ಅವಕಾಶ ಸಿಕ್ಕಿರುವುದರಿಂದ, ಹೊಂದಾಣಿಕೆಯಾಗುವ ದಾನಿಗಳು ಸಿಗುವ ಸಾಧ್ಯತೆ ಹೆಚ್ಚಾಗಿದೆ. ಇದು ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ.

