
ಇರಾನ್ ಮೇಲಿನ ಅಮೆರಿಕ ದಾಳಿಯನ್ನು ಖಂಡಿಸಿದ ಸಿಎಂ ಸಿದ್ದರಾಮಯ್ಯ
ಅಮೆರಿಕ ದಾಳಿ ಖಂಡನೀಯ; ಸಂಕಷ್ಟದಲ್ಲಿರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಬದ್ಧ ಎಂದ ಸಿಎಂ
ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರಿಗೆ ತೊಂದರೆಯಾಗದಂತೆ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇರಾನ್ ಮೇಲೆ ಅಮೆರಿಕ ಮಾಡಿರುವ ದಾಳಿ ಅನಗತ್ಯವಾದುದು. ಒಂದೆಡೆ ಶಾಂತಿ ಮಾತ್ರ ಪಠಿಸುವ ಅಮೆರಿಕ ಮತ್ತೊಂದೆಡೆ ಯುದ್ಧ ಮಾಡುತ್ತಿದೆ. ಅಮೆರಿಕದ ಈ ತದ್ವಿರುದ್ಧ ನಿಲುವು ಸರಿಯಲ್ಲ. ಇರಾನ್ ಅಧ್ಯಕ್ಷ ಅಯಾತೊಲ್ಲಾ ಖಮೇನಿ ಹತ್ಯೆ ಅತ್ಯಂತ ಖಂಡನೀಯ ಎಂದು ಸಿದ್ದರಾಮಯ್ಯ ಹೇಳಿದರು.
ಭಾನುವಾರ (ಮಾ.1) ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಸ್ರೇಲ್ - ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ದುಬೈ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಮಾತನಾಡಿ ಧೈರ್ಯ ತುಂಬಿದ್ದೇನೆ ಎಂದರು.
ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರಿಗೆ ತೊಂದರೆಯಾಗದಂತೆ ಕರೆತರಲು ಪ್ರಯತ್ನ ಮಾಡಲಾಗುತ್ತಿದೆ. ಅರಬ್ ದೇಶಗಳಲ್ಲಿ ಸಿಲುಕಿರುವ ಬಳ್ಳಾರಿಯ 30 ಜನರನ್ನು ವಾಪಸ್ಸು ಕರೆತರಲಾಗುವುದು. ದುಬೈನಲ್ಲಿರುವ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದರು.
ದುಬೈನಲ್ಲಿ ಸಿಲುಕಿದ ವಿಧಾನ ಪರಿಷತ್ ಸದಸ್ಯ
ಅರಬ್ ದೇಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆ ಮುಖ್ಯ ಕಾರ್ಯದರ್ಶಿ, ಸ್ಥಾನಿಕ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ದುಬೈ ವಿಮಾನ ನಿಲ್ದಾಣ ಬಂದ್ ಮಾಡಲಾಗಿದ್ದು, ಅದನ್ನು ತೆರೆದ ಮೇಲೆ ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆ ತರಲು ವ್ಯವಸ್ಥೆ ಮಾಡಲಾಗುವುದು. ವಿಧಾನ ಪರಿಷತ್ ಸದಸ್ಯ ಭೋಜೇಗೌಡ ದುಬೈದಲ್ಲಿದ್ದು, ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ, ಹೋಟೆಲಿನಲ್ಲಿ ಸುರಕ್ಷಿತವಾಗಿರುವುದಾಗಿ ಹೇಳಿದ್ದಾರೆ ಎಂದರು.
ಆತಂಕ ಬೇಡ
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿರುವ ಕನ್ನಡಿಗರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿರುವುದು ತುಸು ಸಮಾಧಾನಕರ ವಿಚಾರ. ಯಾರೊಬ್ಬರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರಲಿದೆ ಎಂದು ತಿಳಿಸಿದರು.
ಸಹಾಯವಾಣಿ ಆರಂಭ
ಮಧ್ಯಪ್ರಾಚ್ಯ ಮತ್ತು ಕೊಲ್ಲಿ ದೇಶಗಳಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಅಲ್ಲಿ ನೆಲೆಸಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿರುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತುರ್ತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಯುದ್ಧ ಪೀಡಿತ ದೇಶಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಾರಾದರೂ ಕನ್ನಡಿಗರು ಸಿಲುಕಿಕೊಂಡಿದ್ದರೆ ಅಥವಾ ಅವರ ಬಗ್ಗೆ ಮಾಹಿತಿ ಲಭ್ಯವಿದ್ದರೆ, ತಕ್ಷಣವೇ ಆಯಾ ದೇಶಗಳ ಕಂಟ್ರೋಲ್ ರೂಂ ಅಥವಾ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡುವಂತೆ ಕೋರಲಾಗಿದೆ.
ವಿವಿಧ ದೇಶಗಳ ತುರ್ತು ಸಹಾಯವಾಣಿ ಸಂಖ್ಯೆಗಳಿಗೆ ಸಂಕಷ್ಟದಲ್ಲಿರುವವರು ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಕತಾರ್ (Qatar): 00974-55647502
ಬಹ್ರೇನ್ (Bahrain): 00973-39418071
ಜೋರ್ಡಾನ್ (Jordan): 00962-770 422 276
ಒಮಾನ್ (Oman): ಟೋಲ್ ಫ್ರೀ: 8007 1234 | ವಾಟ್ಸಾಪ್: +968 9828 2270
ಇರಾಕ್ (Iraq): +964 771 651 1185 (ಇಂಗ್ಲಿಷ್ ಮತ್ತು ಹಿಂದಿ), +964 770 444 4899 (ಅರೇಬಿಕ್)
ಕುವೈತ್ (Kuwait): +965 65501946
ಪ್ಯಾಲೆಸ್ತೀನ್ (Palestine): +970 592916418
ಇಲ್ಲವೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ಥಳೀಯ ಸಹಾಯವಾಣಿಯಾದ ದೂರವಾಣಿ ಸಂಖ್ಯೆ 080-28388005 ಗೆ ಕರೆ ಮಾಡಬಹುದು.

