
700 ಕೋಟಿ ರೂ.ಬಿಡುಗಡೆ; ‘ಮನವೊಲಿಕೆ’ ತಂತ್ರಕ್ಕೆ ಬಗ್ಗಲ್ಲ, ನಾಳೆ ಮುಷ್ಕರ ಖಚಿತ ಎಂದ ಗುತ್ತಿಗೆದಾರರು
ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ 700 ಕೋಟಿ ರೂ. ಕೇವಲ ಬೆಂಗಳೂರು ವ್ಯಾಪ್ತಿಯ ಕಾಮಗಾರಿಗಳ ಬಾಕಿ ಹಣವಾಗಿದೆ. ಪ್ರಮುಖ ಬೇಡಿಕೆಗಳಿಗೂ, ಇದಕ್ಕೂ ಸಂಬಂಧವಿಲ್ಲ ಎಂದು ಗುತ್ತಿಗೆದಾರರ ಸಂಘ ಸ್ಪಷ್ಟಪಡಿಸಿದೆ.
ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿಸಿಕೊಂಡಿರುವ 37 ಸಾವಿರ ಕೋಟಿ ರೂ. ಪಾವತಿಸಲು ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರಕ್ಕೆ ಗಡುವು ನೀಡಿರುವ ಬೆನ್ನಲ್ಲೇ ಬುಧವಾರ 700 ಕೋಟಿ ರೂ. ಬಾಕಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಆ ಮೂಲಕ ಗುತ್ತಿಗೆದಾರರ ಮನವೊಲಿಸಲು ಪ್ರಯತ್ನಿಸಿದರೂ ಗುತ್ತಿಗೆದಾರರು ನಾಳೆ(ಮಾ.5) ಮುಷ್ಕರ ನಡೆಸುವುದು ಖಚಿತ ಎಂದು ರಾಜ್ಯ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.
ಪ್ರಸ್ತುತ, ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ 700 ಕೋಟಿ ರೂ. ಹಣಕ್ಕೂ, ವಿವಿಧ ಇಲಾಖೆಗಳ 37 ಸಾವಿರ ಕೋಟಿ ರೂ. ಬಾಕಿ ಹಣಕ್ಕೂ ಯಾವುದೇ ಸಂಬಂಧ ಇಲ್ಲ. ಮುಷ್ಕರ ನಡೆಸಿಯೇ ತೀರುತ್ತೇವೆ ಎಂದು ಗುತ್ತಿಗೆದಾರರ ಸಂಘವು ಖಡಾಖಂಡಿತವಾಗಿ ಹೇಳಿದೆ.
700 ಕೋಟಿ ರೂ.ಯಾವುದು ?
ರಾಜ್ಯ ಸರ್ಕಾರ ಬುಧವಾರ ಬಿಡುಗಡೆ ಮಾಡಿರುವ 700 ಕೋಟಿ ರೂ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಬಾಕಿ ಹಣವಾಗಿದೆ. ವಿವಿಧ ಇಲಾಖೆಗಳ ಕಾಮಗಾರಿಗಳ ಬಾಕಿ ಹಣವಲ್ಲ. ಸರ್ಕಾರ 700 ಕೋಟಿ ರೂ.ಗಳನ್ನೇ ವಿವಿಧ ಇಲಾಖೆಗಳ ಬಾಕಿ ಹಣ ಎಂದು ಬಿಂಬಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ʼದ ಫೆಡರಲ್ ಕರ್ನಾಟಕʼಕ್ಕೆ ಸ್ಪಷ್ಟ ಪಡಿಸಿದ್ದಾರೆ.
ಏನಿದು ಬಾಕಿ 37 ಸಾವಿರ ಕೋಟಿ ?
ರಾಜ್ಯ ಸರ್ಕಾರವು ಕಳೆದ ಎರಡೂವರೆ ವರ್ಷಗಳಿಂದ ಸುಮಾರು 37 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ವಿವಿಧ ಇಲಾಖೆಗಳಲ್ಲಿ ಕಮಿಷನ್ ದಂಧೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಇತ್ತೀಚೆಗಷ್ಟೆ ಗುತ್ತಿಗೆದಾರರ ಸಂಘ ಆರೋಪಿಸಿತ್ತು.
ರಾಜ್ಯದಲ್ಲಿ ಪ್ರಸ್ತುತ ಬಿಲ್ ಪಾವತಿಸುವಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಅಧಿಕಾರಿಗಳು ಸಚಿವರನ್ನು ಓಲೈಸಲು ಕಮಿಷನ್ ಪ್ರಮಾಣ ಏರಿಕೆ ಮಾಡಿದ್ದಾರೆ. ವಿಶೇಷವಾಗಿ ಹೌಸಿಂಗ್ ಮತ್ತು ಸಣ್ಣ ನೀರಾವರಿ ಇಲಾಖೆಗಳಲ್ಲಿ ಕಮಿಷನ್ ದಂಧೆ ಮಿತಿಮೀರಿದೆ. ಲೋಕೋಪಯೋಗಿ ಇಲಾಖೆ ಹಾಗೂ ಬಿಬಿಎಂಪಿಯಲ್ಲಿ ಇದರ ಪ್ರಮಾಣ ತುಲನಾತ್ಮಕವಾಗಿ ಕಡಿಮೆ ಇದೆ. ಹಿರಿತನದ ಆಧಾರದ ಮೇಲೆ ಬಿಲ್ ಪಾವತಿ ಮಾಡದೇ ಕೇವಲ ಪ್ರಭಾವ ಇರುವವರಿಗೆ ಮಾತ್ರ ಹಣ ನೀಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಕಮಿಷನ್ ಕೊಟ್ಟಿದ್ದಕ್ಕೆ ದಾಖಲೆ ಕೇಳುವುದು ಸರಿಯಲ್ಲ ಎಂದು ಸಂಘದ ಅಧ್ಯಕ್ಷ ಮಂಜುನಾಥ್ ಕಿಡಿಕಾರಿದ್ದರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಬಾಕಿ ಮೊತ್ತದ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಸಂಘವು, ಜಲಸಂಪನ್ಮೂಲ ಇಲಾಖೆಯಲ್ಲಿ 13 ಸಾವಿರ ಕೋಟಿ ರೂ., ಬಿಬಿಎಂಪಿಯಲ್ಲಿ 6 ಸಾವಿರ ಕೋಟಿ ರೂ. ಹಾಗೂ ಹಾಸನ ಜಿಲ್ಲೆಯೊಂದರಲ್ಲೇ 1,200 ಕೋಟಿ ರೂ. ಬಾಕಿ ಇದೆ ಎಂದು ತಿಳಿಸಿತ್ತು.
ಮಾರ್ಚ್ 5 ರಂದು ಮುಷ್ಕರ
ಬಾಕಿ ಬಿಲ್ ಬಿಡುಗಡೆಗೆ ಮಾರ್ಚ್ 5 ರಂದು ರಾಜ್ಯಾದ್ಯಂತ ಕೆಲಸ ನಿಲ್ಲಿಸಿ ಬೃಹತ್ ಮುಷ್ಕರ ನಡೆಸಲು ಗುತ್ತಿಗೆದಾರರ ಸಂಘವು ಮುಂದಾಗಿದ್ದು, ಈಗಾಗಲೇ ಈ ಕುರಿತು ನೂರು ಪುಟಗಳ ವಿಸ್ತೃತ ವರದಿಯನ್ನು ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದೆ.

