
ಮಾಜಿ ಸ್ಪೀಕರ್ ರಮೇಶ್‌ಕುಮಾರ್‌ಗೆ ಹಿನ್ನಡೆ; 60 ಎಕರೆ ಅರಣ್ಯ ಭೂಮಿ ತೆರವಿಗೆ ಕೋರ್ಟ್ ಆದೇಶ
ಅರಣ್ಯ ಕಾಯ್ದೆಯ 64(A) ವಿಧಿಯಡಿ ಒತ್ತುವರಿ ತೆರವುಗೊಳಿಸಲು ನಿರ್ದೇಶನ ನೀಡಲಾಗಿದೆ. ಆದೇಶ ಪ್ರತಿ ತಲುಪಿದ 30 ದಿನಗಳೊಳಗೆ ಸದರಿ ಭೂಮಿಯನ್ನು ಶಾಂತಿಯುತವಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಸೂಚಿಸಿದೆ.
ಎರಡು ದಶಕಗಳಿಂದ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದ ಅರಣ್ಯ ಭೂಮಿ ಒತ್ತುವರಿ ಪ್ರಕರಣದಲ್ಲಿ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರಿಗೆ ಭಾರೀ ಹಿನ್ನಡೆಯಾಗಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿರುವ ಅರಣ್ಯ ಭೂಮಿಯನ್ನು ತಕ್ಷಣವೇ ಅರಣ್ಯ ಇಲಾಖೆಗೆ ಬಿಟ್ಟುಕೊಡುವಂತೆ ಮೇಲ್ಮನವಿ ಪ್ರಾಧಿಕಾರ ಮತ್ತು ಅರಣ್ಯ ಸಂರಕ್ಷಾಧಿಕಾರಿಗಳ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ.
ಮೇಲ್ಮನವಿ ವಜಾ; ತೆರವಿಗೆ 30 ದಿನಗಳ ಗಡುವು
ತಮ್ಮ ಮೇಲಿನ ಒತ್ತುವರಿ ಆರೋಪ ಪ್ರಶ್ನಿಸಿ ರಮೇಶ್ ಕುಮಾರ್ ಅವರು ಸಲ್ಲಿಸಿದ್ದ ಮೇಲ್ಮನವಿಯು ವಿಚಾರಣೆಗೆ ಅರ್ಹವಾಗಿಲ್ಲ ಎಂದು ನ್ಯಾಯಾಲಯವು ಅರ್ಜಿ ವಜಾಗೊಳಿಸಿದೆ. ಅರಣ್ಯ ಕಾಯ್ದೆಯ 64(A) ವಿಧಿಯಡಿ ಒತ್ತುವರಿ ತೆರವುಗೊಳಿಸಲು ನಿರ್ದೇಶನ ನೀಡಲಾಗಿದೆ. ಆದೇಶ ಪ್ರತಿ ತಲುಪಿದ 30 ದಿನಗಳೊಳಗೆ ಸದರಿ ಭೂಮಿಯನ್ನು ಶಾಂತಿಯುತವಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಸೂಚಿಸಿದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಭೂಮಿ ಹಸ್ತಾಂತರವಾಗದಿದ್ದರೆ, ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕಾನೂನುಬದ್ಧವಾಗಿ ತೆರವು ಕಾರ್ಯಾಚರಣೆ ನಡೆಸಬಹುದು ಎಂದು ನ್ಯಾಯಾಲಯ ಹೇಳಿದೆ.
ಜಂಟಿ ಸಮೀಕ್ಷೆ ವರದಿ ಆಧರಿಸಿ ಆದೇಶ
2025ರ ಜ.15 ಮತ್ತು 16ರಂದು ಅರಣ್ಯ ಮತ್ತು ಕಂದಾಯ ಇಲಾಖೆಗಳು ನಡೆಸಿದ ಜಂಟಿ ಸಮೀಕ್ಷೆಯ ವರದಿ ಆಧರಿಸಿ ಮೇಲ್ಮನವಿ ಪ್ರಾಧಿಕಾರ ಈ ಆದೇಶ ನೀಡಿದೆ. ಹೈಕೋರ್ಟ್ ನಿರ್ದೇಶನದಂತೆ ನಡೆದ ಈ ಸಮೀಕ್ಷೆಯಲ್ಲಿ ಹೊಸಹುಡ್ಯ ಗ್ರಾಮದ ಸರ್ವೆ ಸಂಖ್ಯೆ 1 ಮತ್ತು 2ರಲ್ಲಿ ಸುಮಾರು 60.23 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿರುವುದು ದೃಢಪಟ್ಟಿತ್ತು.
ರಮೇಶ್ ಕುಮಾರ್ ಅವರು ಬೇರೆ ಬೇರೆ ರೈತರಿಂದ ಖರೀದಿಸಿದ್ದ ಜಮೀನಿನ ಪೈಕಿ ಅರಣ್ಯ ಭೂಮಿಯೂ ಸೇರಿದೆ ಎಂಬ ಆರೋಪ ಕೇಳಿಬಂದಿತ್ತು. ಒಟ್ಟು 122 ಎಕರೆ ಒತ್ತುವರಿ ಆರೋಪವು ರಮೇಶ್ ಕುಮಾರ್ ಅವರ ಮೇಲಿತ್ತು.
ದಿವಂಗತ ಜಿಲ್ಲಾಧಿಕಾರಿ ಡಿ.ಕೆ. ರವಿ ಅವಧಿಯಲ್ಲಿ ಮೊದಲ ಬಾರಿಗೆ ಜಂಟಿ ಸಮೀಕ್ಷೆ ನಡೆದಿತ್ತು. ಸಮೀಕ್ಷೆ ಗೊಂದಲಗಳ ಹಿನ್ನೆಲೆಯಲ್ಲಿ ಮರು ಸಮೀಕ್ಷೆ ನಡೆಸುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಅದರಂತೆ ಇತ್ತೀಚೆಗೆ ರಾಜ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಸೆಂಗುಟ್ಟಿವೇಲ್ ಅವರು ವರದಿ ಸಲ್ಲಿಸುವಂತೆ ಡಿಎಫ್ಓ ಅವರಿಗೆ ಆದೇಶಿಸಿದ್ದರು.
ಜಿನಗಲಕುಂಟೆ ಅರಣ್ಯ ವಲಯಕ್ಕೆ ಜಯ
ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಕುಂಟೆ ಅರಣ್ಯ ವಲಯಕ್ಕೆ ಸೇರಿದ ಈ ಭೂಮಿಯನ್ನು ಉಳಿಸಿಕೊಳ್ಳಲು ಅರಣ್ಯ ಇಲಾಖೆ ನಡೆಸಿದ ಸುದೀರ್ಘ ಕಾನೂನು ಹೋರಾಟಕ್ಕೆ ಈಗ ಜಯ ಸಿಕ್ಕಂತಾಗಿದೆ. ಜಿಲ್ಲಾ ಅರಣ್ಯ ಅಧಿಕಾರಿ (DFO) ಏಡುಕುಂಡಲ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, "2013ರಲ್ಲಿಯೇ ಉಚ್ಚ ನ್ಯಾಯಾಲಯವು ಒತ್ತುವರಿ ದೃಢಪಟ್ಟಲ್ಲಿ ಕ್ರಮ ಕೈಗೊಳ್ಳಲು ಸೂಚಿಸಿತ್ತು. ಈಗಿನ ಜಂಟಿ ಸರ್ವೆ ವರದಿಯ ಆಧಾರದ ಮೇಲೆ ನ್ಯಾಯಾಲಯ ಈ ಮಹತ್ವದ ಆದೇಶ ನೀಡಿದೆ," ಎಂದು ತಿಳಿಸಿದ್ದಾರೆ.
ಈ ಆದೇಶದಿಂದಾಗಿ ರಮೇಶ್ ಕುಮಾರ್ ಅವರ ಸುಪರ್ದಿಯಲ್ಲಿದ್ದ 60 ಎಕರೆಗೂ ಅಧಿಕ ಭೂಮಿಯನ್ನು ಇದೀಗ ಅರಣ್ಯ ಇಲಾಖೆಗೆ ಒಪ್ಪಿಸುವ ಅನಿವಾರ್ಯತೆ ಎದುರಾಗಿದ್ದು, ಜಿಲ್ಲಾ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.

