x

ಕರ್ನಾಟಕದ ಎಸ್‌ಐಆರ್‌ನಲ್ಲಿ ಫಾರ್ಮ್–7 ವಿವಾದ: ಅಲ್ಪಸಂಖ್ಯಾತರು, ದಲಿತರು ಗುರಿಯೇ?

ಬಬಲೇಶ್ವರದಲ್ಲಿ ಸುಮಾರು 1,682 ಹಾಗೂ ಭಾಲ್ಕಿಯಲ್ಲಿ ಸುಮಾರು 2,928 ಮತದಾರರ ಹೆಸರುಗಳನ್ನು ಅಳಿಸುವಂತೆ ಅರ್ಜಿಗಳನ್ನು ಸಲ್ಲಿಸಲಾಗಿರುವುದು ವಿವಾದಕ್ಕೆ ಕಾರಣವಾಗಿದೆ.


ಕರ್ನಾಟಕದಲ್ಲಿ 2026ರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ನಡೆಯುತ್ತಿರುವ ನಡುವೆಯೇ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಸಲ್ಲಿಕೆಯಾಗಿರುವ 'ಫಾರ್ಮ್–7' ಅರ್ಜಿಗಳು ರಾಜಕೀಯ ಹಾಗೂ ಚುನಾವಣಾ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ವಿಶೇಷವಾಗಿ ಬಬಲೇಶ್ವರ, ಭಾಲ್ಕಿ ಮತ್ತು ಬೆಳಗಾವಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಫಾರ್ಮ್–7 ಅರ್ಜಿಗಳು ಸಲ್ಲಿಕೆಯಾಗಿರುವುದು, ಅದರಲ್ಲಿಯೂ ಒಬ್ಬೊಬ್ಬರೇ ಹಲವಾರು ಅರ್ಜಿಗಳನ್ನು ಸಗಟಾಗಿ ಸಲ್ಲಿಸಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೆ, ಪಟ್ಟಿಯಿಂದ ಕೈಬಿಡಲು ಗುರಿಯಾಗಿರುವ ಮತದಾರರ ಸಾಮಾಜಿಕ ಹಿನ್ನೆಲೆಯ ಕುರಿತು ಕೇಳಿಬಂದಿರುವ ಆರೋಪಗಳು ಈ ವಿವಾದಕ್ಕೆ ಮತ್ತಷ್ಟು ತಿರುವು ನೀಡಿವೆ.

ಸೆಪ್ಟೆಂಬರ್‌ 2026ರಲ್ಲಿ ಬಬಲೇಶ್ವರ ಮತ್ತು ಭಾಲ್ಕಿ ವಿಧಾನಸಭಾ ಕ್ಷೇತ್ರಗಳಲ್ಲಿ ಭಾರಿ ಪ್ರಮಾಣದಲ್ಲಿ ಫಾರ್ಮ್–7 ಅರ್ಜಿಗಳು ಸಲ್ಲಿಕೆಯಾಗಿರುವುದು ವಿವಾದಕ್ಕೆ ಪುಷ್ಟಿ ನೀಡಿದೆ. ವರದಿಗಳ ಪ್ರಕಾರ, ಬಬಲೇಶ್ವರದಲ್ಲಿ ಸುಮಾರು 1,682 ಹಾಗೂ ಭಾಲ್ಕಿಯಲ್ಲಿ ಸುಮಾರು 2,928 ಮತದಾರರ ಹೆಸರುಗಳನ್ನು ಅಳಿಸುವಂತೆ ಅರ್ಜಿಗಳನ್ನು ಸಲ್ಲಿಸಲಾಗಿದೆ. ಒಟ್ಟಾರೆಯಾಗಿ ಈ ಎರಡು ಕ್ಷೇತ್ರಗಳಲ್ಲಿ ಸುಮಾರು 4,600ಕ್ಕೂ ಹೆಚ್ಚು ಹೆಸರುಗಳ ವಿರುದ್ಧ ಆಕ್ಷೇಪಣೆಗಳು ದಾಖಲಾಗಿವೆ.

ಹೆಸರು ಅಳಿಸುವಂತೆ ಅರ್ಜಿ ಸಲ್ಲಿಕೆಯಾಗಿರುವ ಮತದಾರರ ಪೈಕಿ ಹೆಚ್ಚಿನವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು, ಗಣನೀಯ ಸಂಖ್ಯೆಯಲ್ಲಿ ಮಾದರ ಸಮುದಾಯದ ದಲಿತ ಮತದಾರರೂ ಇದ್ದಾರೆ ಎಂಬ ವರದಿಗಳಿವೆ. ಇದೇ ಕಾರಣಕ್ಕೆ, ನಿರ್ದಿಷ್ಟ ಸಾಮಾಜಿಕ ಸಮುದಾಯಗಳನ್ನೇ ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯಿಂದ ಕೈಬಿಡಲು ಆಕ್ಷೇಪಣೆ ಸಲ್ಲಿಸಲಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ರಾಜಕೀಯ ವಲಯದಲ್ಲಿ ಎದ್ದಿದೆ.

ಕಾಂಗ್ರೆಸ್ ಆರೋಪ, ಬಿಜೆಪಿ ಶಾಸಕನ ಸ್ಪಷ್ಟನೆ

ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಕರಣವೂ ಫಾರ್ಮ್–7 ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿದೆ. ಬಿಜೆಪಿ ಶಾಸಕ ಅಭಯ ಪಾಟೀಲ್ ಅವರು ಸುಮಾರು 2,500 ಮತದಾರರ ಹೆಸರುಗಳನ್ನು ಕೈಬಿಡುವ ಕುರಿತು ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿದ್ದರು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ನೇರವಾಗಿ ಆರೋಪಿಸಿದ್ದರು. ಆ ಮತದಾರರೆಲ್ಲರೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ಹರಿಪ್ರಸಾದ್ ಹೇಳಿದ್ದರು. ಜೊತೆಗೆ, ಫಾರ್ಮ್–7 ದುರ್ಬಳಕೆ ಮಾಡಿಕೊಂಡು ಸಾವಿರಾರು ಮತದಾರರ ಹೆಸರುಗಳನ್ನು ಅಳಿಸುವ ವ್ಯವಸ್ಥಿತ ಪ್ರಯತ್ನ ನಡೆದಿದ್ದು, ಈ ಬಗ್ಗೆ ಚುನಾವಣಾ ಆಯೋಗವು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.

ಶಾಸಕ ಅಭಯ ಪಾಟೀಲ್ ಅವರು ಈ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. "ಮತದಾರರ ಹೆಸರುಗಳನ್ನು ನೇರವಾಗಿ ಅಳಿಸುವಂತೆ ನಾನು ಎಲ್ಲಿಯೂ ಕೇಳಿಲ್ಲ; ಬದಲಾಗಿ, ಬೂತ್ ಮಟ್ಟದ ಏಜೆಂಟ್ ನೀಡಿದ್ದ ಶಂಕಿತ ಮತದಾರರ ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದ್ದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪರಿಶೀಲನೆಯ ಬಳಿಕ ಯಾರಾದರೂ ನಕಲಿ ಮತದಾರರಿದ್ದರೆ, ನಿಯಮಾನುಸಾರ ಅವರ ಹೆಸರನ್ನು ಕೈಬಿಡಬಹುದು ಎಂಬುದು ತಮ್ಮ ನಿಲುವಾಗಿದೆ ಹಾಗೂ ತಮ್ಮ ಪತ್ರದಲ್ಲಿ ಯಾವುದೇ ನಿರ್ದಿಷ್ಟ ಸಮುದಾಯವನ್ನು ಉಲ್ಲೇಖಿಸಿಲ್ಲ ಎಂದೂ ಅವರು ಸಮರ್ಥಿಸಿಕೊಂಡಿದ್ದಾರೆ.

ಇದೇ ವೇಳೆ, ಬೆಳಗಾವಿಯ ವೀರಭದ್ರನಗರದಲ್ಲಿ ಸುಮಾರು 200 ಫಾರ್ಮ್–7 ಅರ್ಜಿಗಳಿಗೆ ಸಹಿ ಹಾಕುವಂತೆ ಬೂತ್ ಮಟ್ಟದ ಅಧಿಕಾರಿಯ (ಬಿಎಲ್‌ಒ) ಮೇಲೆ ಒತ್ತಡ ಹೇರಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆಯೂ ವರದಿಯಾಗಿದೆ.

ಬಿ.ಕೆ. ಹರಿಪ್ರಸಾದ್ ಆರೋಪವೇನು?

ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಫಾರ್ಮ್–7 ವಿವಾದವನ್ನು ಚುನಾವಣಾ ಪ್ರಕ್ರಿಯೆಯ ಗಂಭೀರ ಲೋಪವಾಗಿ ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಸುಮಾರು 7,000 ಮತದಾರರ ಹೆಸರುಗಳನ್ನು ಅಳಿಸುವ ಉದ್ದೇಶದಿಂದ ಅರ್ಜಿಗಳು ಸಲ್ಲಿಕೆಯಾಗಿದ್ದು, ಕೆಲವೆಡೆ ಒಂದೇ ಕುಟುಂಬದ ಹಲವು ಸದಸ್ಯರ ಹೆಸರುಗಳ ವಿರುದ್ಧವೂ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ಅವರು ದೂರಿದ್ದಾರೆ. ಈ ಅರ್ಜಿಗಳು ನಕಲಿ ಅಥವಾ ಅಕ್ರಮವಾಗಿದ್ದರೆ, ಅವುಗಳನ್ನು ಸಗಟಾಗಿ ಸಲ್ಲಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ದಲಿತರ ಮತ ಕಸಿಯುವ ಹುನ್ನಾರವೇ?

ಎಸ್‌ಐಆರ್‌ ಸಂದರ್ಭದಲ್ಲಿ ನಿರ್ದಿಷ್ಟ ಸಮುದಾಯಗಳ ಮತದಾರರ ಹೆಸರುಗಳ ವಿರುದ್ಧ ಹೆಚ್ಚಿನ ಪ್ರಮಾಣದಲ್ಲಿ ಆಕ್ಷೇಪಣೆಗಳು ಸಲ್ಲಿಕೆಯಾಗುತ್ತಿರುವುದು ದಲಿತರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಕಸಿಯುವ ವ್ಯವಸ್ಥಿತ ಹುನ್ನಾರವೇ ಎಂದು ಕಾಂಗ್ರೆಸ್ ನಾಯಕರು ಮತ್ತು ಕೆಲವು ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಪ್ರಶ್ನಿಸಿದ್ದಾರೆ. ವಿಶೇಷವಾಗಿ ಬಬಲೇಶ್ವರ ಮತ್ತು ಭಾಲ್ಕಿ ಕ್ಷೇತ್ರಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಅಲ್ಪಸಂಖ್ಯಾತರು ಹಾಗೂ ಮಾದರ ಸಮುದಾಯದ ಮತದಾರರ ಪ್ರಮಾಣವೇ ಹೆಚ್ಚಿದೆ ಎಂಬುದರತ್ತ ಅವರು ಬೊಟ್ಟು ಮಾಡಿದ್ದಾರೆ.

ಪ್ರಿಯಾಂಕ್ ಖರ್ಗೆ ಆರೋಪವೇನು?

ಸಚಿವ ಪ್ರಿಯಾಂಕ್ ಖರ್ಗೆ ಕೂಡ ಎಸ್‌ಐಆರ್‌ ಮತ್ತು ಫಾರ್ಮ್–7 ಪ್ರಕ್ರಿಯೆಯ ಲೋಪಗಳನ್ನು ಪ್ರಶ್ನಿಸಿದ್ದಾರೆ. ಚುನಾವಣೆ ಗೆಲ್ಲಲು ಬಿಜೆಪಿ ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇವಿಎಂನಿಂದ ಹಿಡಿದು ಫಾರ್ಮ್–7 ಹಾಗೂ ಎಸ್‌ಐಆರ್‌ವರೆಗೆ ಎಲ್ಲದರಲ್ಲೂ ಅಕ್ರಮವೆಸಗಲು ಯತ್ನಿಸಲಾಗುತ್ತಿದೆ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರಕಾಶ್ ರಾಜ್ ಪ್ರಶ್ನೆ: ಫಾರ್ಮ್–6 ಅಥವಾ ಫಾರ್ಮ್–8?

ನಟ ಪ್ರಕಾಶ್ ರಾಜ್ ಅವರು ಎಸ್‌ಐಆರ್‌ನಲ್ಲಿ ಗುರುತಿಸಲ್ಪಟ್ಟ ಮತದಾರರು ಮತ್ತೆ ನೋಂದಣಿ ಮಾಡಿಕೊಳ್ಳುತ್ತಿರುವ ವಿಧಾನವನ್ನು ಪ್ರಶ್ನಿಸಿದ್ದಾರೆ. ವಿಶೇಷವಾಗಿ, ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದು ವಿಳಾಸ ಬದಲಿಸಿಕೊಂಡಿರುವ ವ್ಯಕ್ತಿಯೊಬ್ಬರನ್ನು 'ಫಾರ್ಮ್-6' ಮೂಲಕ ಹೊಸ ಮತದಾರರಂತೆ ಪರಿಗಣಿಸುವುದು ಸರಿಯೇ? ಎಂದು ಪ್ರಶ್ನೆ ಎತ್ತಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಸಾಮಾಜಿಕ ಹೋರಾಟಗಾರ ನೂರ್ ಶ್ರೀಧರ್, "ಫಾರ್ಮ್-7 ಮೂಲಕ ದಲಿತರು ಹಾಗೂ ಹಿಂದುಳಿದ ವರ್ಗಗಳ ಮತದಾರರನ್ನೇ ಟಾರ್ಗೆಟ್ ಮಾಡಲಾಗಿದೆ" ಎಂದು ಆರೋಪಿಸಿದ್ದಾರೆ. "ಮೇಲ್ವರ್ಗದ ಜನರಿಗೆ ಈ ಪ್ರಕ್ರಿಯೆಗಳ ಬಗ್ಗೆ ಅರಿವಿರುತ್ತದೆ, ಹೀಗಾಗಿ ಅವರು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳುತ್ತಾರೆ. ಆದರೆ, ತಳ ಸಮುದಾಯದವರ ಮತದಾನದ ಹಕ್ಕನ್ನು ಕಸಿದುಕೊಂಡರೆ ಬಹುಬೇಗನೆ ಅವರ ಅರಿವಿಗೆ ಬರುವುದಿಲ್ಲ. ಇದೇ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ" ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

2022ರ ಆಳಂದ ಪ್ರಕರಣ ಮತ್ತೆ ಚರ್ಚೆಗೆ

ದೊಡ್ಡ ಪ್ರಮಾಣದಲ್ಲಿ ಫಾರ್ಮ್–7 ಅರ್ಜಿಗಳು ಸಲ್ಲಿಕೆಯಾಗಿರುವ ಪ್ರಸ್ತುತ ವಿದ್ಯಮಾನವು 2022ರ ಆಳಂದ ಘಟನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಆ ಸಮಯದಲ್ಲಿಯೂ ಸಾವಿರಾರು ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ, ಪರಿಶೀಲನೆ ವೇಳೆ ಹೆಚ್ಚಿನ ಸಂಖ್ಯೆಯ ಅರ್ಜಿಗಳು ನಕಲಿ ಎಂದು ಪತ್ತೆಯಾಗಿ, ಅವುಗಳನ್ನು ತಿರಸ್ಕರಿಸಲಾಗಿತ್ತು ಎಂಬುದನ್ನು ಕಾಂಗ್ರೆಸ್ ನಾಯಕರು ನೆನಪಿಸಿದ್ದಾರೆ. ಆ ಪ್ರಕರಣದಲ್ಲಿ ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು.

ಫಾರ್ಮ್–7 ಎಂದರೇನು?

ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಯೊಬ್ಬರು ಮರಣ ಹೊಂದಿದ್ದರೆ, ಶಾಶ್ವತವಾಗಿ ಸ್ಥಳಾಂತರಗೊಂಡಿದ್ದರೆ, ಬೇರೆಡೆ ದ್ವಿಪ್ರತಿ ನೋಂದಣಿಯಾಗಿದ್ದರೆ ಅಥವಾ ಮತದಾನದ ಅರ್ಹತೆ ಹೊಂದಿಲ್ಲದಿದ್ದರೆ ಅವರ ಹೆಸರನ್ನು ಪಟ್ಟಿಯಿಂದ ಅಳಿಸಲು 'ಫಾರ್ಮ್–7' ನಮೂನೆಯನ್ನು ಬಳಸಲಾಗುತ್ತದೆ. ಅಲ್ಲದೆ, ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಿರುವುದರ ವಿರುದ್ಧ ಆಕ್ಷೇಪಣೆ ಸಲ್ಲಿಸುವುದಕ್ಕೂ ಇದೇ ನಮೂನೆಯನ್ನು ಬಳಸಲಾಗುತ್ತದೆ.

ಮುಖ್ಯವಾದ ವಿಚಾರವೆಂದರೆ, ಫಾರ್ಮ್–7 ಅರ್ಜಿ ಸಲ್ಲಿಸಿದ ತಕ್ಷಣವೇ ಯಾವುದೇ ಮತದಾರನ ಹೆಸರು ಪಟ್ಟಿಯಿಂದ ಸ್ವಯಂಚಾಲಿತವಾಗಿ ಅಳಿಸಿಹೋಗುವುದಿಲ್ಲ. ಚುನಾವಣಾ ಆಯೋಗದ ಮಾರ್ಗಸೂಚಿಗಳ ಅನ್ವಯ, ಸಲ್ಲಿಕೆಯಾದ ಆಕ್ಷೇಪಣೆಯ ಸತ್ಯಾಸತ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸುವ ಪ್ರಕ್ರಿಯೆ ಇರುತ್ತದೆ. ಸಾಮಾನ್ಯ ಪ್ರಕ್ರಿಯೆಯ ಭಾಗವಾಗಿ, ಮೊದಲು ಅರ್ಜಿಯನ್ನು ಪರಿಶೀಲಿಸಿ ಸಂಬಂಧಪಟ್ಟ ಮತದಾರನಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಅಗತ್ಯವಿದ್ದರೆ ಆಕ್ಷೇಪಣೆ ಸಲ್ಲಿಸಿದ ವ್ಯಕ್ತಿ ಹಾಗೂ ಆಕ್ಷೇಪಣೆ ಎದುರಿಸುತ್ತಿರುವ ಮತದಾರ, ಇಬ್ಬರಿಗೂ ವಿಚಾರಣೆ ನಡೆಸಿ ತಮ್ಮ ವಾದ ಮಂಡಿಸಲು ಅವಕಾಶ ನೀಡಲಾಗುತ್ತದೆ.

ಫಾರ್ಮ್–7 ನಮೂನೆಯಲ್ಲಿ ಆಕ್ಷೇಪಣೆ ಸಲ್ಲಿಸುವಾಗ, ಅರ್ಜಿದಾರರು ತಾವು ನೀಡಿರುವ ಮಾಹಿತಿಯು ತಮ್ಮ ತಿಳುವಳಿಕೆ ಮತ್ತು ನಂಬಿಕೆಯ ಮಟ್ಟಿಗೆ ಸಂಪೂರ್ಣ ಸತ್ಯವೆಂದು ಘೋಷಣೆ ಮಾಡಿಕೊಳ್ಳಬೇಕು. ಒಂದು ವೇಳೆ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿರುವುದು ಸಾಬೀತಾದರೆ, ಪ್ರಜಾಪ್ರತಿನಿಧಿತ್ವ ಕಾಯ್ದೆ-1950ರ ಸೆಕ್ಷನ್‌ 31ರ ಅಡಿಯಲ್ಲಿ ಕಠಿಣ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

Read More
Next Story