
Human Wildlife Conflict| ಮಿತಿಮೀರಿದ ಚಿರತೆ, ಆನೆ ಸಂಖ್ಯೆ: ಸಂತಾನಹರಣ ಕ್ರಮಕ್ಕೆ ರಾಜ್ಯ ಅರಣ್ಯ ಇಲಾಖೆ ಚಿಂತನೆ
ಚಿರತೆಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಕಾನೂನು ತರಲು ಬೇಡಿಕೆಯಿಟ್ಟಿರುವ ರಾಜ್ಯಗಳ ಪೈಕಿ ಈಗ ಕರ್ನಾಟಕ ಸೇರಿದೆ. ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶ ಈ ನಿಟ್ಟಿನಲ್ಲಿ ಕ್ರಮ ವಹಿಸಿವೆ.
ಮಿತಿಮೀರಿದ ಸಂಖ್ಯೆಯಲ್ಲಿ ಬೆಳೆಯುತ್ತಿರುವ ಚಿರತೆಗಳು ನಾಡಿಗೆ ನುಗ್ಗಿ ವನ್ಯಜೀವಿ-ಮಾನವ ಸಂಘರ್ಷಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಅವುಗಳ ಸಂತಾನ ಶಸ್ತ್ರಚಿಕಿತ್ಸೆ ಮಾಡಿ ನಿಯಂತ್ರಿಸುವ ಇರಾದೆ ಕರ್ನಾಟಕ ಸರ್ಕಾರದಿಂದ ವ್ಯಕ್ತವಾಗಿದೆ.
ರಾಜ್ಯದಲ್ಲಿ ಚಿರತೆ ಸೇರಿದಂತೆ ಕೆಲವು ಆಯ್ದ ವನ್ಯಜೀವಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿದೆ. ಇದು ಆಗಾಗ ವನ್ಯಜೀವಿ-ಮಾನವ ಸಂಘರ್ಷಕ್ಕೆ ಕಾರಣವಾಗುತ್ತಿದ್ದು, ಅಪಾರ ಪ್ರಮಾಣದ ಸಾವುನೋವುಗಳು ಸಂಭವಿಸಿವೆ. ಈಗ ಆಯ್ದ ವನ್ಯಜೀವಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಸಂಬಂಧ ಕಾನೂನು ತರಲು ಪ್ರಸ್ತಾವನೆ ಇಟ್ಟಿರುವ ರಾಜ್ಯಗಳ ಪೈಕಿ ಈಗ ಕರ್ನಾಟಕವೂ ಸೇರಿದೆ.
ಇಲ್ಲಿಯವರೆಗೆ ಮಹಾರಾಷ್ಟ್ರ, ಗುಜರಾತ್ ಮತ್ತು ಉತ್ತರಪ್ರದೇಶ ರಾಜ್ಯಗಳು ಚಿರತೆಗಳ ಸಂತಾನಹರಣ ಶಸ್ತ್ರಕ್ರಿಯೆ ಸಂಬಂಧ ನಿಟ್ಟಿನಲ್ಲಿ ಕ್ರಮ ವಹಿಸಿದ್ದು, ಈಗ ಕರ್ನಾಟಕವೂ ಬೇಡಿಕೆಯನ್ನಿಟ್ಟಿದೆ. ಒಂದು ಹಂತದಲ್ಲಿ ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಸಾಲಿನಲ್ಲಿರುವ ಚಿರತೆ (Indian Leapord) ಮತ್ತು ಆನೆಗಳ ಸಂಖ್ಯೆ ಈಗ ಮಿತಿಮೀರಿದ್ದು, ಮನುಷ್ಯ ಬದುಕಿನ ಜತೆ ಸಂಘರ್ಷಕ್ಕೆ ಕಾರಣವಾಗಿರುವ ಚಿರತೆಗಳು ಸೇರಿದಂತೆ ಆಯ್ದ ವನ್ಯಜೀವಿಗಳನ್ನು ನಿಯಂತ್ರಿಸಲು ಕರ್ನಾಟಕ ಮುಂದಾಗಿದೆ.
ಈ ಬಗ್ಗೆ ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ ನೀಡಿದ್ದು, "ಮಿತಿಮೀರಿದ ಸಂಖ್ಯೆಯ ಕಾಡುಪ್ರಾಣಿಗಳು ಮತ್ತು ಮಾನವನ ಸಂಘರ್ಷ ಪ್ರಕರಣಗಳು ಹೆಚ್ಚುತ್ತಿದ್ದು, ಅವುಗಳ ಕಡಿವಾಣ ಅಗತ್ಯ. ಹಾಗಾಗಿ ಪ್ರಾಣಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಅಥವಾ ಸಂತಾನ ನಿಯಂತ್ರಣ ಚುಚ್ಚುಮದ್ದು ನೀಡುವ ಬಗ್ಗೆ ಅರಣ್ಯ ಇಲಾಖೆ ಪ್ರಸ್ತಾವನೆ ನೀಡಿದೆ," ಎಂದಿದ್ದಾರೆ.
"ಮಾನವ, ಪ್ರಾಣಿಗಳ ಜೀವಗಳಿಗೆ ಹಾನಿ ಆಗುತ್ತಿದೆ. ಪ್ರಾಣಿಗಳ ಶಸ್ತ್ರಚಿಕಿತ್ಸೆ ಅಥವಾ ಸಂತಾನಹರಣ ಚುಚ್ಚುಮದ್ದು ನೀಡುವ ಬಗ್ಗೆ ಕೇವಲ ಪ್ರಸ್ತಾವನೆ ಮಾತ್ರವಿದೆ. ಈ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಯುತ್ತಿದೆ. ಈ ವಿಷಯ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಹಾಗಾಗಿ ಈ ಬಗ್ಗೆ ಚಿಂತನೆ ಮಾತ್ರ ನಡೆದಿದೆ," ಎಂದು ಸ್ಪಷ್ಟೀಕರಿಸಿದರು.
ಪಶ್ಚಿಮ ಬಂಗಾಲದಲ್ಲಿ ಆನೆಗಳ ಸಂತಾನ ಹರಣ ಚಿಕಿತ್ಸೆಗೆ ಅಲ್ಲಿನ ಸರ್ಕಾರ ಯತ್ನಿಸಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲಾಗಿಒದೆ. ಕರ್ನಾಟಕದಲ್ಲೂ ಬೃಹತ್ ಸಂಖ್ಯೆಯಲ್ಲಿರುವ ಹಾಗೂ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿರುವ ಆನೆಗಳಿಗೆ ಸಂತಾನಹರಣ ಚುಚ್ಚುಮದ್ದು (immuno-contraception) ನೀಡುವ ಕ್ರಮದ ಬಗ್ಗೆ ಯೋಚನೆ ನಡೆದಿದೆ. ಈ ಬಗ್ಗೆ ಕಳೆದ ಫೆಬ್ರವರಿಯಲ್ಲಿ ನಾಗರಹೊಳೆಯಲ್ಲಿ ನಡೆದಿದ್ದ ರಾಷ್ಟ್ರೀಯ ವಿಚಾರಣ ಸಂಕಿರಣದ (Big Cat Alliance Summit)ದಲ್ಲೂ ಅಧಿಕಾರಿಗಳು ಚರ್ಚೆ ಮಾಡಿದ್ದರು.
"ಯಾವ ಪ್ರಾಣಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಬೇಕು ಅಥವಾ ಸಂತಾನಹರಣ ಚುಚ್ಚು ಮದ್ದು ನೀಡಬೇಕು ಎಂಬ ಬಗ್ಗೆ ಇನ್ನೂ ಪಟ್ಟಿ ತಯಾರಿಸಿಲ್ಲ. ಈ ವಿಷಯ ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚೆಯಾಗಬೇಕು ಎಂಬ ಕಾರಣಕ್ಕೆ ಈ ಪ್ರಸ್ತಾವನೆ ಇಡಲಾಗಿದೆ. ಅನೇಕ ಕಡೆ ಚಿರತೆಗಳ ಸಂಖ್ಯೆ ಬಹಳ ಜಾಸ್ತಿಯಾಗಿ ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಈ ರೀತಿಯ ಪ್ರಸ್ತಾಪ ಇದೆ. ದೇಶ ವಿದೇಶಗಳಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಇದಕ್ಕೊಂದು ಪರಿಹಾರ ಮಾಡಬೇಕು ಎಂಬ ಭಾವನೆಯಷ್ಟೇ ಇಲಾಖೆಗೆ ಇದೆ," ಎಂದು ಖಂಡ್ರೆ ವಿವರಿಸಿದ್ದಾರೆ.
"ಪ್ರಾಣಿಗಳ ಸಂತಾನ ನಿಯಂತ್ರಣ ತಾತ್ಕಾಲಿಕವಾಗಿ ಮಾಡಲಾಗುತ್ತದೆ. ಒಂದು ವರ್ಷ, ಎರಡು ವರ್ಷ ಅಥವಾ ಎಲ್ಲೆಲ್ಲಿ ಸಮಸ್ಯೆ ಆಗುತ್ತೋ ಅಲ್ಲಿ ಎರಡು ವರ್ಷದ ತನಕ ಈ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಬಗ್ಗೆ ಪ್ರಸ್ತಾವನೆಯಲ್ಲಿ ವಿವರಣೆ ಇದೆ," ಎಂದು ಅವರು ಹೇಳಿದ್ದಾರೆ.
ಯಾವ ರಾಜ್ಯಗಳು ಆನೆಗಳ ಚಿರತೆಗಳ ಸಂತಾನಹರಣಕ್ಕೆ ಆಸ್ಥೆ ವಹಿಸಿವೆ?
ಪಶ್ಚಿಮ ಬಂಗಾಲದಲ್ಲಿ ಆನೆಗಳಿಂದ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಲು ಅಲ್ಲಿನ ಸರ್ಕಾರ ಸಂತಾನಹರಣ ಚುಚ್ಚುಮದ್ದು (Immuno-Contraception,) ನೀಡುವ ಬಗ್ಗೆ ಯೋಚನೆ ನಡೆಸಿತ್ತು.
ಅದೇ ರೀತಿ, ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಚಿರತೆ ಮತ್ತು ಮಾನವ ಸಂಘರ್ಷವನ್ನು ತಡೆಗಟ್ಟಲು ಅಲ್ಲಿನ ರಾಜ್ಯ ಸರ್ಕಾರವು ಕೈಗೊಂಡಿರುವ 'ಚಿರತೆಗಳ ಸಂತಾನಹರಣ ಚಿಕಿತ್ಸೆ' (Sterilisation) ಯೋಜನೆಗೆ ಮುಂದಾಗಿತ್ತು. ಮಹಾರಾಷ್ಟ್ರವು ಭಾರತದಲ್ಲಿ ಅತಿ ಹೆಚ್ಚು ಚಿರತೆಗಳನ್ನು ಹೊಂದಿರುವ ನಾಲ್ಕನೇ ರಾಜ್ಯವಾಗಿದೆ. ನೀರಾವರಿ ಸೌಲಭ್ಯ ಹೆಚ್ಚಾದಂತೆ ಕಬ್ಬಿನ ಗದ್ದೆಗಳು ಚಿರತೆಗಳಿಗೆ ಸುರಕ್ಷಿತ ವಾಸಸ್ಥಾನವಾಗಿ ಮಾರ್ಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಅನೇಕ ಚಿರತೆ ದಾಳಿ ಪ್ರಕರಣಗಳು ನಡೆದಿದ್ದು, ಸಾವು-ನೋವುಗಳ ಸಂಖ್ಯೆಯೂ ಏರಿಕೆಯಾಗಿತ್ತು ಈ ಸಮಸ್ಯೆಗೆ ಪರಿಹಾರವಾಗಿ ಚಿರತೆಗಳ ಸಂತತಿ ನಿಯಂತ್ರಿಸಲು ಸಂತಾನಹರಣ ಚಿಕಿತ್ಸೆ ನಡೆಸುವ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲು ಅಲ್ಲಿನ ಸರ್ಕಾರ ಯತ್ನಿಸಿತ್ತು .
ಬಳಿಕ ಆ ಬಗ್ಗೆ ಕಾನೂನು ಜಾರಿಗೆ ತರಲೂ ಮಹಾರಾಷ್ಟ್ರ ಮುಂದಾಗಿತ್ತು. ಕೇಂದ್ರ ಸರ್ಕಾರದ ಅನುಮೋದನೆ ಇಲ್ಲದೆಯೇ ಚಿರತೆಗಳನ್ನು ಸ್ಥಳಾಂತರಿಸಲು ಮತ್ತು ಅವುಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲು ಮುಖ್ಯ ವನ್ಯಜೀವಿ ವಾರ್ಡನ್‌ಗೆ ಅಧಿಕಾರ ನೀಡುವ 'ವನ್ಯಜೀವಿ ಸಂರಕ್ಷಣೆ (ಮಹಾರಾಷ್ಟ್ರ ತಿದ್ದುಪಡಿ) ವಿಧೇಯಕ, 2026' ಕ್ಕೆ ಇತ್ತೀಚೆಗೆ ಅಲ್ಲಿನ ವಿಧಾನಸಭೆ ಒಪ್ಪಿಗೆ ನೀಡಿತ್ತು. ಇದು ಅಧಿಕೃತವಾಗಿ ಜಾರಿಗೆ ಬರುವ ಮೊದಲು ರಾಜ್ಯಪಾಲರ ಅನುಮೋದನೆ ಮತ್ತು ರಾಷ್ಟ್ರಪತಿಯವರ ಅಂಕಿತದ ಅಗತ್ಯವಿದೆ. ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾನವ ವಸತಿ ಪ್ರದೇಶಗಳಿಗೆ ನುಗ್ಗುತ್ತಿರುವುದರಿಂದ, ಅವುಗಳನ್ನು ಸೆರೆಹಿಡಿಯುವ ಪ್ರಕ್ರಿಯೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ಈ ವಿಧೇಯಕವನ್ನು ಮಂಡಿಸಲಾಗಿತ್ತು.
ಬಳಿಕ ಗುಜರಾತ್ ಸರ್ಕಾರವು ಗಿರ್ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಗಳ ಸಂಖ್ಯೆಯನ್ನು ನಿಯಂತ್ರಿಸಲು ಸಂತಾನಹರಣ ಯೋಜನೆ ಪ್ರಸ್ತಾವನೆಯನ್ನು ಕೇಂದ್ರಕ್ಕೆ 2021 ಮತ್ತು 2023ರಲ್ಲಿ ಸಲ್ಲಿಸಿತ್ತು. ಮಹಾರಾಷ್ಟ್ರದ ಮಾದರಿಯನ್ನು ಅನುಸರಿಸಿ, ಇತ್ತೀಚೆಗೆ (ಮಾರ್ಚ್ 2026ರಲ್ಲಿ) ಅಲ್ಲಿನ ಅರಣ್ಯ ಇಲಾಖೆಯು ಕೂಡ ಚಿರತೆಗಳ ಸಂತಾನಹರಣದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದೆ.
ಚಿರತೆ: ಕರ್ನಾಟಕ ಮೂರನೇ ಸ್ಥಾನದಲ್ಲಿ
ರಾಜ್ಯದಲ್ಲಿ ಚಿರತೆ-ಮಾನವ ಸಂಘರ್ಷ ತೀವ್ರವಾಗಿದ್ದು, ಚಿರತೆಗಳು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಮೈಸೂರು, ಬೆಂಗಳೂರು, ತುಮಕೂರು ಮತ್ತು ರಾಮನಗರದಲ್ಲಿ ಹೆಚ್ಚಿನ ದಾಳಿಗಳು ನಡೆದಿದ್ದು, ಸಾವು ನೋವು ಪ್ರಕರಣಗಳು ನಡೆದಿವೆ. 2021-25ರ ಅವಧಿಯಲ್ಲಿ ವನ್ಯಜೀವಿ ದಾಳಿಯಿಂದ 239 ಮಂದಿ ಮೃತಪಟ್ಟಿದ್ದಾರೆ. ಆನೆ ಮತ್ತು ಹುಲಿಗಳ ನಂತರ, ಚಿರತೆಗಳ ದಾಳಿ ಮಾನವ-ವನ್ಯಜೀವಿ ಸಂಘರ್ಷ ರಾಜ್ಯದಲ್ಲಿ ಅತಿ ದೊಡ್ಡ ಸವಾಲಾಗಿದೆ. ಮೈಸೂರು (ನಂಜನಗೂಡು, ಟಿ. ನರಸೀಪುರ), ತುಮಕೂರು, ಬೆಂಗಳೂರು (ಬನ್ನೇರುಘಟ್ಟ ಸುತ್ತಮುತ್ತ), ರಾಮನಗರ, ಬೆಳಗಾವಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಇಲಾಖೆ ವರದಿ ಸಿದ್ಧಪಡಿಸಿದೆ.
4 ವರ್ಷಕ್ಕೊಮ್ಮೆ ಬಿಡುಗಡೆಯಾಗುವ ಚಿರತೆ ಗಣತಿಯ ವರದಿಯ ಪ್ರಕಾರ ಭಾರತ ದೇಶಾದ್ಯಂತ 13874 ಚಿರತೆಗಳು ದೇಶದಲ್ಲಿವೆ. ಈ ವರದಿ ಪ್ರಕಾರ, ಕರ್ನಾಟಕವು ದೇಶದಲ್ಲೇ ಚಿರತೆಗಳು ಸಂಖ್ಯೆಯಲ್ಲಿ 3ನೇ ಸ್ಥಾನ ಹೊಂದಿದೆ. ಮಧ್ಯಪ್ರದೇಶ (3097 ಚಿರತೆಗಳು), ಮಹಾರಾಷ್ಟ್ರ (1985 ಚಿರತೆಗಳು) ರಾಜ್ಯಗಳು ಮೊದಲೆರಡು ಸ್ಥಾನದಲ್ಲಿದ್ದರೆ ಕರ್ನಾಟಕ 1879 ಚಿರತೆಗಳನ್ನು ಹೊಂದುವ ಮೂಲಕ 3ನೇ ಸ್ಥಾನ ಪಡೆದಿದೆ.

