Three employees die due to SIR pressure: Employees are extremely angry at the harassment by their superiors!
x

ಬೀದರ್‌ನ ಬಿಎಲ್‌ಒ ಸುನೀಲ್‌ ಹಾಗೂ ಬೆಂಗಳೂರು ದಕ್ಷಿಣದ ಬಿಎಲ್‌ಒ ನಟರಾಜು

ಎಸ್‌ಐಆರ್‌ ಒತ್ತಡಕ್ಕೆ ಮೂವರು ನೌಕರರು ಬಲಿ; ಮೇಲಧಿಕಾರಿಗಳ ಕಿರುಕುಳಕ್ಕೆ ಆಕ್ರೋಶ

ತಡರಾತ್ರಿ ನಿಗದಿತ ಕೆಲಸ ಮುಗಿಸಿ ಮನೆಗೆ ಬಂದು ನಟರಾಜು ಮಲಗಿದ್ದರು. ಆದರೆ, ತೀವ್ರ ಮಾನಸಿಕ ಹಾಗೂ ದೈಹಿಕ ಒತ್ತಡದಿಂದಾಗಿ ರಾತ್ರಿಯೇ ಹೃದಯಾಘಾತ ಸಂಭವಿಸಿದ್ದು, ಮುಂಜಾನೆ ಅವರು ಎದ್ದೇಳಲೇ ಇಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.


Click the Play button to hear this message in audio format

ರಾಜ್ಯದಲ್ಲಿ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕರ್ತವ್ಯದ ಹೆಸರಿನಲ್ಲಿ ಕೆಳಹಂತದ ನೌಕರರ ಮೇಲೆ ಹೇರುತ್ತಿರುವ ಅತಿಯಾದ ಒತ್ತಡ ಈಗ ಸರಣಿ ಸಾವುಗಳಿಗೆ ಕಾರಣವಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಧಿಕಾರಿಗಳ ಕಿರುಕುಳಕ್ಕೆ ಎರಡು-ಮೂರು ದಿನಗಳಲ್ಲೇ ಮೂವರು ನೌಕರರು ಮೃತಪಟ್ಟಿದ್ದು, ಮೇಲಧಿಕಾರಿಗಳ ವಿರುದ್ಧ ಕಂದಾಯ ಇಲಾಖೆ ಹಾಗೂ ಬಿಎಲ್‌ಓ ಸಿಬ್ಬಂದಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ತುಮಕೂರಿನಲ್ಲಿ ಗ್ರಾಮ ಆಡಳಿತ ಅಧಿಕಾರಿ (ವಿಎಒ) ಭುವನಾ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬೆನ್ನಲ್ಲೇ, ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಟರಾಜ್ ಹಾಗೂ ಬೀದರ್‌ನಲ್ಲಿ ಸುನೀಲ್ ಎಂಬ ಬಿಎಲ್‌ಓಗಳು ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಕೆಲಸ ಮುಗಿಸಿ ಮಲಗಿದ್ದ ನಟರಾಜ್ ಮತ್ತೆ ಏಳಲೇ ಇಲ್ಲ..!

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಎಲ್‌ಓ ಆಗಿ ಕಾರ್ಯನಿರ್ವಹಿಸುತ್ತಿದ್ದ ನಟರಾಜ್ ನಿಧನರಾದ ದುರ್ದೈವಿ. ಇತ್ತೀಚೆಗೆ ಜಾರಿಯಾದ ಕಡ್ಡಾಯ ಎಸ್‌ಐಆರ್ ಪ್ರಕ್ರಿಯೆಯ ಟಾರ್ಗೆಟ್‌ ಮುಗಿಸಲು ನಟರಾಜ್ ಹಗಲಿರುಳು ಶ್ರಮಿಸುತ್ತಿದ್ದರು. ತಡರಾತ್ರಿವರೆಗೂ ನಿಗದಿತ ಕೆಲಸ ಮುಗಿಸಿ ಮನೆಗೆ ಬಂದು ಮಲಗಿದ್ದ ನಟರಾಜ್, ತೀವ್ರ ಮಾನಸಿಕ ಹಾಗೂ ದೈಹಿಕ ಒತ್ತಡದಿಂದಾಗಿ ರಾತ್ರಿಯೇ ಹೃದಯಾಘಾತಕ್ಕೊಳಗಾಗಿದ್ದಾರೆ. ಮುಂಜಾನೆ ಅವರು ಎದ್ದೇಳಲೇ ಇಲ್ಲ ಎಂದು ತಿಳಿದುಬಂದಿದೆ. ಕರ್ತವ್ಯನಿರತ ಅಧಿಕಾರಿಯ ದಿಢೀರ್ ಸಾವು ಅವರ ಕುಟುಂಬವನ್ನು ತೀವ್ರ ಆಘಾತಕ್ಕೀಡು ಮಾಡಿದೆ.

ಕುಸಿದು ಬಿದ್ದು ಬಿಎಲ್‌ಒ ಸಾವು

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸರ್ವೆ ಕಾರ್ಯದ ವೇಳೆ ಬಿಎಲ್‌ಒ ಹೃದಯಾಘಾತದಿಂದ ಮೃತಪಟ್ಟ ಮತ್ತೊಂದು ಘಟನೆ ಬೀದರ್ ಜಿಲ್ಲೆಯ ಅಮಲಾಪುರ ಗ್ರಾಮದಲ್ಲಿ ನಡೆದಿದೆ. ಭಾಲ್ಕಿ ತಾಲೂಕಿನ ಮೂಲದ 45 ವರ್ಷದ ಸುನೀಲ್ ಮೃತಪಟ್ಟ ದುರ್ದೈವಿ ಬಿಎಲ್‌ಒ. ಅವರು ಕಳೆದ ಹಲವು ದಿನಗಳಿಂದ ಬಿಡುವಿಲ್ಲದೆ ಎಸ್‌ಐಆರ್ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಅಮಲಾಪುರ ಗ್ರಾಮದ 33ನೇ ಬೂತ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ವೇಳೆ ಸ್ಟಂಟ್ ಅಳವಡಿಸುವ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಗಾಂಧಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೇಲಧಿಕಾರಿಗಳ ಕಿರುಕುಳ, ಟಾರ್ಗೆಟ್ ಟೆನ್ಷನ್

"ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಎಸ್‌ಐಆರ್ ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ. ಈ ಕೆಲಸವನ್ನು ಕಟ್ಟುನಿಟ್ಟಾಗಿ ಮತ್ತು ಅತ್ಯಂತ ವೇಗವಾಗಿ ಮುಗಿಸುವಂತೆ ಉನ್ನತ ಅಧಿಕಾರಿಗಳು ತೀವ್ರ ಒತ್ತಡ ಹೇರುತ್ತಿದ್ದಾರೆ. ಅಧಿಕಾರಿಗಳ ಕಿರುಕುಳ ಹಾಗೂ ಟಾರ್ಗೆಟ್‌ ತಲುಪುವ ಧಾವಂತದಿಂದಾಗಿ ನೌಕರರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದು, ಇಂತಹ ಅನಾಹುತಗಳು ಸಂಭವಿಸುತ್ತಿವೆ." ಎಂದು ನೌಕರರ ಸಂಘಟನೆಗಳು ಗಂಭೀರ ಆರೋಪ ಮಾಡಿವೆ.

ಅಹೋರಾತ್ರಿ ಧರಣಿ

ಕರ್ತವ್ಯದ ಒತ್ತಡ ಹಾಗೂ ಮೇಲಾಧಿಕಾರಿಗಳ ಕಿರುಕುಳ ಖಂಡಿಸಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಂದಾಯ ಇಲಾಖೆ ನೌಕರರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಗೂಳೂರು ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಯಾಗಿದ್ದ 26 ವರ್ಷದ ಯುವತಿ ಭುವನಾ, ಶನಿವಾರ ಮುಂಜಾನೆ ಎಸ್‌ಐಆರ್ ಕೆಲಸದ ಗಡಿಬಿಡಿಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ದುರ್ಮರಣಕ್ಕೀಡಾಗಿದ್ದರು. ಇವರ ಸಾವಿಗೆ ಇಲಾಖೆಯ ಅತಿಯಾದ ಒತ್ತಡವೇ ಕಾರಣ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More
Next Story