Good news for the youth: Government decides to fill 1,600 posts in the Fire Department soon
x

ಅಗ್ನಿಶಾಮಕ ವಾಹನಗಳನ್ನು ಇಲಾಖೆಗೆ ಹಸ್ತಾಂತರಿಸಲಾಯಿತು. 

ಯುವಕರಿಗೆ ಸಿಹಿ ಸುದ್ದಿ: ಅಗ್ನಿಶಾಮಕ ಇಲಾಖೆಯಲ್ಲಿ ಶೀಘ್ರವೇ 1,600 ಹುದ್ದೆಗಳ ಭರ್ತಿಗೆ ಸರ್ಕಾರ ನಿರ್ಧಾರ

ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಶಿಸ್ತಿನ ಸಿಪಾಯಿಗಳು. ಪೊಲೀಸ್ ಇಲಾಖೆಯಷ್ಟೇ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದೀರಿ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 2.80 ಲಕ್ಷ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ನಾಯಕರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸುತ್ತಿರುವಾಗಲೇ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ 1,600ಕ್ಕೂ ಹೆಚ್ಚು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

ಮಂಗಳವಾರ (ಫೆ. 24) ಬನ್ನೇರುಘಟ್ಟ ರಸ್ತೆಯ ಆರ್. ಎ. ಮುಂಡ್ಕುರ್ ಅಗ್ನಿಶಾಮಕ ತರಬೇತಿ ಅಕಾಡೆಮಿಯಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ, ಗೃಹರಕ್ಷಕ ದಳ, ಪೌರರಕ್ಷಣೆ ಮತ್ತು ಎಸ್‌ಡಿಆರ್‌ಎಫ್‌ ಅಧಿಕಾರಿ ಹಾಗೂ ಸಿಬ್ಬಂದಿಗೆ 'ಮುಖ್ಯಮಂತ್ರಿ ಪದಕ' ಪ್ರದಾನ ಮಾಡಿ ಹಾಗೂ 40 ಹೊಸ ಅಗ್ನಿಶಾಮಕ ಜಲ ವಾಹನಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು. "ಇಲಾಖೆಯು ತನ್ನ ಉತ್ತಮ ಕಾರ್ಯಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಜನಮನ್ನಣೆ ಪಡೆದಿದೆ" ಎಂದರು.

ವಿಪತ್ತಿನಲ್ಲಿ ಸ್ಫೂರ್ತಿಯುತ ಕೆಲಸ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶಿಸ್ತಿನ ಸಿಪಾಯಿಗಳು. ಪೊಲೀಸ್ ಇಲಾಖೆಯ ಜೊತೆಜೊತೆಯಾಗಿ ನೀವು ಅಷ್ಟೇ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದೀರಿ. ವಿಪತ್ತಿನ ಸಂದರ್ಭಗಳಲ್ಲಿ ಸ್ವಯಂ ಸ್ಫೂರ್ತಿಯಿಂದ ಕೆಲಸ ಮಾಡಿದ್ದೀರಿ. ನಿಮ್ಮ ಈ ಸೇವೆಯನ್ನು ಸಮಾಜ ಗುರುತಿಸಿದೆ. ಇಡೀ ದೇಶದಲ್ಲಿ ಕರ್ನಾಟಕದ ಅಗ್ನಿಶಾಮಕ ಮತ್ತು ಇತರೆ ತುರ್ತು ಸೇವಾ ಇಲಾಖೆಗಳು ಮಾದರಿಯಾಗಿವೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಅಧಿಕಾರಿಗಳಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ʼಮುಖ್ಯಮಂತ್ರಿ ಪದಕʼ ಪ್ರದಾನ ಮಾಡಿದರು.

ಜನರ ರಕ್ಷಣೆಗೆ ಸದಾ ಸಿದ್ಧ

ನಾವು ಪ್ರತಿದಿನ ಹಲವು ದುರಂತಗಳನ್ನು ನೋಡುತ್ತೇವೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಅವಘಡಗಳು ಸಂಭವಿಸುತ್ತವೆ. ತುರ್ತು ಸಂದರ್ಭಗಳಲ್ಲಿ ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು, ಸಾರ್ವಜನಿಕರ ಆಸ್ತಿ ಮತ್ತು ನಾಗರಿಕರ ಪ್ರಾಣ ರಕ್ಷಣೆ ಮಾಡುವ ಕೆಲಸವನ್ನು ನೀವು ಮಾಡಿದ್ದೀರಿ. ಪ್ರವಾಹಗಳು ಉಂಟಾದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಜನರನ್ನು ಕಾಪಾಡಿದ್ದೀರಿ. ಮಡಿಕೇರಿಯಲ್ಲಿ ಸಂಭವಿಸಿದ ಪ್ರವಾಹದ ವೇಳೆ, ಒಂಟಿಯಾಗಿದ್ದ ಮನೆಗಳಲ್ಲಿದ್ದ ಜನರನ್ನು ರಕ್ಷಿಸಲು ನೀವು ತೆಗೆದುಕೊಂಡ ನಿರ್ಧಾರ ಮತ್ತು ಮಾಡಿದ ಪ್ರಯತ್ನಗಳು ಅತ್ಯಂತ ಶ್ಲಾಘನೀಯ. ನಿಮ್ಮದು ಸುಲಭದ ಕೆಲಸವಲ್ಲ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಹೇಳಿದರು.

ಹೊಸ ಅಗ್ನಿಶಾಮಕ ಠಾಣೆಗಳ ಸ್ಥಾಪನೆಗೆ ಪ್ರಸ್ತಾವನೆ 15 ಹೊಸ ತಾಲ್ಲೂಕುಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸುವಂತೆ ಮುಖ್ಯಮಂತ್ರಿಯವರನ್ನು ಕೋರಿದ್ದೇನೆ. ಪೊಲೀಸ್ ಗೃಹ ಯೋಜನೆಯಡಿ 40 ಸಾವಿರ ಮನೆಗಳನ್ನು ಕಟ್ಟಿದ್ದೇವೆ. ಅದೇ ಮಾದರಿಯಲ್ಲಿ ಅಗ್ನಿಶಾಮಕ ಸಿಬ್ಬಂದಿಗೂ ವಸತಿ ಗೃಹ ಕಲ್ಪಿಸುವ ತೀರ್ಮಾನ ಮಾಡಲಾಗಿದ್ದು, ಇದಕ್ಕಾಗಿ ಅನುದಾನ ಒದಗಿಸಲಾಗುವುದು. ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳು ಹೆಚ್ಚಾಗುತ್ತಿವೆ. ಅಗ್ನಿ ಅವಘಡಗಳು ಸಂಭವಿಸಿದಾಗ ಅವುಗಳನ್ನು ನಿಯಂತ್ರಿಸಲು ಇಲಾಖೆಗೆ ಆಧುನಿಕ ಹಾಗೂ ಸುಸಜ್ಜಿತ ಸಲಕರಣೆ ಮತ್ತು ವಾಹನಗಳನ್ನು ಒದಗಿಸಲಾಗಿದೆ. ಪ್ರಥಮ ಬಾರಿಗೆ 90 ಮೀಟರ್ ಎತ್ತರ ತಲುಪಬಲ್ಲ 'ಏರಿಯಲ್ ಲ್ಯಾಡರ್ ಪ್ಲಾಟ್‌ಫಾರ್ಮ್' (Aerial Ladder Platform) ಹೊಂದಿರುವ ಅತ್ಯಾಧುನಿಕ ವಾಹನವನ್ನು ಅಗ್ನಿಶಾಮಕ ಪಡೆಗೆ ನೀಡಲಾಗಿದೆ. 15ನೇ ಹಣಕಾಸು ಯೋಜನೆಯಡಿ 329 ಕೋಟಿ ರೂ. ಒದಗಿಸಲಾಗಿತ್ತು. ಇದರಲ್ಲಿ 21 ಅಗ್ನಿಶಾಮಕ ಠಾಣೆಗಳನ್ನು ನಿರ್ಮಿಸಲು 98 ಕೋಟಿ ರೂ. ಖರ್ಚು ಮಾಡಲಾಗಿದೆ. ಜೊತೆಗೆ, ಆಧುನಿಕ ಉಪಕರಣಗಳ ಖರೀದಿ ಹಾಗೂ ತರಬೇತಿ ಕೇಂದ್ರದ ಉನ್ನತೀಕರಣಕ್ಕೂ ಕ್ರಮ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Read More
Next Story