ಹೊರಗುತ್ತಿಗೆ ನೌಕರರ ಕುರಿತ ಆದೇಶ ಸಂಪೂರ್ಣ ನಕಲಿ; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
x

ಹೊರಗುತ್ತಿಗೆ ನೌಕರರ ಕುರಿತ ಆದೇಶ ಸಂಪೂರ್ಣ ನಕಲಿ; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಹೊರಗುತ್ತಿಗೆ ಆಧಾರಿತ ಸಿಬ್ಬಂದಿಗಳ ಸೇವೆಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಆದೇಶ ಸಂಪೂರ್ಣವಾಗಿ ನಕಲಿ ಎಂದು ರಾಜ್ಯ ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದೆ.


Click the Play button to hear this message in audio format

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಹೊರಗುತ್ತಿಗೆ ಆಧಾರಿತ ಸಿಬ್ಬಂದಿಗಳ ಸೇವೆಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಆದೇಶ ಸಂಪೂರ್ಣವಾಗಿ ನಕಲಿ ಎಂದು ರಾಜ್ಯ ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದೆ.

ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸರ್ಕಾರ, ಸುಳ್ಳು ಸುದ್ದಿಗಳನ್ನು ಪ್ರಕಟಿಸುವ ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸದ ಮಾಧ್ಯಮಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಆರ್ಥಿಕ ಇಲಾಖೆಯ ಹೆಸರಿನಲ್ಲಿ ಅಧಿಕೃತ ಜ್ಞಾಪನ ಪತ್ರ ಹೊರಬಿದ್ದಿದೆ ಎಂಬ ಸುಳ್ಳು ಮಾಹಿತಿಯನ್ನು ಕಿಡಿಗೇಡಿಗಳು ಸೃಷ್ಟಿಸಿದ್ದರು. ಈ ಪತ್ರದಲ್ಲಿ ಸರ್ಕಾರದ ಹೊರಗುತ್ತಿಗೆ ಆಧಾರಿತ ಸಿಬ್ಬಂದಿಯ ಸೇವೆಯನ್ನು ಮುಂದುವರಿಸುವ ಬಗ್ಗೆ ಅಥವಾ ಅವರಿಗೆ ಸಂಬಂಧಿಸಿದ ಇತರ ಪ್ರಮುಖ ತೀರ್ಮಾನಗಳ ಬಗ್ಗೆ ಅಧಿಕೃತವಾಗಿ ಆದೇಶಿಸಲಾಗಿದೆ ಎಂಬಂತೆ ಬಿಂಬಿಸಲಾಗಿತ್ತು. ಈ ನಕಲಿ ದಾಖಲೆಯು ವಾಟ್ಸಾಪ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಡಿತು. ಸಾವಿರಾರು ಹೊರಗುತ್ತಿಗೆ ನೌಕರರು ತಮ್ಮ ಉದ್ಯೋಗದ ಭವಿಷ್ಯಕ್ಕೆ ಸಂಬಂಧಿಸಿದ ಈ ಆದೇಶವನ್ನು ನಿಜವೆಂದು ನಂಬಿ ಹಂಚಿಕೊಂಡಿದ್ದರು.

ಸರ್ಕಾರ ಹೊರಡಿಸಿರುವ ಈ ಸ್ಪಷ್ಟನಾ ಪತ್ರದಲ್ಲಿ ಒಂದು ಪ್ರಮುಖ ಅಂಶವೆಂದರೆ ಮಾಧ್ಯಮಗಳ ನಡೆ. ಕೆಲವು ಪ್ರಮುಖ ದಿನಪತ್ರಿಕೆಗಳು ಹಾಗೂ ಆನ್‌ಲೈನ್ ಸುದ್ದಿ ಸಂಸ್ಥೆಗಳು ಈ ನಕಲಿ ಆದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸದೆ, ಸರ್ಕಾರದ ಮೂಲಗಳಿಂದ ದೃಢಪಡಿಸಿಕೊಳ್ಳದೆ ವರದಿಗಳನ್ನು ಪ್ರಕಟಿಸಿದ್ದವು ಎಂದು ಆರ್ಥಿಕ ಇಲಾಖೆಯು ಹೇಳಿದೆ.

ಸರ್ಕಾರದಲ್ಲಿ ಹೊರಗುತ್ತಿಗೆ ಆಧಾರಿತ ಸಿಬ್ಬಂದಿಯ ಸೇವೆಯನ್ನು ಮುಂದುವರೆಸದಿರುವ ಬಗ್ಗೆ ಯಾವುದೇ ಅಧಿಕೃತ ಆದೇಶ ಅಥವಾ ಜ್ಞಾಪನ ಪತ್ರವನ್ನು ಆರ್ಥಿಕ ಇಲಾಖೆಯಿಂದ ಹೊರಡಿಸಲಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರವು ಅಧಿಕೃತ ಪತ್ರದ ನಕಲಿ ಪ್ರತಿಯನ್ನು ಸೃಷ್ಟಿಸಿ ಹರಿಯಬಿಟ್ಟಿರುವಂತದ್ದಾಗಿದೆ. ಈಗಾಗಲೇ ತಪ್ಪು ಮಾಹಿತಿ ಅಥವಾ ಸುಳ್ಳು ಸುದ್ದಿಯನ್ನು ಪ್ರಕಟಿಸಿರುವ ಪತ್ರಿಕೆಗಳು ಮತ್ತು ಸುದ್ದಿ ಸಂಸ್ಥೆಗಳು ಕೂಡಲೇ ತಮ್ಮ ತಪ್ಪನ್ನು ತಿದ್ದಿಕೊಂಡು, ಅಧಿಕೃತ ಸ್ಪಷ್ಟೀಕರಣವನ್ನು ಪ್ರಕಟಿಸಬೇಕು ಎಂದು ಸರ್ಕಾರ ಹೇಳಿದೆ.

ಹೊರಗುತ್ತಿಗೆ ಸಿಬ್ಬಂದಿಗಳ ಮೇಲೆ ಪ್ರಭಾವ

ರಾಜ್ಯದಲ್ಲಿ ಲಕ್ಷಾಂತರ ಜನರು ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ನಕಲಿ ಆದೇಶಗಳು ಹೊರಬಿದ್ದಾಗ ನೌಕರರಲ್ಲಿ ಗೊಂದಲ, ಅನಗತ್ಯ ನಿರೀಕ್ಷೆ ಅಥವಾ ಆತಂಕ ಸೃಷ್ಟಿಯಾಗುತ್ತದೆ. ಸರ್ಕಾರವು ಹೊರಗುತ್ತಿಗೆ ಪದ್ಧತಿಯನ್ನು ಬದಲಿಸಲು ಅಥವಾ ಸುಧಾರಿಸಲು ಮುಂದಾಗಿರುವ ಈ ಸಂದರ್ಭದಲ್ಲಿ ಇಂತಹ ಕಿಡಿಗೇಡಿತನವು ಆಡಳಿತ ವ್ಯವಸ್ಥೆಯ ದಾರಿಯನ್ನು ತಪ್ಪಿಸುವ ಸಾಧ್ಯತೆ ಇರುತ್ತದೆ. ಸರ್ಕಾರವು ತನ್ನ ಇಲಾಖೆಯ ವೆಬ್‌ಸೈಟ್‌ಗಳು ಅಥವಾ ಅಧಿಕೃತ ವಾರ್ತಾ ಇಲಾಖೆಯ ಮೂಲಕ ಹೊರಡಿಸುವ ಆದೇಶಗಳನ್ನು ಮಾತ್ರ ಸಾರ್ವಜನಿಕರು ಮತ್ತು ನೌಕರರು ನಂಬಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪಿಡಿಎಫ್ ಪ್ರತಿಗಳನ್ನು ಅಧಿಕೃತ ಮೂಲಗಳೊಂದಿಗೆ ತಾಳೆ ನೋಡದೆ ನಂಬಬಾರದು ಎಂದು ಆರ್ಥಿಕ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಸುಮಾರು 96 ಸಾವಿರಕ್ಕೂ ಹೆಚ್ಚು ಹೊರಗುತ್ತಿಗೆ ಸಿಬ್ಬಂದಿಗಳಿದ್ದಾರೆ. ಸರ್ಕಾರದ ಪ್ರತಿಯೊಂದು ನಡೆಯೂ ಇವರ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಇಂತಹ ನಕಲಿ ಆದೇಶಗಳು ಹೊರಬಂದಾಗ ನೌಕರರು ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಥವಾ ಉದ್ಯೋಗದ ಭವಿಷ್ಯದ ಬಗ್ಗೆ ತಪ್ಪು ಗ್ರಹಿಕೆ ಹೊಂದಲು ಕಾರಣವಾಗುತ್ತದೆ. ಇದರಿಂದಾಗಿ ಆಡಳಿತಾತ್ಮಕ ವ್ಯವಸ್ಥೆಯಲ್ಲೂ ಗೊಂದಲ ಉಂಟಾಗುತ್ತದೆ. ನಕಲಿ ದಾಖಲೆಗಳನ್ನು ಸೃಷ್ಟಿಸುವ ಕಿಡಿಗೇಡಿಗಳು ನೌಕರರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ ಎಂಬ ಆಕ್ರೋಶವೂ ವ್ಯಕ್ತವಾಗಿದೆ.

ಪೊಲೀಸರಿಗೆ ದೂರು

ಹೊರಗುತ್ತಿಗೆ ಅಥವಾ ಒಪ್ಪಂದ ಆಧಾರಿತ ಸಿಬ್ಬಂದಿಗಳ ಸೇವೆಗೆ ಸಂಬಂಧಿಸಿದಂತೆ ಹರಿದಾಡುತ್ತಿದ್ದ ಆದೇಶವೊಂದು ಸಂಪೂರ್ಣವಾಗಿ ನಕಲಿ ಎಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸುವುದರ ಜತೆಗೆ ನಕಲಿ ದಾಖಲೆ ಸೃಷ್ಟಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.

ನಕಲಿ ಆದೇಶವನ್ನು ಗಂಭೀರವಾಗಿ ಪರಿಗಣಿಸಿ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ. ರಾಜಮ್ಮ ವಿಧಾನಸೌಧ ಪೊಲೀಸ್ ಠಾಣೆಯ ಉಪ ಪೊಲೀಸ್ ಆಯುಕ್ತರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ಆರ್ಥಿಕ ಇಲಾಖೆಯ ಹೆಸರನ್ನು ದುರುಪಯೋಗಪಡಿಸಿಕೊಂಡು, ನಕಲಿ ಸಹಿ ಮತ್ತು ದಾಖಲೆಯನ್ನು ಸೃಷ್ಟಿಸಿದ ವ್ಯಕ್ತಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಯಾವುದೇ ಅಧಿಕೃತ ಮೂಲಗಳಿಂದ ಅಥವಾ ವಾರ್ತಾ ಇಲಾಖೆಯಿಂದ ದೃಢಪಡಿಸಿಕೊಳ್ಳದೆ, ನಕಲಿ ಆದೇಶವನ್ನೇ ನೈಜವೆಂದು ನಂಬಿ ಸುದ್ಧಿ ಬಿತ್ತರಿಸಿರುವ ಮಾಧ್ಯಮಗಳ ನಡೆಗೆ ಆರ್ಥಿಕ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಹೊರಡಿಸಲಾಗಿದೆ ಎನ್ನಲಾದ ಜ್ಞಾಪನ ಪತ್ರವು ಸಂಪೂರ್ಣವಾಗಿ ಸೃಷ್ಟಿಸಲಾದ ನಕಲಿ ದಾಖಲೆಯಾಗಿದೆ. ಅಂತಹ ಯಾವುದೇ ಆದೇಶವನ್ನು ಆರ್ಥಿಕ ಇಲಾಖೆ ಹೊರಡಿಸಿಲ್ಲ. ಹೊರಗುತ್ತಿಗೆ ನೌಕರರ ಸೇವೆ ಮುಂದುವರಿಸದ ಬಗ್ಗೆ ಯಾವುದೇ ಅಧಿಕೃತ ಸೂಚನೆ ನೀಡಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Read More
Next Story