ಮೂರು ದಶಕಗಳ ನಿಷೇಧಕ್ಕೆ ತೆರೆ: ಕಾಲೇಜು, ವಿವಿಗಳಲ್ಲಿ ಮತ್ತೆ ಚುನಾವಣಾ ಸದ್ದು
x

ಮೂರು ದಶಕಗಳ ನಿಷೇಧಕ್ಕೆ ತೆರೆ: ಕಾಲೇಜು, ವಿವಿಗಳಲ್ಲಿ ಮತ್ತೆ ಚುನಾವಣಾ ಸದ್ದು

ಕಾಲೇಜ್‌ ಕ್ಯಾಂಪಸ್‌ಗಳಲ್ಲಿ ಚುನಾವಣೆ ನಡೆಸುವ ಬಗ್ಗೆ ಚಿಂತನೆ ನಡೆಸಿರುವ ಕುರಿತು 'ದ ಫೆಡರಲ್‌ ಕರ್ನಾಟಕʼ ಮೊದಲೇ ವರದಿ ಮಾಡಿತ್ತು. ಈಗ ಬಜೆಟ್‌ನಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.


ಕಳೆದ ಮೂರು ದಶಕಗಳಿಂದ ಸ್ತಬ್ಧವಾಗಿದ್ದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ಪುನರಾರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಕ್ಯಾಂಪಸ್‌ಗಳಲ್ಲಿ ಮತ್ತೆ ರಾಜಕೀಯ ಚರ್ಚೆಗಳ ಸದ್ದು ಕೇಳಿಬರಲಿದೆ.

ಕಾಲೇಜ್‌ ಕ್ಯಾಂಪಸ್‌ಗಳಲ್ಲಿ ಚುನಾವಣೆ ನಡೆಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿರುವ ಬಗ್ಗೆ ಆರು ತಿಂಗಳ ಮೊದಲೇ 'ದ ಫೆಡರಲ್ ಕರ್ನಾಟಕ' "ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ಸದ್ದು: 3 ದಶಕಗಳ ನಿಷೇಧ ತೆರವೆಗೆ ಸರ್ಕಾರದ ಚಿಂತನೆ" ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ರಾಜ್ಯದಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗಳಿಗೆ 1989-90ರ ಅವಧಿಯಲ್ಲಿ ಕಡಿವಾಣ ಹಾಕಲಾಗಿತ್ತು ಆ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್‌ ಬೆಂಗಳೂರಿನ ಕಾಲೇಜು ಕ್ಯಾಂಪಸ್‌ಗಳಲ್ಲಿ ಹಿಂಸಾಚಾರ ವರದಿಯಾದ ಬಳಿಕ ಕಾಲೇಜು ಕ್ಯಾಂಪಸ್ ಚುನಾವಣೆಗಳಿಗೆ ನಿಷೇಧ ಹೇರಿದ್ದರು. ಆ ಕಾಲಘಟ್ಟದಲ್ಲಿ ಕ್ಯಾಂಪಸ್‌ಗಳಲ್ಲಿ ಹೆಚ್ಚುತ್ತಿದ್ದ ಹಿಂಸಾಚಾರ, ಗುಂಪು ಘರ್ಷಣೆಗಳು ಮತ್ತು ರಾಜಕೀಯ ಪಕ್ಷಗಳ ಅತಿಯಾದ ಹಸ್ತಕ್ಷೇಪದಿಂದಾಗಿ ಶೈಕ್ಷಣಿಕ ವಾತಾವರಣ ಹದಗೆಟ್ಟಿತ್ತು. ವಿದ್ಯಾರ್ಥಿ ಸಂಘಟನೆಗಳ ನಡುವಿನ ಸಂಘರ್ಷಗಳು ಕೆಲವೊಮ್ಮೆ ಹತ್ಯೆಯಲ್ಲಿಯೂ ಅಂತ್ಯವಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಅಂದಿನ ಸರ್ಕಾರ ಚುನಾವಣೆಗಳನ್ನು ನಿಷೇಧಿಸಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಚುನಾವಣೆಯನ್ನು ಪುನರಾರಂಭಿಸುವ ನಿರ್ಧಾರವನ್ನು ಪ್ರಕಟಿಸುವ ಮೂಲಕ ಯುವ ಪೀಳಿಗೆಯಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ಆಶಯ ವ್ಯಕ್ತಪಡಿಸಿದ್ದಾರೆ. ಇಂದಿನ ವಿದ್ಯಾರ್ಥಿಗಳೇ ನಾಳೆಯ ದೇಶದ ನಾಯಕರು. ಕ್ಯಾಂಪಸ್ ಹಂತದಲ್ಲಿಯೇ ಚುನಾವಣೆ ಎದುರಿಸುವುದರಿಂದ ಅವರಿಗೆ ಸಾರ್ವಜನಿಕ ಜೀವನದ ಸವಾಲುಗಳು ಮತ್ತು ಜವಾಬ್ದಾರಿಗಳ ಅರಿವಾಗುತ್ತದೆ. ವಿದ್ಯಾರ್ಥಿ ಸಂಘಗಳು ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಆಡಳಿತ ಮಂಡಳಿಯೊಂದಿಗೆ ಸಂವಾದ ನಡೆಸಲು ಮತ್ತು ಹಕ್ಕುಗಳಿಗಾಗಿ ಹೋರಾಡಲು ಒಂದು ವೇದಿಕೆಯನ್ನು ಒದಗಿಸುತ್ತವೆ.

ಮತದಾನದ ಮಹತ್ವ, ಆಯ್ಕೆಯ ಪ್ರಕ್ರಿಯೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಯುವಜನತೆಗೆ ಪ್ರಾಯೋಗಿಕವಾಗಿ ಕಲಿಸುವುದು ಸರ್ಕಾರದ ಗುರಿಯಾಗಿದೆ.

ವಿದ್ಯಾರ್ಥಿ ಸಂಘಟನೆ ಮನವಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಲೇಜು ಕ್ಯಾಂಪಸ್‌ ಗಳಲ್ಲಿ ಚುನಾವಣೆಗಳನ್ನು ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿ ಪತ್ರ ಬರೆದಿದ್ದರು. ರಾಹುಲ್‌ ಗಾಂಧಿ ಪತ್ರದ ಬಳಿಕ ಕಾಂಗ್ರೆಸ್ ಸರ್ಕಾರ ಚುನಾವಣೆ ನಡೆಸುವ ಚಿಂತನೆಗೆ ಮುಂದಾಗಿದೆ. ಬಜೆಟ್‌ನಲ್ಲಿ ಘೋಷಣೆ ಮಾಡುವ ಮೂಲಕ ಚುನಾವಣೆ ನಡೆಸುವುದು ಅಧಿಕೃತವಾಗಿದೆ.

ಸಕಾರಾತ್ಮಕ ಬದಲಾವಣೆಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನ ಪ್ರಮುಖ ನಾಯಕರು ವಿದ್ಯಾರ್ಥಿ ರಾಜಕಾರಣದಿಂದ ಬಂದವರಾಗಿದ್ದಾರೆ. ನಿಷೇಧದಿಂದಾಗಿ ಕಳೆದ 30 ವರ್ಷಗಳಿಂದ ರಾಜ್ಯ ರಾಜಕಾರಣಕ್ಕೆ ಹೊಸ ರಕ್ತದ ಹರಿವು ಕಡಿಮೆಯಾಗಿತ್ತು. ಈಗ ಮತ್ತೆ ಸಮರ್ಥ ಯುವ ನಾಯಕರು ಉದಯಿಸಲು ಅವಕಾಶ ಸಿಗಲಿದೆ. ಕ್ಯಾಂಪಸ್ ಸೌಲಭ್ಯಗಳು, ಶುಲ್ಕ ಹೆಚ್ಚಳ, ಸ್ಕಾಲರ್‌ಶಿಪ್ ಸಮಸ್ಯೆಗಳ ಬಗ್ಗೆ ಮಾತನಾಡಲು ಚುನಾಯಿತ ಪ್ರತಿನಿಧಿಗಳಿದ್ದರೆ ಆಡಳಿತ ಮಂಡಳಿಯ ಮೇಲೆ ಒತ್ತಡ ಹೇರಲು ಸಾಧ್ಯವಾಗುತ್ತದೆ. ಯುವಜನರಲ್ಲಿ ರಾಜಕೀಯದ ಬಗ್ಗೆ ಇರುವ ಅನಾಸಕ್ತಿಯನ್ನು ಹೋಗಲಾಡಿಸಿ, ಸಮಾಜದ ಬಗ್ಗೆ ಕಾಳಜಿ ವಹಿಸುವಂತೆ ಮಾಡಲು ಇದು ಪ್ರೇರೇಪಿಸುತ್ತದೆ ಎಂದು ಹೇಳಲಾಗಿದೆ.

ಚುನಾವಣೆಯಿಂದ ಎದುರಾಗುವ ಸವಾಲುಗಳು

ಚುನಾವಣೆಗೆ ನಿಷೇಧ ತೆರವುಗೊಳಿಸುವುದು ಎಷ್ಟು ಆಶಾದಾಯಕವೋ ಅಷ್ಟೇ ಸವಾಲಿನಿಂದ ಕೂಡಿದೆ. ಮೂರು ದಶಕಗಳ ಹಿಂದೆ ಯಾವ ಕಾರಣಕ್ಕೆ ಚುನಾವಣೆಯನ್ನು ನಿಲ್ಲಿಸಲಾಗಿತ್ತೋ, ಆ ಹಿಂಸಾಚಾರ ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ವಿದ್ಯಾರ್ಥಿ ಘಟಕಗಳ ಮೂಲಕ (ಎಬಿವಿಪಿ, ಎನ್‌ಎಸ್‌ಯುಐ, ಎಸ್‌ಎಫ್‌ಐ ಇತ್ಯಾದಿ) ಕ್ಯಾಂಪಸ್‌ಗಳನ್ನು ರಾಜಕೀಯ ಅಖಾಡಗಳನ್ನಾಗಿ ಮಾಡುವ ಸಾಧ್ಯತೆಯಿದೆ. ಇದು ಶೈಕ್ಷಣಿಕ ಶಿಸ್ತನ್ನು ಹಾಳುಮಾಡಬಹುದು. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಕಾಲೇಜು ಚುನಾವಣೆಗಳಲ್ಲೂ ಹಣದ ಪ್ರಭಾವ ಮತ್ತು ಜಾತಿ ರಾಜಕಾರಣ ನುಸುಳುವ ಅಪಾಯವಿದೆ. ಇದು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಾಯಕತ್ವದ ಅವಕಾಶ ತಪ್ಪಿಸಬಹುದು.

ರಾಜ್ಯದಲ್ಲಿ 1989-90 ರ ಅವಧಿಯಲ್ಲಿ ಚುನಾವಣೆಗೆ ನಿಷೇಧವಾಗಿದ್ದು ಏಕೆ?

ರಾಜ್ಯದ ಹಲವು ಕಾಲೇಜುಗಳಲ್ಲಿ ಚುನಾವಣೆಯು ವಿಧಾನಸಭೆಗಳಿಗೆ ನಡೆಯುವಂತೆ ತೀವ್ರ ಪೈಪೋಟಿಯ ಚುನಾವಣೆಗಳಾಗಿದ್ದವು. ಅದರಲ್ಲಿಯೂ ಬೆಂಗಳೂರು ಕಾಲೇಜುಗಳಲ್ಲಿ ನಡೆಯುತ್ತಿದ್ದ ಚುನಾವಣೆಗಳು ರಾಜ್ಯದ ಇತರೆ ಕಾಲೇಜುಗಳಿಗಿಂತ ಒಂದು ಕೈ ಮೇಲಾಗಿತ್ತು. ಪ್ರತಿಷ್ಠೆ ಕಣವಾಗಿದ್ದ ಚುನಾವಣೆ ಸಮಯದಲ್ಲಿ ಹಿಂಸಾಚಾರ ಕೃತ್ಯಗಳು ನಡೆಯುತ್ತಿದ್ದವು. 1980 ರ ದಶಕದ ಉತ್ತರಾರ್ಧದಲ್ಲಿ ವಿದ್ಯಾರ್ಥಿ ಸಂಘದ ಕೆಲವು ಸದಸ್ಯರು ಪ್ರಾಂಶುಪಾಲರೊಂದಿಗೆ ಜಗಳವಾಡಿದ್ದರು. ಹಿಂಸಾಚಾರ ಪ್ರಕರಣಗಳು ನಡೆದಿದ್ದವು.

ಆಗಿನ ಶಿಕ್ಷಣ ಸಚಿವ ಕೆ.ಎಚ್. ​​ರಂಗನಾಥ್ ಅವರಿಗೆ ಆಪ್ತರಾಗಿದ್ದ ಪ್ರಾಂಶುಪಾಲರು ವಿದ್ಯಾರ್ಥಿ ಚುನಾವಣೆಗಳನ್ನು ನಿಷೇಧಿಸುವಂತೆ ಕೋರಿದ್ದರು. ಆ ಸಮಯದಲ್ಲಿ ವೀರೇಂದ್ರ ಪಾಟೀಲ್‌ ಮುಖ್ಯಮಂತ್ರಿಯಾಗಿದ್ದರು. ಅವರಿಗೆ ರಂಗನಾಥ್‌ ಅವರು ಈ ವಿಷಯದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿ ಚುನಾವಣೆಗಳನ್ನು ನಿಷೇಧ ಹೇರುವಂತೆ ಮನವಿ ಮಾಡಿದ್ದರು. ಚುನಾವಣೆಯಿಂದ ಶಿಕ್ಷಣ ಸಂಸ್ಥೆಗಳಲ್ಲಿ ಗಲಭೆಗಳು ನಡೆಯುವುದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಚುನಾವಣೆಗಳನ್ನು ರದ್ದು ಮಾಡುವ ತೀರ್ಮಾನ ಕೈಗೊಳ್ಳಲಾಯಿತು. ಕಾಲೇಜಿನಲ್ಲಿ ನಡೆದ ಹಿಂಸಾತ್ಮಕ ಘಟನೆಯು ವಿದ್ಯಾರ್ಥಿ ಚುನಾವಣೆಗಳ ಮೇಲಿನ ನಿಷೇಧಕ್ಕೆ ಕಾರಣವಾಯಿತು.

Read More
Next Story