
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್‌ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್
ಪಕ್ಷ-ಸರ್ಕಾರದ ಮಧ್ಯೆ ಸಮನ್ವಯ ಸಾಧಿಸಲು ಸಮಿತಿ ರಚನೆಗೆ ಕಾಂಗ್ರೆಸ್ ಪ್ಲಾನ್
ಪಕ್ಷದ ಹಿರಿಯರು ಮತ್ತು ಪ್ರಭಾವಿ ಮುಖಂಡರನ್ನು ಒಳಗೊಂಡಂತೆ ಸುಮಾರು 25 ರಿಂದ 30 ಜನ ಸದಸ್ಯರನ್ನು ಒಳಗೊಂಡ ರಾಜಕೀಯ ವ್ಯವಹಾರಗಳ ಸಮಿತಿ ರಚಿಸಲು ಚಿಂತನೆ ನಡೆಸಲಾಗಿದೆ.
2028ರ ವಿಧಾನಸಭಾ ಚುನಾವಣೆಗೆ ಆಡಳಿತರೂಢ ಕಾಂಗ್ರೆಸ್ ಈಗಿನಿಂದಲೇ ರಾಜ್ಯದಲ್ಲಿ ಸಂಘಟನೆಯನ್ನು ಗಟ್ಟಿಗೊಳಿಸುವತ್ತ ಹೆಜ್ಜೆ ಇಟ್ಟಿದೆ. ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇರುವಂತೆಯೇ ಹೈಕಮಾಂಡ್, ಪಕ್ಷದ ಚುಕ್ಕಾಣಿ ಭದ್ರಪಡಿಸಲು ಹೊಸದೊಂದು ರಾಜಕೀಯ ವ್ಯವಹಾರಗಳ ಸಮಿತಿ ರಚನೆಗೆ ಯೋಜನೆ ರೂಪಿಸಿದೆ.
ಕೆಲ ದಿನಗಳ ಹಿಂದೆ ಕರ್ನಾಟಕದ ಎಲ್ಲಾ ಜಿಲ್ಲಾಧ್ಯಕ್ಷರ ಸಭೆ ನಡೆಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ಅವರು, ಮುಂಬರುವ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಪದಾಧಿಕಾರಿಗಳಿಗೆ ಸಲಹೆ-ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಿಗೆ ಮತ್ತಷ್ಟು ಆಯಸ್ಸು ತುಂಬಲು ಹೊಸ ಸಮಿತಿ ರಚಿಸಲು ಸಿದ್ಧತೆ ನಡೆಸಿದೆ.
ಈ ನೂತನ ಸಮಿತಿಯ ರಚನೆ ಹಾಗೂ ಸ್ವರೂಪ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಈಗಾಗಲೇ ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ನಾಯಕರೊಂದಿಗೆ ವಿಸ್ತೃತ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಹಿರಿಯರು ಮತ್ತು ಪ್ರಭಾವಿ ಮುಖಂಡರನ್ನು ಒಳಗೊಂಡಂತೆ ಸುಮಾರು 25 ರಿಂದ 30 ಜನ ಸದಸ್ಯರನ್ನು ಒಳಗೊಂಡ ರಾಜಕೀಯ ವ್ಯವಹಾರಗಳ ಸಮಿತಿ ರಚಿಸಲು ಚಿಂತನೆ ನಡೆಸಲಾಗಿದೆ. ಇನ್ನು ಮುಂದೆ ಪಕ್ಷದ ಪ್ರಮುಖ ಮತ್ತು ನಿರ್ಣಾಯಕ ವಿಚಾರಗಳಲ್ಲಿ ಯಾವುದೇ ಒಬ್ಬ ಅಥವಾ ಇಬ್ಬರು ನಾಯಕರ ಏಕಪಕ್ಷೀಯ ನಿರ್ಧಾರಗಳಿಗೆ ಕಡಿವಾಣ ಹಾಕಿ, ಸಾಮೂಹಿಕ ತೀರ್ಮಾನ ಕೈಗೊಳ್ಳಲು ಈ ಸಮಿತಿ ನಿರ್ಣಾಯಕ ಪಾತ್ರ ವಹಿಸಲಿದೆ.
ರಾಜಕೀಯ ಹೋರಾಟಗಳು ಮತ್ತು ಸಂಘರ್ಷದ ಸಂದರ್ಭಗಳಲ್ಲಿ ದಿಢೀರ್ ತಂತ್ರಗಾರಿಕೆ ರೂಪಿಸುವುದು, ಚುನಾವಣಾ ಸಂದರ್ಭದಲ್ಲಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ಮತ್ತು ಒಮ್ಮತದ ಅಭಿಪ್ರಾಯ ಮೂಡಿಸುವಲ್ಲಿ ಸಲಹೆ ನೀಡುವುದು, ಸರ್ಕಾರದ ಕಾರ್ಯವೈಖರಿ ಹಾಗೂ ಪಕ್ಷದ ಸಂಘಟನೆ ನಡುವೆ ಸಮನ್ವಯ ಸಾಧಿಸುವುದು., ಪಕ್ಷದೊಳಗಿನ ಭಿನ್ನಾಭಿಪ್ರಾಯ ಶಮನಗೊಳಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳುವುದನ್ನು ಈ ಸಮಿತಿ ಮಾಡಲಿದೆ.

