
ಎಲ್‌ಪಿಜಿ ಗ್ಯಾಸ್ ಅಭಾವದಿಂದ ಕಂಗೆಟ್ಟ ಆಟೋ ಚಾಲಕರು: ಏ.10ರಂದು ಸಚಿವ ಕೆ.ಎಚ್. ಮುನಿಯಪ್ಪ ಸಭೆ
ಸಚಿವ ಕೆ.ಎಚ್. ಮುನಿಯಪ್ಪ ನಿವಾಸಕ್ಕೆ ನೂರಾರು ಚಾಲಕರು ತೆರಳಿ ತಮ್ಮ ಜೀವನೋಪಾಯಕ್ಕೆ ಸಂಚಕಾರ ಬಂದಿದೆ ಎಂದು ಅಳಲು ತೋಡಿಕೊಂಡರು. ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಯಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಲ್‌ಪಿಜಿ ಗ್ಯಾಸ್ ಅಭಾವ ತೀವ್ರಗೊಂಡಿದ್ದು, ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ, ಏಪ್ರಿಲ್ 10ರಂದು ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ಕರೆಯುವುದಾಗಿ ಘೋಷಿಸಿದ್ದಾರೆ.
ಬೆಳಗಿನ ಜಾವ 4 ಗಂಟೆಯಿಂದಲೇ ಕಿಲೋಮೀಟರ್‌ಗಟ್ಟಲೆ ಕ್ಯೂ ನಿಂತರೂ ಗ್ಯಾಸ್ ಸಿಗುತ್ತಿಲ್ಲ. ಇದರಿಂದ ದಿನಕ್ಕೆ 700-800 ರೂ. ಆದಾಯ ಕಳೆದುಕೊಳ್ಳುತ್ತಿರುವ ನೂರಾರು ಆಟೋ ಚಾಲಕರು, ಭಾನುವಾರ ಸಂಜಯನಗರದಲ್ಲಿರುವ ಸಚಿವ ಕೆ.ಎಚ್. ಮುನಿಯಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ದಿಢೀರ್ ಪ್ರತಿಭಟನೆ ನಡೆಸಿದ್ದರು. ತಕ್ಷಣವೇ ಮಧ್ಯಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಚಾಲಕರು ಸಚಿವರನ್ನು ಆಗ್ರಹಿಸಿದ್ದರು.
ಸಚಿವರ ಭರವಸೆ
ಪ್ರತಿಭಟನಾನಿರತ ಆಟೋ ಚಾಲಕರ ಅಹವಾಲು ಆಲಿಸಿದ ಸಚಿವ ಕೆ.ಎಚ್. ಮುನಿಯಪ್ಪ, ಆಟೋ ಚಾಲಕರ ಮೇಲಾಗಿರುವ ಬರೆ ತಪ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು. "ಕೇಂದ್ರ ಸರ್ಕಾರದಿಂದ ಪ್ರತಿದಿನ 3 ಸಾವಿರ ಸಿಲಿಂಡರ್‌ಗಳು ಪೂರೈಕೆಯಾಗುತ್ತಿದ್ದು, ಅಧಿಕೃತ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ ಸ್ಥಳೀಯ ಮಟ್ಟದಲ್ಲಿ ಕೃತಕ ಅಭಾವ ಸೃಷ್ಟಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುವುದು" ಎಂದು ಸ್ಪಷ್ಟಪಡಿಸಿದರು.
ಖಾಸಗಿ ಬಂಕ್‌ಗಳ ವಿರುದ್ಧ ಕ್ರಮದ ಎಚ್ಚರಿಕೆ
ಕೆಲವು ಖಾಸಗಿ ಗ್ಯಾಸ್ ಬಂಕ್‌ಗಳಲ್ಲಿ ಎಲ್‌ಪಿಜಿ ಅಭಾವವನ್ನು ಬಂಡವಾಳ ಮಾಡಿಕೊಂಡು ಲೀಟರ್‌ಗೆ 130 ರೂ. ವರೆಗೆ ದರ ವಿಧಿಸುತ್ತಿರುವ ದೂರುಗಳು ಬಂದಿವೆ. ಇಂತಹ ಅಕ್ರಮ ದರ ವಸೂಲಿ ಮಾಡುವ ಬಂಕ್ ಮಾಲೀಕರಿಗೆ ಸಭೆಯಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಅಲ್ಲದೆ, ಲಭ್ಯವಿರುವ ಗ್ಯಾಸ್‌ನಲ್ಲಿ ಆಟೋ ಚಾಲಕರಿಗೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವುದಾಗಿ ಭರವಸೆ ನೀಡಿದರು.
ಚಾಲಕರ ಅಂತಿಮ ಗಡುವು
ಸಚಿವರು ನೀಡಿದ ಏಪ್ರಿಲ್ 10ರ ಗಡುವಿಗೆ ಒಪ್ಪಿರುವ ಆಟೋ ಚಾಲಕರು, ಅಷ್ಟರೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಸಚಿವರು ಓಡಾಡುವ ಕಡೆಯಲ್ಲೆಲ್ಲಾ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಹಾಗೂ ಸಂಸದರ ಮನೆಗಳಿಗೂ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ. ಹೀಗಾಗಿ ಏಪ್ರಿಲ್ 10ರಂದು ನಡೆಯಲಿರುವ ಸಭೆ ತೀವ್ರ ಕುತೂಹಲ ಕೆರಳಿಸಿದ್ದು, ಅಂದಿನ ನಿರ್ಧಾರದ ಮೇಲೆ ಆಟೋ ಚಾಲಕರ ಮುಂದಿನ ಹೋರಾಟದ ರೂಪುರೇಷೆ ನಿರ್ಧಾರವಾಗಲಿದೆ.

