
ಗದ್ದುಗೆ ಗುದ್ದಾಟ| ಸಿಎಂ ಪರ ಅಹಿಂದ ನಾಯಕರ ಕಸರತ್ತು; ಬಿ.ಕೆ. ಹರಿಪ್ರಸಾದ್ ರಂಗಪ್ರವೇಶ, ಗುಪ್ತ ಸಮಾಲೋಚನೆ!
ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಬಳಿಕ ಬಿ.ಕೆ.ಹರಿಪ್ರಸಾದ್ ಅವರು ಗೌಪ್ಯವಾಗಿ ಸಚಿವರಾದ ಜಮೀರ್ ಅಹ್ಮದ್ ಮತ್ತು ಗೃಹ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಸಮೀಪಿಸುತ್ತಿದ್ದು, ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣಗಳ ನಡುವಿನ ಹಗ್ಗಜಗ್ಗಾಟ ತೀವ್ರಗೊಂಡಿದೆ.
ಸಿದ್ದರಾಮಯ್ಯ ಅವರನ್ನೇ ಪೂರ್ಣಾವಧಿಗೆ ಮುಂದುವರಿಸಬೇಕು ಎಂಬ ಕಾರ್ಯತಂತ್ರಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಬಳಿಕ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಗೌಪ್ಯವಾಗಿ ವಸತಿ ಸಚಿವ ಜಮೀರ್ ಅಹ್ಮದ್ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
ಮೂವರು ಮುಖಂಡರು ರಾತ್ರಿ ಸಭೆ ನಡೆಸಿರುವುದು ಕಾಂಗ್ರೆಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಸಭೆಯ ಮುಖ್ಯ ಉದ್ದೇಶ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟಿಂಗ್ ಮಾಡುವ ಸಂಬಂಧ ಬಿ.ಕೆ.ಹರಿಪ್ರಸಾದ್ ಜಮೀರ್ ಅಹ್ಮದ್ ಮತ್ತು ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಹಿಂದೆ ಬಿ.ಕೆ.ಹರಿಪ್ರಸಾದ್ ಅವರು ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಈಗ ಸಿದ್ದರಾಮಯ್ಯ ಬೆಂಬಲಿಗರೊಂದಿಗೆ ಕಾಣಿಸಿಕೊಳ್ಳುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಮೀಕರಣಕ್ಕೆ ನಾಂದಿ ಹಾಡಿದೆ. ಅಹಿಂದ ನಾಯಕರು ಒಂದಾಗಿ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುವ ಮೂಲಕ ಮುಖ್ಯಮಂತ್ರಿ ಹುದ್ದೆಯನ್ನು ಭದ್ರಪಡಿಸಿಕೊಳ್ಳುವ ತಂತ್ರಗಾರಿಕೆ ಇದರ ಹಿಂದಿದೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ - ಬಿ.ಕೆ.ಹರಿಪ್ರಸಾದ್ ಭೇಟಿ
ಜಮೀರ್ ಅಹ್ಮದ್ ಮತ್ತು ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡುವ ಮುನ್ನ ಬಿ.ಕೆ. ಹರಿಪ್ರಸಾದ್ ಅವರು ಸಿದ್ದರಾಮಯ್ಯ ಅವರನ್ನು ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಹರಿಯಾಣ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಹರಿಪ್ರಸಾದ್ ಅವರ ಭೇಟಿ ಕೇವಲ ರಾಜ್ಯ ರಾಜಕಾರಣಕ್ಕೆ ಸೀಮಿತವಾಗಿರಲಿಲ್ಲ. ಕೇರಳ, ತಮಿಳುನಾಡು ಸೇರಿದಂತೆ ಮುಂಬರುವ ಪಂಚ ರಾಜ್ಯಗಳ ಚುನಾವಣೆಗಳ ಬಗ್ಗೆ ಇಬ್ಬರು ನಾಯಕರು ಚರ್ಚಿಸಿದ್ದಾರೆ. ಈ ನಡುವೆ, ಮುಖ್ಯಮಂತ್ರಿ ಬದಲಾವಣೆಯ ಕುರಿತು ರಾಜ್ಯದಲ್ಲಿ ಚರ್ಚೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ಸಚಿವರ ಮನವೊಲಿಕೆ ಮಾಡಿ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಂಬಂಧ ಕಾರ್ಯತಂತ್ರ ರೂಪಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.
ಡಿಕೆಶಿ ಬಣದ ಪಟ್ಟು - ವರಿಷ್ಠರ ಮೇಲೆ ಒತ್ತಡ
ಮತ್ತೊಂದೆಡೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರು ಅಧಿಕಾರ ಹಂಚಿಕೆಯ ಸೂತ್ರದ ಬಗ್ಗೆ ಪ್ರಸ್ತಾಪಿಸಲು ಮುಂದಾಗಿದ್ದಾರೆ. ಸರ್ಕಾರ ರಚನೆಯ ಸಂದರ್ಭದಲ್ಲಿ ವರಿಷ್ಠರ ಸಮ್ಮುಖದಲ್ಲಿ ನಡೆದಿದೆ ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದದಂತೆ, ಸರ್ಕಾರ ಎರಡು ವರ್ಷಗಳು ಪೂರೈಸಿ ಮೂರನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡಬೇಕು ಎಂಬುದು ಅವರ ಬಣದ ಬಲವಾದ ಆಗ್ರಹವಾಗಿದೆ. ಈ ಕುರಿತು ದೆಹಲಿ ಮಟ್ಟದಲ್ಲಿ ಈಗಾಗಲೇ ಸಂಧಾನಗಳು ಮತ್ತು ಒತ್ತಡದ ತಂತ್ರಗಳು ನಡೆಯುತ್ತಿವೆ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಿ.ಕೆ.ಶಿವಕುಮಾರ್ ಅವರ ಶ್ರಮ ದೊಡ್ಡದಿದೆ, ಆದ್ದರಿಂದ ಅವರಿಗೆ ಸಿಎಂ ಸ್ಥಾನ ಸಿಗಲೇಬೇಕು ಎಂಬುದು ಅವರ ಬೆಂಬಲಿಗರ ವಾದ. ಅಲ್ಲದೇ, ಡಿ.ಕೆ.ಶಿವಕುಮಾರ್ ಸಹ ಹೈಕಮಾಡ್ ಭೇಟಿಯಾಗಿ ಮುಖ್ಯಮಂತ್ರಿ ಗಾದಿ ವಿಚಾರದಲ್ಲಿ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ.
ಅಶೋಕ್ ಪಟ್ಟಣ ನೇತೃತ್ವದ ನಿಯೋಗದ ದೆಹಲಿ ಭೇಟಿ
ಇತ್ತೀಚೆಗೆ ಶಾಸಕ ಅಶೋಕ್ ಪಟ್ಟಣ್ ನೇತೃತ್ವದ ಶಾಸಕರ ನಿಯೋಗವು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದು, ಮುಖ್ಯಮಂತ್ರಿ ಬದಲಾವಣೆ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಹಾನಿಕಾರಕ. ಬದಲಾಗಿ ಸಚಿವ ಸಂಪುಟ ಪುನರ್ ರಚನೆ ಮಾಡಬೇಕು ಎಂಬ ಮನವಿಯನ್ನು ಸಲ್ಲಿಸಿದೆ. ಹಳೆಯ ಸಚಿವರನ್ನು ಕೈಬಿಟ್ಟು, ಹೊಸ ಮುಖಗಳಿಗೆ ಹಾಗೂ ನಿಷ್ಠಾವಂತ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಅಸಮಾಧಾನವನ್ನು ಶಮನಗೊಳಿಸಬಹುದು ಎಂಬುದು ಸಿದ್ದರಾಮಯ್ಯ ಬಣದ ತಂತ್ರವಾಗಿದೆ. ಈ ಮೂಲಕ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಯನ್ನು ದಿಕ್ಕುತಪ್ಪಿಸಿ, ಸಂಪುಟ ಪುನರ್ ರಚನೆಯ ಕಡೆಗೆ ಗಮನ ಹರಿಸುವಂತೆ ಮಾಡುವಲ್ಲಿ ಈ ನಿಯೋಗ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.

