
ತಿಂಗಳ ಮೊದಲ ಶನಿವಾರ ಖಾದಿ ದಿನ; ಸರ್ಕಾರಿ ನೌಕರರಿಗೆ 'ಖಾದಿ' ಧರಿಸಲು ಸರ್ಕಾರ ಸೂಚನೆ
ಸರ್ಕಾರಿ ನೌಕರರು ಖಾದಿ ಧರಿಸುವುದರಿಂದ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ಸಿಗಲಿದ್ದು, ಸ್ವದೇಶಿ ಉತ್ಪನ್ನಗಳ ಬಗ್ಗೆ ಗೌರವ ಮತ್ತು ರಾಷ್ಟ್ರೀಯ ಭಾವನೆ ಮೂಡಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಖಾದಿ ಬಳಕೆ ಉತ್ತೇಜಿಸುವ ಮತ್ತು ಗ್ರಾಮೀಣ ನೇಕಾರರ ಆರ್ಥಿಕತೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಪ್ರತಿ ತಿಂಗಳ ಮೊದಲ ಶನಿವಾರದಂದು "ಸ್ವಯಂ ಪ್ರೇರಣೆಯಿಂದ" ಖಾದಿ ಉಡುಪು ಧರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಸುತ್ತೋಲೆ ಹೊರಡಿಸಿದ್ದಾರೆ.
77ನೇ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ಸಾರ್ವಜನಿಕ ಸೇವೆಯನ್ನು ದೇಶದ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳೊಂದಿಗೆ ಮರುಜೋಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸುತ್ತೋಲೆಯ ಪ್ರಮುಖ ಅಂಶಗಳೇನು?
ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಅನುದಾನಿತ ಸಂಸ್ಥೆಗಳು, ನಿಗಮ-ಮಂಡಳಿಗಳು, ವಿಶ್ವವಿದ್ಯಾಲಯಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ತಿಂಗಳ ಮೊದಲ ಶನಿವಾರದಂದು ಸ್ವಯಂ ಪ್ರೇರಣೆಯಿಂದ ಖಾದಿ ವಸ್ತ್ರ ಧರಿಸಬೇಕು.
ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸೇರಿದಂತೆ ಸರ್ಕಾರದ ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗಲೂ ಅಧಿಕಾರಿಗಳು ಮತ್ತು ಸಿಬ್ಬಂದಿ ಖಾದಿ ಉಡುಪು ಧರಿಸುವಂತೆ ನಿರ್ದೇಶನ ನೀಡಲಾಗಿದೆ.
ಖಾದಿ ಕೇವಲ ಬಟ್ಟೆಯಲ್ಲ, ಅದು ರಾಷ್ಟ್ರದ ಗೌರವದ ಸಂಕೇತ. ಖಾದಿ ಉದ್ಯಮವು ಗ್ರಾಮೀಣ ಭಾಗದ ಸಾವಿರಾರು ನೂಲುವವರು ಮತ್ತು ನೇಕಾರರಿಗೆ ಜೀವನೋಪಾಯ ಒದಗಿಸುತ್ತಿದೆ. ಸರ್ಕಾರಿ ನೌಕರರು ಖಾದಿ ಧರಿಸುವುದರಿಂದ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ಸಿಗಲಿದ್ದು, ಸ್ವದೇಶಿ ಉತ್ಪನ್ನಗಳ ಬಗ್ಗೆ ಗೌರವ ಮತ್ತು ರಾಷ್ಟ್ರೀಯ ಭಾವನೆ ಮೂಡಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಖಾದಿ ಉತ್ಪನ್ನಗಳನ್ನು ಖರೀದಿಸಲು ಅನುಕೂಲವಾಗುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ 176 ಖಾದಿ ಸಂಘ-ಸಂಸ್ಥೆಗಳ ವಿವರಗಳನ್ನು [https://khadi.karnataka.gov.in](https://khadi.karnataka.gov.in) ಜಾಲತಾಣದಲ್ಲಿ ಒದಗಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

