
ಮಹಾಂತೇಶ ಬೀಳಗಿ ಅವರ ಪುತ್ರಿಗೆ ಅನುಕಂಪದ ಆಧಾರದ ಮೇಲೆ ಸಿಎಂ ಸಿದ್ದರಾಮಯ್ಯ ಅವರು ನೇಮಕಾತಿ ಪತ್ರ ನೀಡಿದರು
ದಿವಂಗತ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಪುತ್ರಿಗೆ ಸರ್ಕಾರಿ ಕೆಲಸ; ಹುದ್ದೆ, ವೇತನ ಎಷ್ಟು ಗೊತ್ತಾ?
ನೇಮಕಾತಿ ಆದೇಶ ಹೊರಡಿಸಿದ 15 ದಿನಗಳ ಒಳಗಾಗಿ ಅಭ್ಯರ್ಥಿಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ-1) ಸರ್ಕಾರದ ಅಧೀನ ಕಾರ್ಯದರ್ಶಿ ಅವರ ಬಳಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿರಿಯ ಐಎಎಸ್ ಅಧಿಕಾರಿ ಮಹಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯಾ ಎಂ.ಬೀಳಗಿ ಅವರಿಗೆ ಸಚಿವಾಲಯದಲ್ಲಿ ಸಹಾಯಕ ಹುದ್ದೆ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಐಎಎಸ್ ಅಧಿಕಾರಿ ಮಹಂತೇಶ್ ಬೀಳಗಿ ಅವರು ಸೇವೆಯಲ್ಲಿದ್ದಾಗಲೇ 2025 ನ. 25ರಂದು ಕಾರು ಅಪಘಾತದಲ್ಲಿ ಧಾರುಣವಾಗಿ ಮೃತಪಟ್ಟಿದ್ದರು. ಈಗ ಅನುಕಂಪದ ಆಧಾರದ ಮೇಲೆ ಚೈತನ್ಯಾ ಎಂ.ಬೀಳಗಿ ಅವರು ಕರ್ನಾಟಕ ನಾಗರೀಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮ, 1996ರ ನಿಯಮ 6(1)ರನ್ವಯ ಹುದ್ದೆ ನೀಡಲಾಗಿದೆ. ಚೈತನ್ಯಾ ಅವರ ವೇತನ ಶ್ರೇಣಿಯು 49050-1250-52800-1375-58300-1500-64300-1650-74200-1900-856002300-92500 ನಿಗದಿ ಮಾಡಲಾಗಿದೆ. ಎರಡು ವರ್ಷಗಳ ಪ್ರೊಬೇಷನರಿ ಅವಧಿಯಲ್ಲಿ ಚೈತನ್ಯಾ ಅವರು ಸಹಾಯಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ನೇಮಕಾತಿ ಆದೇಶ ಹೊರಡಿಸಿದ 15 ದಿನಗಳ ಒಳಗಾಗಿ ಅಭ್ಯರ್ಥಿಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ-1) ಸರ್ಕಾರದ ಅಧೀನ ಕಾರ್ಯದರ್ಶಿ ಅವರ ಬಳಿ ಕರ್ತವ್ಯಕ್ಕೆ ಹಾಜರಾಗಬೇಕು. ತಾವು ವ್ಯಾಸಂಗ ಮಾಡಿದ ಕಾಲೇಜು ಅಥವಾ ವಿಶ್ವವಿದ್ಯಾಲಯಕ್ಕೆ ಸಂಬಂಧಪಡದ ಇಬ್ಬರು ಗಣ್ಯ ವ್ಯಕ್ತಿಗಳಿಂದ ನಡತೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಮಹಾಂತೇಶ ಬೀಳಗಿ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಜ.3 ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ʼಸಿʼ ದರ್ಜೆಯ ನೌಕರಿ ನೀಡಲು ಒಪ್ಪಿಗೆ ದೊರೆತಿತ್ತು.
ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಕುಟುಂಬದ ಆಧಾರವೇ ಕಳಚಿ ಬಿದ್ದಂತಾಗಿತ್ತು.
ಮಹಾಂತೇಶ್ ಬೀಳಗಿ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡಬೇಕು ಎಂದು ವಿವಿಧ ಸಂಘಟನೆಗಳು, ಪ್ರತಿಪಕ್ಷ ಬಿಜೆಪಿ ಕೂಡ ಆಗ್ರಹಿಸಿತ್ತು.

