Mobile addiction of 99% of children in the state is shocking: Speaker Basavaraj Horatti
x
ಮೊಬೈಲ್‌ ನೋಡುತ್ತಿರುವ ವಿದ್ಯಾರ್ಥಿಗಳು ಸಾಂದರ್ಭಿಕ ಚಿತ್ರ

ಮೊಬೈಲ್ ಬಳಕೆ ನಿಷೇಧ ಚಿಂತನೆ| ಮಕ್ಕಳ ಹಕ್ಕುಗಳ ಉಲ್ಲಂಘನೆ?

16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಫೋನ್ ಬಳಕೆ ನಿಷೇಧಿಸುವ ವಿಚಾರ ಇನ್ನೂ ಚರ್ಚೆಯ ಹಂತದಲ್ಲಿದೆ. ತಜ್ಞರ ಅಭಿಪ್ರಾಯಗಳನ್ನು ಸ್ವೀಕರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸುವ ಕುರಿತಂತೆ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಶಾಲಾ ಮಕ್ಕಳಿಗೆ ಮೊಬೈಲ್‌ ಬಳಕೆ ನಿಷೇಧಿಸಲು ಸರ್ಕಾರ ಚಿಂತನೆ ನಡೆಸುತ್ತಿರುವ ಬೆನ್ನಲ್ಲೇ ಮಕ್ಕಳ ಹಕ್ಕುಗಳ ಕಾರ್ಯಕರ್ತರು ಹಾಗೂ ಕೆಲ ಶಿಕ್ಷಕರು ʼಸಂಪೂರ್ಣ ನಿಷೇಧʼಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಶಾಲೆಗಳಲ್ಲಿ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸಲು ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಲು ತೀರ್ಮಾನಿಸಿದೆ. ಆದರೆ, ಈ ವಿಷಯದಲ್ಲಿ ಮಕ್ಕಳ ಅಭಿಪ್ರಾಯಕ್ಕೂ ಮನ್ನಣೆ ನೀಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಮಕ್ಕಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡರೂ ಅವರ ಅಭಿಪ್ರಾಯ ಆಲಿಸದಿದ್ದರೆ ಮಕ್ಕಳ ಹಕ್ಕುಗಳ ನೇರ ಉಲ್ಲಂಘನೆ ಆಗಲಿದೆ ಎನ್ನುತ್ತಾರೆ ಮಕ್ಕಳ ಹಕ್ಕುಗಳ ಕಾರ್ಯಕರ್ತರು.

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ 12ರ ಪ್ರಕಾರ, ಮಕ್ಕಳು ತಮಗೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ಅಭಿಪ್ರಾಯ ಹೇಳುವ ಹಕ್ಕು ಪಡೆದಿದ್ದಾರೆ. ಇಂತಹ ಅಭಿಪ್ರಾಯವು ಮಕ್ಕಳ ವಯಸ್ಸು ಮತ್ತು ಪ್ರಬುದ್ಧತೆಗೆ ಅನುಗುಣವಾಗಿ ಇರಲಿದೆ. ಮಕ್ಕಳ ಭಾಗವಹಿಸುವಿಕೆ ಗೌರವಿಸುವುದೂ ಕೂಡ ಮೂಲಭೂತ ಹಕ್ಕು ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.

ರಾಷ್ಟ್ರೀಯ ಮಕ್ಕಳ ನೀತಿ ಹೇಳುವುದೇನು?

2013ರ ರಾಷ್ಟ್ರೀಯ ಮಕ್ಕಳ ನೀತಿಯು ಮಕ್ಕಳ ಬದುಕುವಿಕೆ, ಆರೋಗ್ಯ, ಶಿಕ್ಷಣ, ರಕ್ಷಣೆ ಮತ್ತು ಭಾಗವಹಿಸುವಿಕೆ ಹಕ್ಕುಗಳನ್ನು ಆದ್ಯತೆಯನ್ನಾಗಿ ಗುರುತಿಸಿದೆ. ಈ ನೀತಿಯು ಮಕ್ಕಳನ್ನು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೇರೇಪಿಸಲಿದೆ.

ಈಗಾಗಲೇ ಹಲವು ದೇಶಗಳು ಮತ್ತು ರಾಜ್ಯಗಳು ಮಕ್ಕಳಿಗೆ ಮೊಬೈಲ್ ಫೋನ್ ಬಳಕೆ ನಿಷೇಧಿಸಿವೆ. ಶಾಲೆಗಳಲ್ಲೂ ಮೊಬೈಲ್ ಬಳಕೆ ನಿರ್ಬಂಧಿಸಲಾಗಿದೆ. ಕರ್ನಾಟಕದಲ್ಲಿ16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸುವ ನಿರ್ಧಾರ ಕೈಗೊಳ್ಳುವ ಮೊದಲು ಮಕ್ಕಳ ಅಭಿಪ್ರಾಯವನ್ನೂ ಪರಿಗಣಿಸಬೇಕು ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಗ ರಾವ್‌ ಆಗ್ರಹಿಸಿದ್ದಾರೆ.

ಮಾರ್ಗಸೂಚಿ ಹೊರಡಿಸಲು ಒತ್ತಾಯ

ಮೊಬೈಲ್‌ ಬಳಕೆಯ ಪರಿಣಾಮಗಳನ್ನು ಅಧ್ಯಯನ ನಡೆಸಲು ಎರಡು ವರ್ಷಗಳ ಹಿಂದೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ರಾಜ್ಯದ ಐದು ಜಿಲ್ಲೆಗಳಲ್ಲಿ 8 ರಿಂದ 18 ವರ್ಷದೊಳಗಿನ ಮಕ್ಕಳ ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಶೇ 43 ರಷ್ಟು ಮಕ್ಕಳು ದೌರ್ಜನ್ಯ, ಕಿರುಕುಳ ಹಾಗೂ ಹಲ್ಲೆಗೆ ಒಳಗಾಗುತ್ತಿರುವ ಸಂಗತಿ ಬಯಲಾಗಿತ್ತು. ಈ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು.

ಶಾಲಾ ಮಕ್ಕಳಿಗೆ ʼಸುರಕ್ಷಿತ ಸಾಮಾಜಿಕ ಜಾಲತಾಣʼ ಬಳಕೆಗೆ ಅಗತ್ಯವಾದ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಐಟಿ ಬಿಟಿ ಸಚಿವರಿಗೆ ಮನವಿ ಮಾಡಲಾಗಿತ್ತು. ಈಗ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆಯೋ ನೋಡಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್‌ ಕೋಸುಂಬೆ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಬೇರೆ ದೇಶಗಳಲ್ಲಿ ಮೊಬೈಲ್ ನಿಷೇಧ ಹೇಗಿದೆ?

ಫ್ರಾನ್ಸ್‌ನಲ್ಲಿ 2018ರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮೊಬೈಲ್ ನಿಷೇಧವಿದೆ. ಚೀನಾದಲ್ಲಿ 2021 ರಿಂದ ಶಾಲೆಗಳಲ್ಲಿ ಮೊಬೈಲ್ ನಿರ್ಬಂಧ ಇದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ನೆದರ್ಲೆಂಡ್, ಮಲೇಷ್ಯಾ ಮತ್ತು ಬ್ರೆಜಿಲ್‌ಗಳಲ್ಲೂ ಇದೇ ರೀತಿಯ ನಿಯಮಗಳಿವೆ. ನೇಪಾಳದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ನಿರ್ಬಂಧಿಸಿದ್ದರಿಂದ ದೊಡ್ಡ ದಂಗೆ ಎದುರಾಗಿತ್ತು.

“ಅನೇಕ ಮಕ್ಕಳು ಮೊಬೈಲ್ ಫೋನ್‌ಗಳನ್ನು ಸೃಜನಾತ್ಮಕವಾಗಿ ಬಳಸುತ್ತಿದ್ದಾರೆ. ಶಿಕ್ಷಣ, ಕಲಿಕೆ, ಸಂವಹನ ಮತ್ತು ಹೊಸ ಕೌಶಲಗಳ ಅಭಿವೃದ್ಧಿಗಾಗಿಯೂ ಬಳಸುತ್ತಿದ್ದಾರೆ. ಸಂಪೂರ್ಣ ಮೊಬೈಲ್‌ ನಿಷೇಧದ ಬದಲು ನಿಯಂತ್ರಿತ ಬಳಕೆಗೆ ಪ್ರೋತ್ಸಾಹಿಸಬಹುದು” ಎಂದು ನಾಗಸಿಂಗ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಯಾವೆಲ್ಲಾ ಕ್ರಮಗಳು ಅಗತ್ಯ

ಮಕ್ಕಳು ತಮ್ಮ ಅಭಿಪ್ರಾಯ ತಿಳಿಸಲು ಆನ್ ಲೈನ್ ವೇದಿಕೆ ರಚಿಸಬೇಕು.

ಶಾಲೆಗಳಲ್ಲಿ ಮಕ್ಕಳ ಸಮಾಲೋಚನೆ ಸಭೆಗಳನ್ನುಆಯೋಜಿಸಿ, ಅಭಿಪ್ರಾಯ ಸಂಗ್ರಹಿಸಬೇಕು.

ತಜ್ಞರ ಸಮಿತಿಯಲ್ಲಿ ಮಕ್ಕಳ ಪ್ರತಿನಿಧಿಗಳನ್ನು ಸೇರಿಸಿ ಅಥವಾ ಅವರ ಅಭಿಪ್ರಾಯ ಪರಿಗಣಿಸಬೇಕು.

ಚರ್ಚೆಯ ಹಂತದಲ್ಲಿ ಮೊಬೈಲ್ ಬಳಕೆ ನಿಷೇಧ

16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಫೋನ್ ಬಳಕೆ ನಿಷೇಧಿಸುವ ವಿಚಾರ ಇನ್ನೂ ಚರ್ಚೆಯ ಹಂತದಲ್ಲಿದೆ. ತಜ್ಞರ ಅಭಿಪ್ರಾಯಗಳನ್ನು ಸ್ವೀಕರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಮಕ್ಕಳಿಗೆ ಮೊಬೈಲ್‌ ಬಳಕೆ ನಿಷೇಧಿಸುವಂತೆ ಪೋಷಕರಿಂದಲೂ ಒತ್ತಡವಿದ್ದು, ಅನೇಕ ದೇಶಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಮೊಬೈಲ್ಗಳ ದುರುಪಯೋಗ ಹೇಗೆ ನಡೆಯುತ್ತಿದೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಚರ್ಚೆಗಳು ನಡೆಯುತ್ತಿವೆ. ಹಲವಾರು ದೇಶಗಳು ಮಕ್ಕಳಿಗೆ ಮೊಬೈಲ್ ನಿಷೇಧ ಮಾಡಿವೆ. ಈ ವಿಷಯ ಜಾಗತಿಕ ಮಟ್ಟದಲ್ಲಿಯೂ ಚರ್ಚೆಯಲ್ಲಿದೆ ಎಂದು ತಿಳಿಸಿದ್ದಾರೆ.

ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧವೇಕೆ ?

ಶಾಲೆಯಲ್ಲಿ ಮೊಬೈಲ್ ಬಳಕೆಗೆ ಅನುಮತಿ ಕೊಟ್ಟರೆ ವಿದ್ಯಾರ್ಥಿಗಳು ಪಾಠದ ಸಮಯದಲ್ಲೂ ಮೊಬೈಲ್‌ನಲ್ಲಿ ಮಗ್ನರಾಗಿರುತ್ತಾರೆ. ವಿದ್ಯಾರ್ಥಿಗಳು ಪಾಠದ ಕಡೆಗೆ ಗಮನ ಹರಿಸುವುದಿಲ್ಲ ಎಂಬುವುದು ಶಿಕ್ಷಕರ ಆರೋಪವಾಗಿದೆ.

ಮೊಬೈಲ್ ಬಳಕೆಗೆ ಸರ್ಕಾರ ಅನುಮತಿ ನೀಡಿದರೆ ವಿದ್ಯಾರ್ಥಿಗಳಲ್ಲಿ ಅಶಿಸ್ತಿನ ವರ್ತನೆ ಹೆಚ್ಚಲಿದೆ. ಶಾಲೆಯಲ್ಲಿನ ಕಲಿತಾ ವಾತಾವರಣ ಹಾಳಾಗಲಿದೆ. ಮುಖ್ಯವಾಗಿ ಶೈಕ್ಷಣಿಕ ಪ್ರಗತಿಗೆ ಹಿನ್ನೆಡೆ ಉಂಟು ಮಾಡುತ್ತದೆ ಎನ್ನುತ್ತಾರೆ.

ಮಕ್ಕಳು ಅನಿಯಮಿತವಾಗಿ ಮೊಬೈಲ್ ಬಳಸಿದರೆ ಸೈಬರ್ ಅಪರಾಧಗಳಿಗೆ ಆಸ್ಪದ ನೀಡಿದಂತಾಗುತ್ತದೆ. ಆನ್‌ಲೈನ್‌ ವಂಚನೆ, ಡಿಜಿಟಲ್ ಅರೆಸ್ಟ್ ಹಾಗೂ ಆನ್‌ಲೈನ್‌ ಗೇಮ್‌ಗಳಿಗೆ ದಾಸರಾಗುವ ಸಾಧ್ಯತೆ ಇರಲಿದೆ. ಅದಕ್ಕಿಂತ ಮುಖ್ಯವಾಗಿ ಮೊಬೈಲ್ ಬಳಕೆ ವ್ಯಸನವಾಗಿ ಮಾರ್ಪಟ್ಟು, ಮಕ್ಕಳು ಆತಂಕ, ಖಿನ್ನತೆ, ಕೀಳರಿಮೆ ಹಾಗೂ ನಿದ್ರಾಹೀನತೆಗೆ ತುತ್ತಾಗಲಿದ್ದಾರೆ. ಈ ಎಲ್ಲಾ ಕಾರಣಗಳಿಂದ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸಬೇಕು ಎಂಬ ವಾದಗಳು ಕೇಳಿಬರುತ್ತಿವೆ.

ಮೊಬೈಲ್ ನಿಷೇಧಕ್ಕೆ ವಿರೋಧವೇನು?

ಇನ್ನೂ ಕೆಲ ಶಿಕ್ಷಕರು ಮೊಬೈಲ್ ಬಳಕೆಯ ಪರವಾಗಿ ವಾದ ಮಂಡಿಸುತ್ತಿದ್ದಾರೆ. ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ಜಗತ್ತು ಆಧುನಿಕತೆಗೆ ಒಗ್ಗಿಕೊಳ್ಳುತ್ತಿದೆ. ಶಿಕ್ಷಣ ವ್ಯವಸ್ಥೆಯಲ್ಲೂ ಹೊಸತನ ಅಗತ್ಯವಾಗಿದೆ. ಶಾಲೆಗಳಲ್ಲಿ ಮೊಬೈಲ್ ಬಳಕೆಗೆ ಅನುಮತಿ ನೀಡುವುದು ತಪ್ಪಲ್ಲ. ಆದರೆ, ಕೆಲ ನಿರ್ಬಂಧಗಳನ್ನು ವಿಧಿಸುವ ಮೂಲಕ ದುರ್ಬಳಕೆ ತಡೆಯಬಹುದು ಎಂದು ಹೇಳುತ್ತಾರೆ.

ಕೋವಿಡ್‌ಗೂ ಮುನ್ನ ರಾಜ್ಯದ ಬಹುತೇಕ ಶಾಲಾ - ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧವಿತ್ತು. ಕೋವಿಡ್ ನಂತರ ಆನ್‌ಲೈನ್‌ ಕ್ಲಾಸ್, ಇತರೆ ಕಾರಣಗಳಿಂದ ಮೊಬೈಲ್ ಬಳಕೆ ಸಾಮಾನ್ಯವಾಗಿದೆ. ಕೆಲವು ಶಾಲಾ - ಕಾಲೇಜುಗಳು ಮೊಬೈಲ್ ಬಳಕೆ ನಿರ್ಬಂಧಿಸಿ, ಸ್ವಯಂಪ್ರೇರಿತ ನಿರ್ಧಾರ ತೆಗೆದುಕೊಂಡಿವೆ. ಬೆಳಗಾವಿಯ ಹಲಗಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗ್ರಾಮಸ್ಥರು ಹಾಗೂ ಶಿಕ್ಷಣ ಇಲಾಖೆಗಳು ಸ್ವಯಂಪ್ರೇರಿತರಾಗಿ ಟಿವಿ, ಮೊಬೈಲ್ ನಿಷೇಧಿಸಿದ್ದವು.

Read More
Next Story