
ಹೆದ್ದಾರಿ ಡಾಬಾಗಳಲ್ಲಿ ಊಟ ಮಾಡುವ ಮುನ್ನ ಎಚ್ಚರ: ನೈರ್ಮಲ್ಯವೇ ಇಲ್ಲ, 3.69 ಲಕ್ಷ ರೂ. ದಂಡ
ಸಂಗ್ರಹಿಸಲಾದ 41 ಆಹಾರದ ಮಾದರಿಗಳ ಪ್ರಯೋಗಾಲಯದ ವರದಿ ಬಂದ ಬಳಿಕ, ಕಲಬೆರಕೆ ಅಥವಾ ಹಾನಿಕಾರಕ ಅಂಶಗಳು ಪತ್ತೆಯಾದರೆ ಸಂಬಂಧಪಟ್ಟ ಡಾಬಾಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ಬಗೆಬಗೆಯ ಖಾದ್ಯಗಳ ಸವಿಯಲು ಡಾಬಾಗಳ ಮೊರೆಹೋಗುವ ಮುನ್ನ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಹೆದ್ದಾರಿ ಬದಿಯ ಡಾಬಾಗಳಲ್ಲಿ ಗ್ರಾಹಕರಿಗೆ ಬಡಿಸುವ ಊಟದ ಗುಣಮಟ್ಟ ಹಾಗೂ ನೈರ್ಮಲ್ಯವನ್ನು ಪರಿಶೀಲಿಸಲು ಆರೋಗ್ಯ ಮತ್ತು ಆಹಾರ ತಪಾಸಣಾ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿದ್ದು, ಶುಚಿತ್ವ ಕಾಪಾಡದ ಮಾಲೀಕರಿಗೆ ಬರೋಬ್ಬರಿ 3.69 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ಏಪ್ರಿಲ್ 10 ಹಾಗೂ 11ರಂದು ರಾಜ್ಯದ ವಿವಿಧ ಹೆದ್ದಾರಿ ಮಾರ್ಗಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಎರಡು ದಿನಗಳ ಬೃಹತ್ ತಪಾಸಣಾ ಅಭಿಯಾನ ನಡೆಸಿದ್ದಾರೆ. ಈ ಕಾರ್ಯಾಚರಣೆಯ ವೇಳೆ ಒಟ್ಟು 99 ಡಾಬಾಗಳ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಅಡುಗೆಮನೆಯ ನೈರ್ಮಲ್ಯ ಕೊರತೆ, ಕಳಪೆ ಗುಣಮಟ್ಟದ ಆಹಾರ ಮತ್ತು ನಿಯಮಗಳ ಉಲ್ಲಂಘನೆಯನ್ನು ಪತ್ತೆಹಚ್ಚಿರುವ ಅಧಿಕಾರಿಗಳು, ಒಟ್ಟಾರೆಯಾಗಿ 3,69,500 ರೂಪಾಯಿ ದಂಡ ಸ್ಥಳದಲ್ಲೇ ವಸೂಲಿ ಮಾಡಿದ್ದಾರೆ. ಅಲ್ಲದೆ, ಕಳಪೆ ಗುಣಮಟ್ಟದ ಶಂಕೆ ಇರುವ ಒಟ್ಟು 41 ಆಹಾರದ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಮಾರ್ಗವಾರು ತಪಾಸಣೆಯ ಸಂಪೂರ್ಣ ವಿವರ
ಅಧಿಕಾರಿಗಳು ಐದು ಪ್ರಮುಖ ಹೆದ್ದಾರಿ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ತುಮಕೂರು-ಚಿತ್ರದುರ್ಗ ಮಾರ್ಗದಲ್ಲಿ 14 ಡಾಬಾಗಳನ್ನು ತಪಾಸಣೆ ಮಾಡಲಾಗಿದ್ದು, 8 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಮಾರ್ಗದಲ್ಲಿ ಅತಿ ಹೆಚ್ಚು ಅಂದರೆ 90,000 ರೂಪಾಯಿ ದಂಡ ವಿಧಿಸಲಾಗಿದೆ. ನೆಲಮಂಗಲ-ತುಮಕೂರು ಮಾರ್ಗದಲ್ಲಿ 22 ಡಾಬಾಗಳ ಮೇಲೆ ದಾಳಿ ನಡೆಸಿ 8 ಮಾದರಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಒಟ್ಟು 87,500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ನೆಲಮಂಗಲ-ಬೆಳ್ಳೂರು ಕ್ರಾಸ್ ಮಾರ್ಗದಲ್ಲಿ 19 ಡಾಬಾಗಳನ್ನು ಪರಿಶೀಲಿಸಿ 5 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, 85,000 ರೂಪಾಯಿ ದಂಡ ವಿಧಿಸಲಾಗಿದೆ. ದಾವಣಗೆರೆ-ಹಾವೇರಿ ಮಾರ್ಗದಲ್ಲಿ ಅತಿ ಹೆಚ್ಚು, ಅಂದರೆ 25 ಡಾಬಾಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿ 10 ಆಹಾರ ಮಾದರಿಗಳನ್ನು ಕಲೆಹಾಕಿದ್ದು, 56,000 ರೂಪಾಯಿ ದಂಡ ಹಾಕಲಾಗಿದೆ. ಚಿತ್ರದುರ್ಗ-ದಾವಣಗೆರೆ ಮಾರ್ಗದಲ್ಲಿ 19 ಡಾಬಾಗಳ ತಪಾಸಣೆ ನಡೆಸಿ 10 ಮಾದರಿಗಳನ್ನು ಪಡೆಯಲಾಗಿದ್ದು, 51,000 ರೂಪಾಯಿ ದಂಡ ವಿಧಿಸಲಾಗಿದೆ.
ಪ್ರಯಾಣಿಕರಿಗೆ ಅಧಿಕಾರಿಗಳ ಎಚ್ಚರಿಕೆ
ಸಂಗ್ರಹಿಸಲಾದ 41 ಆಹಾರದ ಮಾದರಿಗಳ ಪ್ರಯೋಗಾಲಯದ ವರದಿ ಬಂದ ಬಳಿಕ, ಕಲಬೆರಕೆ ಅಥವಾ ಹಾನಿಕಾರಕ ಅಂಶಗಳು ಪತ್ತೆಯಾದರೆ ಸಂಬಂಧಪಟ್ಟ ಡಾಬಾಗಳ ಪರವಾನಗಿ ರದ್ದುಪಡಿಸುವಂತಹ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಸಾರ್ವಜನಿಕರು ಹೆದ್ದಾರಿಗಳಲ್ಲಿ ಊಟ ಮಾಡುವಾಗ ಕೇವಲ ರುಚಿಗೆ ಮಾರುಹೋಗದೆ, ಅಲ್ಲಿನ ಅಡುಗೆಮನೆ ಮತ್ತು ಪರಿಸರದ ಶುಚಿತ್ವವನ್ನು ಕಡ್ಡಾಯವಾಗಿ ಗಮನಿಸಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

