LPG Crisis.: ಸಿಲಿಂಡರ್ ವಿತರಣೆಗೆ ಸರ್ಕಾರದ ಹೊಸ ನೀತಿ ಪ್ರಕಟ,  5 ಹಂತಗಳಲ್ಲಿ ಹಂಚಿಕೆ
x

LPG Crisis.: ಸಿಲಿಂಡರ್ ವಿತರಣೆಗೆ ಸರ್ಕಾರದ ಹೊಸ ನೀತಿ ಪ್ರಕಟ, 5 ಹಂತಗಳಲ್ಲಿ ಹಂಚಿಕೆ

ಪ್ರತಿನಿತ್ಯ 7 ಸಾವಿರ ವಾಣಿಜ್ಯ ಸಿಲಿಂಡರ್‌ಗಳ ಪೈಕಿ ಶಾಲಾ-ಕಾಲೇಜುಗಳು, ವಿದ್ಯಾರ್ಥಿ ನಿಲಯಗಳು, ಆಸ್ಪತ್ರೆಗಳು ಮತ್ತು ಇತರ ಅತ್ಯಗತ್ಯ ಸಂಸ್ಥೆಗಳಿಗೆ 4,200 ಸಿಲಿಂಡರ್‌ಗಳನ್ನು ಪೂರೈಸಬೇಕಿದೆ.


Click the Play button to hear this message in audio format

ರಾಜ್ಯದಲ್ಲಿ ಉಂಟಾಗಿರುವ ಎಲ್‌ಪಿಜಿ ಕೊರತೆ ಹಿನ್ನೆಲೆಯಲ್ಲಿ, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆಯನ್ನು ಸುಗಮಗೊಳಿಸಲು ರಾಜ್ಯ ಸರಕಾರವು ಹೊಸ ನೀತಿಯೊಂದನ್ನು ಪ್ರಕಟಿಸಿದೆ.

ಈ ನೀತಿ ಅನ್ವಯ, ಎಲ್‌ಪಿಜಿ ಪೂರೈಕೆ ಪ್ರಮಾಣ ಮೊದಲಿನ ಹಂತಕ್ಕೆ ತಲುಪುವವರೆಗೂ ಆದ್ಯತೆ ಮೇರೆಗೆ, ಅಗತ್ಯ ಸೇವೆಗಳಿಗಷ್ಟೇ ಸಿಲಿಂಡರ್ ಪೂರೈಸಲು ಕ್ರಮ ಕೈಗೊಂಡಿದೆ. ಇದೇ ಮಾದರಿಯಲ್ಲಿ ಎಲ್‌ಪಿಜಿ ಪೂರೈಸುವ ಎಲ್ಲ ಸಂಸ್ಥೆಗಳಿಗೂ ರಾಜ್ಯ ಸರಕಾರ ಸೂಚನೆ ನೀಡಿದ್ದು, ಪೂರೈಕೆಯನ್ನು ಐದು ಹಂತಗಳಲ್ಲಿ ವರ್ಗೀಕರಣ ಮಾಡಲಾಗಿದೆ.

ಒಟ್ಟು ಪ್ರತಿನಿತ್ಯ 7 ಸಾವಿರ ವಾಣಿಜ್ಯ ಸಿಲಿಂಡರ್‌ಗಳ ಪೈಕಿ ಶಾಲಾ-ಕಾಲೇಜುಗಳು, ವಿದ್ಯಾರ್ಥಿ ನಿಲಯಗಳು, ಆಸ್ಪತ್ರೆಗಳು ಮತ್ತು ಇತರ ಅತ್ಯಗತ್ಯ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ಮೇರೆಗೆ ಪ್ರತಿದಿನ 4,200 ಸಿಲಿಂಡರ್‌ಗಳನ್ನು ಪೂರೈಸಬೇಕಿದೆ. ಸರಕಾರಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿರುವ ಕ್ಯಾಂಟೀನ್‌ಗಳು, ಕೆಎಂಎಫ್ (ನಂದಿನಿ) ಮತ್ತು ಇಂದಿರಾ ಕ್ಯಾಂಟೀನ್‌ಗಳಿಗೆ ಪ್ರತಿದಿನ 1,200 ಸಿಲಿಂಡರ್‌ಗಳು ಪೂರೈಕೆಯಾಗಲಿವೆ.

ರೆಸ್ಟೋರೆಂಟ್, ಡಾಬಾ, ಹೋಟೆಲ್‌ ಮತ್ತು ಕೈಗಾರಿಕಾ ಕ್ಯಾಂಟೀನ್‌ಗಳಿಗೆ ಪ್ರತಿದಿನ 1 ಸಾವಿರ ಸಿಲಿಂಡರ್‌ಗಳನ್ನು ನಿಗದಿಪಡಿಸಲಾಗಿದೆ. ಬೀಜ ಸಂಸ್ಕರಣಾ ಉದ್ಯಮ, ಆಹಾರ ಸಂಸ್ಕರಣಾ ಉದ್ಯಮ, ಕೃಷಿ ಮತ್ತು ಸಂಬಂಧಿತ ವಲಯಗಳು, ಔಷಧೀಯ ಉದ್ಯಮ, ಮೀನುಗಾರಿಕೆ, ಪ್ರಾಣಿ ಸಂಗ್ರಹಾಲಯ, ಕ್ರೀಡಾ ಹಾಸ್ಟೆಲ್‌ಗಳು, ಕಾರ್ಪೊರೇಟ್ ಕ್ಯಾಂಟೀನ್‌ಗಳು, ಕೋಳಿ ಮತ್ತು ರೇಷ್ಮೆ ಸಾಕಾಣಿಕೆ ಉದ್ಯಮಗಳಿಗೆ ಪ್ರತಿದಿನ 500 ಸಿಲಿಂಡರ್‌ ಹಾಗೂ ಇತರೆ ಅಗತ್ಯಗಳಿಗೆ ನಿತ್ಯ 100 ಸಿಲಿಂಡರ್‌ಗಳನ್ನು ಪ್ರಕರಣದ ಆಧಾರದ ಮೇಲೆ ವಿತರಿಸಲು ರಾಜ್ಯ ಸರಕಾರ ಮುಂದಾಗಿದೆ.

ಎಲ್‌ಪಿಜಿ ಬಳಕೆ ಎಷ್ಟು?

2025ರ ಡಿಸೆಂಬರ್‌ನಿಂದ 2026ರ ಫೆಬ್ರವರಿ ವರೆಗೆ ರಾಜ್ಯದಲ್ಲಿ ಒಟ್ಟು 76,544 ಮೆಟ್ರಿಕ್ ಟನ್ ವಾಣಿಜ್ಯ ಎಲ್‌ಪಿಜಿ ಬಳಕೆಯಾಗಿದ್ದು, ಸರಾಸರಿ ಮಾಸಿಕ ಬಳಕೆಯು 25,515 ಮೆಟ್ರಿಕ್ ಟನ್ ಹಾಗೂ ದೈನಂದಿನ ಬಳಕೆಯು ಸರಾಸರಿ 850 ಮೆಟ್ರಿಕ್ ಟನ್ ಆಗಿದೆ. ಅದೇ ರೀತಿ ಆಟೋ ಎಲ್‌ಪಿಜಿ ದೈನಂದಿನ ಬಳಕೆಯು ಸರಾಸರಿ 56.7 ಮೆಟ್ರಿಕ್ ಟನ್. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ, ರಾಜ್ಯದಲ್ಲಿ ದಿನನಿತ್ಯ ಸರಾಸರಿ 181.34 ಮೆಟ್ರಿಕ್ ಟನ್ ವಾಣಿಜ್ಯ ಎಲ್‌ಪಿಜಿಯನ್ನು ನಿಯಂತ್ರಿತ ಹಂಚಿಕೆಗೆ ಮೀಸಲಿಡಲಾಗಿದೆ.

ದೈನಂದಿನ ಸಿಲಿಂಡರ್‌ಗಳ ಲೆಕ್ಕಾಚಾರದಲ್ಲಿ, ಮೂರು ತೈಲ ಕಂಪನಿಗಳು ಸೇರಿ ರಾಜ್ಯದಲ್ಲಿ ಪ್ರತಿದಿನ ಸರಾಸರಿ 44,000 ವಾಣಿಜ್ಯ ಸಿಲಿಂಡರ್‌ಗಳನ್ನು (19 ಕೆ.ಜಿ ಸಾಮರ್ಥ್ಯ) ಮಾರಾಟ ಮಾಡುತ್ತವೆ. ಇದರಲ್ಲಿ ಕೇಂದ್ರದ ಶೇ. 20ರ ಮಾರ್ಗಸೂಚಿಯಂತೆ ಅಂದಾಜು 8,800 ಸಿಲಿಂಡರ್‌ಗಳನ್ನು ಮೀಸಲಿಡಲಿದ್ದು, ಅದರಲ್ಲಿ 7,000 ಸಿಲಿಂಡರ್‌ಗಳನ್ನು ಪ್ರತಿದಿನ ಆದ್ಯತೆ ಆಧಾರಿತ ನಿಯಂತ್ರಿತ ವಿತರಣೆಗೆ ನೀಡಲಾಗುವುದು. ಆಟೋ ಎಲ್‌ಪಿಜಿಗಾಗಿ 48.34 ಮೆಟ್ರಿಕ್ ಟನ್ (ಅಂದರೆ 2,544 ಸಿಲಿಂಡರ್‌ಗಳಿಗೆ ಸಮ ಅಥವಾ 96,680 ಲೀಟರ್) ನಿಯಂತ್ರಿತ ಪಾಲನ್ನು ರಾಜ್ಯ ಸರಕಾರ ನಿಗದಿಪಡಿಸಿದೆ. ರಾಜ್ಯದಲ್ಲಿ ಟ್ಯಾಕ್ಸಿ ಮತ್ತು ಸಾರಿಗೆ ವ್ಯವಸ್ಥೆಗೆ ನೆರವಾಗುವ ಆಟೋ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರವಹಿಸಲು ತೈಲ ಕಂಪನಿಗಳಿಗೆ ಸೂಚಿಸಿದೆ.

ದೈನಂದಿನ 133 ಮೆಟ್ರಿಕ್ ಟನ್ (7 ಸಾವಿರ ಸಿಲಿಂಡರ್) ವಾಣಿಜ್ಯ ಎಲ್‌ಪಿಜಿಯನ್ನು ಮೂರು ಪ್ರಮುಖ ತೈಲ ಕಂಪನಿಗಳಿಗೆ ಅವುಗಳ ಮಾರುಕಟ್ಟೆ ಪಾಲು ಮತ್ತು ಸಾಮರ್ಥ್ಯದ ಆಧಾರದ ಮೇಲೆ ಹಂಚಿಕೆ ಮಾಡಲಾಗಿದ್ದು, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯು ಪ್ರತಿದಿನ 38.0 ಮೆಟ್ರಿಕ್ ಟನ್ (2 ಸಾವಿರ ಸಿಲಿಂಡರ್‌ಗಳು) ಪೂರೈಸಬೇಕಿದೆ. ಇದು ಒಟ್ಟು ಹಂಚಿಕೆಯ ಶೇ. 28.57ರಷ್ಟು ಪಾಲುಗಾರಿಕೆಯನ್ನು ಹೊಂದಿದೆ. ಶೇ. 35.71ರಷ್ಟು ಪಾಲು ಪೂರೈಸಬೇಕಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯು ಪ್ರತಿದಿನ 47.5 ಮೆಟ್ರಿಕ್ ಟನ್ (2,500 ಸಿಲಿಂಡರ್‌ಗಳು) ಒದಗಿಸಬೇಕು. ಶೇ. 35.71ರಷ್ಟು ಪಾಲು ಹೊಂದಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಯು ಪ್ರತಿದಿನ 47.5 ಮೆಟ್ರಿಕ್ ಟನ್ (2,500 ಸಿಲಿಂಡರ್‌ಗಳು) ಪೂರೈಸಬೇಕು.

ಅದೇ ರೀತಿ, 48.34 ಮೆಟ್ರಿಕ್ ಟನ್ ಆಟೋ ಎಲ್‌ಪಿಜಿ ಪೂರೈಕೆಯಲ್ಲಿ, ಐಒಸಿ ಸಂಸ್ಥೆಗೆ ಗರಿಷ್ಠ 37.22 ಮೆಟ್ರಿಕ್ ಟನ್ (ಶೇ. 77), ಬಿಪಿಸಿಎಲ್‌ ಸಂಸ್ಥೆಯು 2 ಮೆಟ್ರಿಕ್ ಟನ್ (ಶೇ. 4) ಮತ್ತು ಎಚ್‌ಪಿಸಿಎಲ್‌ ಸಂಸ್ಥೆಯು 9.12 ಮೆಟ್ರಿಕ್ ಟನ್ (ಶೇ. 9) ಗಳಷ್ಟು ಎಲ್‌ಪಿಜಿ ಪೂರೈಸುವುದನ್ನು ಕಡ್ಡಾಯಗೊಳಿಸಲಾಗಿದೆ.

ರೂಲ್ಸ್‌ಗಳ ಪಾಲನೆ ಕಡ್ಡಾಯ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪ್ರಾಥಮಿಕವಾಗಿ 19 ಕೆ.ಜಿ ಸಾಮರ್ಥ್ಯದ ಸಿಲಿಂಡರ್‌ಗಳ ರೂಪದಲ್ಲಿಯೇ ಪೂರೈಸಬೇಕಿದೆ. ಗ್ರಾಹಕರು ತೈಲ ಕಂಪನಿಗಳ ಬುಕಿಂಗ್ ವ್ಯವಸ್ಥೆ ಮೂಲಕವೇ ಸಿಲಿಂಡರ್‌ಗಳನ್ನು ಕಾಯ್ದಿರಿಸಬೇಕು. ಅಗತ್ಯ ಸೇವೆಗಳ ಸಂಸ್ಥೆಗಳು ಸಿಲಿಂಡರ್‌ಗಳಿಗಾಗಿ ತಮ್ಮ ಅಧಿಕೃತ ಲೆಟರ್‌ಹೆಡ್‌ನಲ್ಲಿ ವಿತರಕರಿಗೆ ಮನವಿ ಪತ್ರ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಈ ಬೇಡಿಕೆಯ ಆಧಾರದ ಮೇಲೆ ವಿತರಕರು ರಶೀದಿ (ಕ್ಯಾಶ್ ಮೆಮೊ) ನೀಡಬೇಕು ಹಾಗೂ ಸಿಲಿಂಡರ್ ಪೂರೈಕೆಯಾದ ಬಗ್ಗೆ ಗ್ರಾಹಕರಿಂದ ಸ್ವೀಕೃತಿ ಪಡೆಯಬೇಕಿದೆ. ಕಾಳಸಂತೆಯಲ್ಲಿ ಎಲ್‌ಪಿಜಿ ಮಾರಾಟ ಅಥವಾ ಅಕ್ರಮ ದಾಸ್ತಾನು ಮಾಡುವುದನ್ನು ತಡೆಯಲು ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಸರಕಾರವು ಆದೇಶಿಸಿದೆ. ಒಂದು ವೇಳೆ ನಿಯಮ ಉಲ್ಲಂಘನೆಯಾದರೆ, 1955ರ ಅಗತ್ಯ ವಸ್ತುಗಳ ಕಾಯ್ದೆ ಮತ್ತು ಎಲ್‌ಪಿಜಿ (ಪೂರೈಕೆ ಮತ್ತು ವಿತರಣಾ ನಿಯಂತ್ರಣ) ಕಾಯ್ದೆ ಆದೇಶದಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರ್ಕಾರವು ಎಚ್ಚರಿಕೆ ನೀಡಿದೆ. ಪ್ರಸ್ತುತ ಇರುವ ವಾಣಿಜ್ಯ ಎಲ್‌ಪಿಜಿ ಲಭ್ಯತೆಯ ಆಧಾರದ ಮೇಲೆ ಈ ನೀತಿಯನ್ನು ರೂಪಿಸಲಾಗಿದ್ದು, ಮುಂದಿನ ದಿನಗಳ ಪೂರೈಕೆ ಪರಿಸ್ಥಿತಿಯನ್ನು ನೋಡಿಕೊಂಡು ಈ ಆದೇಶವನ್ನು ಪರಿಷ್ಕರಿಸುವ ಸಾಧ್ಯತೆಗಳಿವೆ.

ಯಾವೆಲ್ಲ ಸಂಸ್ಥೆಗಳು ಪೂರೈಸಲಿವೆ?

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸೂಚನೆಗಳ ಅನ್ವಯ, ರಾಜ್ಯದಲ್ಲಿ ಒಟ್ಟು 3 ಸಂಸ್ಥೆಗಳು ಎಲ್‌ಪಿಜಿ ಪೂರೈಕೆ ಮಾಡಲಿವೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಗಳೊಂದಿಗೆ ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ಹಾಗೂ ಸಚಿವರು ಸಭೆ ನಡೆಸಿ, ಆದ್ಯತೆ-ಆಧಾರಿತ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.

ಸಚಿವರು ಹೇಳಿದ್ದೇನು?

ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಸರಬರಾಜಿನ ಸ್ಥಿತಿಗತಿ ಕುರಿತು ಸೋಮವಾರ ನಡೆದ ಸಭೆ ಬಳಿಕ ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಚಿವ ಕೆ.ಎಚ್. ಮುನಿಯಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಇಲ್ಲದೆ ಸರಬರಾಜು ನಿಯಮಿತವಾಗಿ ನಡೆಯುತ್ತಿದೆ. ಕೆಲವೆಡೆ ಜನರು ಪ್ಯಾನಿಕ್‌ನಿಂದ ಅಗತ್ಯಕ್ಕಿಂತ ಹೆಚ್ಚು ಬುಕ್ಕಿಂಗ್ ಮಾಡುತ್ತಿರುವುದರಿಂದ ಗೊಂದಲ ಉಂಟಾಗಿದೆ ಎಂದರು.

ರಾಜ್ಯದಲ್ಲಿ ಒಂದು ದಿನಕ್ಕೆ 850 ಮೆಟ್ರಿಕ್ ಟನ್ ಗ್ಯಾಸ್ ಪೂರೈಕೆ ಆಗುತ್ತಿದ್ದು ಬಳಕೆಯ ಪ್ರಮಾಣ ಅಧಿಕವಾಗಿದೆ. ಈ ಸಂದರ್ಭದಲ್ಲಿ ಮಿತವ್ಯಯವಾಗಿ ಬಳಸಲು ಗ್ರಾಹಕರಲ್ಲಿ ಮನವಿ ಮಾಡಿದ ಸಚಿವರು, ರಾಜ್ಯದಲ್ಲಿ ಎಲ್‌ಪಿಜಿ ವಿತರಣೆ ಪ್ರತಿ ರಾಜ್ಯದ ಬಳಕೆ ಆಧಾರದ ಮೇಲೆ ಕೇಂದ್ರದಿಂದ ನಿರ್ಧರಿಸಲಾಗುತ್ತದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಅತ್ಯಾವಶ್ಯಕ ಸೇವೆಗಳಾದ ಆಸ್ಪತ್ರೆಗಳು ಸೇರಿದಂತೆ ಹೋಟೆಲ್ ಹಾಗೂ ವ್ಯಾಪಾರಿಕ ಬಳಕೆದಾರರಿಗೆ ಯಾವುದೇ ರೀತಿಯ ಸರಬರಾಜು ಸಮಸ್ಯೆಗಳಿಲ್ಲ. ಅವರಿಗೆ ಅಗತ್ಯವಿರುವಷ್ಟು ಸಿಲಿಂಡರ್ ಒದಗಿಸಲಾಗುತ್ತಿದೆ ಎಂದರು.

ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ 25ರಿಂದ 30 ದಿನಗಳಿಗೆ ಒಂದು ಸಿಲಿಂಡರ್ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸುಮಾರು 45 ದಿನಗಳಿಗೆ ಒಂದು ಸಿಲಿಂಡರ್ ಬಳಕೆಯಾಗುತ್ತದೆ. ಇದಕ್ಕೆ ಅನುಗುಣವಾಗಿ ಸರಬರಾಜು ನಡೆಯುತ್ತಿದೆ. ಜನರು ಗಾಬರಿಯಾಗಬಾರದು. ಅಗತ್ಯಕ್ಕಿಂತ ಹೆಚ್ಚು ಸಿಲಿಂಡರ್ ಬುಕ್ ಮಾಡಬಾರದು ಹಾಗೂ ಸಂಗ್ರಹಿಸಬಾರದು. ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದರೆ ತಕ್ಷಣ ಸಂಬಂಧಿತ ಕಂಪನಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ಜನರಿಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

Read More
Next Story