x

ಸಂಪುಟ ವಿಸ್ತರಣೆ : ಅಸಮಧಾನಿತ 15 ಶಾಸಕರ ಸಭೆ, ಹೈಕಮಾಂಡ್ ವಿರುದ್ಧ ಸಿಟ್ಟು

ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ಕಾಂಗ್ರೆಸ್ ನಲ್ಲಿ ಶಾಸಕರ ಅಸಮಧಾನ ಸ್ಫೋಟಗೊಂಡಿದೆ 15 ಸಚಿವರನ್ನು ಹಳಬರನ್ನೇ ಮಾಡಿದ್ದಾರೆ ಇದು ಅವಶ್ಯಕತೆ ಇರಲಿಲ್ಲ ಹಿರಿಯ ಶಾಸಕ ಅಶೋಕ್ ಪಟ್ಟಣ್ ಆಕ್ರೋಶ


ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ಕಾಂಗ್ರೆಸ್ ನಲ್ಲಿ ಶಾಸಕರ ಅಸಮಧಾನ ಸ್ಫೋಟಗೊಂಡಿದೆ. ಹಲವು ಶಾಸಕರು ಅಸಮಧಾನ ಹೊರಹಾಕಿದ್ದಾರೆ. ಸಚಿವ ಸ್ಥಾನ ಸಿಗದ ಶಾಸಕರು ಸಭೆ ಸೇರಿ ಚರ್ಚಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಹಿರಿಯ ಶಾಸಕ ಅಶೋಕ್ ಪಟ್ಟಣ್ ಅವರು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿ ಸಚಿವ ಸ್ಥಾನ ಸಿಗದಿರುವ ಬಗ್ಗೆ ನೋವನ್ನು ತೋಡಿಕೊಂಡಿದ್ದಾರೆ. ಸಮಾನ ಮನಸ್ಕ 15 ಶಾಸಕರು ಶೀಘ್ರದಲ್ಲೇ ಸಭೆ ಸೇರಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ನನಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ನೋವಿದೆ. 45 ವರ್ಷಗಳಿಂದ ನಿಷ್ಟೆಯಿಂದ ಕಾಂಗ್ರೆಸ್ ನಲ್ಲಿದ್ದೇನೆ. ಬಿಜೆಪಿ ಈ ಹಿಂದೆ ಆಪರೇಷನ್ ಕಮಲದಲ್ಲಿ ನನಗೆ ಕೋಟ್ಯಾಂತರ ರೂಪಾಯಿ ನೀಡುವ ಆಮಿಷ ನೀಡಿದ್ದರೂ ನಾನು ಕಾಂಗ್ರೆಸ್ ಬಿಟ್ಟು ಹೋಗಲಿಲ್ಲ ಎಂದು ತಿಳಿಸಿದರು.

ಈ ಬಾರಿ ನೂರಕ್ಕೆ ನೂರರಷ್ಟು ನನಗೆ ಸಚಿವ ಸ್ಥಾನ ಸಿಗಲಿದೆ ಎಂಬ ವಿಶ್ವಾಸವಿತ್ತು. ಕೊಪ್ಪಳ ಮಂಡ್ಯ ಕಲುಬುರಗಿಗೆ ಹೆಚ್ಚು ಸಚಿವರನ್ನಾಗಿ ಮಾಡಲಾಗಿದೆ. ಕೆಲವು ಜಿಲ್ಲೆಗಳಲ್ಲಿಒಬ್ಬರೂ ಸಚಿವರಿಲ್ಲ ಅಸಮತೋಲನವಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ನಾನು ಪಕ್ಷ ಬಿಡುವುದಿಲ್ಲ ಕೆಲವರು ರಾಜೀನಾಮೆ ನೀಡಿದ್ದಾರೆ ಅದು ಅವರ ವಯಕ್ತಿಕ ವಿಚಾರ ಎಂದು ಹೇಳಿದರು. 15 ಸಮಾನ ಮನಸ್ಕ ಶಾಸಕರು ಸಂಪರ್ಕದಲ್ಲಿದ್ದೇವೆ ಶೀಘ್ರದಲ್ಲೇ ಸಭೆ ಸೇರಿ ಚರ್ಚಿಸಲಾಗುವುದು ಎಂದು ತಿಳಿಸಿದರು. ಸಭೆಯ ಬಳಿಕ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ನಮ್ಮ ನೋವನ್ನು ಹೇಳುತ್ತೇವೆ. ರಾಜಕೀಯದಲ್ಲಿ ಏನು ಆಗುತ್ತದೆ ಎಂದು ಹೇಳಲಿಕ್ಮೆ ಆಗಲ್ಲ ಎಂದು ಸೂಕ್ಷ್ಮವಾಗಿ ಹೇಳಿದರು.

4 ಹಿರಿಯ ಸಚಿವರನ್ನು ಹೊರತುಪಡಿಸಿ ಎಲ್ಲಾ ಹೊಸಬರಿಗೆ ಸಚಿವಸ್ಥಾನ ನೀಡಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರು ನಮಗೆ ಹೇಳಿದ್ದರು. ನಿಮ್ಮನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದರು ಇದು ನಿಜ ದೇವರಸಾಕ್ಷಿಯಾಗಿ ಪ್ರಮಾಣವಾಗಿ ಈ ಮಾತನ್ನು ಸುರ್ಜೆವಾಲಾ ಹೇಳಿದ್ದರು ಎಂದು ತಿಳಿಸಿದರು. 15 ಸಚಿವರನ್ನು ಹಳಬರನ್ನೇ ಮಾಡಿದ್ದಾರೆ ಇದು ಅವಶ್ಯಕತೆ ಇರಲಿಲ್ಲ ನಾವು ಶಾಸಕರಾಗಿಯೇ ಇರಬೇಕಾ ಎಂದು ಪ್ರಶ್ನಿಸಿದರು. ಸಚಿವ ಸ್ಥಾನ ಸಿಗದವರು ತಾಳ್ಮೆಯಿಂದ ಇರಬೇಕು ಎಂಬ ಸಿಎಂ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅಶೋಕ್ ಪಟ್ಟಣ್ ತಾಳ್ಮೆಯಿಂದ ಕಾದು ಕಾದು ತಲೆಯಲ್ಲಿ ಕೂದಲು ಉದುರಿಹೋಗಿದೆ 72 ವರ್ಷ ಆಗಿದೆ ಮುಂದಿನ ಚುನಾವಣೆಗೆ ಪೂರ್ಣ ಕೂದಲು ಇರುವುದಿಲ್ಲ. ಡಿ.ಕೆ.ಶಿವಕುಮಾರ್ ಅವರು ತಾಳ್ಮೆಯಿಂದ ಕಾದಿದ್ದರು ಅವರಿಗೆ ಚಿಕ್ಕವಯಸ್ಸಿತ್ತು ಎಂದು ಟಾಂಗ್ ನೀಡಿದರು. ನಮ್ಮ‌ ತಾಳ್ಮೆಗೂ ಮಿತಿಯಿರುತ್ತದೆ ನಮ್ಮ ತಾಳ್ಮೆ ಕಳೆದರೆ ಕಷ್ಟವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಮುಂಚೂಣಿಯಲ್ಲಿದ್ದರೆ ಬಹಳ ಒಳ್ಳೆಯದಾಗಲಿದೆ. ಸಾಮೂಹಿಕವಾಗಿ ಚುನಾವಣೆಗೆ ಹೋದರೆ ಒಳ್ಳೆಯದು. ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಚುನಾವಣೆಗೆ ನಿಲ್ಲಬೇಕು ಎಂದರೆ ನಿಂತುಕೊಳ್ಳಬಹುದು. ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ಬರದಿದ್ದರೆ ಪಕ್ಷದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.

Read More
Next Story