ಮನೆ ಇದ್ದರೂ ದಾಖಲೆ ಇಲ್ವಾ? ಚಿಂತೆ ಬಿಡಿ: ಇ-ಸ್ವತ್ತು ಸಕ್ರಮಗೊಳಿಸಲು ಸರ್ಕಾರ ಪರಿಹಾರ
x

ಮನೆ ಇದ್ದರೂ ದಾಖಲೆ ಇಲ್ವಾ? ಚಿಂತೆ ಬಿಡಿ: ಇ-ಸ್ವತ್ತು ಸಕ್ರಮಗೊಳಿಸಲು ಸರ್ಕಾರ ಪರಿಹಾರ

ರಾಜ್ಯ ಗ್ರಾಮೀಣ ಭಾಗದ ಲಕ್ಷಾಂತರ ಕುಟುಂಬಗಳು ದಶಕಗಳಿಂದ ಎದುರಿಸುತ್ತಿದ್ದ ಅತ್ಯಂತ ಜಟಿಲ ಸಮಸ್ಯೆಯಾದ ಇ-ಸ್ವತ್ತು ದಾಖಲಾತಿ ಗೊಂದಲಕ್ಕೆ ರಾಜ್ಯ ಸರ್ಕಾರವು ತೆರೆ ಎಳೆಯುವ ಕಾರ್ಯ ಕೈಗೊಂಡಿದೆ.


Click the Play button to hear this message in audio format

ರಾಜ್ಯ ಗ್ರಾಮೀಣ ಭಾಗದ ಲಕ್ಷಾಂತರ ಕುಟುಂಬಗಳು ದಶಕಗಳಿಂದ ಎದುರಿಸುತ್ತಿದ್ದ ಅತ್ಯಂತ ಜಟಿಲ ಸಮಸ್ಯೆಯಾದ ಇ-ಸ್ವತ್ತು ದಾಖಲಾತಿ ಗೊಂದಲಕ್ಕೆ ರಾಜ್ಯ ಸರ್ಕಾರವು ತೆರೆ ಎಳೆಯುವ ಕಾರ್ಯ ಕೈಗೊಂಡಿದೆ. ಸ್ವಂತ ಕೃಷಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿದ್ದರೂ ಅಧಿಕೃತ ದಾಖಲೆಗಳಿಲ್ಲದೆ ಬ್ಯಾಂಕ್ ಸಾಲ, ಆಸ್ತಿ ಪರಭಾರೆ ಮತ್ತು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈ ನೂತನ ತಿದ್ದುಪಡಿ ಕಾಯಿದೆಯು ಸಹಕಾರಿಯಾಗಿದೆ.

ವಿಧಾನ ಪರಿಷತ್ತಿನಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಗಮನಸೆಳೆಯುವ ಸೂಚನೆ ವೇಳೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಫಲಾನುಭವಿಗಳು ತಮಗೆ ಸರ್ಕಾರದಿಂದ ಮಂಜೂರಾದ ವಸತಿ ಯೋಜನೆಗಳ ಅಡಿಯಲ್ಲಿ ಅಥವಾ ಸ್ವಂತ ಆಸಕ್ತಿಯಿಂದ ತಮ್ಮದೇ ಆದ ಸಣ್ಣ ಕೃಷಿ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಆದರೆ, ಕರ್ನಾಟಕ ಭೂ ಕಂದಾಯ ಕಾಯಿದೆಯ ಅಡಿಯಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತನೆ ಮಾಡದೆ ಮನೆ ಕಟ್ಟಿದಾಗ, ಅಂತಹ ಆಸ್ತಿಗಳಿಗೆ ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ನೀಡಲು ತಾಂತ್ರಿಕ ಅಡೆತಡೆಗಳಿದ್ದವು. ಇದರಿಂದಾಗಿ, ಮನೆ ಇದ್ದರೂ ಅದು ಕಾನೂನುಬದ್ಧವಾಗಿ ದಾಖಲೆ ರಹಿತ ಕಟ್ಟಡವಾಗಿ ಉಳಿಯುತ್ತಿತ್ತು. ಈ ಸಮಸ್ಯೆಯಿಂದಾಗಿ ಗ್ರಾಮೀಣ ಜನರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಆಸ್ತಿಯನ್ನು ಕಾನೂನುಬದ್ಧವಾಗಿ ಮಾರಾಟ ಮಾಡಲು ಅಥವಾ ಉತ್ತರಾಧಿಕಾರಿಗಳಿಗೆ ಹಸ್ತಾಂತರಿಸಲು ಸಂಕಷ್ಟ ಅನುಭವಿಸುತ್ತಿದ್ದರು ಎಂದು ಹೇಳಿದರು.

ಸರ್ಕಾರದ ದಿಟ್ಟ ಹೆಜ್ಜೆ

ಈ ಗಂಭೀರ ಸಮಸ್ಯೆಯನ್ನು ಮನಗಂಡ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ತಂದಿದೆ. ಈ ತಿದ್ದುಪಡಿ ಅಧಿನಿಯಮದಲ್ಲಿ 199ಬಿ ಮತ್ತು 199ಸಿ ಎಂಬ ಹೊಸ ಅಂಶಗಳನ್ನು ಸೇರಿಸಲಾಗಿದೆ. ಸರ್ಕಾರವು ಕೃಷಿ ಭೂಮಿಯಲ್ಲಿ ಈಗಾಗಲೇ ನಿರ್ಮಿಸಲಾದ ಮನೆಗಳನ್ನು ಕಾನೂನುಬದ್ಧಗೊಳಿಸುವ ಮತ್ತು ಅವುಗಳಿಗೆ ಇ-ಸ್ವತ್ತು ದಾಖಲೆ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಸಮಸ್ಯೆಯನ್ನು ಸರ್ಕಾರವು ಎರಡು ಕಾಲಘಟ್ಟಗಳಾಗಿ ವಿಂಗಡಿಸಿ ಪರಿಹಾರ ಸೂಚಿಸಿದೆ. 2025ರ ಏ.7ಕ್ಕಿಂತ ಮೊದಲು ಯಾರು ಕೃಷಿ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೋ, ಅಂತಹ ಕಟ್ಟಡಗಳಿಗೆ ನಮೂನೆ 11ಬಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದು ಅಸ್ತಿತ್ವದಲ್ಲಿರುವ ಲಕ್ಷಾಂತರ ಮನೆಗಳಿಗೆ ಅಧಿಕೃತ ಮಾನ್ಯತೆ ನೀಡಲಿದೆ. ಇದರಿಂದ ಆಸ್ತಿ ತೆರಿಗೆ ಪಾವತಿಸಲು ಮತ್ತು ಆಸ್ತಿಯ ಗುರುತಿನ ಚೀಟಿ ಪಡೆಯಲು ಸಾರ್ವಜನಿಕರಿಗೆ ಸುಲಭವಾಗಲಿದೆ ಎಂದು ತಿಳಿಸಿದರು.

2025, ಏ.7ರ ನಂತರ ಹೊಸದಾಗಿ ಮನೆ ನಿರ್ಮಿಸುವವರು ಶಿಸ್ತುಬದ್ಧವಾಗಿ ನಿಯಮ ಪಾಲಿಸಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಕಾಯಿದೆಯ ಪ್ರಕರಣ 199ಬಿ ಮತ್ತು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ 1961ರ ಅನ್ವಯ ಕಡ್ಡಾಯವಾಗಿ ಭೂ ಪರಿವರ್ತನೆ ಮತ್ತು ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದ ಆಸ್ತಿಗಳಿಗೆ ಮಾತ್ರ ಹೊಸ ಖಾತಾ ನೀಡಲಾಗುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇಕಾಬಿಟ್ಟಿ ಲೇಔಟ್‌ಗಳು ತಲೆ ಎತ್ತುವುದನ್ನು ತಡೆಯಲು ಸರ್ಕಾರವು ಈ ಬಾರಿ ಪೂರ್ವಾನ್ವಯ ಅನುಮೋದನೆಯನ್ನು ಕಡ್ಡಾಯಗೊಳಿಸಿದೆ. ಸಂಬಂಧಪಟ್ಟ ಯೋಜನಾ ಪ್ರಾಧಿಕಾರದ ಮೂಲಕ ಅನುಮೋದನೆ ಪಡೆದ ನಂತರವೇ ಗ್ರಾಮ ಪಂಚಾಯಿತಿಗಳು ಹೊಸ ಖಾತೆಗಳನ್ನು ಸೃಷ್ಟಿಸಬೇಕಾಗುತ್ತದೆ. ಇದು ಗ್ರಾಮೀಣ ಭಾಗದ ನಗರೀಕರಣ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲಿದ್ದು, ರಸ್ತೆ, ಚರಂಡಿ ಮತ್ತು ಪಾರ್ಕ್‌ಗಳಂತಹ ಮೂಲಭೂತ ಸೌಕರ್ಯಗಳಿಗೆ ಜಾಗ ಮೀಸಲಿಡುವುದನ್ನು ಖಚಿತಪಡಿಸಲಿದೆ ಎಂದರು.

ಫಲಾನುಭವಿಗಳಿಗಾಗುವ ಪ್ರಯೋಜನ

ಈ ಹೊಸ ಸುಧಾರಣೆಯಿಂದ ಗ್ರಾಮೀಣ ಜನರಿಗೆ ಹಲವಾರು ಅನುಕೂಲಗಳು ಲಭಿಸಲಿವೆ. ಇ-ಸ್ವತ್ತು ದಾಖಲೆ ಸಿಗುವುದರಿಂದ ರೈತರು ಮತ್ತು ಗ್ರಾಮೀಣ ಕೂಲಿ ಕಾರ್ಮಿಕರು ತಮ್ಮ ಮನೆಯ ಮೇಲೆ ಗೃಹ ಸಾಲ ಅಥವಾ ಉದ್ಯಮ ಸಾಲ ಪಡೆಯಲು ಅರ್ಹರಾಗುತ್ತಾರೆ. ಅನಧಿಕೃತ ಎಂಬ ಹಣೆಪಟ್ಟಿ ಕಳಚುವುದರಿಂದ ಆಸ್ತಿಯ ಮೌಲ್ಯ ಹೆಚ್ಚಾಗುತ್ತದೆ ಮತ್ತು ಕಾನೂನುಬದ್ಧ ಮಾಲೀಕತ್ವ ಸಾಬೀತಾಗುತ್ತದೆ. ವಸತಿ ಯೋಜನೆಗಳ ಅಡಿಯಲ್ಲಿ ನಿರ್ಮಿಸಲಾದ ಮನೆಗಳಿಗೂ ಈಗ ಪೂರ್ಣ ಪ್ರಮಾಣದ ದಾಖಲೆ ಸಿಗುವುದರಿಂದ ಸರ್ಕಾರದ ಇತರೆ ಸೌಲಭ್ಯಗಳನ್ನು ಪಡೆಯಲು ಸುಲಭವಾಗುತ್ತದೆ. ಇ-ಸ್ವತ್ತು ತಂತ್ರಾಂಶದ ಮೂಲಕ ದಾಖಲೆಗಳು ದೊರೆಯುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದ್ದು, ಪಂಚಾಯತ್ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ ಎಂದು ತಿಳಿಸಿದರು.

ಗ್ರಾಮೀಣ ಜನರು ತಮ್ಮ ಇಡೀ ಜೀವನದ ಗಳಿಕೆಯನ್ನು ಹಾಕಿ ಮನೆ ಕಟ್ಟಿಕೊಂಡರೂ ದಾಖಲೆಗಳಿಲ್ಲದೆ ಪರದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು. ಈ ತಾಂತ್ರಿಕ ಅಡೆತಡೆಯು ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ಅಡ್ಡಿಯಾಗಿತ್ತು. ನಮ್ಮ ಸರ್ಕಾರವು ಕೇವಲ ಭರವಸೆ ನೀಡದೆ, ಕಾನೂನಿಗೆ ತಿದ್ದುಪಡಿ ತರುವ ಮೂಲಕ ಶಾಶ್ವತ ಪರಿಹಾರ ನೀಡಿದೆ. ಈ ಸುಧಾರಣೆಯು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಡಿಜಿಟಲ್ ಕ್ರಾಂತಿಗೆ ಪೂರಕವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Read More
Next Story