ಸಂಪುಟ ವಿಸ್ತರಣೆ: ಕೈ ಪಾಳಯದಲ್ಲಿ ಬಂಡಾಯ; ಸಲೀಂ ಅಹ್ಮದ್‌ಗೆ ಒಲಿದ ಸಭಾಪತಿ ಪಟ್ಟ; ಕಾವೇರಿ ಸಂಕಷ್ಟಕ್ಕೆ ಮುಕ್ತಿ? ತಮಿಳುನಾಡಿಗೆ ನೀರು?
ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜೀನಾಮೆ ತಲೆಬಿಸಿ ಶುರುವಾಗಿದೆ. ಸಲೀಂ ಅಹ್ಮದ್ ಸಭಾಪತಿಯಾಗಿ ನಿಯೋಜನೆಯಾಗಿದ್ದಾರೆ; ನೆರೆ ರಾಜ್ಯದಲ್ಲಿ ಮಳೆ ಹೆಚ್ಚಾಗಿರುವ ಕಾರಣ ರಾಜ್ಯದ ಜಲಾಶಯಗಳ ನೀರಿನ ಮಟ್ಟ ಹೆಚ್ಚಿದೆ.
ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಸಂಬಂಧ ನೂತನ ಸಚಿವರ ಹೆಸರು ಪ್ರಕಟವಾಗುತ್ತಿದ್ದಂತೆ ಪಕ್ಷದ ನಿಷ್ಠಾವಂತರು ಮತ್ತು ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿದೆ. ಶೇಕಡಾ 60:40ರ ಅನುಪಾತದ ಆಶಯ ಈ ಸಂಪುಟದಲ್ಲಿ ಕಾಣುತ್ತಿಲ್ಲ. ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಶಾಸಕರು ರಾಜೀನಾಮೆಯ ಅಸ್ತ್ರ ಪ್ರಯೋಗಿಸುತ್ತಿರುವುದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ಯಶವಂತರಾಯಗೌಡ ಪಾಟೀಲ್, ಅಪ್ಪಾಜಿ ನಾಡಗೌಡ, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಇತರೆ ಅಸಮಾಧಾನಿತರು ರಾಜೀನಾಮೆಗೆ ಮುಂದಾಗಿದ್ದಾರೆ. ಇಷ್ಟೇ ಅಲ್ಲ ಕೊನೆಗಳಿಗೆಯಲ್ಲಿ ಹೆಸರು ಬದಲಾವಣೆಗಳಾದ ಹಿನ್ನೆಲೆಯಲ್ಲಿ ಸಾಕಾಷ್ಟು ಗೊಂದಲಗಳು ಸಹ ಮೂಡಿವೆ.
ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕಾಂಗ್ರೆಸ್‌ನಲ್ಲಿ ಬಲಾಡ್ಯರು, ಮಾಜಿ ಮುಖ್ಯಮಂತ್ರಿಗಳ ಮಕ್ಕಳು, ಮಾಜಿ ಸಚಿವರ ಮಕ್ಕಳಿಗೆ ಮಾತ್ರ ಮಂತ್ರಿಗಿರಿ ಸಿಗುತ್ತಿದೆ. ಸಾಮಾನ್ಯ ಕಾರ್ಯಕರ್ತರು ಮತ್ತು ನಿಷ್ಠಾವಂತ ಶಾಸಕರಿಗೆ ಇಲ್ಲಿ ಬೆಲೆಯೇ ಇಲ್ಲ ಎಂದು ಅವರು ನೇರವಾಗಿ ಹೈಕಮಾಂಡ್‌ನ ತೀರ್ಮಾನವನ್ನು ಟೀಕಿಸಿದ್ದಾರೆ.
ಇನ್ನು, ಸಚಿವ ಸ್ಥಾನದ ರೇಸ್‌ನಲ್ಲಿದ್ದ ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರಿಗೆ ಮತ್ತೆ ನಿರಾಸೆಯಾಗಿದೆ. ಪಕ್ಷದ ನಿಷ್ಠಾವಂತರಾಗಿ, ಅಲ್ಪಸಂಖ್ಯಾತ ಸಮುದಾಯದ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದ ಸೇಠ್ ಅವರ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದು ಅವರ ಬೆಂಬಲಿಗರನ್ನು ಕೆರಳಿಸಿದೆ. ಮೈಸೂರಿನಲ್ಲಿ ಪ್ರತಿಭಟನೆಗಳು ನಡೆದಿವೆ. ಅಲ್ಲದೇ, ಪ್ರಿಯಾಕೃಷ್ಣ, ಹಂಪನಗೌಡ ಬಾದರ್ಲಿ ಸೇರಿದಂತೆ ಇತರೆ ನಾಯಕರ ಬೆಂಬಲಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಸಲೀಂ ಅಹ್ಮದ್ ಅವರಿಗೆ ಒಲಿದ ಸಭಾಪತಿ ಪಟ್ಟ
ರಾಜ್ಯದ ಮೇಲ್ಮನೆಯಾದ ವಿಧಾನ ಪರಿಷತ್ತಿನ ಸಭಾಪತಿ ಪೀಠಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಲೀಂ ಅಹ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ಸಭಾಪತಿಯಾಗಿರುವ ಬಸವರಾಜ ಹೊರಟ್ಟಿ ಅವರ ರಾಜೀನಾಮೆಯ ನಂತರ, ಆ ಸ್ಥಾನವನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯಲಿದೆ. ಸಲೀಂ ಅಹ್ಮದ್ ಅವರ ಆಯ್ಕೆಯು ಕೇವಲ ನೇಮಕಾತಿಯಲ್ಲ, ಇದು ರಾಜಕೀಯ ಸಂದೇಶವಾಗಿದೆ. ಮುಸ್ಲಿಂ ಸಮುದಾಯಕ್ಕೆ ಈ ಮಹತ್ವದ ಸ್ಥಾನ ನೀಡಿರುವುದು ಕಾಂಗ್ರೆಸ್ ಪಕ್ಷದ 'ಅಹಿಂದ' ರಾಜಕಾರಣದ ಮುಂದುವರಿಕೆಯಾಗಿದೆ. ಈ ಹಿಂದೆ ಕೆ. ರೆಹಮಾನ್ ಖಾನ್ ಅವರು ಸಭಾಪತಿಯಾಗಿ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರು. ಈಗ ನಾಲ್ಕು ದಶಕಗಳ ನಂತರ ಮತ್ತೊಮ್ಮೆ ಅದೇ ಸಮುದಾಯದ ನಾಯಕನಿಗೆ ಈ ಅವಕಾಶ ಸಿಕ್ಕಿರುವುದು, ಪಕ್ಷದಲ್ಲಿನ ಅಲ್ಪಸಂಖ್ಯಾತ ನಾಯಕರ ಮೇಲಿನ ನಂಬಿಕೆಯನ್ನು ಮತ್ತು ಅವರ ರಾಜಕೀಯ ಪ್ರಭಾವವನ್ನು ತೋರಿಸುತ್ತದೆ. ಮುಸ್ಲಿಂ ಸಮುದಾಯದಿಂದ ಸಭಾಪತಿಯಾಗುತ್ತಿರುವುದು ಸಲೀಂ ಅಹ್ಮದ್‌ಅವರು ಎರಡನೇಯವರಾಗಿದ್ದಾರೆ.
ಜೆಡಿಎಸ್‌ಪಕ್ಷದ ಹಿನ್ನೆಲೆಯ ಬಸವರಾಜ ಹೊರಟ್ಟಿ ಅವರು ನಂತರ ಬಿಜೆಪಿಗೆ ಸೇರ್ಪಡೆಯಾದರು. ಅವರು ಸಭಾಪತಿಯಾಗಿ ಅನುಭವ ಹೊಂದಿದ್ದಾರೆ. ಅವರ ರಾಜೀನಾಮೆಯು ಪರಿಷತ್ತಿನಲ್ಲಿ ಬಿಜೆಪಿ ತನ್ನ ಪ್ರಭಾವವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಹೊರಟ್ಟಿ ಅವರು ತಮ್ಮದೇ ಆದ ಶೈಲಿಯಲ್ಲಿ ಸದನವನ್ನು ಮುನ್ನಡೆಸಿದ್ದರು. ಇದೀಗ ಅವರು ಸ್ಥಾನ ತೊರೆಯುತ್ತಿದ್ದಾರೆ. ಇದು ಆಡಳಿತಾರೂಢ ಕಾಂಗ್ರೆಸ್‌ಗೆ ರಾಜಕೀಯವಾಗಿ ಮೇಲ್ಮನೆಯಲ್ಲಿ ಹಿಡಿತ ಸಾಧಿಸಲು ದಾರಿ ಮಾಡಿಕೊಟ್ಟಿದೆ.
ಒಳನಾಡಿನಲ್ಲಿ ಭರ್ತಿಯಾದ ಜಲಾಶಯಗಳು
ಪ್ರಕೃತಿಯು ತನ್ನ ರೌದ್ರಾವತಾರ ಮತ್ತು ಕರುಣಾಮಯಿ ಸ್ವರೂಪ ಎರಡನ್ನೂ ಕರ್ನಾಟಕದಲ್ಲಿ ಈ ಮಳೆಗಾಲದಲ್ಲಿ ಪ್ರದರ್ಶಿಸುತ್ತಿದೆ. ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದರೆ, ರಾಜ್ಯದ ಒಳನಾಡು ಮತ್ತು ಕೃಷಿ ವಲಯಕ್ಕೆ ಜಲಾಶಯಗಳ ಭರ್ತಿಯು ಹೊಸ ಭರವಸೆಯನ್ನು ಮೂಡಿಸಿದೆ. ಒಂದು ಕಡೆ ಪ್ರವಾಹದ ಭೀತಿ, ಮತ್ತೊಂದು ಕಡೆ ಜಲಾಶಯಗಳ ಮಡಿಲು ತುಂಬುತ್ತಿರುವುದು ತಮಿಳುನಾಡಿನೊಂದಿಗೆ ಪ್ರಸ್ತುತ ಉದ್ಭವಿಸಿರುವ ನೀರು ಬಿಡುವ ವಿಚಾರದ ಸಮರದ ಅಂತ್ಯಕ್ಕೆ ಸಹಕಾರಿಯಾಗಿದೆ.
ಕೇರಳಂನ ವಯನಾಡು ಹಾಗೂ ಕೊಡಗಿನಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಕೆಆರ್ಎಸ್ ಜಲಾಶಯಕ್ಕೆ ಅಧಿಕ ನೀರು ಹರಿದು ಬರುತ್ತಿದ್ದು, ನೀರಿನ ಮಟ್ಟ 100 ಅಡಿ ದಾಟಿದೆ. ಮತ್ತೊಂದೆಡೆ ಕಬಿನಿ ಜಲಾಶಯ ಭರ್ತಿಯಾಗಿರುವುದರಿಂದ ಅಧಿಕ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ನದಿ ಪಾತ್ರದ ಜನರಿಗೆ ಪ್ರವಾಹದ ಎಚ್ಚರಿಕೆ
ನೀಡಲಾಗಿದೆ. ಕಬಿನಿ, ಕೆಆರ್ಎಸ್ ಮತ್ತು ಹಾರಂಗಿ ಜಲಾಶಯಗಳಿಗೆ ನೀರಿನ ಹರಿವು ಹೆಚ್ಚಾಗಿದೆ. ಕಳೆದ 10 ದಿನಗಳ ಹಿಂದೆ ಕೆಆರ್ಎಸ್ ಡ್ಯಾಂನಲ್ಲಿ 82 ಅಡಿ ಇದ್ದ ನೀರಿನ ಮಟ್ಟ ಇದೀಗ 100 ಅಡಿ ದಾಟಿದೆ. ಕೊಡಗಿನ ಹಾರಂಗಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 12 ಸಾವಿರಕ್ಕೂ ಹೆಚ್ಚು ನೀರನ್ನು ಹೊರ ಬಿಡಲಾಗುತ್ತಿದೆ. ಕೆಆರ್ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಆಗಿದ್ದು. ಸೋಮವಾರ ಜಲಾಶಯದ ನೀರಿನ ಮಟ್ಟ 100 ಅಡಿ ದಾಟಿದೆ. ಹೀಗೆ ಮಳೆಯಾದರೆ ಇನ್ನು 15 ದಿನಗಳಲ್ಲಿ ಕೆಆರ್ಎಸ್ ಜಲಾಶಯ ಭರ್ತಿಯಾಗಲಿದೆ. ಕಬಿನಿ ಜಲಾಶಯದಿಂದ 27 ಸಾವಿರ ಕ್ಯೂಸೆಕ್ಗಿಂತ ಹೆಚ್ಚಿನ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಇದರ ಪರಿಣಾಮ ಕಬಿನಿ ಜಲಾಶಯದ ಮುಂಭಾಗದ ಸೇತುವೆ ಮುಳುಗಡೆಯಾಗಿದೆ. ಇದರಿಂದ ಹ್ಯಾಂಡ್ ಪೋಸ್ಟ್, ಎನ್.ಬೇಗೂರು ಮುಖ್ಯ ರಸ್ತೆ, ಬಿದರಹಳ್ಳಿ, ಭೀಮನಕೊಲ್ಲಿಯ ಶ್ರೀ ಮಾದೇಶ್ವರ ದೇವಸ್ಥಾನಕ್ಕೆ ರಸ್ತೆ ಕಲ್ಪಿಸುವ ಮುಖ್ಯ ರಸ್ತೆ ಸೇರಿದಂತೆ ಸುಮಾರು 25 ಗ್ರಾಮಗಳಿಗೆ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ.

