LPG Crisis| ಎಲ್‌ಪಿಜಿ ಸಿಲಿಂಡರ್ ಅಭಾವ; ಸಮಸ್ಯೆ ಬಗೆಹರಿಸಲು ಕೇಂದ್ರಕ್ಕೆ ಸಿಎಂ ಒತ್ತಾಯ
x
ಸಿಎಂ ಸಿದ್ದರಾಮಯ್ಯ

LPG Crisis| ಎಲ್‌ಪಿಜಿ ಸಿಲಿಂಡರ್ ಅಭಾವ; ಸಮಸ್ಯೆ ಬಗೆಹರಿಸಲು ಕೇಂದ್ರಕ್ಕೆ ಸಿಎಂ ಒತ್ತಾಯ

ಹೋಟೆಲ್ ವ್ಯವಸ್ಥೆ ಸ್ಥಗಿತಗೊಂಡರೆ, ಜನಜೀವನ ಅಸ್ತವ್ಯಸ್ಥವಾಗುತ್ತದೆ. ಕೇಂದ್ರ ಸಚಿವ ಹರದೀಪ್‌ ಸಿಂಗ್‌ ಪುರಿ ಅವರು ಎಲ್‌ಪಿಜಿ ಪೂರೈಕೆಯಲ್ಲಿ ತೊಂದರೆಯಾಗದಂತೆ ನಿರ್ವಹಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಸಿಎಂ ತಿಳಿಸಿದರು.


ಇರಾನ್‌-ಇಸ್ರೇಲ್‌ ಸಂಘರ್ಷದಿಂದ ಎದುರಾಗಿರುವ ಅಡುಗೆ ಅನಿಲದ ಅಭಾವ ನೀಗಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಎಲ್‌ಪಿಜಿ ಅಭಾವ ನೀಗಿಸಲು ಹೊರದೇಶದಿಂದ ಅನಿಲ ಪೂರೈಕೆಯಂತಹ ಪರ್ಯಾಯ ಮಾರ್ಗ ಹುಡುಕುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಸಂಬಂಧ ಭಾನುವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್‌ಪಿಜಿ ಪೂರೈಕೆಯಲ್ಲಿ ಆಗಿರುವ ವ್ಯತ್ಯಯ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಧಾನಮಂಡಲದಲ್ಲಿ ಸರ್ಕಾರದ ವತಿಯಿಂದ ಈಗಾಗಲೇ ಉತ್ತರ ನೀಡಲಾಗಿದೆ. ಆಹಾರಕ್ಕಾಗಿ ಹೋಟೆಲ್‌ಗಳ ಮೇಲೆ ಅವಲಂಬಿತರಾಗುವ ಜನಸಂಖ್ಯೆ ಸಾಕಷ್ಟಿದೆ. ಹೋಟೆಲ್ ವ್ಯವಸ್ಥೆ ಸ್ಥಗಿತಗೊಂಡರೆ, ಜನಜೀವನ ಅಸ್ತವ್ಯಸ್ಥವಾಗುತ್ತದೆ. ಕೇಂದ್ರ ಸಚಿವ ಹರದೀಪ್‌ ಸಿಂಗ್‌ ಪುರಿ ಅವರು ಎಲ್‌ಪಿಜಿ ಪೂರೈಕೆಯಲ್ಲಿ ತೊಂದರೆಯಾಗದಂತೆ ನಿರ್ವಹಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದರು.

ಕರ್ನಾಟಕದಲ್ಲಿ ಮಾತ್ರ ಎಲ್‌ಪಿಜಿ ಪೂರೈಕೆಗೆ ಸಮಸ್ಯೆಯಾಗಿದೆ ಎಂದು ಬಿಜೆಪಿ ನಾಯಕರು ಟೀಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಬಿಜೆಪಿಯವರು ಮಾತನಾಡುವ ಬದಲು, ಎಲ್‌ಪಿಜಿ ಹೆಚ್ಚಿನ ಸರಬರಾಜಿಗೆ ಕ್ರಮ ವಹಿಸಲಿ ಎಂದು ತಿಳಿಸಿದರು.

ಸಿಲಿಂಡರ್‌ ಜಪ್ತಿ ಮಾಡಿದ್ದ ಅಧಿಕಾರಿಗಳು

ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ಆರೋಪದ ಮೇಲೆ ಶನಿವಾರ ಆಹಾತ ಇಲಾಖೆ ಅಧಿಕಾರಿಗಳು ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿ 316 ಸಿಲಿಂಡರ್‌ಗಳನ್ನು ಜಪ್ತಿ ಮಾಡಿದ್ದರು.

ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಸಿಲಿಂಡರ್‌ ಅಭಾವದಿಂದ ಹೋಟೆಲ್‌ ಗಳು ಮುಚ್ಚುತ್ತಿದ್ದು, ಗ್ಯಾಸ್‌ ಏಜೆನ್ಸಿಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಈ ಮಧ್ಯೆ, ಕಾಳಸಂತೆಗಳಲ್ಲಿ ಸಿಲಿಂಡರ್‌ಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗೃಹಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಅದರಂತೆ ನಡೆದ ಕಾರ್ಯಾಚರಣೆಯಲ್ಲಿ ಬೆಂಗಳೂರಿನ ಪೀಣ್ಯದಲ್ಲಿ 45, ಚಿಕ್ಕಜಾಲದಲ್ಲಿ 209, ಶಿವಮೊಗ್ಗ ಜಿಲ್ಲೆಯಲ್ಲಿ 3, ಯಾದಗಿರಿ ಜಿಲ್ಲೆಯಲ್ಲಿ 46 ಹಾಗೂ ದಾವಣಗೆರೆಯಲ್ಲಿ 13 ಸಿಲಿಂಡರ್‌ಗಳನ್ನು '1955ರ ಅಗತ್ಯ ವಸ್ತುಗಳ ಕಾಯ್ದೆ'ಯಡಿ ಜಪ್ತಿ ಮಾಡಿಕೊಳ್ಳಲಾಗಿತ್ತು.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ, ಒಟ್ಟು ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಲ್ಲಿ ಶೇ. 20ರಷ್ಟನ್ನು ಆಸ್ಪತ್ರೆಗಳು, ಶಾಲೆಗಳು, ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣಗಳ ಕ್ಯಾಂಟೀನ್‌ಗಳು, ಪ್ರಮುಖ ದೇವಸ್ಥಾನಗಳಲ್ಲಿನ ಪ್ರಸಾದ ವಿನಿಯೋಗ, ಸರ್ಕಾರಿ ಕಚೇರಿಗಳು, ವೃದ್ಧಾಶ್ರಮಗಳು ಹಾಗೂ ಪ್ರಮುಖ ಖಾಸಗಿ ವಲಯದ ಕಚೇರಿಗಳಿಗೆ ಆದ್ಯತೆಯ ಮೇರೆಗೆ ವಿತರಿಸಲು ಸೂಚಿಸಲಾಗಿತ್ತು.

Read More
Next Story