Govt Doctors Strike|ಆಸ್ಪತ್ರೆಗಳಲ್ಲಿಲ್ಲ ಔಷಧ; ಮಾ.11ರಿಂದ ಒಪಿಡಿ ಬಂದ್‌, ವೈದ್ಯರ ಪಿಜಿ ಕನಸು ಭಗ್ನ
x
ಹಾವೇರಿ ಜಿಲ್ಲಾಸ್ಪತ್ರೆ ಸಂಗ್ರಹ ಚಿತ್ರ

Govt Doctors Strike|ಆಸ್ಪತ್ರೆಗಳಲ್ಲಿಲ್ಲ ಔಷಧ; ಮಾ.11ರಿಂದ ಒಪಿಡಿ ಬಂದ್‌, ವೈದ್ಯರ ಪಿಜಿ ಕನಸು ಭಗ್ನ

ವೈದ್ಯರ ಬೇಡಿಕೆ, ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ಮಾ. 11 ರಿಂದ ರಾಜ್ಯವ್ಯಾಪಿ ಒಪಿಡಿ ಬಂದ್‌ ಮಾಡಲು ನಿರ್ಧರಿಸಲಾಗಿದೆ.


ಬಡ ಮತ್ತು ಮಧ್ಯಮ ವರ್ಗದ ಜನರ ಜೀವರಕ್ಷಕ ಕೇಂದ್ರಗಳಂತಿರುವ ಸರ್ಕಾರಿ ಆಸ್ಪತ್ರೆಗಳು ವೈದ್ಯರು, ಸಿಬ್ಬಂದಿ ಹಾಗೂ ಔಷಧಗಳ ಕೊರತೆಯಿಂದ ರೋಗಗ್ರಸ್ತ ಸ್ಥಿತಿ ತಲುಪಿವೆ.

ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧ ಕೇಂದ್ರಗಳ ಸ್ಥಗಿತದ ಬೆನ್ನಲ್ಲೇ ಕಳೆದ ಮೂರು ತಿಂಗಳಿಂದ ಔಷಧ ಪೂರೈಸದಿರುವುದು ವೈದ್ಯರು ಹಾಗೂ ರೋಗಿಗಳ ಸಿಟ್ಟಿಗೆ ಕಾರಣವಾಗಿದೆ. ಇದು ಸಾರ್ವಜನಿಕರನ್ನು ಆಸ್ಪತ್ರೆಗಳಿಂದ ದೂರ ಉಳಿಯುವಂತೆ ಮಾಡಿದೆ.

ನೇಮಕಾತಿ ಪ್ರಕ್ರಿಯೆ ವಿಳಂಬದಿಂದ ಈಗಾಗಲೇ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯಿದೆ. ಮೇಲ್ನೋಟಕ್ಕೆ ಆಸ್ಪತ್ರೆಗಳಲ್ಲಿ ಕಾಣಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಉನ್ನತ ಸ್ಥಾನಗಳಲ್ಲಿ ಕುಳಿತಿರುವ ಹಿರಿಯ ಅಧಿಕಾರಿಗಲೇ ನೇರ ಹೊಣೆ ಎಂಬ ಆರೋಪಗಳು ಇಲಾಖೆಯಲ್ಲೇ ಕೇಳಿಬರುತ್ತಿದೆ.

ವೈದ್ಯರ ಬೇಡಿಕೆಗಳು, ಆಸ್ಪತ್ರೆಯಲ್ಲಿರುವ ಸಮಸ್ಯೆಗಳ ಇತ್ಯರ್ಥಕ್ಕೆ ಆಗ್ರಹಿಸಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ಮಾ.11 ರಿಂದ 15 ರವರೆಗೆ ರಾಜ್ಯವ್ಯಾಪಿ ಒಪಿಡಿ ಬಂದ್‌ ಮಾಡಲು ನಿರ್ಧರಿಸಲಾಗಿದೆ. ಮಾ.16 ರಿಂದ ಎರಡನೇ ಹಂತದ ಮುಷ್ಕರಕ್ಕೆ ತೀರ್ಮಾನಿಸಲಾಗಿದೆ. ವೈದ್ಯರ ಜೊತೆಗೆ ಎನ್‌ಎಚ್‌ಎಂ ಸಿಬ್ಬಂದಿ ಕೂಡ ಮುಷ್ಕರಕ್ಕೆ ನಿರ್ಧರಿಸಿರುವುದರಿಂದ ಆರೋಗ್ಯ ಸೇವೆ ವ್ಯತ್ಯಯವಾಗುವ ಸಾಧ್ಯತೆಗಳಿವೆ.

ಐಎಎಸ್ ಅಧಿಕಾರಿಗಳ ಕಪಿಮುಷ್ಠಿ

ಕರ್ನಾಟಕದ ಆರೋಗ್ಯ ಕ್ಷೇತ್ರವು ಐಎಎಸ್‌ ಅಧಿಕಾರಿಗಳ ಕಪಿಮುಷ್ಠಿಯಲ್ಲಿದೆ. ಆರೋಗ್ಯ ಕ್ಷೇತ್ರದಲ್ಲಿ ನೇಮಕಾತಿಗೆ ಇರುವ ನಿಗಮ, ತಾಯಿ ಮಕ್ಕಳ ಆಸ್ಪತ್ರೆಗಳಲ್ಲಿ ಐಎಎಸ್‌ ಅಧಿಕಾರಿಗಳೇ ತಾಂತ್ರಿಕ ಸಮಿತಿಗಳಲ್ಲಿ ಇದ್ದಾರೆ. ತಜ್ಞ ವೈದ್ಯರಿಲ್ಲದೇ ಅಧಿಕಾರಿಗಳಿಂದ ಆಸ್ಪತ್ರೆಗೆ ಬೇಕಾದ ಅಗತ್ಯಗಳನ್ನು ಹೇಗೆ ನಿರೀಕ್ಷಿಸಬಹುದು ಎಂದು ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ರವೀಂದ್ರನಾಥ್‌ ಮೇಟಿ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಆರೋಗ್ಯ ಇಲಾಖೆಯಲ್ಲಿ ಆಯಕಟ್ಟಿನ ಜಾಗಗಳಲ್ಲಿ ಏಳು ಮಂದಿ ಐಎಎಸ್‌ ಅಧಿಕಾರಿಗಳಿದ್ದಾರೆ. 2022ರಿಂದ ಸರ್ಕಾರಿ ವೈದ್ಯರ ನೇಮಕಾತಿ ನಡೆದಿಲ್ಲ. ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಔಷಧ ಪೂರೈಸಲು ರಾಜ್ಯಮಟ್ಟದಲ್ಲೇ ನಿರ್ಧಾರವಾಗಬೇಕು. ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಲು ಸಿದ್ಧವಿದ್ದರೂ ಅಧಿಕಾರಿಗಳ ವಿಳಂಬ ಧೋರಣೆಯಿಂದ ಆಸ್ಪತ್ರೆಗಳು ಕಳಂಕ ಹೊರುವಂತಾಗಿವೆ ಎಂದು ವೈದ್ಯರು ದೂರಿದ್ದಾರೆ.

ಕಾಡುತ್ತಿದೆ ಸಿಬ್ಬಂದಿ ಕೊರತೆ

ಆರೋಗ್ಯ ಇಲಾಖೆಯಲ್ಲಿ ಒಟ್ಟು ಮಂಜೂರಾದ 74,799 ಹುದ್ದೆಗಳಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಆರೋಗ್ಯ ಯೋಜನೆಗಳಲ್ಲೂ ಸಿಬ್ಬಂದಿ ಕೊರತೆಯಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಸೇರಿದಂತೆ ಹಲವು ಯೋಜನೆಗಳು ಗುತ್ತಿಗೆ, ಹೊರಗುತ್ತಿಗೆ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಸಹ ಆರೋಗ್ಯ ಕ್ಷೇತ್ರದ ಸುಧಾರಣೆಗೆ ದೊಡ್ಡ ಸಮಸ್ಯೆಯಾಗಿದೆ.

ಗ್ರಾಮೀಣ ಭಾಗದ ತಾಲೂಕು ಆಸ್ಪತ್ರೆಗಳಲ್ಲಿ ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು ಮತ್ತು ಅರಿವಳಿಕೆ ತಜ್ಞರ ಕೊರತೆ ಹೆಚ್ಚಿದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ರೋಗಿಗಳು ನಗರ ಪ್ರದೇಶದ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗಿದೆ. ಇದಕ್ಕಾಗಿ ಲಕ್ಷಾಂತರ ರೂ. ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಜಿಲ್ಲಾ ಆಸ್ಪತ್ರೆ ಹೊರತುಪಡಿಸಿದರೆ ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಮತ್ತು ಐಸಿಯು ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನಲಾಗಿದೆ.

ಖಾಸಗಿ ಸಂಸ್ಥೆಗಳ ಲಾಬಿ

ಆರೋಗ್ಯ ಕ್ಷೇತ್ರದ ಹಿನ್ನಡೆಗೆ ಉನ್ನತ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಖಾಸಗಿ ಆಸ್ಪತ್ರೆಗಳ ಲಾಬಿಯೇ ಪ್ರಮುಖ ಕಾರಣ ಎಂಬುದು ಮತ್ತೊಂದು ಆರೋಪವಾಗಿದೆ. ಕಳೆದ 15 ವರ್ಷಗಳಲ್ಲಿ ಆರೋಗ್ಯ ಇಲಾಖೆ ಸಾಕಷ್ಟು ಸುಧಾರಣೆ ಕಂಡಿತ್ತು. ಪ್ರಸ್ತುತ, ಹಿರಿಯ ಅಧಿಕಾರಿಗಳ ನಿಷ್ಕ್ರಿಯತೆಯಿಂದ ಆ ಸುಧಾರಣೆ 2010-12 ನೇ ಸಾಲಿನ ಸ್ಥಿತಿಗೆ ಬಂದು ನಿಂತಿದೆ ಎಂದು ಹೆಸರು ಹೇಳಲು ಇಚ್ಛಿಸದ ಸರ್ಕಾರಿ ವೈದ್ಯರೊಬ್ಬರು ʼದ ಫೆಡರಲ್‌ ಕರ್ನಾಟಕʼದ ಬಳಿ ಅಸಮಾಧಾನ ತೋಡಿಕೊಂಡರು.

ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು, ದೇವನಹಳ್ಳಿ ತಾಲೂಕಿನ ವಿಜಯಪುರ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮುಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ದೂರಿದ್ದಾರೆ.

ಸೇವೆಯಲ್ಲಿರುವವರಿಗೆ ಪಿಜಿ ಭಾಗ್ಯವಿಲ್ಲ

ಸೇವೆಯಲ್ಲಿರುವ ಮಧ್ಯಮ ಹಾಗೂ ಬಡ ವರ್ಗದ ವೈದ್ಯರಿಗೆ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ಇಲಾಖೆಯೇ ನೆರವು ನೀಡುತ್ತಿತ್ತು. ಈಗ ಆ ನಿಯಮಗಳನ್ನು ಪರಿಷ್ಕರಿಸಿದ್ದು, ಬಹುತೇಕರಿಗೆ ಸ್ನಾತಕೋತ್ತರ ಪದವಿಯ ಅವಕಾಶ ಕೈ ತಪ್ಪಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಈ ಹಿಂದೆ ಸೇವೆಯಲ್ಲಿರುವ ಎಂಬಿಬಿಎಸ್ ವೈದ್ಯರು 10 ವರ್ಷಗಳ ಮುಚ್ಚಳಿಕೆ(ಸರ್ಕಾರಿ ಸೇವೆಯಲ್ಲಿ ಇರುತ್ತೇವೆ) ಬರೆದುಕೊಟ್ಟು ಪಿಜಿ ವ್ಯಾಸಂಗ ಮಾಡುತ್ತಿದ್ದರು. ಆರೋಗ್ಯ ಇಲಾಖೆಯೇ ಸೇವಾನಿರತ ವೈದ್ಯರ ವ್ಯಾಸಂಗದ ಖರ್ಚು ಭರಿಸುತ್ತಿತ್ತು. ಇದರಿಂದ ವೈದ್ಯರು ನಿರ್ದಿಷ್ಟ ವಿಷಯಗಳಲ್ಲಿ ತಜ್ಞರಾಗಿ ಗುಣಾತ್ಮಕ ಸೇವೆ ಒದಗಿಸುತ್ತಿದ್ದರು. ಆದರೆ, ಇತ್ತೀಚೆಗೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಆ ನಿಯಮಗಳಿಗೆ ಪರಿಷ್ಕರಣೆ ತಂದಿದ್ದಾರೆ. 10 ವರ್ಷದ ಬಾಂಡ್ ಜೊತೆಗೆ ಸರ್ಕಾರ ಸೂಚಿಸಿದ ಕೋರ್ಸನ್ನೇ ವ್ಯಾಸಂಗ ಮಾಡಬೇಕು. ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಆಗುವ ಖರ್ಚನ್ನು ಸ್ವಂತ ಹಣದಿಂದ ಭರಿಸಬೇಕು ಎಂದು ನಿಯಮ ರೂಪಿಸಿದೆ. ಪ್ರಸ್ತುತ, ಪಿಜಿ ಮಾಡಬೇಕಾದರೆ ಕನಿಷ್ಠ 1ಕೋಟಿ ಖರ್ಚು ಮಾಡಬೇಕು. ಸರ್ಕಾರಿ ಕೆಲಸಕ್ಕೆ ಬಂದಿರುವ ಬಡ ಹಾಗೂ ಮಧ್ಯಮ ವರ್ಗದವರು ಅಷ್ಟೊಂದು ಹಣ ಖರ್ಚು ಮಾಡಲು ಆಗದು. ತಜ್ಞ ವೈದ್ಯರು ಇಲ್ಲದಿದ್ದರೆ ತಾಲೂಕು ಆಸ್ಪತ್ರೆಗಳನ್ನು ನಡೆಸುವುದು ಕಷ್ಟವಾಗಲಿದೆ. ಕ್ರಮೇಣ ಸರ್ಕಾರಿ ಆರೋಗ್ಯ ವ್ಯವಸ್ಥೆಯು ಖಾಸಗೀಕರಣದತ್ತ ವಾಲುವ ಸಂಭವ, ಹುನ್ನಾರ ಇರಲಿದೆ ಎಂದು ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ವೈದ್ಯಾಧಿಕಾರಿಯೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಸರ್ಕಾರಿ ವೈದ್ಯರ ನೇಮಕ ಆಗಬೇಕು. ಇದು ವೈದ್ಯರ ಬೆಳೆವಣಿಗೆಗೂ ಪೂರಕವಾಗಲಿದೆ. ಈ ಹಿಂದೆ ಡಾ.ಕೆ. ಸುಧಾಕರ್ ಅವರು 400 ಸರ್ಕಾರಿ ವೈದ್ಯರನ್ನು ನೇಮಕ ಮಾಡಿದ್ದರು. ಇದರಿಂದ ಮಧ್ಯಮ ವರ್ಗದ ವೈದ್ಯರ ಸ್ನಾತಕೋತ್ತರ ಪದವಿ ಕನಸು ಈಡೇರುತ್ತಿತ್ತು ಎಂದರು.

ಎನ್‌ಎಚ್‌ಎಂ ಸಿಬ್ಬಂದಿಯ ಮುಷ್ಕರ ಸಾಂದರ್ಭಿಕ ಚಿತ್ರ

ಎಂಬಿಬಿಎಸ್ ಮುಗಿಸಿದ ವೈದ್ಯರು ತಾಲೂಕು ಆಸ್ಪತ್ರೆಗೆ ಬರಬೇಕಾದರೆ ಮೊದಲು ಐದು ವರ್ಷ ಗುತ್ತಿಗೆ ಆಧಾರದಲ್ಲಿ ದುಡಿಯಬೇಕು. ಐದು ವರ್ಷ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಬೇಕು. ಆನಂತರ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳಾಗಬೇಕಾದರೆ ಸ್ನಾತಕೋತ್ತರ ಪದವಿ ಮುಗಿಸಬೇಕು. ಆಗಾದಲ್ಲಿ ಮಾತ್ರ ತಜ್ಞ ವೈದ್ಯರಾಗಬಹುದು. ಆದರೆ, ಈಗ ಆ ಅವಕಾಶವನ್ನು ಇಲಾಖೆ ಕಿತ್ತುಕೊಂಡಿದೆ ಎಂದು ದೂರಿದರು.

ಪಿಜಿ (ಸ್ನಾತಕೋತ್ತರ ಪದವಿ) ವ್ಯಾಸಂಗದ ಅವಕಾಶ ಕಿತ್ತುಕೊಂಡಿರುವುದರಿಂದ ಇಲಾಖೆಯ ಬೆನ್ನು ಮೂಳೆಯನ್ನೇ ಮುರಿದು ಹಾಕಿದೆ. 2025 ನೇ ಸಾಲಿನಲ್ಲಿ ತಾಲೂಕು ವೈದ್ಯಾಧಿಕಾರಿಗಳ ನೇಮಕ ಆಗದಿದ್ದರೆ 2035ರ ವೇಳೆಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೇ ಬುಡಮೇಲಾಗಲಿದೆ ಎಂದು ಅಳಲು ತೋಡಿಕೊಂಡರು.

ರಾಜ್ಯಾದ್ಯಂತ 4000 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 200 ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳು ಇದ್ದಾರೆ. ರಾಜ್ಯ ಸರ್ಕಾರ ವೈದ್ಯರ ನೇಮಕಾತಿ ಆರಂಭಿಸದೇ ಹೋದರೆ ಮುಂದಿನ ದಿನಗಳಲ್ಲಿ ತಾಲೂಕು ಆಸ್ಪತ್ರೆಗಳಿಗೆ ವೈದ್ಯರ ಕೊರತೆ ಎದುರಾಗಲಿದೆ.

ಪ್ರಸ್ತುತ, ಎಂಬಿಬಿಎಸ್ ಮುಗಿಸಿದ ವೈದ್ಯರಿಗೆ ಒಂದು ವರ್ಷ ಗ್ರಾಮೀಣ ಸೇವೆಯನ್ನು ರಾಜ್ಯ ಸರ್ಕಾರ ಕಡ್ಡಾಯ ಮಾಡಿದೆ. ಪಿಎಚ್‌ಸಿಗೆ ನೇಮಕವಾದ ವೈದ್ಯರನ್ನು ಒಂದೇ ವರ್ಷದಲ್ಲಿ ಬದಲಿಸಿದರೆ ಒಳ್ಳೆಯ ವೈದ್ಯರಾಗುವುದಿಲ್ಲ. ಇದರಿಂದ ಆಸ್ಪತ್ರೆಗಳ ಪ್ರಖ್ಯಾತಿಯೂ ಇರುವುದಿಲ್ಲ. ಕ್ರಮೇಣ ಜನರು ಸರ್ಕಾರಿ ಆಸ್ಪತ್ರೆಗಳಿಂದ ವಿಮುಖರಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಖಾಸಗಿ ಆಸ್ಪತ್ರೆಗಳನ್ನು ನಡೆಸುವ ವೈದ್ಯರು ಬಿಎಎಂಎಸ್, ಎಂಬಿಬಿಎಸ್ ಅಷ್ಟೇ ಮಾಡಿಕೊಂಡಿರುತ್ತಾರೆ. ತಜ್ಞರು ಇರುವುದಿಲ್ಲ. ಆದಾಗ್ಯೂ, ಸರ್ಕಾರ ಉದ್ದೇಶಪೂರ್ವಕವಾದ ಕ್ರಮಗಳು ಖಾಸಗಿಯವರಿಗೆ ಲಾಭ ತಂದುಕೊಡಲಿವೆ ಎಂದು ಹೇಳಿದರು.

ಖಾಸಗಿಯಿಂದ ವೈದ್ಯರ ಎರವಲು

ರಾಜ್ಯ ಸರ್ಕಾರದ ನೇಮಕಾತಿ ವಿಳಂಬದಿಂದಾಗಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದುರಾಗಿದೆ. ತಾತ್ಕಾಲಿಕವಾಗಿ ಅರೆಕಾಲಿಕ ವೈದ್ಯರನ್ನು ನಿಯೋಜಿಸಿದರೂ ಯಾವುದೇ ಪ್ರಯೋಜನ ಇರುವುದಿಲ್ಲ. ಹೀಗೆ ಸರ್ಕಾರಿ ಆಸ್ಪತ್ರೆಗಳಿಗೆ ಎರವಲು ಆಧಾರದಲ್ಲಿ ಬರುವ ವೈದ್ಯರು ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದೇ ತಮ್ಮ ಸ್ವಂತ ಕ್ಲಿನಿಕ್‌ಗಳಿಗೆ ಸೆಳೆಯುತ್ತಾರೆ. ಆಗ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ವಿವರಿಸಿದರು.

ಜಿಲ್ಲಾಸ್ಪತ್ರೆಗಳ ಖಾಸಗೀಕರಣಕ್ಕೆ ಸದ್ದಿಲ್ಲದೇ ಪ್ರಯತ್ನಿಸಲಾಗುತ್ತಿದೆ. ಸರ್ಕಾರದ ಸುಪರ್ದಿಯಲ್ಲಿರುವ ಆಸ್ಪತ್ರೆಗಳಲ್ಲಿ ಖಾಸಗಿಯವರ ಹೆಗಲಿಗೆ ಹಾಕುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಇದೇ ಲಾಬಿಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ಅನುದಾನ, ಸಲಕರಣೆ ಕೊಡುತ್ತಿಲ್ಲ. ಈ ಹಿಂದಿನ ಸಚಿವರು, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಆರೋಗ್ಯ ಇಲಾಖೆಗೆ ಭದ್ರ ಬುನಾದಿ ನಿರ್ಮಿಸಿದ್ದರು. ಆದರೆ, ಈಗ ಖಾಸಗಿಯವರ ಲಾಬಿಗೆ ಮಣಿದು ಜಿಲ್ಲಾಸ್ಪತ್ರೆಗಳ ನಿರ್ಮಾಣಕ್ಕೂ ವಿಳಂಬ ಮಾಡುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಸರ್ಕಾರಿ 200 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಅನುದಾನ ನೀಡಿ, ಭೂಮಿ ಪೂಜೆಯನ್ನೂ ನೆರವೇರಿಸಲಾಗಿತ್ತು. ಆದರೆ, ಹಿರಿಯ ಅಧಿಕಾರಿಗಳು ಮಾತ್ರ ಹಣ ಬಿಡುಗಡೆಗೆ ಮನಸ್ಸು ಮಾಡುತ್ತಿಲ್ಲ. ಮುಖ್ಯಮಂತ್ರಿ ಕಚೇರಿ ಕಡತ ಹೋಗಲು ಬಿಡುತ್ತಿಲ್ಲ. ಇದು ಖಾಸಗಿ ವೈದ್ಯಕೀಯ ಕಾಲೇಜುಗಳ ಲಾಬಿಗೆ ಕಾರಣವಾಗಿದೆ.

ಕ್ರಿಯಾ ಯೋಜನೆ ರೂಪಿಸುತ್ತಿಲ್ಲ

ಯಾವುದೇ ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಪ್ರಗತಿ ಕಂಡಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ವಿರಳಾತಿವಿರಳ ಶಸ್ತ್ರಚಿಕಿತ್ಸೆಗಳು ನಡೆದರೂ, ನುರಿತ ವೈದ್ಯರಿದ್ದರೂ ಸೂಕ್ತ ಪ್ರೋತ್ಸಾಹ ಸಿಗದಂತಾಗಿದೆ. ಖಾಸಗಿಯವರ ಒತ್ತಡಕ್ಕೆ ಮಣಿದು ಕೆಲ ಜಿಲ್ಲೆಗಳಲ್ಲಿ ಆಸ್ಪತ್ರೆಗಳ ಸುಧಾರಣೆ ಒತ್ತು ಕೊಡುತ್ತಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಾ.ಕೆ. ಸುಧಾಕರ್ ಅವರು ನಗರ ಪ್ರದೇಶಗಳಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ನಮ್ಮ ಕ್ಲಿನಿಕ್ ಆರಂಭಿಸಿದ್ದರು. ಆದರೆ, ಕಾಂಗ್ರೆಸ್ ನೇತೃತ್ವದ ಸರ್ಕಾರ ನಮ್ಮ ಕ್ಲಿನಿಕ್ಗಳನ್ನು ನಿರ್ಲಕ್ಷಿಸಿದೆ. ಕೆಲವು ಕಡೆ ವೈದ್ಯರು, ಶುಶ್ರೂಷಕಿಯರಿಲ್ಲದೇ ಕ್ಲಿನಿಕ್ಗಳನ್ನು ಮುಚ್ಚಲಾಗಿದೆ. ವಿಪರ್ಯಾಸವೆಂದರೆ ಇಂತಹ ಪ್ರದೇಶಗಳಲ್ಲಿ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ ಎಂದು ಸರ್ಕಾರಿ ವೈದ್ಯರೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

2020ರವರೆಗೆ ಆರೋಗ್ಯ ಇಲಾಖೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ಹರ್ಷ ಗುಪ್ತ ಅವರು ಇಲಾಖೆಯ ಜವಾಬ್ದಾರಿ ಹೊತ್ತ ನಂತರ ಆರೋಗ್ಯ ಕ್ಷೇತ್ರ ಹಳಿ ತಪ್ಪಿದೆ. ಕೆಲ ತಾಲೂಕು ಆಸ್ಪತ್ರೆಗಳಲ್ಲಿ ಪ್ರತಿ ತಿಂಗಳು ಸರಾಸರಿ 300 ಹೆರಿಗೆಗಳು ನಡೆಯುತ್ತಿದ್ದವು. ಈಗ ತಜ್ಞ ವೈದ್ಯರು, ಪ್ರಸೂತಿ ತಜ್ಞರು, ಸ್ತ್ರೀ ರೋಗ ತಜ್ಞರ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ಹೆರಿಗೆಗಳ ಪ್ರಮಾಣ ಇದೀಗ ಮಾಸಿಕ 150ಕ್ಕೆ ಇಳಿದಿದೆ. ಆಸ್ಪತ್ರೆಗಳಿಗೆ ಯಾವುದೇ ಉಪಕರಣ ಪೂರೈಸುತ್ತಿಲ್ಲ. ಹೊಸ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸುತ್ತಿಲ್ಲ ಎಂದು ಆರೋಪಿಸಿದೆ.

2020ರವರೆಗೆ ಆರೋಗ್ಯ ಇಲಾಖೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ಹರ್ಷ ಗುಪ್ತ ಅವರು ಇಲಾಖೆಯ ಜವಾಬ್ದಾರಿ ಹೊತ್ತ ನಂತರ ಆರೋಗ್ಯ ಕ್ಷೇತ್ರ ಹಳಿ ತಪ್ಪಿದೆ. ಕೆಲ ತಾಲೂಕು ಆಸ್ಪತ್ರೆಗಳಲ್ಲಿ ಪ್ರತಿ ತಿಂಗಳು ಸರಾಸರಿ 300 ಹೆರಿಗೆಗಳು ನಡೆಯುತ್ತಿದ್ದವು. ಈಗ ತಜ್ಞ ವೈದ್ಯರು, ಪ್ರಸೂತಿ ತಜ್ಞರು, ಸ್ತ್ರೀ ರೋಗ ತಜ್ಞರ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ಹೆರಿಗೆಗಳ ಪ್ರಮಾಣ ಇದೀಗ ಮಾಸಿಕ 150ಕ್ಕೆ ಇಳಿದಿದೆ. ಆಸ್ಪತ್ರೆಗಳಿಗೆ ಯಾವುದೇ ಉಪಕರಣ ಪೂರೈಸುತ್ತಿಲ್ಲ. ಹೊಸ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸುತ್ತಿಲ್ಲ ಎಂದು ಆರೋಪಿಸಿದೆ.

Read More
Next Story