
ಅಕ್ರಮ ಮದ್ಯ ಮಾರಾಟಗಾರರಿಗೆ ಇನ್ಮುಂದೆ ಡ್ರಗ್ಸ್ ಪೆಡ್ಲರ್‌ಗಳ ಶಿಕ್ಷೆ: ಸರ್ಕಾರ ಚಿಂತನೆ
1965ರ ಅಬಕಾರಿ ಕಾಯ್ದೆಯು ಇಂದಿನ ಕಾಲಘಟ್ಟಕ್ಕೆ ಅಷ್ಟು ಪರಿಣಾಮಕಾರಿಯಾಗಿ ಉಳಿದಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ಈ ಕಾಯ್ದೆಯನ್ನು ಸಮಗ್ರವಾಗಿ ಪರಿಷ್ಕರಿಸಲು ತೀರ್ಮಾನಿಸಿದೆ.
ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಕೃತಕ ಮದ್ಯ ತಯಾರಿಕೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲು ರಾಜ್ಯ ಸರ್ಕಾರ ಇದಿಗ ಕಠಿಣ ಹೆಜ್ಜೆ ಇರಿಸಲು ಮುಂದಾಗಿದೆ. ಹಳೆಯದಾಗಿರುವ ಕರ್ನಾಟಕ ಅಬಕಾರಿ ಕಾಯ್ದೆ 1965ಕ್ಕೆ ಹೊಸ ಸ್ವರೂಪ ನೀಡಿ ಕಾಯ್ದೆಯನ್ನು ಜಾರಿಗೆ ತರುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಅಷ್ಟೇ ಅಲ್ಲದೆ, ಅಕ್ರಮ ಮದ್ಯ ಮಾರಾಟವನ್ನು ಮಾದಕ ವಸ್ತು ನಿಯಂತ್ರಣ ಕಾಯ್ದೆಯಡಿಗೆ ತರುವ ಮೂಲಕ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಪರಿಶೀಲನೆ ನಡೆಸುತ್ತಿದೆ
ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅಕ್ರಮ ಮದ್ಯದ ದಂಧೆಯ ಕುರಿತು ಕೇಳಿದ ಪ್ರಶ್ನೆಗೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದರು.
ರಾಯಚೂರು ಜಿಲ್ಲೆಯ ಹಳ್ಳಿಗಳಲ್ಲಿ ಕಿರಾಣಿ ಅಂಗಡಿಗಳೂ ಸೇರಿದಂತೆ ಅನೇಕ ಅನಧಿಕೃತ ಸ್ಥಳಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಸ್ವಲಾಭಕ್ಕಾಗಿ ಕೆಲವರು ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಹಾಲಿ ಇರುವ 1965ರ ಅಬಕಾರಿ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳು ದಂಧೆಕೋರರಲ್ಲಿ ಯಾವುದೇ ಭಯ ಹುಟ್ಟಿಸುತ್ತಿಲ್ಲ. ಈ ಅಕ್ರಮಗಳನ್ನು ತಡೆಯಲು ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ಪ್ರತ್ಯೇಕ ವಿಶೇಷ ಕಾರ್ಯಪಡೆಯನ್ನು ರಚಿಸಬೇಕು ಎಂದು ಬಸನಗೌಡ ದದ್ದಲ್ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಅಕ್ರಮ ಮದ್ಯ ಮಾರಾಟ ಜಾಲವು ಕೇವಲ ಒಂದು ಜಿಲ್ಲೆಗೆ ಸೀಮಿತವಾಗಿಲ್ಲ, ಇದು ರಾಜ್ಯಾದ್ಯಂತ ವ್ಯಾಪಿಸಿದೆ ಎಂಬ ಕಹಿಸತ್ಯವನ್ನು ಒಪ್ಪಿಕೊಂಡರು. ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ, ಅಬಕಾರಿ ಇಲಾಖೆಯು ನಿರಂತರವಾಗಿ ಗಸ್ತು ತಿರುಗುತ್ತಿದೆ ಮತ್ತು ಹೆದ್ದಾರಿಗಳಲ್ಲಿ ಸಂಶಯಾಸ್ಪದ ವಾಹನಗಳ ತಪಾಸಣೆ ನಡೆಸುತ್ತಿದೆ. ಆದರೆ, ಇಷ್ಟಕ್ಕೇ ಈ ದಂಧೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ ಎಂದರು.
ಕಾಯ್ದೆ ಪರಿಷ್ಕರಣೆ
1965ರ ಅಬಕಾರಿ ಕಾಯ್ದೆಯು ಇಂದಿನ ಕಾಲಘಟ್ಟಕ್ಕೆ ಅಷ್ಟು ಪರಿಣಾಮಕಾರಿಯಾಗಿ ಉಳಿದಿಲ್ಲ. ಶಿಕ್ಷೆಯ ಪ್ರಮಾಣ ಕಡಿಮೆ ಇರುವುದರಿಂದ ಮತ್ತು ಕಾನೂನಿನ ಪಟ್ಟಿನಿಂದ ತಪ್ಪಿಸಿಕೊಳ್ಳಲು ದಂಧೆಕೋರರಿಗೆ ಅವಕಾಶ ಇರುವುದರಿಂದ, ಸರ್ಕಾರವು ಈ ಕಾಯ್ದೆಯನ್ನು ಸಮಗ್ರವಾಗಿ ಪರಿಷ್ಕರಿಸಲು ತೀರ್ಮಾನಿಸಿದೆ. ಇದರ ಪೈಕಿ ಅತ್ಯಂತ ಮಹತ್ವದ ನಿರ್ಧಾರವೆಂದರೆ, ಅಕ್ರಮ ಮದ್ಯ ಮಾರಾಟವನ್ನು ಮಾದಕ ವಸ್ತು ನಿಯಂತ್ರಣ ಕಾಯ್ದೆಯ ವ್ಯಾಪ್ತಿಗೆ ತರುವ ಪ್ರಯತ್ನವಾಗಿದೆ. ಒಂದು ವೇಳೆ ಇದು ಜಾರಿಯಾದಲ್ಲಿ, ಅಕ್ರಮ ಮದ್ಯ ಮಾರಾಟ ಮಾಡುವವರು ಮತ್ತು ತಯಾರಿಸುವವರು ಡ್ರಗ್ಸ್ ಪೆಡ್ಲರ್‌ಗಳಂತೆಯೇ ಕಠಿಣ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಜಾಮೀನು ಪಡೆಯುವುದು ಕಷ್ಟಕರವಾಗಲಿದ್ದು, ದೀರ್ಘಾವಧಿಯ ಜೈಲು ಶಿಕ್ಷೆ ಮತ್ತು ಭಾರೀ ದಂಡ ವಿಧಿಸಲು ಅವಕಾಶವಾಗಲಿದೆ. ಈ ಬಗ್ಗೆ ಕಾನೂನು ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಯಚೂರು ಭಾಗದಲ್ಲಿ ಕ್ಲೋರಲ್ ಹೈಡ್ರೇಟ್ ಎಂಬ ಅಪಾಯಕಾರಿ ರಾಸಾಯನಿಕ ಪುಡಿಯನ್ನು ಬಳಸಿ ಕೃತಕ ಸೇಂದಿ ತಯಾರಿಸಲಾಗುತ್ತಿದೆ. ಇದು ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಸಾವಿಗೂ ಕಾರಣವಾಗಬಹುದು. ಇದರ ಜೊತೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ರೈಲು ಹಾಗೂ ರಸ್ತೆ ಮಾರ್ಗವಾಗಿ ಅಕ್ರಮವಾಗಿ ಮದ್ಯ ಮತ್ತು ಸೇಂದಿ ಕಳ್ಳಸಾಗಾಣಿಕೆಯಾಗುತ್ತಿದೆ. ಗಡಿ ಭಾಗಗಳಲ್ಲಿ ಕಣ್ಗಾವಲು ಹೆಚ್ಚಿಸಲು ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸ್ಥಾಯಿ ಸಮಿತಿಗಳನ್ನು ರಚಿಸಲಾಗಿದೆ. ಹಲವು ಪ್ರಕರಣಗಳನ್ನು ದಾಖಲಿಸಿದರೂ, ಯಾವುದೇ ಪ್ರಯೋಜನವಾಗುತ್ತಿಲ್ಲ. ಕೇವಲ ಪ್ರಕರಣ ದಾಖಲಿಸುವುದರಿಂದ ದಂಧೆ ನಿಲ್ಲುತ್ತಿಲ್ಲ ಎಂಬ ಕಾರಣಕ್ಕೆ, ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಮೂಲವನ್ನೇ ನಾಶಪಡಿಸಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದರು.
ಅಕ್ರಮ ಮದ್ಯ ಮತ್ತು ಕೃತಕ ಸೇಂದಿ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. ಅಬಕಾರಿ ಇಲಾಖೆ ಮಾತ್ರವಲ್ಲದೆ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ, ಕಿರಾಣಿ ಅಂಗಡಿಗಳಲ್ಲಿ ಅಥವಾ ಗಲ್ಲಿಗಳಲ್ಲಿ ಮದ್ಯ ಮಾರಾಟ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

