Prevent tax leakage, become No. 1 in the country: CM D.K. Shivakumar instructs officials
x

ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್‌ ಮಾತನಾಡಿದರು. 

ತೆರಿಗೆ ಸೋರಿಕೆ ತಡೆಯಿರಿ, ದೇಶದಲ್ಲೇ ನಂ.1 ಆಗಿ: ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ

ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹಣೆಯಲ್ಲಿ ಶೇ. 9 ರಷ್ಟು ಪ್ರಗತಿಯಾಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದೆ. ಮೇ 2026ರ ವರೆಗಿನ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ.


Click the Play button to hear this message in audio format

ವಾಣಿಜ್ಯ ತೆರಿಗೆ ಅಧಿಕಾರಿಗಳು ಸರ್ಕಾರದ ಶಕ್ತಿಯಿದ್ದಂತೆ. ತೆರಿಗೆ ಸೋರಿಕೆಯನ್ನು ಸಂಪೂರ್ಣವಾಗಿ ತಡೆದು, ಪ್ರಸ್ತುತ ಹಣಕಾಸು ವರ್ಷಕ್ಕೆ ನೀಡಿರುವ ತೆರಿಗೆ ಸಂಗ್ರಹದ ಗುರಿಯನ್ನು ಮೀರಿ ಸಾಧನೆ ಮಾಡಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ(ಜೂ.26) ನಡೆದ ವಾಣಿಜ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಆರ್ಥಿಕ ಇಲಾಖೆಯ ಅಧಿಕಾರಿಗಳು ಹಾಗೂ ಸಲಹೆಗಾರರಾದ ಎಲ್.ಕೆ. ಅತೀಕ್ ಮತ್ತು ಅಪರ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಅವರು ನೀಡಿರುವ ಸಲಹೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸಿಎಂ ತಿಳಿಸಿದರು.

ಗಡಿಗಳಲ್ಲಿ ಕಠಿಣ ನಿಗಾ

ಯಾವುದೇ ಸರಕು ಸಾಗಣೆ ವಾಹನವು ಅಗತ್ಯ ದಾಖಲೆಗಳಿಲ್ಲದೆ ಚೆಕ್‌ಪೋಸ್ಟ್‌ ಅಥವಾ ರಾಜ್ಯದ ಗಡಿಯನ್ನು ದಾಟಬಾರದು ಎಂದು ಸೂಚಿಸಿದ ಅವರು, "ನನಗೆ ರಾಜ್ಯದ ಎಲ್ಲ ವಲಯಗಳಿಂದಲೂ ನಿರಂತರ ಮಾಹಿತಿ ಬರುತ್ತದೆ. ಚಿಕ್ಕಪೇಟೆಯಿಂದ ಗಾಂಧಿನಗರದವರೆಗೆ, ಗಡಿ ಜಿಲ್ಲೆಗಳಲ್ಲೂ ನನ್ನದೇ ಆದ ಸಂಪರ್ಕ ಜಾಲವಿದೆ. ಅಧಿಕಾರಿಗಳ ಕಾರ್ಯನಿರ್ವಹಣೆಯಲ್ಲಿ ಯಾವುದೇ ಲೋಪ ಅಥವಾ ನಿರ್ಲಕ್ಷ್ಯ ನಡೆದರೂ ಅದು ತಕ್ಷಣವೇ ನನ್ನ ಗಮನಕ್ಕೆ ಬರುತ್ತದೆ. ನಿಮ್ಮ ಕಾರ್ಯಕ್ಷಮತೆಯ ವರದಿ ಮತ್ತು ನನಗೆ ಬರುವ ಮಾಹಿತಿ ಒಂದಕ್ಕೊಂದು ಹೊಂದಿಕೆಯಾಗಬೇಕು," ಎಂದು ಎಚ್ಚರಿಸಿದರು.

ಜಿಎಸ್‌ಟಿ ಪ್ರಗತಿಯಲ್ಲಿ ರಾಜ್ಯಕ್ಕೆ ದೇಶದಲ್ಲೇ 2ನೇ ಸ್ಥಾನ

ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹಣೆಯಲ್ಲಿ ಶೇ. 9 ರಷ್ಟು ಪ್ರಗತಿಯಾಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದೆ. ಮೇ 2026ರ ವರೆಗಿನ ಅಂಕಿ-ಅಂಶಗಳ ಪ್ರಕಾರ, ತೆಲಂಗಾಣ (ಶೇ. 10) ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ (ಶೇ. 9) ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ (ಶೇ. 5), ಗುಜರಾತ್ (ಶೇ. 5), ಉತ್ತರ ಪ್ರದೇಶ (ಶೇ. 8) ಮತ್ತು ತಮಿಳುನಾಡು (ಶೇ. -7) ರಾಜ್ಯಗಳಿಗಿಂತ ಕರ್ನಾಟಕ ಉತ್ತಮ ಸಾಧನೆ ಮಾಡಿದೆ. "ನಾವು ಎರಡನೇ ಸ್ಥಾನದಲ್ಲಿದ್ದೇವೆ, ಮೊದಲ ಸ್ಥಾನಕ್ಕೆ ಬರಲು ಬೇಕಾದ ಮಾರ್ಗಗಳನ್ನು ಶೋಧಿಸಿ," ಎಂದು ಸಿಎಂ ಅಧಿಕಾರಿಗಳಿಗೆ ಕರೆ ನೀಡಿದರು.

ಬೋಗಸ್ ಕಂಪನಿಗಳಿಗೆ ಜೈಲು

ಹೈದರಾಬಾದ್ ಐಐಟಿ (IIT) ಸಹಯೋಗದೊಂದಿಗೆ ಜಿಎಸ್‌ಟಿ ಅನಾಲಿಟಿಕಲ್ ಪೋರ್ಟಲ್ ಮೂಲಕ ತೆರಿಗೆ ವಂಚನೆಯ ಮೇಲೆ 360 ಡಿಗ್ರಿಯಲ್ಲಿ ನಿಗಾ ಇಡಲಾಗಿದೆ. ನಕಲಿ ರಶೀದಿ ಮತ್ತು ನಕಲಿ ಐಟಿಸಿ (ITC) ಸವಾಲನ್ನು ಎದುರಿಸಲು ಬೋಗಸ್ ಕಂಪನಿಗಳನ್ನು ಪತ್ತೆ ಹಚ್ಚಿ 166 ಕೋಟಿ ರೂ. ಸಂಗ್ರಹಿಸಲಾಗಿದೆ. ಇನ್ನು ಮುಂದೆ ಕೇವಲ ದಂಡ ಮಾತ್ರವಲ್ಲದೆ, ಬೋಗಸ್ ಕಂಪನಿ ಸ್ಥಾಪಿಸುವವರ ವಿರುದ್ಧ ಬಂಧನ ಪ್ರಕ್ರಿಯೆಯನ್ನು ತೀವ್ರಗೊಳಿಸುವಂತೆ ಸಿಎಂ ಆದೇಶಿಸಿದರು.

ಪ್ರಾಮಾಣಿಕ ತೆರಿಗೆದಾರರಿಗೆ ಕಿರುಕುಳ ನೀಡಬೇಡಿ

"ನಮ್ಮ ಉದ್ದೇಶ ಯಾರಿಗೂ ಅನಗತ್ಯ ತೊಂದರೆ ನೀಡುವುದಲ್ಲ. ಪ್ರಾಮಾಣಿಕ ತೆರಿಗೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಘನತೆಯಿಂದ ನಡೆಸಿಕೊಳ್ಳಬೇಕು. ತೆರಿಗೆದಾರರು ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲದಂತೆ ಆನ್‌ಲೈನ್‌ನಲ್ಲೇ ಗೊಂದಲಗಳನ್ನು ಬಗೆಹರಿಸುವ ನಾಗರಿಕ ಸ್ನೇಹಿ ವ್ಯವಸ್ಥೆಯನ್ನು ರೂಪಿಸಲಾಗಿದೆ," ನನ್ನ 38 ವರ್ಷಗಳ ಸಾರ್ವಜನಿಕ ಜೀವನದ ಅನುಭವದಲ್ಲಿ ಹಣಕಾಸು ಇಲಾಖೆಯನ್ನು ಇನ್ನಷ್ಟು ಆಳವಾಗಿ ಕಲಿಯುತ್ತಿದ್ದೇನೆ. ಪ್ರಾಮಾಣಿಕತೆ, ನಿಷ್ಠೆಗೆ ನನ್ನ ಬಳಿ ಗೌರವವಿದೆ. ಆದರೆ ಪ್ರಾಮಾಣಿಕತೆ ಇಲ್ಲದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೈಸೂರು ವಿಭಾಗದ ಕಾರ್ಯಕ್ಷಮತೆಗೆ ಅಸಮಾಧಾನ

ಮೈಸೂರು ವಿಭಾಗದಲ್ಲಿ ತೆರಿಗೆ ಸಂಗ್ರಹದ ಕಾರ್ಯಕ್ಷಮತೆ ಕುಸಿದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, "ನೆಪಗಳನ್ನು ಅಥವಾ ಕಾರಣಗಳನ್ನು ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ, ನನಗೆ ಫಲಿತಾಂಶ ಮುಖ್ಯ," ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಬಾಕಿ ಇರುವ ಮೇಲ್ಮನವಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

Read More
Next Story